ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಟಿ.ಟಿ. ಶ್ರೀನಿವಾಸನ್


 ಟಿ.ಟಿ.ಶ್ರೀನಿವಾಸನ್ 


ವಿದ್ವಾನ್ ಡಾ. ಟಿ. ಟಿ. ಶ್ರೀನಿವಾಸನ್ ಅವರು ಮಹಾನ್ ಸಂಸ್ಕೃತ  ಮತ್ತು ಸಂಗೀತಗಾರರ ಕುಟುಂಬದಿಂದ ಬಂದವರು. ಅವರ ಅಜ್ಜ ಟಿ. ಶ್ರೀನಿವಾಸಚಾರ್ ಹಾಗೂ ಅಜ್ಜನವರ ಚಿಕ್ಕಪ್ಪನವರಾದ, ಟಿ. ಶೇಷಚಾರ್ ಅವರು ಪಿಟೀಲು ವಾದಕರಾಗಿದ್ದರು.  ಮುಂದೆ ಇದು ತಂದೆ ಟಿ. ಎಸ್. ತಾತಾಚಾರ್ ಅವರಿಂದ ಶ್ರೀನಿವಾಸನ್ ಅವರಿಗೂ ಪ್ರವಹಿಸಿತು. ಡಾ. ಶ್ರೀನಿವಾಸನ್ ಅವರು ಸಂಗೀತ ಲೋಕದ ಸಾಧಕರಲ್ಲದೆ, ಭೌತಶಾಸ್ತ್ರ ಪ್ರಾಧ್ಯಾಪಕರಾಗಿಯೂ ಹೆಸರಾಗಿದ್ದಾರೆ. 

ಶ್ರೀನಿವಾಸನ್ ಅವರು 1949 ರ ಮೇ 12 ರಂದು ಮೈಸೂರಿನಲ್ಲಿ ಪದ್ಮಾ ತಾತಾಚಾರ್ ಮತ್ತು. ಟಿ.ಎಸ್. ತಾತಾಚಾರ್ ದಂಪತಿಗೆ ಜನಿಸಿದರು. ಶ್ರೀನಿವಾಸನ್ ಅವರು ತಮ್ಮ ಬಹುಮುಖ ಪ್ರತಿಭೆಯ ತಂದೆ ಟಿ.ಎಸ್. ತಾತಾಚಾರ್ ಅವರಿಂದ ಕರ್ನಾಟಕ ಸಂಗೀತದ ಸಾರವನ್ನು ಪಡೆದರು,

ಶ್ರೀನಿವಾಸನ್ ಅವರ  ತಂದೆ ಟಿ.ಎಸ್. ತಾತಾಚಾರ್ ಅವರು ಪ್ರಸಿದ್ಧ ಪಿಟೀಲು ವಾದಕರಾಗಿದ್ದು,  ಆಕಾಶವಾಣಿ ಮದ್ರಾಸ್, ಮೈಸೂರು ಮತ್ತು ಬೆಂಗಳೂರು ಕೇಂದ್ರಗಳಲ್ಲಿ  ಕಾರ್ಯನಿರ್ವಹಿಸಿದರಲ್ಲದೆ ಅನೇಕ  ಬಿರುದುಗಳು ಮತ್ತು ಗೌರವಗಳನ್ನು ಪಡೆದಿದ್ದರು.

ಶ್ರೀನಿವಾಸನ್ ಬಾಲ್ಯದಿಂದಲೇ ತಮ್ಮ ತಂದೆ ಟಿ.ಎಸ್. ತಾತಾಚಾರ್ ಅವರಿಂದ ಸಾಂಪ್ರದಾಯಿಕ ರೀತಿಯಲ್ಲಿ ವ್ಯವಸ್ಥಿತ ತರಬೇತಿಯನ್ನು ಪಡೆದರು  ಹೀಗಾಗಿ ಬಹಳ ಚಿಕ್ಕ ವಯಸ್ಸಿನಲ್ಲಿಯೇ ಪಿಟೀಲು ವಾದ್ಯದ ಎಲ್ಲಾ ಸೂಕ್ಷ್ಮ ವಿವರಗಳನ್ನು ಅವರಿಗೆ ಕರಗತ ಮಾಡಿಕೊಳ್ಳಲು ಸಾಧ್ಯವಾಯಿತು.

