ಲಲಿತಮ್ಮ ಚಂದ್ರಶೇಖರ್
ಸ್ತ್ರೀರತ್ನ ಲಲಿತಮ್ಮ ಡಾ.ಚಂದ್ರಶೇಖರ್
ಲೇಖಕಿ: ಶ್ಯಾಮಲಾ ಮಾಧವ
ದೇವಿ ಶಾರದೆಯ ಪರ್ವಕಾಲದಲ್ಲಿ ದುರ್ಗಾಷ್ಟಮಿಯಂದು ಜನಿಸಿದ, ಸಾಹಿತ್ಯ ಸರಸ್ವತಿಯೇ ಆಗಿರುವ ಸ್ತ್ರೀರತ್ನಪ್ರಭೆ ನಮ್ಮ ಲಲಿತಮ್ಮ ಡಾ. ಚಂದ್ರಶೇಖರ್.
ಇನ್ನೂ ಕೊನೆವರೆಗೂ ಓದುತ್ತಾ,, ಬರೆಯುತ್ತಾ ಇರಬೇಕೆಂಬುದು ಅವರ ಮಹದಾಶಯ ಅದು ಕೈಗೂಡುವಂತೆ ಸಂತೃಪ್ತಿ, ನೆಮ್ಮದಿ ಅನುಗಾಲಕ್ಕೂ ಅವರದಾಗಿರಲಿ !
ಸ್ತ್ರೀಯನ್ನೂ, ಸಾಹಿತ್ಯವನ್ನೂ ಅಪಾರವಾಗಿ ಪ್ರೀತಿಸಿ, ಗೌರವಿಸುವ, ಸಾಹಿತ್ಯಕ್ಕಿಂತ ಮಿಗಿಲಾದ ಶಕ್ತಿ ಬೇರಿಲ್ಲ ಎಂದು ನಂಬಿರುವ, ವರ್ಷಾನುವರ್ಷ ಸಮಾಜ ಸೇವೆಯಲ್ಲೇ ಜೀವನವನ್ನು ತೇದ ಪಾವನ ಚರಿತೆ!
ವಿದ್ಯೆ, ಸಾಹಿತ್ಯ, ಸಮಾಜಸೇವಾ ಕ್ಷೇತ್ರಗಳಲ್ಲಿ , ಕೌಟುಂಬಿಕ ಬದುಕಿನಲ್ಲಿ ಅಹರ್ನಿಶಿ ದುಡಿದ, ಸಾಹಿತ್ಯ ಕೈಂಕರ್ಯಕ್ಕೆಂದೇ ಇಂದೂ ಬ್ರಾಹ್ಮೀ ಮುಹೂರ್ತದಲ್ಲಿ ಎದ್ದೇಳುವ, ಸಾಧನಾಶೀಲೆ!
ಸಾಗರೋಪಾದಿಯ ಈ ಅನನ್ಯ ಚೈತನ್ಯವನ್ನು ಎಷ್ಟು ಮಾತುಗಳಲ್ಲಿ, ಪುಟಗಳಲ್ಲಿ ಹಿಡಿದಿಡ ಬಹುದು?
1932ರ ಅಕ್ಟೋಬರ್ ತಿಂಗಳ (ದಿನಾಂಕ 22) ನವರಾತ್ರಿಯ ದುರ್ಗಾಷ್ಟಮಿಯಂದು ಜನಿಸಿದ ಲಲಿತಮ್ಮ ಡಾ.ಚಂದ್ರಶೇಖರ್ ಅವರು ಅಕ್ಷರಶಃ ಸರಸ್ವತೀ ಪುತ್ರಿ!. ಸ್ತ್ರೀ ಮತ್ತು ಸಾಹಿತ್ಯ ಅವರ ಜೀವದುಸಿರು. ಅವರ ಹೃದಯದಲ್ಲಿ ಅಡಗಿರುವ ಪ್ರೀತಿ, ವಾತ್ಸಲ್ಯ ಇಡೀ ಪ್ರಪಂಚಕ್ಕೆ ಹಂಚಿದರೂ ಮತ್ತೂ ತುಂಬಿರುವಂಥದ್ದು.
