ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶ್ರೀ ಶ್ರೀ ರವಿಶಂಕರ್


 ಶ್ರೀ ಶ್ರೀ ರವಿಶಂಕರ್


ದಿನಾಂಕದ ಪ್ರಕಾರ ಶ್ರೀ ಶ್ರೀ ರವಿಶಂಕರ್ ಅವರು ಜನಿಸಿದ್ದು ಮೇ 13, 1956ರಲ್ಲಿ.  ಅವರು ಹುಟ್ಟಿದ್ದು ರವಿವಾರ ಹಾಗಾಗಿ ಅವರು ರವಿ.  ಅವರು ಜನಿಸಿದ್ದು ಶಂಕರ ಜಯಂತಿಯಂದು ಹಾಗಾಗಿ ರವಿ ಮತ್ತು ಶಂಕರ ಸೇರಿ ರವಿಶಂಕರರಾದರು.  ಓದಿದ್ದು ಸೈಂಟ್ ಜೋಸೆಫ್ಸ್ ಕಾಲೇಜಿನಲ್ಲಿ ವಿಜ್ಞಾನ ಪದವಿಗಾಗಿ.  ಜೊತೆಗೆ ವೇದಾಂತದ ಪದವಿ ಕೂಡಾ ಪಡೆದರು.  ಬದುಕಿನಲ್ಲಿಯೂ ಕೂಡಾ ಅವರಿಗೆ ವಿಜ್ಞಾನ ಮತ್ತು ವೇದಾಂತದ ಕುರಿತಾಗಿ ಸಮಾನವಾದ ಆಸಕ್ತಿ.


ತಮ್ಮ ಓದಿನ ದಿನಗಳ ನಂತರದಲ್ಲಿ ರವಿಶಂಕರರು  ಮಹರ್ಷಿ ಮಹೇಶ್ ಯೋಗಿ ಅವರೊಂದಿಗೆ ಪರ್ಯಟನೆ ಕೈಗೊಂಡರು.  1980ರಲ್ಲಿ ಶ್ರೀ ಅವರು ವಿಶ್ವದೆಲ್ಲೆಡೆ ಪ್ರಾಯೋಗಿಕವಾದ ಆಧ್ಯಾತ್ಮಿಕ ಶಿಬಿರಗಳನ್ನು ನಡೆಸಲು ಪ್ರಾರಂಭಿಸಿದರು.  1982ರ ವರ್ಷದಲ್ಲಿ  ಶಿವಮೊಗ್ಗೆಯ ಸಮೀಪದ ಭದ್ರಾನದಿಯ ತೀರದಲ್ಲಿ ಹತ್ತು ದಿನಗಳವರೆಗೆ ಧ್ಯಾನಸ್ಥರಾಗಿದ್ದ ಅವರಿಗೆ ವ್ಯವಸ್ಥಿತ ತರಂಗಗಳಲ್ಲಿನ ಉಸಿರಾಟ ನಿಯಂತ್ರಣದ “ಸುದರ್ಶನ ಕ್ರಿಯೆ”ಯ ಕಲ್ಪನೆ ಗೋಚರಿಸಿತು.  ಇಂದು ಸುದರ್ಶನ ಕ್ರಿಯೆ ವಿಶ್ವ ಭೂಪಟದಲ್ಲಿ ಎಲ್ಲೆಲ್ಲೂ ಪ್ರಖ್ಯಾತವಾಗಿದೆ. ಆ ಸುದರ್ಶನ ಕ್ರಿಯೆಯೇ ಬದುಕಿನ ಕಲೆಯಾಗಿ ರೂಪಿತಗೊಂಡು ಅದಕ್ಕೆ ಅನ್ವರ್ಥವೆಂಬಂತೆ Art of Livng Foundation ಎಂಬ ಸಾಂಸ್ಥಿಕ ರೂಪತಳೆದು ಪ್ರಸಿದ್ಧಗೊಂಡಿದೆ.   ಈ  ಸಂಘಟನೆಯ  35ನೇ ವಾರ್ಷಿಕೋತ್ಸವದ  ಅಂಗವಾಗಿ  3 ದಿನಗಳ  ಕಾಲ ವಿಶ್ವ  ಸಂಸ್ಕೃತಿ ದಿನ ಮಹೋತ್ಸವ  ದೆಹಲಿಯಲ್ಲಿ  ವಿಜ್ರಂಭಣೆಯಿಂದ  ನೆರವೇರಿತು.  ಈ ಮಹೋತ್ಸವದಲ್ಲಿ  155 ದೇಶಗಳಿಂದ  ಬಂದ  3.7 ದಶಲಕ್ಷ  ಜನ  ಒಂದುಗೂಡಿದ್ದರು  ಎಂದು ಹೇಳಲಾಗಿದೆ.  ಅವರ ಜನ್ಮದಿನಕ್ಕಾಗಿ ನನ್ನ ಸಹೋದ್ಯೋಗಿಗಳು ದುಬೈನಿಂದ ಬೆಂಗಳೂರಿಗೆ ಪ್ರತಿವರ್ಷ ಹೋಗಿಬರುವುದು ಕೂಡಾ ವಾಸ್ತವ.

