ವಿನಾಯಕ ಕಾಮತ್
ವಿನಾಯಕ ಕಾಮತ್
ಡಾ. ವಿನಾಯಕ ಕಾಮತ್, ವಿಜ್ಞಾನ ಬೋಧಕರಾಗಿ, ಬರಹಗಾರರಾಗಿ ಮತ್ತು ಸಂವಹನಕಾರರಾಗಿ ಹೆಸರಾದವರು.
ವಿನಾಯಕ ಕಾಮತ್ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಸಿದ್ಧಾಪುರ ತಾಲೂಕಿನವರು. ಫೆಬ್ರವರಿ 16 ಇವರ ಜನ್ಮದಿನ. ಇವರು ಸಿದ್ಧಾಪುರದಲ್ಲಿ ಪ್ರಾರಂಭಿಕ ಶಿಕ್ಷಣ ಪಡೆದ ನಂತರ, ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜ್‍ನಿಂದ ಬಿಎಸ್‍ಸಿ ಪದವಿ ಪಡೆದರು (2009). ನಂತರ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ನಿರವಯವ ರಸಾಯನಶಾಸ್ತ್ರ ವಿಷಯದಲ್ಲಿ ಎರಡು ಚಿನ್ನದ ಪದಕಗಳೊಂದಿಗೆ ಎಂ.ಎಸ್‍ಸಿ ಪದವಿ ಪಡೆದರು (2011). ಹಾಗೆಯೇ, ರಸಾಯನ ಶಾಸ್ತ್ರದಲ್ಲಿ ಪಿಎಚ್.ಡಿ ಪದವಿಯನ್ನೂ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆ (2018). 12 ಸಂಶೋಧನಾ ಲೇಖನಗಳನ್ನು ಅಂತಾರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಪ್ರಕಟಿಸಿದ ಹೆಗ್ಗಳಿಕೆ ಇವರದ್ದಾಗಿದೆ. ಹಾಗೆಯೇ, ಪ್ರತಿಷ್ಠಿತ UGC-CSIR NET ಪರೀಕ್ಷೆಯಲ್ಲಿ ಮೂರು ಬಾರಿ ರಾಷ್ಟ್ರಮಟ್ಟದ ರ್‍ಯಾಂಕ್ ಹಾಗೂ K-SET ಪರೀಕ್ಷೆಯಲ್ಲಿ ರಾಜ್ಯಕ್ಕೆ ಎರಡನೇ ರ್‍ಯಾಂಕ್ ಸಹ ಸಾಧಿಸಿದ್ದಾರೆ. 2022ರಲ್ಲಿ ಸರ್ಕಾರೀ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕರ ಆಯ್ಕೆಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ವಿನಾಯಕ ಕಾಮತ್ ರಸಾಯನಶಾಸ್ತ್ರ ವಿಷಯದ ಉಪನ್ಯಾಸಕರಾಗಿ ತಮ್ಮ ವೃತ್ತಿಬದುಕನ್ನು ಆರಂಭಿಸಿ, ಪದವಿ ಪೂರ್ವದಿಂದ ಸ್ನಾತಕೋತ್ತರ ಪದವಿಯರೆಗೆ ವಿವಿಧ ಕಾಲೇಜುಗಳಲ್ಲಿ ರಸಾಯನ ಶಾಸ್ತ್ರವನ್ನು ಬೋಧಿಸಿದ್ದಾರೆ. ರಾಜ್ಯ ನ್ಯಾಯ ವಿಜ್ಞಾನ ಪ್ರಯೋಗಾಲಯ, ಬೆಂಗಳೂರಿನಲ್ಲಿ ಎರಡೂವರೆ ವರ್ಷಗಳ ಕಾಲ ವೈಜ್ಞಾನಿಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ನಂತರ, ಪ್ರಸ್ತುತ ಸರ್ಕಾರೀ ಕಾಲೇಜು, ಕಾರವಾರದಲ್ಲಿ ರಸಾಯನ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾಗಿ ಮತ್ತು ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ವಿನಾಯಕ ಕಾಮತ್ ಅವರು, ಶಿಕ್ಷಣ ಹಾಗೂ ವೃತ್ತಿಯಿಂದ ರಸಾಯನಶಾಸ್ತ್ರಜ್ಞರಾಗಿದ್ದರೂ, ಕನ್ನಡ ಸಾಹಿತ್ಯ, ಅಭಿನಯ, ವಿಜ್ಞಾನ ಸಂವಹನ ಹೀಗೆ ವಿವಿಧ ಆಸಕ್ತಿಗಳನ್ನು ಹೊಂದಿದ್ದಾರೆ. ಹಾಸ್ಯ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಹೊಂದಿರುವ ಇವರ ಹಲವಾರು ಪ್ರಬಂಧಗಳು ಮತ್ತು ಹಾಸ್ಯ ಬರಹಗಳು, ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅಣಕುವಾಡುಗಳು, ಹನಿಗವನಗಳು ಇವರ ಇತರ ಆಸಕ್ತಿಗಳು. ಚಿತ್ರಗಳಿಗೆ ವಿಶೇಷ ಅರ್ಥಗಳನ್ನು ಹುಡುಕುವ 'ವಿಚಿತ್ರ ಅಪಾರ್ಥೇನಿಯಂ' ಎಂಬ ಇವರ ಫೇಸ್ಬುಕ್ ಅಂಕಣವು ಜನಪ್ರಿಯವಾಗಿದೆ. ವಿಜ್ಞಾನ ಸಂವಹನಕಾರರಾಗಿ, ಕೆಲವು ಲೇಖನಗಳನ್ನು ಬರೆದು ಆಕಾಶವಾಣಿ ಹಾಗೂ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ಕುತೂಹಲಿ ಕನ್ನಡ ವೈಜ್ಞಾನಿಕ ಮಾಸ ಪತ್ರಿಕೆಯಲ್ಲಿ, ನಗೆಕೋಶ ಎಂಬ ಹಾಸ್ಯ ಅಂಕಣವನ್ನು ಬರೆಯುತ್ತಿದ್ದಾರೆ. ಕೆಎಸ್‍ಇಟಿ ಪ್ರಕಟಿಸಿರುವ ಹಲವು ವಿಜ್ಞಾನದ ಕೃತಿಗಳಲ್ಲಿ ಇವರ ಸಹಸಂಪಾದನೆ ಇದೆ. ಇವರ ಮೊದಲ ಪುಸ್ತಕ 'ಚಾ...ರೀ?' ಗೆ ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಸಂದಿದೆ.
ಪ್ರತಿಭಾನ್ವಿತ ಯುವ ಸಾಧಕರಾದ ಡಾ. ವಿನಾಯಕ ಕಾಮತ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday Vinayak Kamat 🌷🌷🌷
ಕಾಮೆಂಟ್‌ಗಳು