ನಿಜ ಅರ್ಥದಲ್ಲಿ ಸಾಹಿತ್ಯ ಸರಸ್ವತಿಯ ಆರಾಧಕರವರು. ಅಂತೆಯೇ ಸ್ತ್ರೀಯರನ್ನು ಅಪಾರವಾಗಿ ಪ್ರೀತಿಸಿ ಗೌರವಿಸುವವರು
92 ರ ಈ ಇಳಿವಯಸ್ಸಿಪಲ್ಲೂ ಓದಿ ಬರೆಯಲು ಮುಂಜಾವ ಬ್ರಾಹ್ಮೀ ಮುಹೂರ್ತದಿಲ್ಲಿ ಎದ್ದೇಳುವವರು. ಓದಲು, ಬರೆಯಲು ಬಹಳಷ್ಟು ಇದೆ, ಅದಕ್ಕಾಗಿ ನೂರು ವರ್ಷಗಳಾದರೂ ಬದುಕುಳಿಯ ಬೇಕು, ಎನ್ನುವವರು. ಇತರರು ಬರೆದುದನ್ನು ಓದಿ ಮೆಚ್ಚಿದರೆ, ಕೂಡಲೇ ಪತ್ರ ಬರೆದು ತಮ್ಮ ಮೆಚ್ಚುಗೆಯನ್ನು ತಿಳಿಸುವರು.
ಜಾಲಮಂಗಲದಲ್ಲಿ ಪುರೋಹಿತ ಕುಟುಂಬದಲ್ಲಿ ನಾರಾಯಣ ಶಾಸ್ತ್ರಿ , ಲಕ್ಷ್ಮೀ ನರಸಮ್ಮ ದಂಪತಿಗಳ ಮಗಳಾಗಿ ಜನಿಸಿಧ ಲಲಿತಮ್ಮನ ಒಡಹುಟ್ಟಿದವರು ಹನ್ನೊಂದು ಜನ ತಮ್ಮಂದಿರು. ಜಾಲಮಂಗಲದ ಹೊಲ ಗದ್ದೆಗಳು, ಗುಡ್ಡ, ಕೊಳಗಳಲ್ಲಿ ಅಡ್ಡಾಡುತ್ತಾ ಆ ಪ್ರಕೃತಿಯ ಮಡಿಲಲ್ಲಿ ತಾನು ಕಳೆದ ಬಾಲ್ಯದ ಬಗ್ಗೆ ಲಲಿತಮ್ಮ ಬಹಳ ಸ್ವಾರಸ್ಯವಾಗಿ ಹೇಳಿಕೊಂಡಿದ್ದಾರೆ.
ಹದಿಮೂರರ ಹರೆಯದಲ್ಲೇ ವಿವಾಹಿತರಾಗಿ, ಪತಿ ಡಾ.ಚಂದ್ರಶೇಖರ್ ಅವರ ಪ್ರೋತ್ಸಾಹದಿಂದ ಕನ್ನಡ, ಇಂಗ್ಲಿಷ್ ಪುಸ್ತಕಗಳನ್ನು ತನ್ನದಾಗಿಸಿ ಕೊಂಡಂತೆ, ಹರಿಹರದಲ್ಲಿ ರೋಗಿಗಳ ಸೇವೆಯಲ್ಲಿ ಮಗ್ನರಾಗಿದ್ದ ಪತಿಯ ಹಾದಿಯಲ್ಲೇ ನಡೆದು, ಸಮಾಜಸೇವೆಯಲ್ಲಿ ತೊಡಗಿದವರು.
ರಾಮಚಂದ್ರ, ಗೀತಾ, ಉಷಾ, ಶ್ರೀನಿವಾಸ ಅವರ ಮಕ್ಕಳು. ಸೊಸೆ ವಿಜಯಲಕ್ಷ್ಮಿ ಪರಂಧಾಮವನೈದಿದರು. ಕಿರಿಯ ಸೊಸೆ ಅನಿತಾ ಈ ಅಮ್ಮನ ಜೊತೆಗಿದ್ದಾರೆ. ಅಮ್ಮನ
ಸಂಸ್ಕಾರವನ್ನು ಮೈಗೂಡಿಸಿಕೊಂಡು ಮಕ್ಕಳು, ಮೊಮ್ಮಕ್ಕಳು, ಮರಿ ಮಕ್ಕಳ ಪಾಲನೆ ಮಾಡಿದರು.