ಮನುಷ್ಯನ ಚಿಂತನೆಗಳಿಗೂ ಆತನ ಉಸಿರಾಟಕ್ಕೂ ಸಂಬಂಧವಿರುವುದನ್ನು ಯೋಗ ಪದ್ಧತಿಯ ಬಹುತೇಕ ಗುರುಗಳಂತೆ ಶ್ರೀ ಶ್ರೀ ರವಿಶಂಕರರು ಕೂಡಾ ಪ್ರತಿಪಾದಿಸುತ್ತಾ ಬಂದಿದ್ದು, ಸುದರ್ಶನ ಕ್ರಿಯೆಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಶಿಸ್ತಿನಿಂದ ಸಕಾರಾತ್ಮಕವಾದ  ಬದಲಾವಣೆ ಸಾಧ್ಯ ಎಂಬುದನ್ನು ವಿಶ್ವದೆಲ್ಲೆಡೆ ಪ್ರಸ್ತುತಪಡಿಸುತ್ತಾ ಸಾಗಿದ್ದಾರೆ.  ಹೀಗಾಗಿ ಅವರ ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಯುನೆಸ್ಕೋದಿಂದ ಕೂಡಾ ಅಂಗೀಕೃತವಾದ ಸಾಂಸ್ಕೃತಿಕ ಸಂಘಟನೆಯಾಗಿದೆ.  ಇದರ ಜೊತೆಗೆ ಶ್ರೀರವರು ಜಿನೀವಾವನ್ನೇ ಕೇಂದ್ರವಾಗಿಸಿಕೊಂಡಿರುವ ಅಂತರರಾಷ್ಟ್ರೀಯ ಮಾನವೀಯ ಮೌಲ್ಯಗಳ ಸಂಸ್ಥೆ ಎಂಬ ವ್ಯವಸ್ಥೆಯ ಮೂಲಕ ಜಗತ್ತಿನೆಲ್ಲೆಡೆ ಗ್ರಾಮೀಣ ಅಭಿವೃದ್ಧಿ ಮತ್ತು ವಿಶ್ವಬ್ರಾತೃತ್ವ ಮೌಲ್ಯಗಳನ್ನು ಬಿಂಬಿಸುವ ಸಂಸ್ಥೆಯನ್ನು ಕೂಡಾ ನಿರ್ಮಿಸಿದ್ದಾರೆ.  

