ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಿಶ್ವಾವಸು


 ವಿಶ್ವಾವಸು


ಇಂದು ವಿಶ್ವಾವಸು ಸಂವತ್ಸರದ ಯುಗಾದಿ.  ಹೀಗಾಗಿ ವಿಶ್ವಾವಸು ವಿಳಾಸ ಹುಡುಕಿಕೊಂಡು ಹೋಗಿದ್ದೆ😊. ಸಿಕ್ಕ ವಿವರ ಇಷ್ಟು!

ವಿಶ್ವಾವಸು ಚಾಂದ್ರಮಾನ ಪಂಚಾಗದಲ್ಲಿರುವ 39ನೇ ಸಂವತ್ಸರದ ಹೆಸರು.

ವಿಶ್ವಾವಸು ಒಬ್ಬ ಗಂಧರ್ವ.  ಗಂಧರ್ವರು ಇತಿಹಾಸ ಪುರಾಣಗಳಲ್ಲಿ ಕಿನ್ನರರು, ಕಿಂಪುರುಷರಂತೆ ಪ್ರಸಿದ್ಧರಾದ ಒಂದು ಬಗೆಯ ಜನ. ಇವರನ್ನು ದೇವಯೋನಿಗಳು, ದೇವಗಾಯಕರು, ದೇವೀಮೂಲವುಳ್ಳವರು ಎಂದು ಕರೆಯುತ್ತಾರೆ. ಗಂಧರ್ವ ಶಬ್ದ ಋಗ್ವೇದದಲ್ಲಿ ಹಲವೆಡೆಗಳಲ್ಲಿ ಬರುತ್ತದೆ. ಅದರ ಪ್ರಕಾರ ವಿಶ್ವಾವಸು ಅಲ್ಲಿನ ಗಂಧರ್ವ. ಈತನಿಗೆ ವಾಯುಕೇಶನೆಂತಲೂ ಹೆಸರು. ಆಕಾಶ, ಈತನ ನೆಲೆ. ಸ್ವರ್ಗಲೋಕದ ಸೋಮರಸದ ರಕ್ಷಣೆಯ ಭಾರ ಈತನದು. ಕೆಲವು ಕಡೆ ಸ್ವರ್ಗದ ಗಂಧರ್ವ ಚಂದ್ರನೇ (ಸೋಮ) ಎಂಬ ಭಾವನೆಯೂ ಬರುತ್ತದೆ.

ವೇದಗಳಲ್ಲಿ ವರುಣ ಗಂಧರ್ವರಾಜ. ಸೋಮ ಅಪ್ಸರೆಯರು ಇವನ ಅಧೀನ. ಗಂಧರ್ವರು ಅನೇಕ ದೈವಿಕರಹಸ್ಯಗಳನ್ನು ಬಲ್ಲವರೆಂದೂ ಬ್ರಹ್ಮಾಂಡವನ್ನು ಅಳತೆಮಾಡಿ ದೇವತೆಗಳ ಸಂಚಾರಕ್ಕೆ ದಾರಿಮಾಡಿದವರೆಂದೂ ಹೇಳಲಾಗಿದೆ. ಅಥರ್ವವೇದದಲ್ಲಿ ಗಂಧರ್ವರೂ ಅಪ್ಸರೆಯರೂ ಹೆಸರಿಸಲ್ಪಟ್ಟಿದ್ದಾರೆ. ಅಥರ್ವವೇದದ ಪ್ರಕಾರ ಇವರು ಅನೇಕ ಔಷಧಿಗಳನ್ನು ಬಲ್ಲವರು. ತಪಃಶಕ್ತಿಯ ಮಾರ್ಗದರ್ಶಕರು. ಕನ್ಯೆಯರನ್ನು ಹಿಂಬಾಲಿಸುವುದು ಇವರ ಚಟ.

ಇತಿಹಾಸ, ಪುರಾಣಗಳಲ್ಲಿ ಬರುವ ಗಂಧರ್ವರು ಸ್ವರ್ಗದ ಗಾಯಕರು. ಇಂದ್ರನ ಸಭೆಯಲ್ಲಿನ ವಾದ್ಯಗೋಷ್ಠಿ ಇವರದು. ಇವರ ಕಲೆ ಸಂಗೀತ. ಇದೇ ಗಾಂಧರ್ವವೆಂಬ ಉಪವೇದವೆನಿಸಿದೆ. ಚಿತ್ರರಥ ಇವರ ಪ್ರಭು. ಜೈನಾಗಮಗಳ ಅಷ್ಟಗಣಗಳಲ್ಲಿ ಗಂಧರ್ವರೂ ಒಂದು ಗಣ. ಹದಿನೇಳನೆಯ ತೀರ್ಥಂಕರನ ಕಿಂಕರ ಒಬ್ಬ ಗಂಧರ್ವ.  ಕೆಲವು ಪುರಾಣಗಳು ಇವರನ್ನು ಕಶ್ಯಪಮುನಿಯ ಮಕ್ಕಳೆನ್ನುತ್ತವೆ.
ಗಂಧರ್ವರು ಸರಸಿಗಳು, ಇವರ ಸ್ತ್ರೀಯರು ಅಪ್ಸರೆಯರು. ರಂಭೆ, ಊರ್ವಶಿ, ತಿಲೋತ್ತಮೆ, ಮೇನಕೆ, ಘೃತಾಚೀ ಮುಂತಾದ ಸಪ್ತಕನ್ನಿಕೆಯರು ಗಂಧರ್ವಸ್ತ್ರೀಯರಲ್ಲಿ ಪ್ರಸಿದ್ಧರು. ಇಂದ್ರ ಇವರನ್ನು ಹಲವು ವೇಳೆ ವಿಶ್ವಾಮಿತ್ರನೇ ಮುಂತಾದ ಉಗ್ರತಪಸ್ವಿಗಳ ತಪೋಭಂಗಕ್ಕೆ ಉಪಯೋಗಿಸಿಕೊಂಡನೆಂದೂ ಐತಿಹ್ಯ. ಇವರ ಪ್ರೇಮಸಂಬಂಧ ಗಾಂಧರ್ವವೆಂದು ಪ್ರಸಿದ್ಧವಾಗಿದೆ. ಆದ್ದರಿಂದಲೆ ತಾಯಿ ತಂದೆಯರ ಅಥವಾ ನೆಂಟರಿಷ್ಟರ ಮಧ್ಯಸ್ತಿಕೆ ಇಲ್ಲದೆ ಪ್ರೇಮವೇ ಬುನಾದಿಯಾಗಿ ಆಗುವ ವಿವಾಹ ಸಂಬಂಧವನ್ನು ಗಾಂಧರ್ವ ಎಂದು ಮನುಸ್ಮತ್ಯಾದಿಗಳು ವಿವರಿಸುತ್ತವೆ.