ಲಲಿತಮ್ಮ 1955 ರಲ್ಲಿ ಹರಿಹರದಲ್ಲಿ ಮಹಿಳಾ ಸಮಾಜವನ್ನು ಹುಟ್ಟು ಹಾಕಿ ಸಂಸ್ಥಾಪಕಿಯಾಗಿ, ಸಂಸ್ಥೆಯ ಬೆನ್ನೆಲುಬಾಗಿ ನಿಂತವರು. ಒಮ್ಮೆ ಹರಿಹರದ ಮಹಿಳಾ ಸಮಾಜಕ್ಕೆ ಪ್ರಧಾನಿ ಇಂದಿರಾ ಗಾಂಧಿಯವರನ್ನು ಆಹ್ವಾನಿಸಿ, ಎರಡು ತಿಂಗಳ ಬಾಣಂತಿ ಆಗಿದ್ದರೂ, ಬರಿಗಾಲಲ್ಲಿ ಮೈದಾನಕ್ಕೆ ಓಡಿ ಇಂದಿರಾ ಗಾಂಧಿ ಅವರಿಗೆ ಹಾರ ಹಾಕಿ ಸ್ವಾಗತಿಸಿ ಮರಳಿ ಮನೆಗೆ ಮಗುವಿನ ಬಳಿಗೋಡಿದವರು.
ಬೆಂಗಳೂರಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯೆಯಾಗಿದ್ದ ತಮ್ಮ ಅತ್ತೆಯೊಡನೆ ಸಾಹಿತ್ಯ ಪರಿಷತ್ತಿಗೆ ಭೇಟಿ ನೀಡಿ ಮಾಸ್ತಿ, ವಿ.ಸೀ., ಡಿ.ವಿ.ಜಿ, ಜಿ.ಪಿ.ರಾಜರತ್ನಂ, ಅನಕೃ, ತರಾಸು ಮುಂತಾದ ಸಾಹಿತಿ ಶ್ರೇಷ್ಠರ ಸಂಪರ್ಕಕ್ಕೆ ಬಂದರು. ಅನಕೃ ಹಾಗೂ ತರಾಸು ಭಾಷಣಗಳು ತಮ್ಮಲ್ಲಿದ್ದ ಕನ್ನಡ ಪ್ರೇಮವನ್ನು ಹೆಚ್ಚಿಸಿದುವು ಎಂದು ಲಲಿತಮ್ಮ ಅನ್ನುತ್ತಾರೆ.
ಹರಿಹರದಲ್ಲಿ ಅವರ ಪರಿಶ್ರಮದಿಂದ ಮಹಿಳಾ ಸಮಾಜಕ್ಕೆ ಕಟ್ಟಡ ಒದಗಿ ಅಲ್ಲಿ ಹೆಣ್ಣುಮಕ್ಕಳಿಗೆ ಹೊಲಿಗೆ, ಸಂಗೀತ, ಹಿಂದೀ ತರಗತಿಗಳು ಆರಂಭವಾದಾಗ ಅವರಿಗೆ ತಮ್ಮ ಶ್ರಮ ಸಾರ್ಥಕ ಅನಿಸಿತು.
ಹರಿಹರದಲ್ಲಿ ಕ್ಯಾಂಪ್ ನಲ್ಲಿ ಬೆಂಕಿ ಹರಡಿ ಇನ್ನೂರು ಗುಡಿಸಲುಗಳು ಸುಟ್ಟು ಹೋದಾಗ ಆ ಬಡಜನರ ನೆರವಿಗೆ ಧಾವಿಸಿದವರು, ಲಲಿತಮ್ಮ ಡಾ.ಚಂದ್ರಶೇಖರ್. ಸಾವಿರದ ಒಂಬೈನೂರ ಎಪ್ಪತ್ತೇಳರಲ್ಲಿ ಹರಿಹರ ಲಯನೆಸ್ ಸಂಸ್ಥೆಯ ಸ್ಥಾಪಕಾಧ್ಯಕ್ಷೆಯಾಗಿ ಮುಂದೆ ಜಿಲ್ಲಾ ಅಧ್ಯಕ್ಷರೂ ಆಗಿ ಖ್ದಾತರಾದರು. ಹರಿಹರದಲ್ಲಿ ಪ್ರಗತಿಪರ ಬರಹಗಾರರ ಒಕ್ಕೂಟ ಸ್ಥಾಪಿಸಿ ಹಲವರನ್ನು ಸಾಹಿತ್ಯಾಸಕ್ತರಾಗಿಸಿದರು. ಆರ್ಥಿಕ ಅನುಕೂಲವಿರದ ಸಾಹಿತ್ಯಾಸಕ್ತರ ಕೃತಿ ಪ್ರಕಟಣೆಗೂ ನೆರವಾದರು. ಸ್ಕೌಟ್ಸ್ & ಗೈಡ್ಸ್ ಕಮಿಶನರ್ ಆಗಿಯೂ ಸಾರ್ಥಕ ಸೇವೆ ಸಲ್ಲಿಸಿದವರು.
