ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪಿ. ಶ್ರೀಧರ್ ನಾಯಕ್

 

ಪಿ. ಶ್ರೀಧರ್ ನಾಯಕ್

ಪಿ. ಶ್ರೀಧರ್ ನಾಯಕ್ ಅವರು ಪತ್ರಕರ್ತರಾಗಿ ಮತ್ತು ಲೇಖಕರಾಗಿ ಹೆಸರಾದವರು.

ಶ್ರೀಧರ್ ನಾಯಕ್ ಅವರು 1956 ರ ಜೂನ್‌ 23ರಂದು ಉಡುಪಿಯಲ್ಲಿ ಜನಿಸಿದರು. ಉಡುಪಿಯಲ್ಲಿ ಓದಿದ ಇವರು ಚರಿತ್ರೆಯಲ್ಲಿ ಸ್ನಾತಕೋತ್ತರ ಪದವಿ ಗಳಿಸಿದರು.

ಶ್ರೀಧರ್ ನಾಯಕ್ ಪತ್ರಿಕೋದ್ಯಮದಲ್ಲಿ 33 ವರ್ಷಗಳ ಸೇವೆ ಸಲ್ಲಿಸಿದವರಾಗಿದ್ದು ಅದರಲ್ಲಿ ಪ್ರಜಾವಾಣಿಯಲ್ಲಿಯೇ  30 ವರ್ಷಗಳ ಸೇವೆ ಸಂದಿದೆ. ಇವರು ಕಲ್ಬುರ್ಗಿ ಮತ್ತು ಹಾಸನದಲ್ಲಿ ಒಟ್ಟು ಹತ್ತು ವರ್ಷಗಳ ಕಾಲ ಜಿಲ್ಲಾ ವರದಿಗಾರರಾಗಿ ತಮ್ಮ ವಿಶೇಷ ವರದಿಗಳಿಂದ ಜನಪ್ರಿಯತೆ ಗಳಿಸಿದರು.  ಮುಂದೆ ಪ್ರಜಾವಾಣಿಯ ಸಂಪಾದಕೀಯ ವಿಭಾಗದಲ್ಲಿನ ಇವರ ವೈವಿಧ್ಯಪೂರ್ಣ ಕಾರ್ಯನಿರ್ವಹಣೆಗಳೂ ಹೆಸರಾಗಿವೆ. 

