ನವರತ್ನ ಲಕ್ಷ್ಮಣ್
ನವರತ್ನ ಲಕ್ಷ್ಮಣ್
ಪ್ರಸಿದ್ಧ ನವರತ್ನ ಕುಟುಂಬದಲ್ಲೊಬ್ಬರಾದ ನವರತ್ನ ಲಕ್ಷ್ಮಣ್, ಕಳೆದ ಶತಮಾನದ ಶ್ರೇಷ್ಠ ಮಹನೀಯರಲ್ಲೊಬ್ಬರಾದ ನವರತ್ನ ರಾಮರಾಯರ ಸುಪುತ್ರರು ಮತ್ತು ಮಹಾನ್ ಸಾಹಿತಿ ನವರತ್ನ ರಾಮ್ ಅವರ ಅವಳಿ ಸಹೋದರರು. ಶ್ರೀಯುತರು ಸಾಂಸ್ಕೃತಿಕ
ಲೋಕದ ಸಂಘಟನಕಾರರಾಗಿ, ಅಂಕಣಕಾರರಾಗಿ, ಇವೇ ಮುಂತಾದಾಗಿ ಬಹುಮುಖಿಯಾಗಿ ಸಕ್ರಿಯರಾಗಿದ್ದಾರೆ.
ನವರತ್ನ ಲಕ್ಷ್ನಣ್ 1932ರ ಡಿಸೆಂಬರ್ 3ರಂದು ಜನಿಸಿದರು. ಇವರದ್ದು ಸುಸಂಸ್ಕೃತ ಮನೆತನ. ತಂದೆ ನವರತ್ನ ರಾಮರಾಯರು ಮೈಸೂರು ಸಂಸ್ಥಾನದ ಸರ್ಕಾರದಲ್ಲಿ ಅಧಿಕಾರಿಗಳಾಗಿ ಅಪಾರ ಕೆಲಸ ಮಾಡಿ, ಜನಸಾಮಾನ್ಯರ ಪ್ರೀತಿ ವಿಶ್ವಾಸ ಸಂಪಾದಿಸಿದವರು. ಮಾಸ್ತಿಯವರ ಸಮಕಾಲೀನರಾಗಿದ್ದ ನವರತ್ನ ರಾಮರಾಯರು ಮಾಸ್ತಿಯವರ ಮೇಲೂ ಪ್ರಭಾವ ಬೀರಿದವರು. ಅವರ ಜೀವನದ ನೆನಪುಗಳನ್ನು ಕುರಿತ ‘ಕೆಲವು ನೆನಪುಗಳು’ ಪುಸ್ತಕ ಉತ್ತಮ ಬರಹಕ್ಕೆ ಒಂದು ಉದಾಹರಣೆ. ಅವರು "ರಾಜಸೇವಾ ಪ್ರಸಕ್ತ" ಎಂಬ ಬಿರುದನ್ನು ಆಗಿನ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರಿಂದ ಪಡೆದಿದ್ದರು. ನವರತ್ನ ರಾಮ್ ಮತ್ತು ನವರತ್ನ ಲಕ್ಷ್ಮಣ್ ಅವಳಿ ಸಹೋದರರ ತಾಯಿ ಪುಟ್ಟಮ್ಮ. ನವರತ್ನ ರಾಮ್ ಮತ್ತು ಲಕ್ಷ್ಮಣ ಅವರು ಒಬ್ಬರು ಇನ್ನೊಬ್ಬರನ್ನು ಅಪಾರವಾಗಿ ಹೋಲುತ್ತಿದ್ದರು.