ಸಾಹಿತ್ಯ ಪರಿಷತ್ತಿನಲ್ಲಿ ನಾಟಕದ ನಾಗರತ್ನಮ್ಮನವರ ಕಂಸ ಪಾತ್ರದ ಏಕಪಾತ್ರಾಭಿನಯವನ್ನು ನೋಡಿ ಮೆಚ್ಚಿ ತಮ್ಮ ಕೈಯ ಬಂಗಾರದ ಕಡಗವನ್ನೇ ಕಳಚಿ ಅವರ ಕೈಗೆ ಇಟ್ಟವರು.
ಸಾಹಿತ್ಯ ಕಾರ್ಯಕ್ರಮಗಳಲ್ಲೆಲ್ಲ ಲಲಿತಮ್ಮನವರ ಸ್ನೇಹ ಬಂಧವಾಗಿ ಟವೆಲ್, ಕೈವಸ್ತ್ರದಂತಹ ನೂಲಿನ ಬಟ್ಟೆಯ ಕಾಣಿಕೆಗಳು ಎಲ್ಲರ ಕೈಸೇರುತ್ತದೆ. ಐದು ವರ್ಷಗಳ ಹಿಂದಷ್ಟೇ ಜ್ಯೋತ್ಸ್ನಾ ಕಾಮತ್ ತಮ್ಮ ಕೈಗಿತ್ತ ನನ್ನ ಸಂಪಾದಕತ್ವದ 'ಹಚ್ಚಿಟ್ಟ ಹಣತೆಗಳು' ಕೃತಿಯನ್ನು ಓದಿ ನನ್ನನ್ನು ಹೃದಯಕ್ಕೆ ಅಪ್ಪಿಕೊಂಡ ಲಲಿತಮ್ಮನವರಿಂದ ನಾನೂ ಅಂಚೆಯಲ್ಲಿ ಅಂತಹ ಕಾಣಿಕೆಗಳನ್ನು, ಹರಸಿ ಕಳಿಸಿದ ಇತರ ವಸ್ತ್ರಗಳನ್ನು, ಅವರ ಪುಸ್ತಕಗಳನ್ನು, ಅವರ ಪ್ರೀತಿ ತುಂಬಿದ ಹಲವಾರು ಪತ್ರಗಳನ್ನು ಪಡೆದು ಧನ್ಯಳಾಗಿದ್ದೇನೆ.
' ಡಾಕ್ಟರ್ ಮಡದಿ', 'ಬಣ್ಣದ ಗಿಲಕಿ', 'ಬನೂ ತಂಗಿ', 'ರಶ್ಮೀ ಸರ್ಕಸ್ ಕಂಪೆನಿ', 'ಲೆಟರ್ ಪ್ಯಾಡ್', 'ಎಮ್ಮೆಯ ಖೆಡ್ಡಾ'ದಂತಹ ಲಘು ಬರಹಗಳ ಜೊತೆಗೆ ತಮ್ಮ ಭಾವನ ಅಗಲಿದ ಮಗುವಿನ ಬಗ್ಗೆ ಬರೆದ 'ಜಯಾ' ಮನ ಕಲಕುವಂತಿದೆ. 'ಲಕ್ಷ್ಮಣ ಕಾಶೀನಾಥ್ ಕಿರ್ಲೋಸ್ಕರ್', 'ಪಾರ್ವತೀ ಬಾಯಿ ಅಠಾವಳೆ'ಯಂತಹ ಮೌಲಿಕ ಜೀವನ ಚಿತ್ರಗಳನ್ನೂ ಅವರು ರಚಿಸಿದ್ದಾರೆ.