ಭಯೋತ್ಪಾದನೆ, ಯುದ್ಧಗಳಿಂದ ನರಳಿದ ವಿಶ್ವದೆಲ್ಲೆಡೆಯ ಕೇಂದ್ರಗಳಲ್ಲಿ ಶ್ರೀ ಶ್ರೀ ರವಿಶಂಕರ್ ಸಂಚರಿಸಿ ಭಯೋತ್ಪಾದಕರು, ಸೈನಿಕರು, ಗಾಯಾಳುಗಳು, ಭಯಭೀತರಾದವರು, ನಾಯಕರುಗಳು, ಪದವಿ ಮೋಹಿತರು ಹೀಗೆ ಎಲ್ಲರೊಡನೆ ಸಂಪರ್ಕವಿಟ್ಟುಕೊಂಡು ವಿಶ್ವಶಾಂತಿಗಾಗಿ ಪ್ರಯತ್ನ ನಡೆಸಿರುವುದನ್ನು ಮಾಧ್ಯಮಗಳಲ್ಲಿ ಕಾಣಬಹುದಾಗಿದೆ.  ವಿದಾನಸೌಧಗಳಂತಹ ಸೌಧಗಳಲ್ಲಿರುವ ಜನನಾಯಕರಿಗಾಗಿ, ದೊಡ್ಡ ದೊಡ್ಡ ಕಚೇರಿಗಳಲ್ಲಿನ ಅಧಿಕಾರಿಗಳಿಗಾಗಿ, ಧೂಳುತುಂಬಿದ ಕಡತಗಳ ಮಧ್ಯೆ ಜೀವಿಸುವ ನೌಕರರಿಗಾಗಿ, ಬೀದಿಯಲ್ಲಿ ದುಡಿಯುವ ಶ್ರಮವಂತರಿಗಾಗಿ, ಸೈನಿಕರಿಗಾಗಿ, ಪೋಲೀಸರಿಗಾಗಿ, ವಿದಾರ್ಥಿಗಳಿಗಾಗಿ, ಗೃಹಿಣಿಯರಿಗಾಗಿ, ಜೈಲುಗಳ ಕೋಟೆಗಳೊಳಗೆ ಕೊಳೆಯುತ್ತಿರುವ ಖೈದಿಗಳಿಗಾಗಿ ಹೀಗೆ ಎಲ್ಲರಿಗೂ ಸುದರ್ಶನ ಕ್ರಿಯೆಯ ಲಾಭ ದೊರಕಿಸಲು ನಿರಂತರವಾಗಿ ಶ್ರಮಿಸುತ್ತಿದ್ದಾರೆ.  ಹಲವಾರು ಬಾರಿ ಮೊಂಡು ಹಿಡಿದ ಹೋರಾಟಗಾರರು ಮತ್ತು ಸಮಾನವಾಗಿ ಅಥವಾ ಅದಕ್ಕಿಂತಲೂ ದರ್ಪದಲ್ಲಿ ಮೊಂಡು ಹಿಡಿದ ಆಡಳಿತ ವ್ಯವಸ್ಥೆಗಳ ನಡುವೆ ರಾಯಭಾರಿಗಳಾಗಿ ಸಹಾ ಕಾರ್ಯನಿರ್ವಹಿಸಿ ವಾತಾವರಣವನ್ನು ತಿಳಿಗೊಳಿಸಲು ಮಹತ್ವದ ಪ್ರಯತ್ನಮಾಡಿದ್ದಾರೆ. ಇತ್ತೀಚಿನ ವರ್ಷದಲ್ಲಿ  ಶ್ರೀ ಶ್ರೀ ಅವರಿಗೆ  ಭಾರತ ಸರ್ಕಾರ  ಪದ್ಮವಿಭೂಷಣ  ಪ್ರಶಸ್ತಿ  ಗೌರವವನ್ನು  ಸಲ್ಲಿಸಿದೆ.  

