ದಾದಿಯರ ದಿನ
ದಾದಿಯರ ದಿನ - ಫ್ಲಾರೆನ್ಸ್ ನೈಟಿಂಗೇಲ್ ಸ್ಮರಣೆ
ಮೊದಲಿಗೆ ದಾದಿಯರ ಬಗ್ಗೆ ಸ್ಮರಿಸುತ್ತೇನೆ. ನನಗೆ ಜೀವನದಲ್ಲಿ ಅತ್ಯಂತ ಆಪ್ತತೆ ನೀಡಿದ ಹೃದಯವಂತ ಕರ್ಮಜೀವಿಗಳಲ್ಲಿ ಮೊದಲಿಗೆ ಕಣ್ಮುಂದೆ ಬರುವವರೆಂದರೆ ದಾದಿಯರು. ಅವರುಗಳ ಕುರಿತು ನನಗೆ ಭಕ್ತಿ ತುಂಬಿದ ಪ್ರೇಮವಿದೆ.
ಇನ್ನೂ ತಲೆ ಎತ್ತಿಕೊಂಡೇ ಇದ್ದು, ಕೆಲವೇ ದಿನಗಳ ಹಿಂದೆಯೂ ಭೀಕರವಾಗಿದ್ದ ಕರೋನಾ ಯುಗದಲ್ಲಿ ಸಮಸ್ತ ವಿಶ್ವಸ್ತೋಮವೇ ವಾತಾರೋಗ ಪೀಡಿತವಾಗಿ ಆಚೆ ಇಣುಕಲು ಭಯಗ್ರಸ್ಥವಾಗಿದೆಯೇನೋ ಎಂಬ ವಾತಾವರಣಲ್ಲಿದ್ದಾಗ ಸಹ, ಈ ದಾದಿಯರು ಮಾತ್ರಾ ತಮ್ಮ ಬದುಕನ್ನೂ ಲೆಕ್ಕಿಸದೆ ತಮ್ಮನ್ನು ಮುಂದೆಮಾಡಿಕೊಂಡು ಈ ರೋಗ ರಕ್ಕಸನ ಬಾಯಿಗೂ ಮನುಕುಲಕ್ಕೂ ಅಡ್ಡ ನಿಂತು ಹೋರಾಡಿದ ರೀತಿಗೆ ನಾವು ಯಾವ ರೀತಿ ಕೃತಜ್ಞರಾಗಿರುವುದು! 🌷🙏🌷
ಸುಮಾರು 39 ವರ್ಷದ ಹಿಂದೆ ಒಮ್ಮೆ ನಾನು ಬಯಾಪ್ಸಿಯಲ್ಲಿ (ಅನಾರೋಗ್ಯಕ್ಕೆ ಏನು ಕಾರಣವಿರಬಹುದು ಎಂದು ಪರೀಕ್ಷೆಗಾಗಿ ಮಾಡುವ ಶಸ್ತ್ರ ಚಿಕಿತ್ಸೆಗೆ) ಹಾದು ಹೋದೆ. ಆಪರೇಷನ್ ಹಾಸಿಗೆಯ ಮೇಲೆ ಮಲಗಿದ ನನಗೆ ಆಮ್ಲಜನಕದ ಮಾಸ್ಕ್ ತೊಡಿಸಿ ಉಸಿರೆಳೆದುಕೊಳ್ಳಿ ಅಂದ್ರು. ಅಷ್ಟೇ ಆಮೇಲೆ ಎಲ್ಲೋ ಟ್ರಾಲಿಯಲ್ಲಿ ಮಲಗಿದ್ದು ಜ್ಞಾನ ಬಂದು ಅಮ್ಮಾ ನೋವು ಅಂದಾಗ ಕಣ್ಮುಂದೆ ಸಹಾನುಭೂತಿ, ಕರುಣೆ ತುಂಬಿದ ಮಹಿಳೆ ಒಬ್ಬರು, ಹೇಗಿದ್ದೀರಿ, ನೋಯುತ್ತಿದೆಯೇ ಎಂದು ಹೇಳುತ್ತಾ ನನ್ನ ನೋವನ್ನು ಅವರೇ ಸ್ವೀಕರಿಸಿ ನನಗೆ ಏನೋ ಶಕ್ತಿ ತುಂಬಿದರು. ಅದನ್ನು ನಾನು ವರ್ಣಿಸಲಾರೆ. ಆ ದೇವತೆ ಎಲ್ಲಿದ್ದರೂ ನಮಿಸುತ್ತೇನೆ. ನಾನು ಆ ಚಿಕಿತ್ಸೆಗೆ ಒಳಗಾಗುವ ಮುಂಚೆ ಒಬ್ಬ ದಾದಿ ಬಂದು ಕಂಕುಳು ಎದೆಯ ಬಳಿ ಶೇವ್ ಮಾಡುವಾಗ ಸಹಾ ಅವರಲ್ಲಿ ಒಂದಿನಿತೂ ಅಸಹನೀಯತೆ ಕಾಣದೆ, ನಗು ನಗುತ್ತಾ ಮಗುವನ್ನ ಮಾತನಾಡಿಸುವ ಪ್ರೀತಿ ಮಾತ್ರಾ ಕಂಡೆ. ಚಿಕಿತ್ಸೆಯ ನಂತರ ನೋವಾಗುತ್ತಿದೆ ಎಂದು ರಾತ್ರಿ ಆಗಾಗ ಹೋಗಿ ಹೇಳಿದಾಗಲೆಲ್ಲ ಇಂಜೆಕ್ಷನ್ ನೀಡಿ ಸಂತೈಸಿ, ಮಾರನೇ ದಿನ ನನ್ನ ನಗು ಮೊಗವನ್ನು ನೋಡಿ, ಈ ಹುಡುಗ ಪೇಷೆಂಟ್ ತರಹ ಕಾಣೋದೇ ಇಲ್ಲ ಎಂದು ನನ್ನನ್ನು ಆಪ್ತತೆಯಿಂದ ಕಂಡ ಆ ನಗುಮೊಗಗಳನ್ನು ನಾನು ಇಂದೂ ಮರೆತಿಲ್ಲ.
ಮೂರೂವರೆ ವರ್ಷದ ಹಿಂದೆ ದುಬೈನಲ್ಲಿ ಏನೋ ದೇಹದಲ್ಲಿ ವೆತ್ಯಯವಿದೆ ಅನಿಸಿ ಒಂದು ಬಾರಿ ಕೋವಿಡ್ ಪಿಸಿಆರ್ ಟೆಸ್ಟ್ ಮಾಡಿಸಿಕೊಂಡೇ ಬಿಡೋಣ ಎಂದುಕೊಂಡಾಗ ಒಂದು ದಿಗಿಲಿತ್ತು. ಇಂತಹ ಪರೀಕ್ಷೆ ಮಾಡುವ ದಾದಿಯರ ಮನೋಧರ್ಮ ಹೇಗಿರಬಹುದು ಎಂದುಕೊಂಡಿದ್ದ ನನಗೆ, ಪರೀಕ್ಷೆಗೆ ಬಂದ ನನ್ನನ್ನು ನಸುನಗುತ್ತಾ ಮಾತನಾಡಿಸುತ್ತಾ, ತಾನು ಮಾಡುತ್ತಿರುವ ಕೆಲಸದಲ್ಲಿರುವ ಅಪಾಯಕಾರಿ ಆತಂಕವನ್ನು ಒಂದಿನಿತೂ ತೋರದೆ ಅತ್ಯಂತ ಆಪ್ತವಾಗಿ ಪರೀಕ್ಷಿಸಿ ಶುಭಕೋರಿದ ಫಿಲಿಫೈನ್ಸ್ ಮೂಲಸಂಜಾತೆಯಾದ ಆ ದಾದಿಯ ನಗೆಮೊಗ ಈಗಲೂ ಕಣ್ಮುಂದೆ ಸಂತಸ ತರುತ್ತಿದೆ.
