ಏಪ್ರಿಲ್10
ಬಾಲ್ಯದ ಏಪ್ರಿಲ್ 10 ನೆನಪಿದೆಯೆ?
Do you remember your childhood April 10th?
ಬಾಲ್ಯದಲ್ಲಿ ಈ ಏಪ್ರಿಲ್ 10 ಅಂದರೆ ಅದೊಂದು ಸಂಭ್ರಮ!
ಏಪ್ರಿಲ್ 10ರ ದಿನ, ಶಾಲೆಗೆ ಹೋದ ನಮಗೆ ನಾಳೆಯಿಂದ ಮೇ 22ರ ವರೆಗೆ ರಜೆ ಅನ್ನೋದು ಖುಷಿ ತರ್ತಿತ್ತು. ಶಾಲೆಗೆ ರಜೆ ಅನ್ನೋದಕ್ಕಿಂತ ಆ 42 ದಿನಗಳ ಅವಧಿಯಲ್ಲಿ ನಮಗೆ ಓದು ಅಂತ ಯಾರೂ ಹೇಳಲ್ಲ ಅನ್ನೋದು ಪರಿಪೂರ್ಣ ಸ್ವಾತಂತ್ರ್ಯ ಸಿಕ್ಕಂತಹ ಅಪರಿಮಿತ ಸಂತೋಷ ತರುತ್ತಿತ್ತು.
ಏಪ್ರಿಲ್ 10 ದಿನ, ಶಾಲೆ ಮುಗಿದು ಮನೆಗೆ ಬಂದ ಕ್ಷಣದಿಂದಲೇ, ನಮ್ಮ ಆ ವರ್ಷದ ಪುಸ್ತಕ ಏನೇನಿದೆಯೊ ಅದನ್ನೆಲ್ಲ ಅಟ್ಟಕ್ಕೆ ಹಾಕೋದು ಅತ್ಯಂತ ಖುಷಿ ಕೆಲಸ. ಪುಸ್ತಕಗಳನ್ನೆಲ್ಲ ಸ್ವಲ್ಪ ಸ್ವಲ್ಪವಾಗಿ ಹೊತ್ತು, ಏಣಿ ಹತ್ತಿ, ಅಟ್ಟದ ಮೇಲಿದ್ದ ಕಸಗಳ ನಡುವೆ ಸಿಕ್ಕಿದೆಡೆ ಇಡ್ತಾ ಇದ್ವಿ. ಎಷ್ಟು ಅಂತ ಹತ್ತು ಇಳಿದು ಮಾಡೋದು ಅಂತ, ಕೆಲವು ಪುಸ್ತಕಗಳನ್ನ ಕೆಳಗಿಂದ ಅಟ್ಟದ ಮೇಲಕ್ಕೆ ಎಸೆಯುತ್ತಿದ್ದುದೂ ಉಂಟು.
ಇನ್ನು ಪುಸ್ತಕಗಳು ಖಾಲಿ ಆದ ಜಾಗದಲ್ಲಿ ಚೆಂಡು, ಬುಗುರಿ, ಗೋಲಿ, ಮ್ಯಾಚೆಸ್, ಚಿತ್ರ ಬರೆಯೊ ಪುಸ್ತಕ ಇತ್ಯಾದಿ ಸಾಮಾನುಗಳನ್ನು ಇಡ್ತಿದ್ವಿ. ಇನ್ನು ಈ ರಜಾ ದಿನಗಳಲ್ಲಿ ಊಟ, ತಿಂಡಿ, ರಾತ್ರಿ ನಿದ್ರೆ, ಬಿಟ್ರೆ, ನಾವು ಎಲ್ಲಿರ್ತಿದ್ವಿ, ಏನ್ ಮಾಡ್ತಿದ್ವಿ ಅಂತ ಯಾರೂ ಬೈತಾ ಇರ್ಲಿಲ್ಲ.
ಈಗ ಕೆಲವರು ಮಕ್ಕಳನ್ನ ಕೆಲವು ದಿನ ಪ್ರವಾಸ, ಇಲ್ಲವೇ ಅಜ್ಜಿ ಮನೆ ಅಂತ ಊರಿಗೆ ಕರಕೊಂಡು ಹೋಗ್ತಾರೆ. ನಮಗೆ ಅಂತಹದ್ದು ಸಿಕ್ಕಿದ್ದು ತುಂಬ ಕಡಿಮೆ. ಬಹುತೇಕರು ಮಕ್ಕಳು ಹಾಳಾಗ್ತಾರೆ ಅಂತ ಮುಂದಿನ ವರ್ಷದ ಟ್ಯೂಷನ್ನಿಗೆ, ಬುದ್ಧಿಶಕ್ತಿ ಹೆಚ್ಚು ಮಾಡೋ ತರಗತಿ, ಬೇಸಿಗೆ ಶಿಬಿರ ಇತ್ಯಾದಿ ಅಂತ ಒತ್ತಾಯದಿಂದ ಹಾಕ್ತಾರೆ.
ನನಗಂತೂ ಇಂದು ಕೂಡಾ ಆಯ್ಕೆ ಅವಕಾಶ ಇದ್ರೆ ಸುಮ್ನೆ ಉಂಡಾಡಿ ಗುಂಡರಂತೆ ಆಡಿ ನಲಿಯುತ್ತಿದ್ದ ನನ್ನ ಅಂದಿನ ಬೇಸಿಗೆಯ ರಜೆಯನ್ನೇ ಬಯಸುವೆ. ಅಂದಿನ ಆ ಸುಂದರ ಸ್ವಾತಂತ್ರ್ಯದ ಕ್ಷಣಗಳನ್ನು ನಾ ಎಂದೂ ಮರೆಯಲಾರೆ.
ಆದರೆ ಕಾಲ ಬದಲಾಗಿದೆ. ಮಕ್ಕಳಿಗೆ ಸಮಯ ಸಿಕ್ಕರೆ ಅಕ್ಕ ಪಕ್ಕದ ಮನೆಗೆ ನುಗ್ಗಲಿಕ್ಕಾಗಲ್ಲ. ಆಟ ಆಡಕ್ಕೆ ಸುತ್ತ ಮುತ್ತ ಕಾಪೌಂಡು, ಮೈದಾನ ಇರಲಿ, ಫುಟ್ ಪಾತ್ ಕೂಡ ಇಲ್ಲ. ದೊಡ್ಡವರು ಚಿಕ್ಕವರು ಹೀಗೆ ಎಲ್ಲರ ಕೈಲೂ ಮೊಬೈಲಿರುತ್ತೆ. ಎಲ್ಲರಿಗೂ ಈ 'ಐಲು' ವಕ್ಕರಿಸಿ ಜೀವನ ನಿಸ್ತೇಜವಾಗುತ್ತಿದೆ.
ಕಾಮೆಂಟ್ಗಳು