ಭಾರತೀಯ ಪ್ರಾಣಾಯಾಮ ಪದ್ಧತಿಗಳನ್ನು ಇಲ್ಲಿನ ಋಷಿಮುನಿಗಳ ಪರಂಪರೆ ಸಹಸ್ರಾರು ವರ್ಷಗಳಿಂದ ಉಳಿಸಿಕೊಂಡು ಬಂದಿದ್ದು, ಕಳೆದ 19ನೆಯ ಶತಮಾನದಿಂದೀಚೆಗೆ ಅನೇಕ ಮಹನೀಯರುಗಳು ಭಾರತ ಮತ್ತು ವಿದೇಶಗಳಲ್ಲಿ ಆ ಕುರಿತು ಮೂಡಿಸಿರುವ ಆಸಕ್ತಿ ಶ್ಲಾಘನೀಯವಾದದ್ದು.  ‘ಸುದರ್ಶನ ಕ್ರಿಯೆ’ಯ ಮೂಲರೀತಿ ಪ್ರಾಚೀನವಾದ ಕುಂಡಲಿನಿ ಪ್ರಾಣಾಯಾಮದಂತಹ ಹಲವು ಮಹತ್ವದ  ತತ್ವಗಳನ್ನು ಒಳಗೊಂಡಿರುವುದು ಆ ಕ್ರಿಯೆಯಲ್ಲಿ ಪಾಲ್ಗೊಂಡಿರುವವರಿಗೆಲ್ಲಾ ತಿಳಿದಿರುವಂತದ್ದು.  ಹೀಗಾಗಿ ಸುದರ್ಶನ ಕ್ರಿಯೆ ಎಂಬುದು ತಾನೇ ತಾನಾದ ಹೊಸ ಪ್ರಾಣಾಯಾಮದ ಕಲ್ಪನೆ ಎಂಬುದಕ್ಕಿಂತ ನಮ್ಮ ಭಾರತೀಯ ಮೂಲದ ಮಹೋನ್ನತ ಕೊಡುಗೆಯಾದ ಪ್ರಾಣಾಯಾಮದ ಕಲೆಯನ್ನು ಕಲಿಯಲು ಶ್ರೀ ಶ್ರೀ ರವಿಶಂಕರರು ರೂಪಿಸಿರುವ ಒಂದು ಆಕರ್ಷಣೀಯ ಶಿಕ್ಷಣ ಪದ್ಧತಿ ಎಂದು ಅರ್ಥೈಸುವುದು ಸೂಕ್ತವಾಗುತ್ತದೆ. ಇವೆಲ್ಲಕ್ಕೂ ಮಿಗಿಲಾಗಿ ಈ ಕಲೆಯನ್ನು ವಿಶ್ವದೆಲ್ಲೆಡೆ ಅಸಂಖ್ಯಾತವಾಗಿ ತಲುಪಿಸುತ್ತಿರುವ ಸಹಯೋಗ ಜಾಲದ ಸೃಷ್ಟಿಯ ಹಿನ್ನೆಲೆಯಲ್ಲಿ  ಅವಲೋಕಿಸಿದಾಗ ಅದು ಶ್ರೀ ಶ್ರೀ ರವಿಶಂಕರರ ಅಪ್ರತಿಮ ಮುಂದಾಲೋಚನೆ, ಸಂಘಟನಾ ಶಕ್ತಿ ಮತ್ತು ಮಾರ್ಕೆಟಿಂಗ್ ಜಾಣ್ಮೆಗೆ ಅಪ್ರತಿಮ ಸಾಕ್ಷಿ ಎನಿಸುತ್ತದೆ.

ಶ್ರೀ ಶ್ರೀ ರವಿಶಂಕರರಿಗೆ ವಿಜ್ಞಾನ ಮತ್ತು ಅಧ್ಯಾತ್ಮಿಕತೆ ಇವೆರಡೂ ಪ್ರಿಯ.  ಇವೆರಡೂ ಕೌತುಕವನ್ನು ಹುಟ್ಟಿಸುವ ಸಂಗತಿಗಳು ಎಂಬುದು ಅವರ ಅಂಬೋಣ.  "ನಾನು ಯಾರು?" ಎಂಬ ಪ್ರಶ್ನೆ ಆಧ್ಯಾತ್ಮವನ್ನು ಪ್ರವೇಶಿಸಿದರೆ, "ಇದು ಏನು?" ಎಂಬುದು ವಿಜ್ಞಾನಕ್ಕೆ ದಾರಿ ಎಂಬುದು ಅವರ ಸೊಗಸಿನ ವಿಶ್ಲೇಷಣೆ.

ಶ್ರೀ ಶ್ರೀ ರವಿಶಂಕರ್ ಅವರು ಇಂದು ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಆವರಣದಲ್ಲಿ ನಿರ್ಮಿಸಿರುವ ಕಲಿಕೆಯ ವಾತಾವರಣ, ವಿಶಾಲಾಕ್ಷಿ ಭವನದಂತಹ ಭವ್ಯ ವಾಸ್ತುಗಳ ನಿರ್ಮಾಣ, ಅದನ್ನು ಆಕರ್ಷಿಸಿರುವ ವಿಶ್ವ ಸಮುದಾಯ ಮತ್ತು ಅವೆಲ್ಲವೂ ಸೇರಿದಂತೆ ಒಟ್ಟಾರೆಯಾಗಿ ಮೂಡಿಸಿರುವ ಪ್ರಶಾಂತ ಪರಿಸರ ಮನಮೆಚ್ಚುವಂತಿದೆ.  

