ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮಾಯಾಪಾತ್ರೆ


ಮಾಯಾಪಾತ್ರೆ

ಒಂದು ಊರು ಇತ್ತು. ಆ ಊರಿನ ಸಣ್ಣ ಮನೆಯಲ್ಲಿ ಸಾಕಮ್ಮ ಮತ್ತು ಅವಳ ಮಗಳು ವಾಸಿಸುತ್ತಿದ್ದರು. ತುಂಬಾ ಬಡತನದಲ್ಲಿ ಬದುಕುತ್ತಿದ್ದ ಸಾಕಮ್ಮನಿಗೆ ಒಮ್ಮೆ ಒಂದು ಮಾಯಾಪಾತ್ರೆ ಸಿಕ್ಕಿತು. ಅದು ಅಂತಿಂಥ ಪಾತ್ರೆಯಲ್ಲ. ಅದೊಂದು ಅದ್ಭುತ ಮಾಯಾಪಾತ್ರೆ! ಸಾಕಮ್ಮ ಆ ಪಾತ್ರೆಯನ್ನು ಒಲೆಯ ಮೇಲೆ ಇಟ್ಟು 'ಪಾತ್ರೆ ಪಾತ್ರೆ ನಮಗೆ ಹಸಿವಾಗಿದೆ ಹುಗ್ಗಿ ಬೇಯಿಸು' ಎಂದರೆ ಆ ಪಾತ್ರೆ ಹುಗ್ಗಿ ಬೇಯಿಸಲಾರಂಭಿಸುತ್ತಿತ್ತು. ಸಾಕಮ್ಮ ಮತ್ತು ಅವರ ಮಗಳು ಹೊಟ್ಟೆ ತುಂಬ ಊಟ ಮಾಡಿ ಆ ಪಾತ್ರೆಯನ್ನು ಒಲೆಯಮೇಲಿಂದ ಇಳಿಸಿ 'ಪಾತ್ರೆ-ಪಾತ್ರೆ ನಮ್ಮ ಹಸಿವು ಇಂಗಿದೆ' ಎಂಬ ಮಂತ್ರವನ್ನು ಹೇಳಿದ ತಕ್ಷಣ ಆ ಪಾತ್ರೆ ಹುಗ್ಗಿ ಬೇಯಿಸುವುದನ್ನು ನಿಲ್ಲಿಸಿಬಿಡುತ್ತಿತ್ತು.

ಸಾಕಮ್ಮನ ಮನೆಯ ಪಕ್ಕದಲ್ಲಿ ತಿಮ್ಮಪ್ಪನೆಂಬ ವ್ಯಕ್ತಿ ವಾಸಿಸುತ್ತಿದ್ದ. ಅವನು ತುಂಬ ಶ್ರೀಮಂತನಾಗಿದ್ದ. ಆದರೂ ಅವನಿಗೆ ಎಲ್ಲವೂ ತನ್ನದಾಗಬೇಕೆಂಬ ದುರಾಸೆ. ಸಾಕಮ್ಮ ಮತ್ತು ಅವಳ ಮಗಳು ಏನೋ ಬೇಯಿಸಿ ತಿನ್ನುತ್ತಾರೆ ಎಂಬ ಸಂಶಯ ಅವನಿಗೆ. ಒಂದು ದಿನ ಅವನು ಸಾಕಮ್ಮನಿಗೆ- 'ನೀವು ಏನು ಬೇಯಿಸಿ ತಿನ್ನುವಿರಿ?' ಎಂದು ಕೇಳಿದ. ಆಗ ಸಾಕಮ್ಮ 'ನಮ್ಮ ಮನೆಯ ಸುದ್ದಿ ನಿಮಗ್ಯಾಕೆ? ನಾವು ಏನಾದರೂ ತಿನ್ನುತ್ತೇವೆ. ಏನಾದರೂ ಬೇಯಿಸುತ್ತೇವೆ' ಎಂದಳು.

