ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಉಡುಮಲೈ ನಾರಾಯಣ ಕವಿ


 

ಉಡುಮಲೈ ನಾರಾಯಣ ಕವಿ


ಉಡುಮಲೈ ನಾರಾಯಣ ಕವಿ ತಮಿಳಿನ ಪ್ರಸಿದ್ಧ ಕವಿ ಮತ್ತು ಗೀತರಚನೆಕಾರರು. 

ಉಡುಮಲೈ ನಾರಾಯಣ ಅವರು 1899ರ ಸೆಪ್ಟೆಂಬರ್ 25ರಂದು ತಿರುಪ್ಪೂರ್ ಜಿಲ್ಲೆಯ ಉಡುಮಲೈಪೆಟ್ಟೈ ತಾಲೂಕಿನ ಪೂಲವಾಡಿ ಎಂಬ ಸಣ್ಣ ಹಳ್ಳಿಯಲ್ಲಿ ಜನಿಸಿದರು. ಅವರ ಪೋಷಕರು ಚಿಕ್ಕ ವಯಸ್ಸಿನಲ್ಲಿಯೇ ನಿಧನರಾದರು.  ಬಡತನವು ಅವರನ್ನು ಶಾಲೆಯಿಂದ ವಂಚಿತಗೊಳಿಸಿತು. ತನ್ನ ಸಹೋದರನ ಸಹಾಯದಿಂದ, ಹತ್ತಿರದ ಹಳ್ಳಿಗಳಿಗೆ ಬೆಂಕಿಪೆಟ್ಟಿಗೆಗಳನ್ನು ಮಾರಾಟ ಮಾಡುತ್ತಾ ಜೀವನ ನಡೆಸುತ್ತಿದ್ದರು. ಇವರು ಚಿಕ್ಕಂದಿನಿಂದಲೂ  ನಾಟಕ ಮತ್ತು ಸಂಗೀತದಲ್ಲಿ ಆಸಕ್ತಿ ಹೊಂದಿದ್ದರು. ಆರಂಭದಲ್ಲಿ ಸ್ಥಳೀಯ ದೇವಸ್ಥಾನದಲ್ಲಿ ನಾಟಕಗಳಲ್ಲಿ ನಟಿಸಲು ಪ್ರಾರಂಭಿಸಿ, ಕ್ರಮೇಣ ತಮಿಳುನಾಡಿನ ಪ್ರಮುಖ ನಾಟಕ ತಂಡಗಳೊಂದಿಗೆ ಸಂಪರ್ಕ ಸಾಧಿಸಿದರು. ಈ ತಂಡಗಳೇ ತಮಿಳು ಚಿತ್ರರಂಗದ ಪ್ರಾರಂಭಿಕ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವಹಿಸಿದ್ದವು. 

ನಾರಾಯಣ ಕವಿ ಅವರು ಸ್ವಾತಂತ್ರ್ಯ ಚಳುವಳಿಯ ಕಾಲದಲ್ಲಿ ಹಾಗೂ ಸ್ವಾತಂತ್ರ್ಯಾನಂತರದ ದಶಕಗಳಲ್ಲಿ ರಚಿಸಿದ ಹಲವಾರು ಗೀತೆಗಳಿಂದ ಹೆಸರುವಾಸಿಯಾದರು. ಅವರು ಹಲವಾರು ಪ್ರಸಿದ್ಧ ತಮಿಳು ಚಲನಚಿತ್ರಗಳಿಗೂ ಸಾಹಿತ್ಯವನ್ನು ಬರೆದರು. ನಾರಾಯಣ ಕವಿ ಅವರು 1940 ಮತ್ತು 1950ರ ದಶಕಗಳಲ್ಲಿ ಸಾಹಿತ್ಯ ಬರೆದ ಅನೇಕ ಚಲನಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಯಶಸ್ಸು ಕಂಡವು; ಇವುಗಳಲ್ಲಿ ವೇಲೈಕಾರಿ, ನಲ್ಲತಂಬಿ, ಪೂಂಪುಹಾರ್, ಪರಾಶಕ್ತಿ ಮತ್ತು ಮನೋಹರ ಮುಂತಾದ ಚಿತ್ರಗಳು ಸೇರಿವೆ. ಚಿತ್ರರಂಗದಲ್ಲಿ ಅವರನ್ನು ಪ್ರೀತಿಯಿಂದ "ಪಗುತ್ತರಿವು ಕವಿರಾಯರ್",  "ಕವಿರಾಯರ್" ಎಂಬ ಹೆಸರುಗಳಿಂದ ಕರೆಯಲಾಗುತ್ತಿತ್ತು. ಅವರು 1940ರ ದಶಕದಲ್ಲಿ ಪ್ರಸಿದ್ಧ ಹಾಸ್ಯನಟ ಎನ್.ಎಸ್.ಕೃಷ್ಣನ್ ಅವರೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದರು. ಮನೋಹರ (1954) ಚಲನಚಿತ್ರಕ್ಕಾಗಿ, ಅವರು ಪ್ರತಿ ಹಾಡಿಗೆ 15,000 ರೂಪಾಯಿಗಳನ್ನು ಪಡೆದರು.‍‍ ಅದು  ಗೀತರಚನೆಕಾರರಿಗೆ ಪಾವತಿಸಿದ ಅತ್ಯಧಿಕ ಮೊತ್ತವೆಂದು ಪರಿಗಣಿಸಲಾಗಿದೆ.

ತಮಿಳುನಾಡು ಸರ್ಕಾರವು ಉಡುಮಲೈಪೆಟ್ಟೈನಲ್ಲಿ ನಾರಾಯಣ ಕವಿ ಅವರ ಸ್ಮಾರಕವನ್ನು ನಿರ್ಮಿಸಿದೆ. ಸಾಮಾನ್ಯ ಜನರಿಗೂ ಅರ್ಥವಾಗುವಂತಹ ಸರಳ ಭಾಷೆಯ  ಸಾಮರ್ಥ್ಯ ನಾರಾಯಣ ಕವಿ ಅವರನ್ನು ಹೆಚ್ಚು ಜನಪ್ರಿಯಗೊಳಿಸಿತು. ಅವರು 1981ರ ಮೇ 23ರಂದು ನಿಧನರಾದರು.

On the birth anniversary of great poet and lyricist Udumalai Narayana Kavi 






ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