ಶ್ರೀ ಶ್ರೀ ರವಿಶಂಕರರ ಧ್ವನಿ ಪುರುಷಸ್ತ್ರೀ ಧ್ವನಿಗಳ ಸಂಯೋಗದಂತಿದ್ದು ಅದು ಹೊರಹೊಮ್ಮಿಸುವ ಅಧ್ಯಾತ್ಮ ನಾದ, ವೈಚಾರಿಕತೆ ಸರಳವಾಗಿಯೂ ಮನಮುಟ್ಟುವಂತೆಯೂ ಇದೆ.  ಈ ಕುರಿತು ಅವರ ವೆಬ್ ಸೈಟಿನಲ್ಲಿ ಶ್ರೀ ಶ್ರೀ ಅವರು ಹಲವು ವಿಚಾರ ಸಂಕೀರ್ಣಗಳಲ್ಲಿ ನಡೆಸಿರುವ ಪ್ರಶ್ನೋತ್ತರ ಕಾರ್ಯಕ್ರಮಗಳ ವಿಚಾರ ಲಹರಿಯನ್ನು ಗಮನಿಸುವುದು ಉಪಯುಕ್ತವಾದೀತು.  ಅವರು ಕೊಡುವ ವಿಚಾರ ಧಾರೆಯ ಸರಳತೆಗೆ ಬಹಳ ದಿನಗಳ ಹಿಂದೆ ಓದಿದ ಉದಾಹರಣೆ ನೆನಪಿಗೆ ಬರುತ್ತಿದೆ.  “ನಮ್ಮ ಮನಸ್ಸು ದೇಹಗಳು ಒಂದು ವಾಷಿಂಗ್ ಮೆಷಿನ್ ಇದ್ದಂತೆ.  ನಾವು ವಾಷಿಂಗ್ ಮೆಷಿನ್ನಿಗೆ ಉತ್ತಮವಾದ ಸೋಪ್ ಪೌಡರನ್ನು ಉಪಯೋಗಿಸಿದರೆ ಬಟ್ಟೆಯೂ ಶುಭ್ರ ಯಂತ್ರವೂ ಕ್ಷೇಮ.  ಅದೇ ನಾವು ವಾಷಿಂಗ್ ಮೆಷಿನ್ನಿಗೆ ಕಲ್ಲು ಮಣ್ಣು ಹಾಕಿದರೆ ಏನಾಗುತ್ತದೆ.  ಬಟ್ಟೆಯೂ ಹಾಳು, ಯಂತ್ರವೂ ಹಾಳು.  ಅದೇ ರೀತಿಯಲ್ಲಿ ನಮ್ಮ ಮನಸ್ಸಿಗೂ ನಾವು ಒಳ್ಳೆಯ ಚಿಂತನೆಗಳನ್ನು ಹಾಕಬೇಕು.  ಆಗ ಅದರ ಕಾರ್ಯವೂ ಸುರಕ್ಷಿತ, ಅದು ಹೊರಸೂಸುವ ಯೋಜನೆಗಳೂ ಶುಭ್ರ.  ಮನಸ್ಸು ಮತ್ತು ಅದರ ನಿವಾಸ ಸ್ಥಾನವಾದ  ಈ ದೇಹವೂ ಶುಭ್ರ ಮತ್ತು ಸುರಕ್ಷಿತ.  ಹಾಗಿಲ್ಲದೆ ನಾವು ಕೆಡುಕನ್ನೇ ಚಿಂತನೆಯಾಗಿ ಉಪಯೋಗಿಸಿದಲ್ಲಿ ಮತ್ತು ಅಪಥ್ಯವಾದದ್ದನ್ನೇ ಆಹಾರವಾಗಿ ತುರುಕಿದಲ್ಲಿ  ಅದು ಮನಸ್ಸು, ದೇಹ ಮತ್ತು ನಾವು ಮಾಡುವ ಕ್ರಿಯೆಗಳನ್ನೆಲ್ಲಾ ಹಾಳುಗೆಡವುದರಲ್ಲಿ ಯಾವುದೇ ಸಂದೇಹವಿಲ್ಲ”.