ಕಾರಂತ, ಕಯ್ಯಾರ, ಅನಕೃ, ತರಾಸು, ವಿ.ಸೀ, ಬೇಂದ್ರೆಯರಂತಹ ಎಲ್ಲ ಸಾಹಿತಿ ಶ್ರೇಷ್ಠರನ್ನೂ ಭೇಟಿಯಾಗಿ, ಮಾತನಾಡಿ, ಅವರ ಮಾತುಗಳನ್ನು ಆಲಿಸಿ ಧನ್ಯರಾದವರು, ಲಲಿತಮ್ಮ. ಟಿ.ಸುನಂದಮ್ಮ, ಜಯದೇವಿ ತಾಯಿ ಲಿಗಾಡೆ, ಎಂ.ಕೆ.ಇಂದಿರಾ, ಕಮಲಾ ಹಂಪನಾ, ಜ್ಯೋತ್ಸ್ನಾ ಕಾಮತ್ ಹೀಗೆ ಅವರ ಸಂಪರ್ಕಕ್ಕೆ ಬಂದ ಸಾಹಿತಿಗಳ ಸಂಖ್ಯೆ ಹಿರಿದಾದುದು.
ಸ್ತ್ರೀ ರತ್ನ ಲಲಿತಮ್ಮ ಡಾ. ಚಂದ್ರಶೇಖರ್ ಅವರಿಗೆ ಸಮರ್ಪಿತವಾದ ಮೂರನೇ ಕನಕಾಭಿಷೇಕ! 22 ಡಿಸೆಂಬರ್ 2023.ರಂದು ಸ್ಮರಣೀಯವಾಗಿ ಸಂಪನ್ನವಾಯ್ತು. ಕಮಲಾ ಹಂಪನಾ, ಸಂಧ್ಯಾ ರೆಡ್ಡಿ, ಆಶಾ ದೇವಿ, ವಸುಂಧರಾ ಭೂಪತಿ, ಮುಂತಾದ ಸಾಹಿತಿ ಶ್ರೇಷ್ಠರೂ ಭಾಗವಹಿಸಿದ್ದ ಸಂಭ್ರಮವದು. ಅಮ್ಮ ಶತಾಯುಷಿಯಾಗುವಂದು ಆ 2032 ರಲ್ಲಿ ನಾಲ್ಕನೇ ಕನಕಾಭಿಷೇಕವನ್ನೂ ಕೈಗೊಳ್ಳುವ ಭಾಗ್ಯ ತಮ್ಮದಾಗಲೆಂದು ಹಾರೈಸುವ ಮಕ್ಕಳೊಡನೆ ಮೊಮ್ಮಕ್ಕಳು, ಮರಿಮಕ್ಕಳು ಸೇರಿದ್ದಾರೆ.
ಲಲಿತಮ್ಮನವರ 88ನೇ ಹುಟ್ಟುಹಬ್ಬದಂದು ಹರಿಹರದಲ್ಲಿ ಪ್ರೊ.ಎಚ್.ಎಸ್.ಹರಿಶಂಕರ್ ಅವರ ಸಂಪಾದಕತ್ವದಲ್ಲಿ 'ಲಲಿತ ಕೀರ್ತಿ ' ಎಂಬ ಅಭಿನಂದನಾ ಗ್ರಂಥ ಸಮರ್ಪಿಸಲ್ಪಟ್ಟಿತ್ತು.
