ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ದಿಲೀಪ್ ಕುಮಾರ್


 ಕೇಂದ್ರ ಸಾಹಿತ್ಯ ಅಕಾಡೆಮಿಯ 
ಯುವ ಪುರಸ್ಕಾರ  ಪಡೆದ 
ದಿಲೀಪ್  ಕುಮಾರ್

ಲೇಖಕಿ;. ಮೀನಾಕ್ಷಿ ಪ್ರಕಾಶ್ Meenakshi Prakash 🌷🙏🌷

ಆರ್. ದಿಲೀಪ್‌ ಕುಮಾರ್ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವಪುರಸ್ಕಾರ ಪಡೆದ ಪ್ರತಿಭಾನ್ವಿತ ಬರಹಗಾರರು ಮತ್ತು ವಿದ್ವತ್ಪೂರ್ಣ ಚಿಂತಕರು. 

ದಿಲೀಪ್ ಹುಟ್ಟಿದೂರು ಮೈಸೂರು. ಜನಿಸಿದ್ದು 1991 ಮಾರ್ಚ್ 16ರಂದು. ಇವರು ವಾಸವಿರುವುದು ಚಾಮರಾಜನಗರದಲ್ಲಿ. ತಂದೆಯವರು ದಿವಂಗತ ಎ. ಎಸ್. ರಾಮರಾವ್, ತಾಯಿಯವರು ಕೆ. ರಂಗಮ್ಮ.  ರಾಮರಾವ್ ಅವರ ಪುಟ್ಟ ಉದ್ಯೋಗದಲ್ಲೇ ದಿಲೀಪ ಹಾಗೂ ಕಿರಿಯ ಸಹೋದರ; ಈ ಎರಡು ಪುಟ್ಟ ಮಕ್ಕಳ ವಿದ್ಯಾಭ್ಯಾಸ ನಡೆಯಿತು. ಬುದ್ಧಿವಂತ ಮಕ್ಕಳು. ವಿವೇಕದಿಂದ ಓದಿದರು. ದಿಲೀಪರ ವಿದ್ಯಾಭ್ಯಾಸವೆಲ್ಲವೂ ಚಾಮರಾಜನಗರದಲ್ಲೇ ನಡೆಯಿತು. ಜೆ.ಎಸ್.ಎಸ್.ಬಾಲಕರ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ.ವರೆಗೆ ಓದಿದರೆ, ಬಾಲಕರ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ., ಬಿ.ಎ., ಕೂಡಾ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ. ಎಂ.ಎ., ಜೆ.ಎಸ್.ಎಸ್. ಕಾಲೇಜಿನಲ್ಲಿ. ಬಿ.ಎಡ್.ಅನ್ನು ಜೆ.ಎಸ್.ಎಸ್. ಶಿಕ್ಷಣ ಮಹಾವಿದ್ಯಾಲಯದಲ್ಲಿ ಪಡೆದುಕೊಂಡರು.  ಇದರ ಜೊತೆಗೆ ಉದ್ಯೋಗದವಕಾಶಕ್ಕಾಗಿ ಕೆ.ಸೆಟ್‌ನಲ್ಲಿ ಕೂಡಾ ಉತ್ತೀರ್ಣರಾದರು.  ಇನ್ನೂ ಓದುತ್ತಿರುವಾಗಲೇ ತಂದೆಯವರನ್ನು ಕಳೆದುಕೊಂಡು ಜೀವನವೆಂದರೇನೆಂದು ಅರಸುತ್ತಾ, ಬದುಕಿನ ಹೋರಾಟದಲ್ಲಿ ನಿಷ್ಠುರವಾದ ಪರಮಸತ್ಯಗಳನ್ನೆಲ್ಲ ದರ್ಶಿಸಿದ್ದಾಯಿತು. ತಾಯಿಯವರೊಂದಿಗೆ ಹೆಗಲು ಕೊಟ್ಟು ನಿಲ್ಲಲು ಇನ್ನೂ ಪುಟ್ಟ ವಯಸ್ಸು. ಹಾಗೂ ಹೀಗೂ ಹೋರಾಟದ ಬದುಕಿನಲ್ಲೇ ಜೀವನವೆಂದರೇನೆಂದು ಅರಿತುಕೊಳ್ಳುತ್ತಾ, ತಾಯಿಯವರ ಸ್ವಾಭಿಮಾನದ ಮತ್ತು ಸತ್ಯಸಂಧತೆಯ ಪರಮರಕ್ಷೆಯಲ್ಲಿ ಬೆಳೆದರು. ಜೊತೆಗೆ ತಮ್ಮನ ನೈತಿಕ ಬಲವೂ ಸಹಾಯ ಮಾಡಿತು. ಪದ ಕುಸಿಯೆ ನೆಲವಿಹುದು ಎಂದು ಡಿ.ವಿ.ಜಿ.ಯವರು ಹೇಳಿರುವಂತೆ ದಿಲೀಪರಿಗೆ ಕಷ್ಟ ಕಾಲದಲ್ಲಿ ಧೈರ್ಯ ತುಂಬಿದವರು, ನಾನಿದ್ದೇನೆ, ನಿನ್ನ ಜೊತೆ ಎಂದವರು ಗುರುಗಳಾದ ಪ್ರೊ. ಜಿ.ಎಚ್. ನಾಯಕರು. ನಾಯಕರ ಜೊತೆಜೊತೆಗೆ ದಿಲೀಪರು, ಪ್ರೊ. ಟಿ.ವಿ. ವೆಂಕಟಾಚಲ ಶಾಸ್ತ್ರಿಗಳು, ಪ್ರೊ. ತಾರಾನಾಥರು, ಪ್ರೊ. ಪಂಡಿತಾರಾಧ್ಯರು, ಪ್ರೊ. ಓ.ಎಲ್.ನಾಗಭೂಷಣ ಸ್ವಾಮಿಗಳನ್ನೂ ಕೃತಜ್ಞತೆಯಿಂದ ನೆನೆಯುತ್ತಾರೆ. ಎಂ. ಎ. ಓದುವಾಗ  ಪ್ರೊ. ಎನ್. ಮಹೇಶ್ವರಿಯವರ ಪ್ರೋತ್ಸಾಹ ಮತ್ತು ಅವರಿಂದ ಕಲಿತದ್ದನ್ನು ಸದಾ ಸ್ಮರಣೆಯಲ್ಲಿರಿಸಿಕೊಂಡಿದ್ದಾರೆ. 

