ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪ್ರಾಮಿಸ್


ಪ್ರಾಮಿಸ್

ಇಂದು 'ಪ್ರಾಮಿಸ್ ದಿನ'ವಂತೆ.  ಪ್ರೇಮಿಗಳ Valentine’s  Week ನಲ್ಲಿ  'ರೋಸ್ ಡೇ', 'ಚಾಕೊಲೆಟ್ ಡೇ', 'ಟೆಡ್ಡಿ ಡೇ' ಹೀಗೆ ಮೊದಲ ಮೂರು ದಿನಗಳಾಗಿ,  ನಾಲ್ಕನೆಯದು 'ಪ್ರಾಮಿಸ್ ಡೇ' ಅಂತೆ.

Valentine’s  Week ಅಂತ ಅಲ್ಲ, ಈ ‘ಪ್ರಾಮಿಸ್’ ಅನ್ನೋದು ಎಷ್ಟು ಗಂಭೀರ ವಿಚಾರ ಎಂದು ವಿಸ್ಮಯವಾಗತ್ತೆ.  ಭೀಷ್ಮ ತನ್ನ ಮಾತನ್ನು ಉಳಿಸಿಕೊಳ್ಳಲಿಕ್ಕೆ 'ಭರವಸೆ'ಯ ಪ್ರತಿಜ್ಞೆ ಮಾಡದಿದ್ದರೆ ಮಹಾಭಾರತದ ಕಥೆ ಹಾಗೆ ಇರುತ್ತಿರಲಿಲ್ಲ.  ರಾಮಾಯಣದಲ್ಲಿ ದಶರಥ ಕೈಕೇಯಿಗೆ  promise ಕೊಡದಿದ್ರೆ, ರಾಮ ಅಪ್ಪನ ಮಾತನ್ನು ನೆರವೇರಿಸುವ ಪ್ರಾಮಿಸ್ ಮಾಡದೆ ಇದ್ದಿದ್ರೆ,  ರಾಮಾಯಣ ಮಹತ್ವ ಪಡೆಯುತ್ತಿರಲಿಲ್ಲ.  ಆದರೆ ಪ್ರಸಕ್ತದ ವಾಸ್ತವ ಎಷ್ಟು ವಿಚಿತ್ರ ಅಲ್ವಾ? ಈ 'ಪ್ರಾಮಿಸ್' ಅನ್ನೋದು ಈಡೇರಿಸದೆ ಇರುವ ಒಂದು ನಿತ್ಯಸತ್ಯವಾಗಿ,  ನಮ್ಮಗಳ ವ್ಯಕ್ತಿತ್ವ ಮತ್ತು ಸಮಾಜವನ್ನು ನಡೆಸುತ್ತಿದೆ.  ಜನರನ್ನು ಅಧೋಗತಿಗೆ ಇಳಿಸಲು ನೆರವೇರಿಸಲಾಗದಿರುವ ಒಂದು ಸಣ್ಣ 'ಪ್ರಾಮಿಸ್' ಸಾಕು.

ನಮಗೆಲ್ಲರಿಗೂ ಮಾತು ಕೊಡೋದು ಎಷ್ಟು ಸುಲಭ!  ನಮಗೆಲ್ಲರಿಗೂ ಗೊತ್ತಿದೆ, ನಾವು ಕೊಡೋ ಮಾತನ್ನು ಪಾಲಿಸಲು ಬೇಕಾದ ಸಚ್ಚಾರಿತ್ರ್ಯವನ್ನು ನಾವು ಹೊಂದಿದವರಲ್ಲ ಅಂತ.  ಆದ್ರೂ ನಾವು ಬಾಯಿಮುಚ್ಚಲ್ಲ!  ಯಾಕೆ ಹೀಗೆ ಅನ್ನೋದಕ್ಕೆ ಓಶೋ ಅವರು ಹೇಳುವ ಒಂದು ಪುಟ್ಟ ಸನ್ನಿವೇಶ ನೆನಪಾಗತ್ತೆ.  ಬುದ್ಧನ ಬಳಿ

ಒಬ್ಬ ಶಿಷ್ಯತ್ವ ಬಯಸಿ ಬರುತ್ತಾನೆ. ಬುದ್ಧ ಹೇಳ್ತಾನೆ "ದೇಹ ಬುದ್ಧಿ ಮನಸ್ಸುಗಳನ್ನು ನಿಯಂತ್ರಣದಲ್ಲಿ ಇಟ್ಟಕೊಳ್ತೀನಿ ಅಂತ ನನಗೆ ಮಾತು ಕೊಡು!" ಶಿಷ್ಯತ್ವ ಬಯಸಿದ ಅಭ್ಯರ್ಥಿ ಹೇಳ್ತಾನೆ: "ಗುರುಗಳೆ, ನನ್ನಲ್ಲಿ ನಾನು ಇನ್ನೂ ಇಲ್ಲದಿರುವಾಗ, ಹೇಗೆ ತಾನೇ ನಿಮಗೆ ಮಾತುಕೊಡಲಿ?" ಅಂತ.  