2023 ಮಾರ್ಚ್ 23ರಂದು ವೈದೇಹಿ ಅವರು ಸಂಗ್ರಹಿಸಿ ಪ್ರೀತಿಯಿಂದ ಸಂಕಲಿಸಿದ ಪತ್ರಗಳ ಸಂಚಯ, ನೆನಪಿನ ಉಗ್ರಾಣ ' ಕೃತಿಯನ್ನು ಬೆಂಗಳೂರಲ್ಲಿ ನಡೆದ ಸಾಹಿತ್ಯ ಸಮಾರಂಭದಲ್ಲಿ ಲಲಿತಮ್ಮನವರಿಗೆ ಸಮರ್ಪಿಸಲಾಯಿತು. ನಿಜಕ್ಕೂ ಅವರೊಂದು ನೆನಪಿನ ಉಗ್ರಾಣವೇ ಸರಿ. ಗಂಟೆ ಕಾಲ ತಮ್ಮ ಅಸ್ಖಲಿತ ವಾಣಿಯಿಂದ ಅವರು, ಬಾಳಿನಲ್ಲಿ ಈಗ ಎಂದೆಂದೋ
ನಡೆದುದನ್ನು ದಿನಾಂಕ, ಸಹಿತ ಕರಾರುವಾಕ್ಕಾಗಿ ನಿರೂಪಿಸ ಬಲ್ಲರು. ಸ್ತ್ರೀ ಶೋಷಣೆಯ ವಿರುದ್ಧ ಸದಾ ಅವರು ಎತ್ತಿದ ದನಿ! ನಿಮ್ಮ ಸಾಹಿತ್ಯ ಕ್ಷೇತ್ರದಲ್ಲಿ ಏನು ನಡೆದಿದೆ ಎಂದು ಸದಾ ಆಸಕ್ತಿಯಿಂದ ವಿಚಾರಿಸುವವರು. ಹೊರಬಂದ, ಓದಬೇಕಾದ ಎಲ್ಲ ಪುಸ್ತಕಗಳನ್ನೂ ಕೊಂಡು ಓದ ಬಯಸುವವರು.
ಇಂದು ಹರಿಹರದಲ್ಲಿ ಜಿಲ್ಲಾ ಸಾಹಿತ್ಯ ಪರಿಷತ್ ಮತ್ತು ಪ್ರಗತಿಪರ ಬರಹಗಾರರ ಒಕ್ಕೂಟ ಹಾಗೂ ಚಿಂತನೆ ವೇದಿಕೆ ಒಟ್ಟಾಗಿ ತಮ್ಮ ಹರಿಹರದ ಲಲಿತಮ್ಮನವರ 93ನೇ ಹುಟ್ಟುಹಬ್ಬ ಪ್ರಯುಕ್ತ ಸ್ಮರಣೀಯ ಸಂಭ್ರಮವನ್ನು ಹಮ್ಮಿಕೊಂಡು ನಡೆಸಿದ್ದಾರೆ.
ನಿಜಕ್ಕೂ ಅವರು ಕನ್ನಡ ಸಾಹಿತ್ಯ ಲೋಕ ಕಂಡ ಒಬ್ಬ ಅದ್ಭುತ ಮಹಿಳೆ! ಇನ್ನೊಬ್ಬರಿಗಾಗಿ ಪ್ರಾರ್ಥಿಸುವ, ಇನ್ನೊಬ್ಬರ ಒಳಿತಿಗಾಗಿ ಗಂಟೆಗಟ್ಟಲೆ ಪೂಜಿಸುವ, ಧ್ಯಾನಿಸುವ ವಿಶ್ವ ಕಲ್ಯಾಣಿ! ನೊಂದ ಜೀವಗಳಿಗೆ ಸಾಂತ್ವನ ನೀಡುವ ಮಹಾಮಾತೆ! ಅವರಿವರೆನ್ನದೆ ಎಲ್ಲರನ್ನೂ ಒಳಗೊಳ್ಳುವ ವಿಶ್ವ ಕುಟುಂಬಿಕೆ! ಸದಾ ಮಿಡಿಯುವ ಆ ಪ್ರೀತಿ, ಕಾರುಣ್ಯ ಭರಿತ ಹೃದಯದಾಳದ ದಿವ್ಯಾನುಭೂತಿಯ ಅನುಭವ ಪಡೆದವರೇ ಧನ್ಯರು!
ಕೃತಜ್ಞತೆಗಳು: ಲೇಖಕಿ ಶ್ಯಾಮಲಾ ಮಾಧವ 🌷🙏🌷
On the birthday of Great writer Lalithamma Dr. Chandrashekhar 🌷🙏🌷
ನಾನು ಅವರನ್ನು ಭೇಟಿಯಾಗಲು,ಪ್ರತಿಸಲವೂ ಪ್ರಯತ್ನಿಸುತ್ತೇನೆ ಆದರೆ ಈ ಸಲ ಖಂಡಿತ ಭೇಟಿಯಾಗಲೇಬೇಕು.
ಪ್ರತ್ಯುತ್ತರಅಳಿಸಿ