ಡಾ.ಟಿ.ಟಿ.ಎಸ್. ತಮ್ಮ 15 ನೇ ವಯಸ್ಸಿನಲ್ಲಿ ತಮ್ಮ ತಂದೆಯವರ ಜೊತೆಯಲ್ಲಿ ತಮ್ಮ ಮೊದಲ ಸಂಗೀತ ಕಚೇರಿಯನ್ನು ನೀಡಿದರು. ಅಂದಿನಿಂದ ಅವರು ಡಿ.ಕೆ. ಪಟ್ಟಮ್ಮಾಳ್, ಎಂ. ಬಾಲಮುರಳಿಕೃಷ್ಣ, ಎಂ.ಎಲ್. ವಸಂತಕುಮಾರಿ, ಮಹಾರಾಜಪುರಂ ಸಂತಾನಂ, ಡಿ.ಕೆ. ಜಯರಾಮನ್ ಸೇರಿದಂತೆ ಪ್ರಸ್ತುತ ಪೀಳಿಗೆಯ ಕಲಾವಿದರವರೆಗೆ ಬಹುತೇಕ ಎಲ್ಲಾ ಉನ್ನತ ಶ್ರೇಣಿಯ ದಕ್ಷಿಣ ಭಾರತದ ಸಂಗೀತಗಾರರಿಗೆ ಪಿಟೀಲು ಪಕ್ಕವಾದ್ಯವನ್ನು ಒದಗಿಸುತ್ತ ಬಂದಿದ್ದಾರೆ.

ಶ್ರೀನಿವಾಸನ್ ಅವರು ತಮ್ಮ ತಂದೆ ಶ್ರೀ. ಟಿ.ಎಸ್. ತಾತಾಚಾರ್ ಅವರೊಂದಿಗೆ ಪಿಟೀಲು ಯುಗಳ ವಾದನ ಕಚೇರಿಗಳನ್ನೂ ನೀಡಿದ್ದಾರೆ ಮತ್ತು ಅನೇಕ ಸಭೆಗಳಲ್ಲಿ ಏಕವ್ಯಕ್ತಿ ಪಿಟೀಲು ಪ್ರದರ್ಶನಗಳನ್ನು ನೀಡಿದ್ದಾರೆ.

ಶ್ರೀನಿವಾಸನ್ ಅವರು  ಆಲ್ ಇಂಡಿಯಾ ರೇಡಿಯೋ ಮತ್ತು ದೂರದರ್ಶನದ 'ಎ' ದರ್ಜೆಯ ಕಲಾವಿದರಾಗಿದ್ದು, ದಕ್ಷಿಣ ವಲಯ ಕಾರ್ಯಕ್ರಮ, ರಾಷ್ಟ್ರೀಯ ಕಾರ್ಯಕ್ರಮ ಮತ್ತು ರೇಡಿಯೋ ಸಂಗೀತ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ. ಅವರು ನವದೆಹಲಿಯ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಯುವ ಸಂಗೀತೋತ್ಸವ, ಸಾರ್ಕ್ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಿದ್ದಾರೆ.

ಶ್ರೀನಿವಾಸನ್ ಅವರು ಸಂಗೀತ ಕಚೇರಿಗಳನ್ನು ನೀಡಲು ಭಾರತ, ಯು.ಎಸ್.ಎ., ಯು.ಕೆ ಮತ್ತು ಕೆನಡಾ ಸೇರಿದಂತೆ ಅನೇಕ ದೇಶಗಳಲ್ಲಿ ವ್ಯಾಪಕವಾಗಿ ಪ್ರವಾಸ ಮಾಡಿದ್ದಾರೆ. ಅವರಿಗೆ ಅನೇಕ ಗೌರವಗಳು ಸಂದಿವೆ.

ಪ್ರೊ. ಶ್ರೀನಿವಾಸನ್ ಅವರು ಬೆಂಗಳೂರಿನ ಎಂಇಎಸ್ ವಿದ್ಯಾ ಸಂಸ್ಥೆಗಳಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದವರು. 

ವಿದ್ವಾನ್ ಡಾ. ಟಿ.ಟಿ.ಶ್ರೀನಿವಾಸನ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.  ನಮಸ್ಕಾರ.

Happy birthday to Great Violinist Vidwan Dr. T.t. Srinivasan Sir 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