ನವರತ್ನ ಲಕ್ಷ್ಮಣ್ ಅವರು ಇಂಜಿನಿಯರ್ ಆಗಿದ್ದು, ತಮ್ಮ ಬಹುತೇಕ ವೃತ್ತಿ ಜೀವನವನ್ನು ಉಕ್ಕು (steel) ಉದ್ಯಮದಲ್ಲಿ ನಡೆಸಿದರು. ಜೊತೆಗೆ ಸಾಹಿತ್ಯ ಮತ್ತು ಸಾಂಸ್ಕೃತಿಕ ಆಸಕ್ತಿಗಳೂ ಅವರೊಂದಿಗೆ ಸಾಗಿದವು. ಬೆಂಗಳೂರಿನಲ್ಲಿದ್ದಾಗ "ಚಿತ್ರ ಕಲಾವಿದರು" ತಂಡದ ಭಾಗವಾಗಿ ಪ್ರಸಿದ್ಧ ಕಲಾವಿದರೊಂದಿಗೆ ಪ್ರಮುಖ ಪಾತ್ರಗಳ ನಿರ್ವಹಣೆ ಮಾಡಿದ್ದರು. ಭಿಲೈ ನಗರದಲ್ಲಿದ್ದ ಸಂದರ್ಭದಲ್ಲಿ, ಅಲ್ಲಿನ ಕನ್ನಡಿಗರೊಂದಿಗೆ ಕನ್ನಡ ಸಂಘವನ್ನು ಕಟ್ಟಿ ಬೆಳೆಸಿ, ಅನೇಕ ಸಾಂಸ್ಕೃತಿಕ ಚಟುವಟಿಕೆಗಳಿಗೆ ಚಾಲನೆ ನೀಡುತ್ತ ಬಂದರು. ಇದಲ್ಲದೆ 50 ಕ್ಕೂ ಹೆಚ್ಚು ಪ್ರಹಸನಗಳನ್ನು ಹಿಂದಿ ಮತ್ತು ಇಂಗ್ಲಿಷಿನಲ್ಲಿ ರಚಿಸಿ, ಅವುಗಳಲ್ಲಿ ಬಹಳಷ್ಟನ್ನು ನಿರ್ದೇಶಿಸಿ ಎಲ್ಲ ಸಮುದಾಯದ ಹಿರಿಯರು, ಕಿರಿಯರು ಮತ್ತು ಇಂಡೋ ಸೋವಿಯತ್ ಫೋರಂ ಸದಸ್ಯರು ಸಕ್ರಿಯರಾಗಿ ಇರುವಲ್ಲಿ ವಿಶಿಷ್ಟ ಪಾತ್ರ ನಿರ್ವಹಿಸಿದರು.
ನಿವೃತ್ತಿಯ ನಂತರದಲ್ಲಿ ಬೆಂಗಳೂರಿನಲ್ಲಿ ನೆಲೆಸಿದ ನವರತ್ನ ಲಕ್ಷ್ಮಣ್ ಅವರು, ಬನಶಂಕರಿ ಎರಡನೇ ಹಂತದಲ್ಲಿ "ಜ್ಞಾನಜ್ಯೋತಿ ಸೀನಿಯರ್ ಸಿಟಿಜನ್ ಫೋರಂ” ಸ್ಥಾಪಿಸಿ ಆ ಮುಖೇನ ಬಹುಮುಖಿ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುವಲ್ಲಿ ಸಕ್ರಿಯರಾಗಿದ್ದಾರೆ. 'ಡೆಕ್ಕನ್ ಹೆರಾಲ್ಡ್' ಪತ್ರಿಕೆಯ ಪ್ರಧಾನ ಅಂಕಣಕಾರರಲ್ಲೊಬ್ಬರಾಗಿ 150ಕ್ಕೂ ಹೆಚ್ಚು ವಿಷಯಗಳಲ್ಲಿ ಬರೆದಿದ್ದಾರೆ. ಆಕಾಶವಾಣಿ ಬೆಂಗಳೂರು ಕೇಂದ್ರದಿಂದ ಇಂಗ್ಲಿಷಿನಲ್ಲಿ ಅನೇಕ ಉಪನ್ಯಾಸಗಳನ್ನು. ಮಂಡಿಸಿದ್ದಾರೆ.
ಸರಳ ಸಹೃದಯ ಹಿರಿಯರಾದ ನವರತ್ನ ಲಕ್ಷ್ಮಣ್ ಅವರ ಪ್ರೀತಿ ವಿಶ್ವಸ ಧಕ್ಕಿರುವುದು ನಮ್ಮ ಸೌಭಾಗ್ಯ. ಪೂಜ್ಯ ನವರತ್ನ ಲಕ್ಷ್ಮಣ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday Navaratna Laxman Sir 🌷🙏🌷
ಕಾಮೆಂಟ್‌ಗಳು