ಶ್ರೀಧರ್ ನಾಯಕ್ ಅವರ ಮೊದಲ ಪ್ರಕಟಿತ ಕೃತಿ 'ನಿಗೂಢತೆಯ ಬೆನ್ನನೇರಿ ಹೊರಟಾಗ' ಎಂಬ ಕಿರುಕಾದಂಬರಿ. ಮುಂದೆ ಮೂಡಿದ್ದು 'ಸ್ಪಂದನ' ಎಂಬ ವೈವಿಧ್ಯಪೂರ್ಣ ಲೇಖನಗಳ ಸಂಗ್ರಹ.  ‘ಪತ್ರಿಕೋದ್ಯಮ : ಒಂದು ನೇರ ನೋಟ’ ಎಂಬ ಇವರ ಕೃತಿ ಕಾರ್ಯನಿರತ ಪತ್ರಕರ್ತರಿಗೆ ಮತ್ತು ಪತ್ರಿಕೋದ್ಯಮ ಪ್ರವೇಶಿಸಲು ಬಯಸುವವರಿಗೆ ಒಂದು ಮಾರ್ಗದರ್ಶಿ ಕೃತಿ ಎಂಬ ಹೆಗ್ಗಳಿಕೆ ಗಳಿಸಿದೆ.  'ಭಾವಲೋಕ’ ಎಂಬುದು ಇವರ ಪ್ರಬಂಧ ಮತ್ತು ಲೇಖನಗಳ ಸಂಕಲನವಾಗಿದ್ದು, ಪತ್ರಿಕೆಗಳಲ್ಲಿ ಪ್ರಕಟವಾದ ಇವರ ಬರಹಗಳು ಸೇರಿದಂತೆ ವೈಯಕ್ತಿಕ ಅನುಭವಗಳ  ಲೋಕವೇ ಇದರಲ್ಲಿದೆ.  ಇವರ 'ಹೇಳದೇ ಇದ್ದ ವಾಸ್ತವಗಳು’  ಕೃತಿ ಪತ್ರಕರ್ತನೊಬ್ಬನ ದಿನಚರಿಯ ಪುಟಗಳಿಂದ ಆಯ್ದ ಬಹು ರೋಚಕ ಹಾಗೂ ಆಸಕ್ತಿದಾಯಕ ಘಟನೆಗಳನ್ನು ಒಳಗೊಂಡಿದ್ದು,  ವಿವಿಧ ಮಿತಿಗಳ ನಡುವೆ ವಿವಿಧ ಕಾಲಘಟ್ಟಗಳಲ್ಲಿ ಪತ್ರಕರ್ತರು ನಿರ್ವಹಿಸಬೇಕಾದ ವಿಶಿಷ್ಟ ಜವಾಬ್ದಾರಿಗಳು, ಎದುರಿಸಬೇಕಾದ ರೋಚಕ ಸನ್ನಿವೇಶಗಳು,  ಕಾರ್ಯನಿರ್ವಹಿಸಿದ ಆಯಾ ಸ್ಥಳಗಳಲ್ಲಿನ ಜನಜೀವನ ಮತ್ತು ಸಾಮಾಜಿಕ ವಾತಾವರಣಗಳು ಇತ್ಯಾದಿಗಳನ್ನೆಲ್ಲ ವಿಶಿಷ್ಟ ರೀತಿಯಲ್ಲಿ ಕಣ್ಮುಂದೆ ಕಟ್ಟಿಕೊಡುತ್ತವೆ. 'ಅರೆಮರುಳನ ಕಥಾಪ್ರಸಂಗ' ಎಂಬುದು ಇವರ ಹಾಸ್ಯ ಲೇಖನಗಳ ಸಂಕಲನವಾಗಿದೆ.  'ಮಾರ್ಜಾಲ ಪುರಾಣಂ' ಎಂಬ ಸಂಕಲನ ಅವರ ಒಕ್ಕಣೆಯಲ್ಲೇ ಹೇಳುವುದಾದರೆ 'ಬಂಧ ಇಲ್ಲದ ಬಂಧುರ ಪ್ರಬಂಧಗಳು'.  ಇವರ 'ಆನೆಮರಿಯ ಆತ್ಮಕಥೆ' ಕಾದಂಬರಿಯಲ್ಲಿ ಮಕ್ಕಳಿಂದ ಹಿರಿಯರವರೆಗೆ ಪ್ರತಿಯೊಬ್ಬರಿಗೂ ಆಪ್ತವಾಗುವ ಧಾಟಿಯಿದ್ದು, ಒಂದು ಮುದ್ದಾದ ಆನೆ ಮರಿ ತನ್ನ ಕಥೆ ಹೇಳುವುದರ ಜೊತೆಗೆ ಪ್ರಕೃತಿ ಎದುರಿಸುತ್ತಿರುವ ಸಮಸ್ಯೆಗಳನ್ನು ಓದುಗರ ಕಣ್ಮುಂದೆ ತರುತ್ತದೆ. 

ಪಿ. ಶ್ರೀಧರ್ ನಾಯಕ್ ಅವರು ಕರ್ನಾಟಕದ ವ್ಯಂಗ್ಯಚಿತ್ರಗಳ ಪ್ರಥಮ ಸಿಂಡಿಕೇಟ್ ಸ್ಥಾಪಕರಲ್ಲಿ ಒಬ್ಬರು. ಇವರ ಛಾಯಾಚಿತ್ರ ಮತ್ತು ವಿಶ್ವ ಪರ್ಯಟನಾ ಹವ್ಯಾಸಗಳೂ ಮನಸೆಳೆಯುವಂತದ್ದು. ಇವರ ಪ್ರವಾಸದ ಅನುಭವಪೂರ್ಣ ಲೇಖನಗಳು ಪ್ರಸಿದ್ಧ ಪತ್ರಿಕೆಗಳಲ್ಲಿ ಮೂಡಿಬರುತ್ತಿವೆ.

ಆತ್ಮೀಯರೂ ವಿಶಿಷ್ಟ ಸಾಧಕರೂ ಆದ ಪಿ. ಶ್ರೀಧರ್ ನಾಯಕ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.  ನಮಸ್ಕಾರ. 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!