ಒಂದು ದಿವಸ ತಿಮ್ಮಪ್ಪನು ಸಾಕಮ್ಮನ ಮನೆಯ ಕಿಟಕಿಯಿಂದ ಕದ್ದು ನೋಡಿದನು. ಆ ಸಮಯದಲ್ಲಿ ಸಾಕಮ್ಮ ಆ ಪಾತ್ರೆಯನ್ನು ಒಲೆಯ ಮೇಲೆ ಇಟ್ಟು 'ಪಾತ್ರೆ-ಪಾತ್ರೆ ನಮಗೆ ಹಸಿವಾಗಿದೆ, ಹುಗ್ಗಿ ಬೇಯಿಸು' ಎನ್ನುತ್ತಿದ್ದಳು. ಇದನ್ನು ಕೇಳಿಸಿಕೊಂಡ ತಿಮ್ಮಪ್ಪ- 'ಇದಾ ಇವರ ರಹಸ್ಯ. ಈ ಪಾತ್ರೆಯು ಮಾಯಾಪಾತ್ರೆ ಇರಬೇಕು. ಇದರಿಂದ ಅವರು ಬೇಯಿಸಿ ತಿನ್ನುತ್ತಾರೆ. ಅದನ್ನು ಹೇಗಾದರೂ ಮಾಡಿ ಲಪಟಾಯಿಸಬೇಕು' ಎಂದು ಮನದಲ್ಲೇ ಹೇಳಿಕೊಂಡನು.

ಸಾಕಮ್ಮ ಮತ್ತು ಅವಳ ಮಗಳು ಕೆಲಸಕ್ಕೆ ಹೋದ ದಿನ ಆ ಪಾತ್ರೆಯನ್ನು ಕದ್ದು ತರುವ ಯೋಜನೆ ಹಾಕಿಕೊಂಡಿದ್ದ ತಿಮ್ಮಪ್ಪ. ಆ ದಿನ ಬಂದೇಬಿಟ್ಟಿತು. ಅವರಿಬ್ಬರೂ ಕೆಲಸಕ್ಕೆ ಹೋದರು. ತಿಮ್ಮಪ್ಪ ಅವರ ಮನೆಯ ಒಳಗೆ ಹೋಗಿ ಆ ಮಾಯಾಪಾತ್ರೆಯನ್ನು ಎತ್ತಿಕೊಂಡು ತನ್ನ ಮನೆಗೆ ಹೋದ ತಕ್ಷಣ ಆ ಮಂತ್ರ ಹೇಳಿದ. 'ಪಾತ್ರೆ ಪಾತ್ರೆ ನಮಗೆ ಹಸಿವಾಗಿದೆ ಹುಗ್ಗಿ ಬೇಯಿಸು'. ಆ ಪಾತ್ರೆ ಹುಗ್ಗಿ ಬೇಯಿಸಲಾರಂಭಿಸಿತು. ತಿಮ್ಮಪ್ಪ ಅದನ್ನು ಹೊಟ್ಟೆ ತುಂಬ ತಿಂದ. ಆದರೆ ಅವನಿಗೆ ಅದನ್ನು ನಿಲ್ಲಿಸುವ ಮಂತ್ರ ಗೊತ್ತಿರಲಿಲ್ಲ. ಆ ಪಾತ್ರೆಯು ಹುಗ್ಗಿಯನ್ನು ಬೇಯಿಸುತ್ತಲೇ ಇತ್ತು. ಮನೆಯ ತುಂಬ ಹುಗ್ಗಿ ತುಂಬಿ ಹೊರಗೂ ಹರಿಯಲಾರಂಭಿಸಿತು. ತಿಮ್ಮಪ್ಪ ಭಯದಿಂದ ಆಕಡೆಯಿಂದ ಈ ಕಡೆ, ಈ ಕಡೆಯಿಂದ ಆಕಡೆ ಓಡಲಾರಂಭಿಸಿದ. ಹುಗ್ಗಿಯು ಊರಿನ ಎಲ್ಲ ಕಡೆ ಹರಿಯಲಾರಂಭಿಸಿತು. ಆ ಪಾತ್ರೆಯ ವಿಷಯ ಇಡೀ ಊರಿಗೇ ಗೊತ್ತಾಯಿತು. ಆಗ ಊರಿನವರು ಬಂದು ಇದನ್ನು ನಿಲ್ಲಿಸು ಎಂದು ತಿಮ್ಮಪ್ಪನಿಗೆ ಹೇಳಿದರು. ಆಗ ತಿಮ್ಮಪ್ಪನು 'ಅದನ್ನು ನಿಲ್ಲಿಸುವ ಮಂತ್ರ ನನಗೆ ಬರುವುದಿಲ್ಲ' ಎಂದನು. ಅಷ್ಟರಲ್ಲಿ ಸಾಕಮ್ಮ ಮತ್ತು ಅವರ ಮಗಳು ಬಂದರು. ಹುಗ್ಗಿ ಊರತುಂಬ ಹರಿಯುವುದನ್ನು ನೋಡಿ, 'ಇದು ನಮ್ಮ ಮನೆಯ ಹುಗ್ಗಿ, ತಿಮ್ಮಪ್ಪ ನಮ್ಮ ಮನೆಯಿಂದ ಪಾತ್ರೆಯನ್ನು ಕದ್ದು ತಂದಿದ್ದಾನೆ' ಎಂದರು. ತಿಮ್ಮಪ್ಪನು ದೈನ್ಯದಿಂದ 'ಆ ಮಂತ್ರ ಹೇಳಿ, ಪಾತ್ರೆ ಹುಗ್ಗಿ ಬೇಯಿಸುವುದನ್ನು ನಿಲ್ಲಿಸು' ಎಂದು ಸಾಕಮ್ಮನಲ್ಲಿ ಬೇಡಿಕೊಂಡನು. ಆಗ ಸಾಕಮ್ಮ  ಪಾತ್ರೆಯ ಬಳಿ ಹೋಗಿ 'ಪಾತ್ರೆ ಪಾತ್ರೆ ನಮ್ಮ ಹಸಿವು ಇಂಗಿದೆ.' ಎಂದು ಹೇಳಿದಳು. ತಕ್ಷಣ ಪಾತ್ರೆ ಹುಗ್ಗಿ ಬೇಯಿಸುವುದನ್ನು ನಿಲ್ಲಿಸಿತು.