ಯಾವುದೇ ಕಾರಣಕ್ಕೆ ಇಂದಿನ ದಿನಗಳಲ್ಲೂ ಆಸ್ಪತ್ರೆಗಳಿಗೆ ಹೋದಾಗ, ನನ್ನನ್ನು ಅದು ಆಸ್ಪತ್ರೆ ಎಂಬ ಭಾವದಿಂದ ಮರೆಸುವುದು, ನಗುವ ಚೆಲುವಿನಿಂದ, ಕೈಂಕರ್ಯದ ಶ್ರದ್ಧೆಯಿಂದ, ಆತ್ಮೀಯ ಸ್ನೇಹದಿಂದ ಮಾತನಾಡುವ ದಾದಿಯರ ಸಹೃದಯತೆ. ಆ ದಾದಿಯರ ಮನೋಭಾವ ಲೋಕದ ತುಂಬ ಎಲ್ಲ ಕಾರ್ಯಕ್ಷೇತ್ರಗಳಲ್ಲೂ, ಎಲ್ಲ ಬದುಕಿನ ಸ್ತರಗಳಲ್ಲೂ ಇರಬೇಕು ಎಂದು ಅನಿಸುತ್ತದೆ.
ಅದೊಂದು ಬೃಹದಾಕಾರದ ಮಿಲಿಟರಿ ಆಸ್ಪತ್ರೆ. ಕಟ್ಟಡವು ದೊಡ್ಡದಾಗಿತ್ತು. ಆದರೆ ಕನಿಷ್ಠ ಸೌಕರ್ಯವೂ ಇಲ್ಲದ ಆಸ್ಪತ್ರೆ. ಆಸ್ಪತ್ರೆಯ ಉದ್ದ ಸುಮಾರು 6.5 ಕಿಲೋಮೀಟರು. ಆಸ್ಪತ್ರೆಯಲ್ಲಿ ಸಾವಿರಾರು ಹಾಸಿಗೆಗಳು, ಆದರೆ ಒಬ್ಬ ರೋಗಿಯ ಹಾಸಿಗೆಗೂ, ಇನ್ನೊಬ್ಬ ರೋಗಿಯ ಹಾಸಿಗೆಗೂ ಇದ್ದ ಅಂತರ ಕೇವಲ 45 ಸೆಂಟಿಮೀಟರುಗಳು. ಇಂತಹ ಆಸ್ಪತ್ರೆಯಲ್ಲಿ ಪ್ರತಿನಿತ್ಯ ರಾತ್ರಿಯ ಹೊತ್ತು ಆಕೆ ಕೈಯಲ್ಲಿ ದೀಪ ಹಿಡಿದು ಪ್ರತಿಯೊಂದು ಹಾಸಿಗೆಯ ಬಳಿ ಹೋಗುತ್ತಾಳೆ. ಪ್ರತಿಯೊಬ್ಬ ರೋಗಿಯನ್ನೂ ವಿಚಾರಿಸುತ್ತಾಳೆ. ಅವರಿಗೆ ಅಗತ್ಯವಾದ ಔಷದ ಮತ್ತು ಇತರ ವಸ್ತುಗಳನ್ನು ನೀಡುತ್ತಾಳೆ. ಮೆಲುದನಿಯಲ್ಲಿ ಅವರನ್ನು ಉಪಚರಿಸುತ್ತಾಳೆ, ಅವರಿಗೆ ಧೈರ್ಯ ತುಂಬುತ್ತಾಳೆ. ಸಾವಿನ ಹೊಸ್ತಿಲಲ್ಲಿರುವ ವ್ಯಕ್ತಿಗೆ, ಆಗತಾನೇ ಚೇತರಿಸಿಕೊಳ್ಳುತ್ತಿರುವ ರೋಗಿಗೆ ಅವಳು ಮಾಡುತ್ತಿದ್ದ ಸೇವೆಯಿಂದ 'ಅವಳೊಬ್ಬ ದೇವತೆ' ಎನಿಸಿದ್ದರೆ ಆಶ್ಚರ್ಯವಿಲ್ಲ. ಪ್ರತಿದಿನ ಕತ್ತಲಾದೊಡನೆ ದೀಪವನ್ನು ಹಿಡಿದು ರೋಗಿಗಳನ್ನು ವಿಚಾರಿಸಲು ಬರುತ್ತಿದ್ದ ಈಕೆಯನ್ನು 'ದೀಪಧಾರಿಣಿ' ಎಂದೇ ಕರೆಯುತ್ತಿದ್ದರು.