ದಿಲೀಪ್ ಕುಮಾರ್ ಈ ಚಿಕ್ಕ ವಯಸ್ಸಿಗೇ ಜೀವನದ ಬಗ್ಗೆ ಒಂದು ವ್ಯಾಖ್ಯಾನವನ್ನು ಕೊಡುತ್ತಾರೆ; "ಜೀವನ ಬಹಳ ವಿಚಿತ್ರ! ಯಾವುದು ಯಾರಿಗೆ ಯಾವಾಗ ಹೇಗೆ ದಕ್ಕಬೇಕೋ, ಸಿಕ್ಕಬೇಕೋ, ಕಳೆದುಕೊಂಡು ಬರಿಗೈಲಿ ನಿಲ್ಲಬೇಕೋ ಎಲ್ಲವೂ ಒಂದು ದೊಡ್ಡ ಮ್ಯಾಜಿಕ್ ಎನಿಸಿದೆ’’ ಅನುಭವ ಕಲಿಸಿದ ಪಾಠವಿದು. ಇದರೊಂದಿಗೆ ಅವರು ನೆನೆಯುವ ಅಡಿಗರ ನಾಲ್ಕು ಸಾಲು ಹೀಗಿದೆ;

ಬಿಟ್ಟರೋ ಭುವಿಯಲ್ಲಿ ಕಣ್ಣು ಕಟ್ಟಿ
ಸುತ್ತಲೂ ಬಿಗಿದಿಟ್ಟ ಮುಳ್ಳುತಂತಿ
ಕುಡಿಯಲುಪ್ಪಿನ ನೀರು ತಿನಲು ಬೆಂಕಿಯ ಚೂರು
ಕುಣಿಯಲೆಂದೇ ಬೇಡಿ ಕಾಲು ತೊಡವು 

'ಅಯ್ಯೋ, ಸರ್, ಈ ಅಡಿಗರೇ ಅರ್ಥವಾಗುವುದಿಲ್ಲ’ ಎಂದು ಅಡಿಗರ ಬಗ್ಗೆ ತನ್ನ ಗುರುಗಳಲ್ಲಿ ಮಾತನಾಡಿದ್ದ ಹುಡುಗನಿಗೆ  ಸಂಕಷ್ಟಗಳು, ಜೀವನದ ಯಾತನೆಗಳು ಅಡಿಗರ ಕವನವನ್ನು ಎಷ್ಟರಮಟ್ಟಿಗೆ ಅರ್ಥ ಮಾಡಿಸಿವೆ ಎಂಬುದು ಇದರಿಂದ ಅರ್ಥವಾಗುತ್ತದೆ. 

