ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅನುರಾಧಾ ಭಟ್

 


ಅನುರಾಧಾ ಭಟ್ 


ಅನುರಾಧಾ ಭಟ್ ಪ್ರಖ್ಯಾತ ಹಿನ್ನೆಲೆ ಗಾಯಕಿ.  ಪ್ರಧಾನವಾಗಿ ಕನ್ನಡದ ಸಿನಿಮಾ, ಸುಗಮ ಸಂಗೀತ, ಕಿರುತೆರೆಗಳ ಆವರಣದಲ್ಲಿ ಶೋಭಿಸುತ್ತಿರುವ ಅವರು ಒಟ್ಟು 16 ಭಾಷೆಗಳಲ್ಲಿ ತಮ್ಮ ಪ್ರತಿಭೆ ತೋರಿಸಿದ್ದಾರೆ. 

ಜುಲೈ 23, ಅನುರಾಧಾ ಭಟ್ ಅವರ ಜನ್ಮದಿನ.   ಇವರು ಮಂಗಳೂರಿನವರು. ತಂದೆ ಶ್ರೀಕೃಷ್ಣ ಭಟ್ ನಿವೃತ್ತ ಮೆಕ್ಯಾನಿಕಲ್ ವೃತ್ತಿಪರರು.   ತಾಯಿ ಗಾಯತ್ರಿ ಶ್ರೀಕೃಷ್ಣ ಗೃಹಿಣಿ.  ಇವರದು ಸಂಗೀತದ ಹಿನ್ನೆಲೆಯುಳ್ಳ ಕುಟುಂಬ ಅಲ್ಲವಾದರೂ ತಂದೆ ತಾಯಿ ಇಬ್ಬರೂ ಕಟ್ಟಾ ಸಂಗೀತ ಪ್ರಿಯರು. ಅನುರಾಧಾ ಅವರ  ತಂಗಿ ಅನುಪಮಾ ಭಟ್ ಜನಪ್ರಿಯ ಕಿರುತೆರೆಯ ನಿರೂಪಕಿ ಮತ್ತು ನಟಿ.

ಅನುರಾಧ ಭಟ್ ಬಾಲ್ಯದಿಂದಲೂ ಬಹುಮುಖಿ ಪ್ರತಿಭಾನ್ವಿತೆ. ಶಾಲಾ ಶಿಕ್ಷಣ ಮತ್ತು ಲಲಿತಕಲೆಗಳು ಇವರ ಜೊತೆಜೊತೆಯಲ್ಲೇ ಸಾಗಿಬಂದವು.  ಎಲ್ಲೆಡೆ ಇವರು ತಮ್ಮ ಪ್ರತಿಭೆ ಸಾಬೀತುಪಡಿಸಿದರು. ತಮ್ಮ ಶೈಕ್ಷಣಿಕ ಕ್ಷೇತ್ರದಲ್ಲಿಯೂ  ಉತ್ತಮ ಸಾಧನೆ ಮಾಡಿ ಬಿ.ಎಸ್ಸಿ ಮತ್ತು ಎಂಬಿಎ ಪದವಿಗಳನ್ನು ಪಡೆದರು.

ಅನುರಾಧಾ ಭಟ್ ಅವರು  ವಿದುಷಿ ಕಮಲಾ ಭಟ್ ಅವರಿಂದ ಭರತನಾಟ್ಯ ತರಬೇತಿ ಪಡೆದು ವಿದ್ವತ್ ಸಾಧನೆ ಮಾಡಿದರು. ವಿದ್ವಾನ್ ಎಂ. ಶ್ರೀನಾಥ್ ಮರಾಠೆ ಅವರಿಂದ ಕರ್ನಾಟಕ ಶಾಸ್ತ್ರೀಯ ಗಾಯನ, ಭಕ್ತಿ ಮತ್ತು ಲಘು ಸಂಗೀತ ಗಾಯನ ತರಬೇತಿ ಪಡೆದರು. ವಿದುಷಿ ರಂಗನಾಯಕಿ ವರದರಾಜನ್ ಅವರಿಂದ ವೀಣಾ ವಾದನವನ್ನು ಕಲಿತರು. ಪ್ರಸಿದ್ಧ ಸಂಗೀತ ಸಂಯೋಜಕರಾದ (ರಾಜನ್-ನಾಗೇಂದ್ರ ಖ್ಯಾತಿಯ) ರಾಜನ್ ಅವರಿಂದ ಧ್ವನಿ-ಸಂಸ್ಕೃತಿ ಪಾಠಗಳನ್ನು ಪಡೆದರು.