ರಾಮಾಯಣದಲ್ಲಿ ವಿಶ್ವಾವಸು ಹೀಗೆ ಪ್ರಕಟಗೊಳ್ಳುತ್ತಾನೆ.  ಶ್ರೀರಾಮ ಸುವರ್ಣಮೃಗ ರೂಪವನ್ನು ಧರಿಸಿದ ಮಾರೀಚನನ್ನು ಕೊಂದು ಹಿಂತಿರುಗಿ ಸೀತಾಶೂನ್ಯವಾದ ಆಶ್ರಮವನ್ನು ಕಂಡು, ನೊಂದು, ಸೀತೆಯನ್ನು ಹುಡುಕುತ್ತ ಮುಂದೆ ಸಾಗುತ್ತಿರಲಾಗಿ ದಂಡಕಾರಣ್ಯದ ದಕ್ಷಿಣ ಭಾಗದಲ್ಲಿ ಮೇಘಾಕೃತಿಯ ಮಹಾಪರ್ವತದಂತೆಯೂ ಸಾಲವೃಕ್ಷದಂತೆ ಹೆಗಲುಳ್ಳವನಾಗಿಯೂ ದೊಡ್ಡದಾದ ಭುಜಗಳುಳ್ಳವನಾಗಿಯೂ ಎದೆಯ ಭಾಗದಲ್ಲಿ ವಿಸ್ತಾರವಾದ ಕಣ್ಣುಳ್ಳವನಾಗಿಯೂ ಇದ್ದ, ಬೃಹದಾಕಾರವಾದ ಹೊಟ್ಟೆಯೆಂಬ ಮುಖವುಳ್ಳ, ಘೋರಾಕೃತಿಯ ಪುರುಷನೊಬ್ಬನನ್ನು ಕಂಡ. ಕೂಡಲೆ ರಾಮ ಅವನ ಎಡಭುಜವನ್ನೂ ಲಕ್ಷ್ಮಣಬಲಭುಜವನ್ನೂ ಕತ್ತರಿಸಿದರು. ಕಬಂಧ ಅಸು ನೀಗಿದ. ಒಡನೆಯೆ ಅವನ ದೇಹದಿಂದ ದಿವ್ಯಾಕೃತಿಯ ಪುರುಷನೊಬ್ಬ ಹೊರಬಂದು ಅಂತರಿಕ್ಷದಲ್ಲಿ ಸೂರ್ಯನಂತೆ ಜ್ವಲಿಸುತ್ತ ನಿಂತು, ಹಿಂದೆ ವಿಶ್ವಾವಸುವೆಂಬ ಗಂಧರ್ವನಾದ ತನಗೆ ಸ್ಥೂಲಶಿರನೆಂಬ ಮುನಿಯ ಶಾಪದಿಂದ ರಾಕ್ಷಸ ಸ್ವರೂಪ ಬಂದುದನ್ನೂ ರಾಮಾದಿಗಳಿಂದ ಶಾಪವಿಮೋಚನೆಯಾದುದನ್ನೂ ತಿಳಿಸಿ, ರಾವಣ ಸೀತೆಯನ್ನು ಕದ್ದೊಯ್ದು ಲಂಕಾಪುರಿಯಲ್ಲಿ ಇಟ್ಟಿರುವನೆಂದೂ ಸಮಾನ ವ್ಯಸನಿಯಾದ ಸುಗ್ರೀವನಿಂದ ಸೀತಾಪ್ರಾಪ್ತಿಗೆ ಬೇಕಾದ ಅನುಕೂಲವೆಲ್ಲ ದೊರಕುವುದೆಂದೂ ತಿಳಿಸಿ ಅದೃಶ್ಯನಾದ.

ಇಷ್ಟೇ ಗೊತ್ತಾಗಿದ್ದು, ಇನ್ನೇನಾದ್ರೂ ಇದ್ರೆ ಹೇಳಿ.  ಏನಿಲ್ಲ ಅಂದ್ರೂ ಮುಂದಿನ ಒಂದು ವರ್ಷ ಅಂತೂ ಇವನ ಹೆಸರಿನ ಒಂದು ವರ್ಷವಂತೂ ನಮ್ಮ ಜೊತೆ ಇದೆ. ವಿಶ್ವಾವಸು ನಮ್ಮನ್ನು ಚೆನ್ನಾಗಿ ನೋಡ್ಕಳಪ್ಪ 🌷🙏🌷


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