ನಾವು ನಮ್ಮೊಳಗೆ ಇಲ್ಲ ಎಂದು ಅರ್ಥ ಮಾಡಿಕೊಳ್ಳದಿದ್ದಲ್ಲಿ, ನಮ್ಮಲ್ಲಿ ನಮ್ಮನ್ನು ಇರಿಸಿಕೊಳ್ಳುವತ್ತ ಸಾಗುವುದಾದರೂ ಹೇಗೆ ಸಾಧ್ಯ?  ಅದಕ್ಕೇ, ನಮ್ಮಲ್ಲಿ ಬಹುತೇಕ ಜನ ಯಾವುದೇ ತಳಬುಡ ಇಲ್ಲದೆ ಮಾತನಾಡುತ್ತೇವೆ.  ಅಲ್ಲಿ ವಚನಬದ್ಧತೆ ಎನ್ನುವುದು ಸಾಧ್ಯವೇ ಇಲ್ಲ. ಎಲ್ಲಿ ಹೋಗಿದ್ದೆ ಎಂಬ ಮನೆಯಲ್ಲಿ ಬರುವ ಸಣ್ಣ ಪ್ರಶ್ನೆಗೂ ಪ್ರಾಮಾಣಿಕ ಉತ್ತರ ನಮ್ಮಲ್ಲಿ ಸಾಧ್ಯ ಇಲ್ಲ.  "ನಾನು ಒಳ್ಳೆಯವನಾಗಿರ್ತೀನಿ, ನಿನಗೆ ನಂಬಿಕೆಯಳ್ಳವನಾಗಿರ್ತೀನಿ" ಎಂದು ನಾವು ಸಂಗಾತಿಗೆ ಪ್ರಾಮಾಣಿಕವಾಗಿ ಮಾತುಕೊಡಲು ಸಾಧ್ಯವೆ?

ಒಂದು ಕೆಲಸ ಮಾಡಲಿಕ್ಕೆ ಎಷ್ಟು ಸಮಯ ಬೇಕು ಅಂದರೆ,  ಗೊತ್ತು ಗುರಿ ಇಲ್ಲದೆ, ಅದು ಸುಲಭ ಅಂತ ಗೊತ್ತಿದ್ರೂ, ಕೆಲವೊಮ್ಮೇ ನಮಗೆ ಸಾಧ್ಯ ಇಲ್ಲ ಅಂತ ಗೊತ್ತಿದ್ರೂ, ಒಂದು ವಾರ, ತಿಂಗಳು ಇತ್ಯಾದಿ ಹೇಳ್ತೇವೆ.  ಆ ಅವಧಿ ಮುಗಿಯುವ ತನಕ ಆ‍ ಕಡೆ ನೋಡೋದೂ ಇಲ್ಲ.  ಕೊನೆಗೆ ಹೇಗೊ ಮಾಡಲೇ ಬೇಕಲ್ಲ ಎಂಬ ಕರ್ಮಕ್ಕೆ ಮನಸಿಲ್ಲದ ಮನಸ್ಸಿನಿಂದ ಏನೊ ಮಾಡ್ತೀವಿ.   ಅತೃಪ್ತಿಯಿಂದ ಅತೃಪ್ತಿ ಹಬ್ಬಿಸ್ತೀವಿ.  ಅನೇಕ ವೇಳೆ ಇಲ್ಲೇ ಇದೀನಿ 5 ನಿಮಿಷ ಬಂದೇ ಅಂತೀವಿ!  ಆಗ ನಿಮಿಷ ಅಂದ್ರೆ ಏನು? ಆ ದೇವರೇ ಬಲ್ಲ! 