ಅನುರಾಧ ಭಟ್ ಈTVಯ ಎಸ್ ಪಿ ಬಿ ನೇತೃತ್ವದ  "ಎದೆ ತುಂಬಿ ಹಾಡಿದೆನು" ಕಾರ್ಯಕ್ರಮದಲ್ಲಿ ಬೆಳಕಿಗೆ ಬಂದರು, ಹಂಸಲೇಖ ಅವರ 'ನೆನಪಿರಲಿ' ಚಿತ್ರಕ್ಕೆ ಮೊದಲು ಹಾಡಿದರು.   ಮುಂದೆ ಹಂಸಲೇಖ ಅವರ ಸಂಗೀತ ನಿರ್ದೇಶನದಲ್ಲಿ "ಮೀರಾ ಮಾಧವ ರಾಘವ" (2007) ಚಿತ್ರದಲ್ಲಿ "ವಸಂತ ವಸಂತ" ಹಾಡಿನ ಮೂಲಕ ಪೂರ್ಣ ಪ್ರಮಾಣದ ಹಿನ್ನೆಲೆ ಗಾಯಕಿಯಾಗಿ ಹೊರಹೊಮ್ಮಿದರು.

ಅನುರಾಧ ಭಟ್ ಒಬ್ಬ ಬಹುಮುಖ ಭಾರತೀಯ ಹಿನ್ನೆಲೆ ಗಾಯಕಿಯಾಗಿ ರೂಪುಗೊಂಡಿದ್ದು. ಅವರು ಕನ್ನಡ, ತಮಿಳು, ತೆಲುಗು ಮತ್ತು ತುಳು ಸೇರಿದಂತೆ  16 ಭಾಷೆಗಳ ನೂರಾರು ಚಿತ್ರಗಳಲ್ಲಿ ಹಲವು ಸಹಸ್ರ ಗೀತೆಗಳನ್ನು ಹಾಡಿದ್ದಾರೆ. ವಿಶ್ವದಾದ್ಯಂತ  ವೇದಿಕೆಗಳಲ್ಲಿನ ನೇರ ಪ್ರದರ್ಶನಗಳಲ್ಲಿ ಹಾಡಿದ್ದಾರೆ. ಅವರು ಫಿಲ್ಮ್‌ಫೇರ್ ಪ್ರಶಸ್ತಿ (ದಕ್ಷಿಣ), ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ, ರೇಡಿಯೋ ಮಿರ್ಚಿ ಸಂಗೀತ ಪ್ರಶಸ್ತಿ, ಆರ್ಯಭಟ ಅಂತರರಾಷ್ಟ್ರೀಯ ಪ್ರಶಸ್ತಿ ಮತ್ತು ಇನ್ನೂ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳನ್ನು ಗಳಿಸಿದ್ದಾರೆ. .

ಚಲನಚಿತ್ರ ಹಿನ್ನೆಲೆ ಗಾಯನದ ಜೊತೆಗೆ ಅನುರಾಧ ಭಟ್ 16 ವಿವಿಧ ಭಾಷೆಗಳಲ್ಲಿ ವಿವಿಧ ಪ್ರಕಾರಗಳ 5000ಕ್ಕೂ ಹೆಚ್ಚು ಗೀತೆಗಳಿಗೆ ಹಾಡಿದ್ದಾರೆ.   ಕಾರ್ಟೂನ್ ಪಾತ್ರಗಳಿಗೆ ಡಬ್ ಮಾಡಿದ್ದಾರೆ ಮತ್ತು ಹಲವಾರು ಅನಿಮೇಟೆಡ್ ಚಲನಚಿತ್ರಗಳು, ಸಾಕ್ಷ್ಯಚಿತ್ರಗಳು, ಜಿಂಗಲ್‌ಗಳು ಮತ್ತು ಇತರ ಯೋಜನೆಗಳಿಗೆ ನಿರೂಪಣೆಯಲ್ಲಿ ತಮ್ಮ ಧ್ವನಿಯನ್ನು ನೀಡಿದ್ದಾರೆ. ಅನುರಾಧ ಭಟ್ ಅವರು ಪ್ರದರ್ಶಿಸಿದ "ಚಿನ್ನು - ಕನ್ನಡ ಪ್ರಾಸಗಳ ಸರಣಿ - ಸಂಪುಟ 1, 2, ಮತ್ತು 3", ಚಿಕ್ಕ ಮಕ್ಕಳಲ್ಲಿ ಬಹಳ ಜನಪ್ರಿಯವಾಗಿದೆ.  ರಿಯಾಲಿಟಿ ಶೋಗಳಲ್ಲಿ ಯುವ ಪ್ರತಿಭೆಗಳಿಗೆ ಮೆಂಟರ್ ಆಗಿದ್ದಾರೆ. ತಮ್ಮದೇ ವಿಶಿಷ್ಟ ಶೈಲಿಯ ಆಲ್ಬಮ್‍ಗಳಿಗೂ ಹೆಸರಾಗಿದ್ದಾರೆ.

ಪ್ರತಿಭಾನ್ವಿತ ಹೆಮ್ಮೆಯ ಕನ್ನಡದ ಸಾಧಕಿ ಅನುರಾಧಾ ಭಟ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.  ನಮಸ್ಕಾರ.

Happy birthday to our lovely playback singer Anuradha Bhat 🌷🌷🌷


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