ನಮ್ಮ ದೇಶದಲ್ಲಿ ಯಾರಬಗ್ಗೆ ಬೇಕಾದರೂ ಬರೆಯಬಹುದು.  ಆಧ್ಯಾತ್ಮಿಕ ಗುರುಗಳ ಬಗ್ಗೆ ಬರೆಯುವುದು ಸ್ವಲ್ಪ ಕಷ್ಟದ ವಿಷಯ.  ಹಾಗೆ ಬರೆದಾಗಲೆಲ್ಲಾ  ನಾವು ಬರೆದಿರುವುದನ್ನು ಓದುವವನಿಗೆ ಯಾವುದೋ ಮೂಢತೆಯನ್ನು ಬಿಂಬಿಸುತ್ತಿದೇವೆ ಎಂಬ  ಭಾವ ಉದಿಸುವುದಿಲ್ಲವಷ್ಟೇ ಎಂಬ ಅಳುಕು ಕೂಡಾ ಕಾಡುತ್ತದೆ.  ಮತ್ತೊಂದು ನಂಬಿಕೆಯುಳ್ಳವನಿಗೆ  ಇದು ಸ್ವಜನಪಕ್ಷಪಾತ ಎಂಬ ಭಾವನೆ ಭಿತ್ತಿರಬಹುದೇ ಎಂಬ ಅನುಮಾನ ಸಹಾ ಕಾಡುತ್ತದೆ.  ನಾನು ಶ್ರೇಷ್ಠನೆಂದು ಭಾವಿಸಿರುವ ಈತ ನಾಳೆಯ ದಿನ ಬೇರೆ ಕಾಲಮ್ಮಿನಲ್ಲಿ ಬರುವ ಸಾಧ್ಯತೆಗಳಿರಬಹುದೇ ಎಂಬ ಸಂದೇಹಗಳೂ ಕಾಡುತ್ತವೆ.   ನಾವು ಶ್ರೇಷ್ಠರೆಂದು ಭಾವಿಸುವ ಜನಕ್ಕೂ ಅವರನ್ನು ಹಿಂಬಾಲಿಸುತ್ತೇವೆ ಎನ್ನುವ ಕೆಲವೊಂದು ಪಟ್ಟಭದ್ರ ಮತ್ತು ತಮ್ಮ ಮೂಗಿನ ನೇರಕ್ಕೆ ಈ ಶ್ರೇಷ್ಠರ  ತತ್ವಗಳನ್ನು ತಿರುಚುವ ಜನರ ಉಪಟಳ ಇತಿಹಾಸದಲ್ಲಿ ನಿರಂತರವಾಗಿ ನಡೆದದ್ದೇ.     ಹೀಗಾಗಿ ನಾವು ನಮ್ಮ ಅನುಭವವನ್ನು ಹೇಳಬಹುದೇ ವಿನಃ ನಾವು ಎಲ್ಲರನ್ನೂ ಪ್ರತಿನಿಧಿಸುತ್ತೇವೆ ಎಂದು ಹೇಳುವುದು ಕಷ್ಟಸಾಧ್ಯ.  ಈ ನಿಟ್ಟಿನಲ್ಲಿ ನನಗಾದ ಒಂದು ಅನುಭವವನ್ನು ಹೇಳುತ್ತೇನೆ. 