ಧರ್ಮ - ಅರ್ಥ - ಕಾಮ - ಮೋಕ್ಷದಲ್ಲಿ "ನಾತಿಚರಾಮಿ" ಎಂಬ ಮಾತು ಮದುವೆ ಎಂಬ ಸಮಾರಂಭದ ಆಡಂಭರದ 'ಭರ'ದಲ್ಲಿ 'ಬರ' ಬಡಿದಂತಹ ಪ್ರಪಾತದಲ್ಲಿ ಅನಾಥವಾಗಿ ಕಳೆದುಹೋಗಿರತ್ತೆ!

ನಾವು ನಮ್ಮ ಆತ್ಮವನ್ನು ಬೆಳೆಸಿಕೊಳ್ಳಲಾಗದ ಬದುಕಿನಲ್ಲಿ 'ಪ್ರಾಮಿಸ್' ಅನ್ನೋದು ಅರ್ಥ ಉಳಿಸಿಕೊಳ್ಳುತ್ತ? ಪ್ರಾಮಿಸ್ ಅನ್ನೋದು ಕೇವಲ ಪದ ಅಲ್ಲ!

ಇಂತಹ ನಮ್ಮ ಬದುಕಿನ ಗತಿಯ ಬಗ್ಗೆ ನನಗೆ ಆಗಾಗ ಈ ಕಗ್ಗ ಅಪಾರವಾಗಿ ಕಾಡತ್ತೆ:

ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ ।

ಚಿನ್ನದಾತುರಕಿಂತ ಹೆಣ್ಣುಗಂಡೊಲವು ।।

ಮನ್ನಣೆಯದಾಹವೀಯೆಲ್ಲಕುಂ ತೀಕ್ಷ್ಣತಮ ।

ತಿನ್ನುವುದಾತ್ಮವನೆ – ಮಂಕುತಿಮ್ಮ ।।

ಇಲ್ಲಿ 'ತೀಕ್ಣ ತಮ' ಎಂಬ ಮಾತು ಆಗಾಗ ಕಾಡುತ್ತೆ.  ನಾವು ನಮ್ಮಲ್ಲಿಲ್ಲದ ಹಾಗೆ ನಮ್ಮ ನಡೆಗಳು ನಮ್ಮ ಆತ್ಮವನ್ನು ತಿಂದುಹಾಕಿರುತ್ತವೆ.   ಈ ತೀಕ್ಷ್ಣ 'ತಮ' ನಮ್ಮ ಆವರಿಸಿರುವಾಗ ನಾವು ವಚನಬದ್ಧರಾಗಿರ್ತೀವಾ. I Promise  'No’!

Promise ಅನ್ನೋದು ವ್ಯಕ್ತಿಗಳು ತಮ್ಮನ್ನು ಮತ್ತೊಬ್ಬರ ಬಳಿ Promote ಮಾಡಿಕೊಳ್ಳಲು  ಬಳಸುವ ಚಮತ್ಕಾರ.  ಅದಕ್ಕೆ ನಾವು ಮತ್ತೊಬ್ಬರು ಎಂಬ ಭೇದವಿದೆ ಎಂದು ನನಗನಿಸುವುದಿಲ್ಲ.  ನಾವು ಕೂಡ ಒಂದಲ್ಲ ಒಂದು ರೀತಿ 'false’ ಪ್ರಾಮಿಸ್ ಮಾಡ್ತೀವಿ.  ಹಲವರ 'false promise’ಗಳಿಂದ ಮೋಸ ಕೂಡ ಹೋಗ್ತೀವಿ.  ಅನೇಕ ಮೋಸಗಳ ವಿನಿಮಯಗಳುಳ್ಳ ಈ ಜಗತ್ತಿನ ನಡುವೆ ಎಷ್ಟು ಜಾಗರೂಕರಾಗಿರ್ತೀವಿ ಅನ್ನೋದಷ್ಟೇ ನಾವು ಅಂದುಕೊಳ್ಳುವ ಬುದ್ಧಿವಂತಿಕೆಯ ಹಣೆಪಟ್ಟಿಯ ವಾಸ್ತವದ ಅರಿವು.  ಆ ಅರಿವಿನಿಂದಷ್ಟೇ ಈ ಲೋಕ ಮಿಥ್ಯೆ ಎಂದೂ ಗೊತ್ತಿದ್ದೂ ನಾವು ಕ್ಷೇಮ ಎಂಬ ಸುಳ್ಳು self promise ಅಲ್ಲಿ ಬದುಕು ನಡೆಸಬಹುದು.

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