ಈಕೆ ಹುಟ್ಟಿದ ದಿನ ಮೇ 12, 1820. ಶ್ರೀಮಂತ ಮನೆತನದಲ್ಲಿ ಹುಟ್ಟಿದ ಈಕೆ ಐಷಾರಾಮದ ಜೀವನ ನಡೆಸಬಹುದಾಗಿತ್ತು, ಸುಖವಾಗಿರಬಹುದಿತ್ತು. ಆದರೆ ಈಕೆ ತನ್ನ ತನುಮನಧನವನ್ನು ಒಂದು ಧ್ಯೇಯಕ್ಕಾಗಿ - ರೋಗಿಗಳ ಆರೈಕೆ ಮಾಡುವ ದಾದಿಯ ಕೆಲಸಕ್ಕಾಗಿ - ಸಮರ್ಪಿಸಿಕೊಂಡಳು. ಮಿಲಿಟರಿ ಆಸ್ಪತ್ರೆಗಳ ಹಾಗೂ ಇತರ ಆಸ್ಪತ್ರೆಗಳ ಸುಧಾರಣೆಗೆ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿ ಅವುಗಳನ್ನು ಜಾರಿಗೆ ತರಲು ಪ್ರಯತ್ನಿಸಿದಳು. ಇದಕ್ಕಾಗಿ ತನ್ನ ಜೀವಮಾನವನ್ನೇ ಮುಡಿಪಾಗಿಟ್ಟಳು. ಇಂದಿಗೂ ಈಕೆ ರೂಪಿಸಿದ ಸುಧಾರಣಾ ಕ್ರಮಗಳನ್ನು ಜಗತ್ತಿನ ಎಲ್ಲ ಆಸ್ಪತ್ರೆಗಳೂ ಒಂದಲ್ಲ ಒಂದು ರೀತಿಯಲ್ಲಿ ಅನುಸರಿಸುತ್ತಿವೆ. ಈ 'ದೀಪ ಧಾರಿಣಿ' ಇಟಲಿಯ ಫ್ಲಾರೆನ್ಸ್ ನಗರದಲ್ಲಿ ಹುಟ್ಟಿದ ಪ್ಲಾರೆನ್ಸ್ ನೈಟಿಂಗೇಲ್.
ಅಂದಿನ ಅಧಿಕಾರಷಾಹಿಗಳಿಗೆ ಯುದ್ಧದಲ್ಲಿ ಮತ್ತೊಂದು ಸಾಮ್ರ್ಯಾಜ್ಯವನ್ನು ಕಸಿದು ತಮ್ಮ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳುವ ಗುಣವಿತ್ತೇ ವಿನಃ ತಮಗಾಗಿ ಯುದ್ಧ ಮಾಡುವವನಿಗೆ ಏನಾಗಿದೆ ಆತನಿಗೆ ಪೆಟ್ಟು ಬಿದ್ದಾಗ ಏನು ಮಾಡಬೇಕೆಂಬುದರ ಕಾಳಜಿ ಇರಲಿಲ್ಲ. ರೋಗಿಗಳಲ್ಲಿ ತುಂಬಾ ಗಂಭೀರರಾದವರನ್ನು ಸಮುದ್ರದಲ್ಲಿ ಎಸೆದರೆ, ಸ್ವಲ್ಪ ತ್ರಾಣವಿರುವವರನ್ನು ತಿಂಗಳಾನುಗಟ್ಟಲೆ ಹಡಗಿನ ಪ್ರಯಾಣದಲ್ಲಿ ಸಾಗಿಸಿ ಪ್ರಾಣಿಗಳಿಗೂ ಸಹ್ಯವೆನಿಸದ ಅಮಾನುಷ ಸ್ಥಳಗಳಲ್ಲಿ ಯಾವುದೇ ಶುಶ್ರೂಷಾ ವ್ಯವಸ್ಥೆಯಿಲ್ಲದ ಸ್ಥಳಗಳಿಗೆ ದಬ್ಬುತ್ತಿದ್ದರು. ಸಾವಿರಾರು ಜನರಿಗೆ ಒಬ್ಬನೋ ಇಬ್ಬರೋ ವೈದ್ಯರಿದ್ದರೆ ಉಂಟು ಇಲ್ಲದಿದ್ದರಿಲ್ಲ.