ದಿಲೀಪರ ಪ್ರಬುದ್ಧವಾದ ಮಾತುಗಾರಿಕೆ, ತಿಳಿವಳಿಕೆ ಕೇಳುಗರಲ್ಲಿ ಹೊಸದೊಂದು ವಿಸ್ಮಯವನ್ನೇ ಸೃಷ್ಟಿಸುತ್ತದೆಂದರೆ ತಪ್ಪಾಗಲಾರದು. ಇವರ ಕೃತಿಗಳು ಬದುಕಿನಿಂದ ಪುಟಿದೆದ್ದು ಬಂದವುಗಳು. ಓದು, ಸಂಗೀತ, ಚಿತ್ರಕಲೆ ಬಲ್ಲವರಾದ ದಿಲೀಪರ ಕೃತಿಗಳು ಹಾರುವ ಹಂಸೆ(ಕವನ ಸಂಕಲನ), ಪಚ್ಚೆಯ ಜಗುಲಿ (ಆದಿಮಹಾಕವಿ ಪಂಪನ ಎರಡು ಮಹಾಕಾವ್ಯಗಳನ್ನು ಕುರಿತ ವಿಮರ್ಶೆಯ ಸಂಕಲನ), ಶಬ್ದ ಸೋಪಾನ (ವಚನ ಸಾಹಿತ್ಯದ ಕುರಿತು ಬರೆದ ವಿಮರ್ಶೆಗಳ ಸಂಕಲನ) . ಪ್ರತಿನಿತ್ಯ ಇವರು ಪತ್ರಿಕೆ ಇಲ್ಲವೇ ಸಾಮಾಜಿಕ ಜಾಲತಾಣಗಳಲ್ಲಿ ಹಂಚುತ್ತಿರುವ ವಿದ್ವತ್ಪೂರ್ಣ ಅಭಿವ್ಯಕ್ತಿಗಳೂ ಮನೋಜ್ಞವಾದದ್ದು.

ದಿಲೀಪರ 'ಪಚ್ಚೆಯ ಜಗುಲಿ'ಗೆ  ಕೇಂದ್ರ ಸಾಹಿತ್ಯ ಅಕಾಡೆಮಿಯ 2025ನೇ ಸಾಲಿನ ಯುವ ಪುರಸ್ಕಾರ ದೊರೆತಿದೆ. ಇವರ 'ಶಬ್ದ ಸೋಪಾನ' ಕೃತಿಗೆ ಬಿಎಂಶ್ರೀ ಪ್ರತಿಷ್ಠಾನದಿಂದ 'ಶಾ. ಬಾಲೂರಾವ್ ಯುವಬರಹಗಾರ ಪ್ರಶಸ್ತಿ' ಸಂದಿದೆ. 

ತಾನೆಲ್ಲಿ ಒಂದು ಬೇಲಿಯ ಹೂವಾಗಿ ಸಂಜೆಗೆ ಬಾಡಿ ಹೋಗುತ್ತೇನೋ ಎಂದುಕೊಂಡಿದ್ದು, ಮತ್ತು ತನ್ನನ್ನು ಹಾಗೇ ಭಾವಿಸಿದವರ ನಡುವೆ ಇಂದು ಪರಿಮಳಭರಿತ ಮಲ್ಲಿಗೆಯ ಹೂವಾಗಿ ಅರಳಿ ನಿಂತಿರುವ ದಿಲೀಪರಿಂದ  ಇನ್ನೂ ಅನೇಕಾನೇಕ ಕೃತಿಗಳು ಹೊರಬರಲಿ. ಜೀವನದಲ್ಲಿ ಸೋಲದೆ ದಿಟ್ಡ ಹೆಜ್ಜೆ ಊರುತ್ತಿರುವ ದಿಲೀಪ ಸಾಹಿತ್ಯ ಕ್ಷೇತ್ರದಲ್ಲೂ ದೊಡ್ಡ ಹೆಸರು ಮಾಡಲಿ. ಉತ್ಕೃಷ್ಟ ಸಾಹಿತ್ಯವನ್ನು ಸಾಹಿತ್ಯಲೋಕಕ್ಕೆ ನೀಡಲಿ.

ದಿಲೀಪ್ ಕುಮಾರ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.  ತಮಗೆ ಎಲ್ಲ ಒಳ್ಳೆಯದು ಅರಸಿ ಬರಲಿ. ತಮ್ಮ ಜೀವನ ಸುಖ ಶಾಂತಿ ಸಂತಸ ನೆಮ್ಮದಿಯಿಂದ ಕೂಡಿರಲಿ.

Dileep Kumar


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