ತಿಮ್ಮಪ್ಪನಿಗೆ ಅವನ ತಪ್ಪಿನ ಅರಿವಾಯಿತು. ಆತ ಸಾಕಮ್ಮನಲ್ಲಿ ಕ್ಷಮೆ ಕೇಳಿದ. ಸಾಕಮ್ಮ ಅವನನ್ನು ಕ್ಷಮಿಸಿ, ಇಂಥ ತಪ್ಪು ಮುಂದೆ ಮಾಡಬಾರದೆಂದು ಹೇಳಿದಳು. ಅಂದಿನಿಂದ ತಿಮ್ಮಪ್ಪನು ಅವನ ದುರಾಸೆಯನ್ನು ಬಿಟ್ಟು ಎಲ್ಲರಿಗೂ ಸಹಾಯ ಮಾಡುತ್ತಾ ಒಳ್ಳೆಯ ಮನುಷ್ಯನಾಗಿ ಬಾಳಿದನು.

ನೀತಿ: ಕೆಟ್ಟ ಕೆಲಸಗಳ ಫಲವು ಕೆಟ್ಟದಾಗಿಯೇ ಇರುತ್ತದೆ.
ಚಿತ್ರಕೃಪೆ: Gurudatta N S Sanketh 

(ಕೆಲವು ವರ್ಷದ ಹಿಂದೆ ಅನುಶ್ರೀ ಆರ್ ಎಂಬ ದಾವಣಗೆರೆಯ  ಸೇಂಟ್ ಜಾನ್ಸ್ ಕಾನ್ವೆಂಟಿನ 8ನೇ ತರಗತಿ ಹುಡುಗಿ 'ಕನ್ನಡಪ್ರಭ'ದಲ್ಲಿ ಬರೆದಿದ್ದು)

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