ಅಂಥಹ ಒಂದು ಯುದ್ಧದಲ್ಲಿ ಸ್ಕುಟಾರ್ ಎಂಬ ಸ್ಥಳದಲ್ಲಿ ಯುದ್ಧ ಗಾಯಾಳುಗಳನ್ನು ತುಂಬಿದ್ದ ಕೊಟ್ಟಿಗೆಗೆ ಸಿಡ್ನಿ ಹರ್ಬರ್ಟ್ ಎಂಬ ಬ್ರಿಟಿಷ್ ಮಂತ್ರಿಮಂಡಲದ ಅಧಿಕಾರಿಯ ಮನವಿಯ ಮೇರೆಗೆ ಆಗಮಿಸಿದ ಫ್ಲಾರೆನ್ಸ್ ಮಾಡಿದ ಸುಧಾರಣೆ ಮನೋಜ್ಞ ಸೇವೆ ಚರಿತ್ರಾರ್ಹವಾದದ್ದು. ಭಾರತದಲ್ಲಿ ಸಿಪಾಯಿ ದಂಗೆಯ ಸಮಯದಲ್ಲೂ ಆಕೆ ಮಾಡಿದ ಸೇವೆ ಅಭೂತಪೂರ್ವವಾದದ್ದು.
ಯಾವುದೇ ವ್ಯವಸ್ಥೆಗಳಿಲ್ಲದ, ಬೇಜವಾಬ್ದಾರಿಗಳ ಸರ್ಕಾರಿ ವ್ಯವಸ್ಥೆ, ಅಪಹಾಸ್ಯಗಳನ್ನು ಎದುರಿಸಿ ಕೂಡಾ, ಮಾನವೀಯ ಅನುಕಂಪ, ಸೇವಾ ಮನೋಭಾವನೆಗಳ ಹಾದಿಯಲ್ಲಿ ಬಂದ ಅಡೆತಡೆಗಳನ್ನೆಲ್ಲಾ ನಿವಾರಿಸಿ ಮಾನವ ಕುಲಕ್ಕೆ ಈಕೆ ಸಲ್ಲಿಸಿದ ಸೇವೆ ಇಡೀ ವಿಶ್ವವೇ ಬೆರಗಾಗುವಂತೆ ಮಾಡಿತು. ತನ್ನ ಸೇವೆಯಲ್ಲಿ ದೇವರನ್ನು ಕಂಡ ಈ ಮಹಾತಾಯಿ ಮುಂದೆ ಮಾನವ ಕುಲವನ್ನು ಸಲಹುತ್ತಿರುವ ಅನೇಕ ಮಾನವೀಯ ದಾದಿಯರ ಪ್ರತಿನಿಧಿಯಾಗಿ ಎಂದೆಂದೂ ನೆನಪಿನಲ್ಲಿ ಉಳಿಯುತ್ತಾಳೆ.
ಫ್ಲಾರೆನ್ಸ್ ನೈಟಿಂಗೇಲ್ ಅವರ ಜನ್ಮದಿನವಾದ ಈ ದಿನವನ್ನು ಅಂತರರಾಷ್ಟ್ರೀಯ ದಾದಿಯರ ದಿನ ಎಂದು ಆಚರಿಸಲಾಗುತ್ತಿದ್ದು ವಿಶ್ವದೆಲ್ಲೆಡೆ ಅಸಂಖ್ಯಾತ ರೋಗಿಗಳ ನೋವನ್ನು ಆದಷ್ಟೂ ಕಡಿಮೆ ಮಾಡಲು ಹಗಲಿರುಳೂ ಶ್ರಮಿಸುತ್ತಿರುವ ದಾದಿಯರ ಸೇವೆಯನ್ನೂ ಕೃತಜ್ಞತೆ ಮತ್ತು ಗೌರವಗಳಿಂದ ಸ್ಮರಿಸೋಣ.
On International Nurses’ Day - Respects to all Nurses for their great service🌷🙏🌷

ಕಾಮೆಂಟ್‌ಗಳು