ಪೀಟರ್ ನೊರೊನ್ಹ
ಪೀಟರ್ ನೊರೊನ್ಹಾ
ಪೀಟರ್ ಡಿ ನೊರೊನ್ಹಾ ಅವರು ಮಹಾನ್ ತಂತ್ರಜ್ಞ, ಯುದ್ಧ ಮತ್ತು ಶಾಂತಿ ಕಾಲದ ನಾಗರಿಕ ಸೇವಕ, ಉದ್ಯಮಿ ಮತ್ತು ಮಾನವತಾ ಕೆಲಸಗಳಿಗೆ ಹೆಸರಾಗಿದ್ದವರು.
ಪೀಟರ್ ಡಿ ನೊರೊನ್ಹಾ 1897ರ ಏಪ್ರಿಲ್ 19 ರಂದು ಕಾನ್ಪುರದಲ್ಲಿ ಜನಿಸಿದರು. ಗೋವಾ ಮೂಲದವರಾದ ತಂದೆ ಕ್ಲೌಡಿನ್ ರಾಚೆಲ್ ಡಿ ನೊರೊನ್ಹಾ ಉದ್ಯಮಿಯಾಗಿದ್ದರು. ತಾಯಿ ವಿಲಿಯಂ ಕಾನ್ಸ್ಟಂಟೈನ್. ಪೀಟರ್ ತಮ್ಮ ಆರಂಭಿಕ ಶಿಕ್ಷಣವನ್ನು ಬಾಂಬೆಯ ಸೇಂಟ್ ಮೇರಿಸ್ ಹೈಸ್ಕೂಲ್‌ನಿಂದ ಪಡೆದು ನಂತರ ನೈನಿತಾಲ್‌ನ ಸೇಂಟ್ ಜೋಸೆಫ್ ಕಾಲೇಜಿನಿಂದ ಪಡೆದರು. ಅವರು ಶೈಕ್ಷಣಿಕ ಮತ್ತು ಅಥ್ಲೆಟಿಕ್ಸ್‌ನಲ್ಲಿ ಉತ್ತಮ ಸಾಧನೆ ಮಾಡಿ ಐಐಟಿ ರೂರ್ಕಿಯ ಮುಂಚಿನ ರೂಪವಾಗಿದ್ದ ಥಾಮ್ಸನ್ ಕಾಲೇಜ್ ಆಫ್ ಸಿವಿಲ್ ಇಂಜಿನಿಯರಿಂಗ್ ಸೇರಿದರು. ಅಲ್ಲಿ 1918ರಲ್ಲಿ ಸಿವಿಲ್ ಎಂಜಿನಿಯರಿಂಗ್‌ನಲ್ಲಿ ಚಿನ್ನದ ಪದಕದೊಡನೆ ಪ್ರಥಮ ರ್‍ಯಾಂಕ್ ಸಾಧನೆ ಮಾಡಿದರು.
ರೂರ್ಕಿಯನ್ನು ತೊರೆದ ನಂತರ, ಪೀಟರ್ ನೊರೊನ್ಹಾ ಮೊದಲನೆಯ ಮಹಾಯುದ್ಧದಲ್ಲಿ ಕಿಂಗ್ ಜಾರ್ಜ್ ಅವರ ಸ್ವಂತ ರಾಯಲ್ ಸ್ಯಾಪರ್ಸ್ ಮತ್ತು ಮೈನರ್ಸ್‌ನಲ್ಲಿ ಸೇವೆ ಸಲ್ಲಿಸಿದರು. ಆ ಸೇವೆಗಾಗಿ ಅವರು ಸೇವಾ ಪದಕವನ್ನು ಪಡೆದರು. ಯುದ್ಧದ ನಂತರ ಅವರು ಲೋಕೋಪಯೋಗಿ ಇಲಾಖೆಯಲ್ಲಿ ಉನ್ನತ ಶ್ರೇಣಿಯ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿದರು.
ಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಲಾದ ಮೊದಲ ಸೇತುವೆಯಾದ ಹರಿದ್ವಾರದಲ್ಲಿರುವ ಹರ್-ಕಿ-ಪೌರಿ ಘಾಟ್‌ನಲ್ಲಿನ ಸೇತುವೆಯನ್ನು ನಿರ್ಮಿಸುವಲ್ಲಿ ಪೀಟರ್ ನೊರೊನ್ಹಾ ಪ್ರಮುಖ ಪಾತ್ರ ವಹಿಸಿದ್ದರು. ಅಲ್ಲಿ ಅವರ ಹೆಸರಿನ ಗೌರವಾರ್ಥ ಫಲಕವನ್ನು ಹಾಕಲಾಯಿತು. ಅವರ ಇಂಜಿನಿಯರ್‌ಗಳ ತಂಡವು 1920 ರಲ್ಲಿ ಬಿಹಾರದಲ್ಲಿ ಬಲವರ್ಧಿತ ಇಟ್ಟಿಗೆ ಮತ್ತು ಗಟ್ಟಿ ಸ್ವರೂಪದ ಫ್ಲಾಟ್ ರೂಫ್ ವ್ಯವಸ್ಥೆಯನ್ನು ಮೂಡಿಸುವಲ್ಲಿ ಯಶಸ್ಸು ಗಳಿಸಿತು.