“ಸುಮಾರು 20 ವರ್ಷ ಹಿಂದಿನ ಒಂದು ದಿನ ರಾಜಾಜಿನಗರದಲ್ಲಿದ್ದ ನನ್ನ ಕಚೇರಿಯಲ್ಲಿ ಒಂದು ದಿನ ಸಂಜೆ ಕುಳಿತಿದ್ದೆ.  ಗಣಪತಿ ಸಾಂಸ್ಕೃತಿಕ ಉತ್ಸವಗಳ ಅವಧಿಯ ಆ ದಿನದಂದು ಎಲ್ಲಿಂದಲೋ ಧ್ವನಿವರ್ಧಕದಲ್ಲಿ ಲಘು ಸಂಗೀತ ಕೇಳಿಸತೊಡಗಿತ್ತು.  ಹಾಗೆಯೇ ಕಚೇರಿಯಿಂದ ಹೊರಬಂದು ಆ ಗಣಪತಿ ಸಮಾರಂಭದ ಮುಂದೆ ನಡೆಯ ತೊಡಗಿದೆ.  ಅಲ್ಲಿ ನಡೆಯುತ್ತಿದ್ದ ಸುಶ್ರಾವ್ಯ ಸಂಗೀತ ನನ್ನನ್ನು ಇನ್ನಿಲ್ಲದಂತೆ ಸೆಳೆದಿತ್ತು.  ಒಬ್ಬ ಪುರುಷ ಮತ್ತು ಒಬ್ಬ ಸ್ತ್ರೀ ಸುಶ್ರಾವ್ಯವಾಗಿ  ತನ್ಮಯರಾಗಿ ಹಾಡುತ್ತಿದ್ದರು.  ಅಲ್ಲಿ ಗಾನವೆಂಬುದು ತನ್ಮಯತೆಯೆಂಬ ಗಂಗೆಯರೂಪವಾಗಿ ಹರಿಯುತ್ತಿತ್ತು.   ನೀವು ನಂಬುವುದು ಬಿಡುವುದು ನಿಮಗೆ ಸೇರಿದ್ದು.  ಆ ಸಂಗೀತ ಸಮಾರಂಭ ಮುಗಿದಾಗ ರಸ್ತೆಯಲ್ಲಿ ಸೇರಿದ್ದ ಅಲ್ಲಿನ ಜನ ಸುಮಾರು ಹತ್ತು ನಿಮಿಷಗಳ ಕಾಲ ನಿಲ್ಲಿಸದ ಕರತಾಡನ ನಡೆಸಿದ್ದರು.  ಇದು ನನ್ನ ಅನುಭವದಲ್ಲಿ ಹಿಂದೆಂದೂ ನಡೆಯದಿದ್ದದ್ದು.  ಹಾಗೆಯೇ ಆಸಕ್ತಿಯಿಂದ ವೇದಿಕೆಯ ಬಳಿ ಬಂದಾಗ ಅಲ್ಲೊಂದು ಬ್ಯಾನರ್ “ಆರ್ಟ್ ಆಫ್ ಲಿವಿಂಗ್” ಎಂದಿತ್ತು.  ಆ ದಿನ ಹಾಡಿದವರು ಆ ಸಂಘಟನೆಗೆ ನಿಷ್ಠ ಮತ್ತು ಆತ್ಮೀಯರಾದ ಶಾಲಿನಿ ಮತ್ತು ಶ್ರೀನಿವಾಸ್ ದಂಪತಿಗಳು.  ಒಂದು ಕ್ರಮಬದ್ಧ ವ್ಯವಸ್ಥೆ ಮತ್ತು ಅಲ್ಲಿನ ತೊಡಗಿಕೊಳ್ಳುವಿಕೆ ಮೂಡಿಸುವ ಸಕಾರಾತ್ಮಕ ಪ್ರತಿಫಲನ ಈ ತೆರನಾದದ್ದಾಗಿರುತ್ತದೆ.”   

ಹೀಗೆ ಆರ್ಟ್ ಆಫ್ ಲಿವಿಂಗ್ ಮತ್ತು ಅದರ ಸೂತ್ರಧಾರರಾದ ಶ್ರೀ ಶ್ರೀ ರವಿಶಂಕರ್ ಅವರ ಕೆಲಸ ವೈಯಕ್ತಿಕವಾಗಿ ನನಗೆ ಹಿತಹುಟ್ಟಿಸಿದೆ.  ಸುದರ್ಶನಕ್ರಿಯೆಯ ಪ್ರಾರಂಭಿಕ ಪಾಠಗಳು ಕೂಡಾ ನನ್ನಿತರ ಸಣ್ಣಪುಟ್ಟ ಪ್ರಾಣಾಯಾಮ ಮತ್ತು ಯೋಗದಂತಹ ಕಿರು ಅಭ್ಯಾಸಗಳಿಗೆ ಸಾಕಷ್ಟು ಬೆಂಗಾವಲು ಒದಗಿಸಿದೆ.  ಈ ಎಲ್ಲ ನಿಟ್ಟಿನಲ್ಲಿ ಶ್ರೀ ಶ್ರೀ ಅವರಿಗೆ ನಾನು ವೈಯಕ್ತಿಕವಾದ ಮೆಚ್ಚುಗೆ, ಗೌರವ ಮತ್ತು ಜನ್ಮದಿನದ ಶುಭಾಶಯಗಳೊಂದಿಗೆ ಪ್ರಣಾಮಗಳನ್ನು ಅರ್ಪಿಸುತ್ತಿದ್ದೇನೆ.

On the birthday of Sri Sri Ravishankar 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