ಪೀಟರ್ ನೊರೊನ್ಹಾ 1926ರಲ್ಲಿ ತಮ್ಮ ಸಹೋದರರಾದ ವಿಲಮ್ ಮತ್ತು ಸ್ಟಾನ್ಲಿಯೊಂದಿಗೆ ಪಿ. ಸ್ಟಾನ್‌ವಿಲ್ ಅಂಡ್ ಕಂಪನಿ ಸ್ಥಾಪಿಸಲು ಸರ್ಕಾರಿ ಸೇವೆಯಿಂದ ಹೊರಬಂದರು.
ಪೀಟರ್ ನೊರೊನ್ಹಾ ಅವರು ಉತ್ತಮ ಗಾಲ್ಫ್ ಆಟಗಾರರಾಗಿದ್ದು ಸ್ಥಳೀಯ ಕ್ಲಬ್‌ನಲ್ಲಿ ನಾಯಕರಾದರು. ಅವರು ಫುಟ್ಬಾಲ್, ಕ್ರಿಕೆಟ್, ಟೆನಿಸ್ನಲ್ಲಿಯೂ ಮತ್ತು ಬ್ರಿಡ್ಜ್ ಆಟಗಳಲ್ಲಿಯೂ ಪ್ರವೀಣರಾಗಿದ್ದರು.
ಪೀಟರ್ ನೊರೊನ್ಹಾ ಅವರು ಎರಡನೆಯ ಮಹಾಯುದ್ಧದ ಸಮಯದಲ್ಲಿ ನಗರದ ನಾಗರಿಕ ರಕ್ಷಣೆಯಲ್ಲಿ ಸೇವೆ ಸಲ್ಲಿಸಿದರು. 1940 ರ ದಶಕದಲ್ಲಿ ಹಿಂದೂ-ಮುಸ್ಲಿಂ ಗಲಭೆಗಳ ಸಮಯದಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ಸೌಹಾರ್ದ ಸೇತುವೆಯಾಗಿ ಸೇವೆ ಸಲ್ಲಿಸಿದರು.
1950 ರಲ್ಲಿ ಸಂಭವಿಸಿದ ಭೀಕರ ಕಾನ್ಪುರ ಪ್ರವಾಹದ ಸಮಯದಲ್ಲಿ, ಅವರು ಅನೇಕ ಸಿಕ್ಕಿಬಿದ್ದ ಜನರ ಜೀವಗಳನ್ನು ಉಳಿಸಲು ಸಹಾಯ ಮಾಡಿದರು. ಗಾಯಗೊಂಡವರಿಗೆ ವೈದ್ಯಕೀಯ ನೆರವು ನೀಡಿದರು. ಇದಕ್ಕಾಗಿ ಕಾನ್ಪುರದ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಂದ ಇವರಿಗೆ ಶ್ಲಾಘನಾ ಪ್ರಮಾಣಪತ್ರ ಸಂದಿತು. ಬಡವರು ಹಾಗೂ ನಿರ್ಗತಿಕರಿಗಾಗಿ ಸ್ಥಳೀಯ ಉರ್ಸುಲಾ ಆಸ್ಪತ್ರೆಗೆ ಎಕ್ಸ್ ರೇ ಪ್ಲಾಂಟ್ ನ್ನು ಕೊಡುಗೆಯಾಗಿ ನೀಡಿದರು.
ನೊರೊನ್ಹಾ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಅವರ ಬದಕಿನ ಘಟನೆಗಳ ಕುರಿತಾದ 'ದಿ ಪೇಜೆಂಟ್ ಆಫ್ ಲೈಫ್' (1964) ಪ್ರಮುಖವಾದದ್ದು.
1965 ರಲ್ಲಿ ಆರನೇ ಪೋಪ್ ಪಾಲ್ ಅವರು ಪೀಟರ್ ನೊರೊನ್ಹಾ ಅವರಿಗೆ ದೇಶಕ್ಕೆ ಮತ್ತು ಕ್ಯಾಥೋಲಿಕ್ ಚರ್ಚ್‌ಗೆ ಸಲ್ಲಿಸಿದ ಗೌರವಾನ್ವಿತ ಸೇವೆಗಳಿಗಾಗಿ ನೈಟ್ ಹುಡ್ ಗೌರವ ನೀಡಿದರು.
ಪೀಟರ್ ಡಿ ನೊರೊನ್ಹಾ 1970ರ ಜುಲೈ 24 ರಂದು ನಿಧನರಾದರು.
On the birth anniversary of Great Engineer, Businessman, civil servant and humanist Peter De Noronha
ಕಾಮೆಂಟ್‌ಗಳು