ಜೆ.ಸು.ನಾ
ಜಿ.ಎಸ್.ನಾರಾಯಣರಾವ್
ಜೆ.ಸು.ನಾ ಎಂದು ಸಾಹಿತ್ಯ ಮತ್ತು ಪತ್ರಿಕಾ ವಲಯದಲ್ಲಿ ಹೆಸರಾಗಿರುವವರು ಜಿ.ಎಸ್.ನಾರಾಯಣರಾವ್ ಅವರು.
ನಾರಾಯಣರಾವ್ ಅವರು 1947ರ ಸೆಪ್ಟೆಂಬರ್ 21ರಂದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಕಿರುಮಣಿ ಗ್ರಾಮದಲ್ಲಿ ಜನಿಸಿದರು. ತಂದೆ ಶ್ಯಾನುಭೋಗರಾಗಿದ್ದ ಜಿ. ಸುಬ್ಬರಾಯಪ್ಪನವರು. ತಾಯಿ ಜಿ.ಎಸ್. ಚೆಲುವಮ್ಮ.
ತಾಯಿಯ ಅಗಾಧ ಪ್ರೀತಿ, ಆರೈಕೆಯಲ್ಲಿ ಬೆಳೆದ ಜೆ.ಸು.ನಾ ಹನ್ನೆರಡನೇ ವಯಸ್ಸಿನಲ್ಲೇ ಸಾಹಿತ್ಯದತ್ತ ಹೊರಳಿಕೊ೦ಡವರು. ಕನ್ನಡದ ಪ್ರಾತಃಸ್ಮರಣೀಯ ದಿವ್ಯಚೇತನಗಳಾದ ಡಿ.ವಿ.ಜಿ., ಮಾಸ್ತಿ, ಅ.ನ.ಕೃ., ತಿ.ತಾ. ಶರ್ಮಾ ಅವರುಗಳ ಮನೆಯಂಗಳದಲ್ಲಿ ಬೆರಗಿನಿ೦ದ ಓಡಾಡಿದವರು. ಆ ವಯಸ್ಸಿನಲ್ಲೇ ಸಣ್ಣ ನಾಟಕವೊಂದನ್ನು ಪಕಟಿಸಿದ ಸಾಹಸಿ. ಮುಂದೆ ಪುಸ್ತಕ ಪಕಾಶನದತ್ತ ಒಲವು ಮೂಡಿಸಿಕೊಂಡರು. ಸ್ವಂತದ್ದೂ ಸೇರಿದಂತೆ ಸುಮಾರು ಇಪ್ಪತ್ತೈದು ಕೃತಿಗಳ ಪ್ರಕಾಶನ ಮಾಡಿದರು. ವ್ಯವಹಾರ ಒಗ್ಗಿ ಬರಲಿಲ್ಲ. 1969 ರಲ್ಲಿ ಆರ್.ನಾಗೇ೦ದ್ರರಾವ್ ಅವರ ನಿರ್ದೇಶನದ ಅಪೂರ್ಣ ಯಾವ ಜನ್ಮದ ಮೈತ್ರಿ ಚಲನಚಿತ್ರದ ಸಹ ನಿರ್ದೇಶಕರಾಗಿ ಕೆಲಸ ಮಾಡಿದರು.
ಜೆ.ಸು.ನಾ. 1970 ರಲ್ಲಿ ಹಂಸಕ್ಷೀರ ವಾರಪತ್ರಿಕೆ ವರದಿಗಾರರಾಗಿ ಪತ್ರಿಕಾ ಕ್ಷೇತ್ರಕ್ಕೆ ಪ್ರವೇಶ ಮಾಡಿದರು. ಅನ೦ತರ ಸಿಟಿ ವಾಯ್ಸ್, ಸಂಜೆವಾಣಿ, ಮುಂಗಾರು, ನವನಾಡು, ಜನವಾಹಿನಿ, ಲಂಕೇಶ್ ಪತ್ರಿಕೆ ಮುಂತಾಗಿ ಹಲವಾರು ಪತ್ರಿಕೆಗಳಲ್ಲಿ ವಿಶೇಷ ವರದಿಗಾರರಾಗಿ, ಸ್ಥಾನಿಕ ಸಂಪಾದಕರಾಗಿ,
ಅಂಕಣಕಾರರಾಗಿ ಹೀಗೆ ವಿವಿಧ ಹುದ್ದೆಗಳಲ್ಲಿ ಕಾಯಕ ಮಾಡಿದರು. "ಸ್ಕೂಪ್' ಸುದ್ದಿಗಳ ಬೇಟೆಯಲ್ಲೇ ಖುಷಿ ಕಂಡವರು. ಒಂದು ಊರಿನ ಕಥೆ ಚಲನಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬೆಂಕಿ, ಸೂರ್ಯ ಚಿತ್ರಗಳಲ್ಲಿ ನಟಿಸುವುದರೊಂದಿಗೆ ಈ ಚಿತ್ರಗಳ ನಿರ್ಮಾಣ ನಿರ್ವಾಹಕರಾಗಿಯೂ ಕೆಲಸ ಮಾಡಿದ ಅನುಭವ ಇವರದಾಗಿತ್ತು. ಸುಮಾರು ನೂರಕ್ಕೂ ಹೆಚ್ಚಿನ ಸಾಕ್ಷ್ಯಚಿತ್ರಗಳಿಗೆ ನಿರೂಪಣಾ ಸಾಹಿತ್ಯ ರಚಿಸುವುದರೊಂದಿಗೆ ಕೆಲವು ಚಿತ್ರಗಳಿಗೆ ನಿರ್ದೇಶನವನ್ನೂ ಮಾಡಿದರು.
ಜೆ.ಸು.ನಾ.ಅವರು ಕಾದಂಬರಿ, ಜೀವನ ಚರಿತ್ರೆ, ನಾಟಕ, ಪತ್ತೆದಾರಿ, ಸಣ್ಣಕಥೆ, ರಾಜಕೀಯ ವಿಡಂಬನೆ, ವ್ಯಕ್ತಿ ಚಿತ್ರಗಳು, ಹೀಗೆ ಬಹು ಬಗೆಯಲ್ಲಿ ಬರೆದಿದ್ದಾರೆ. ಕೆಂಪು ಗುಲಾಬಿ, ಸಹರಾ, ವಾಸವಿ, ಅಂಬೇಡ್ಕರ್ ಮಹಾಶಯ, ಯಿಂಗೈತೆ ಪರ್ಪಂಚ, ಕಾರಿಡಾರ್ ಕಾಲಕೋಶ ಇವರ ಕೃತಿಗಳಲ್ಲಿ ಸೇರಿವೆ.
ಜೆ.ಸು.ನಾ. ಅವರಿಗೆ 1912 ರಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ಪ್ರಶಸ್ತಿಯೂ ಸೇರಿದಂತೆ ಅನೇಕ ಗೌರವಗಳು ಸಂದಿವೆ.
ಜೆ.ಸು.ನಾ ಅವರಿಗೆ ಹುಟ್ಟುಗಬ್ಬದ ಶುಭಹಾರೈಕೆಗಳು. ನಮಸ್ಕಾರ.
Happy birthday Jesuna GS Narayana Rao Sir 🌷🙏🌷
ಕಾಮೆಂಟ್‌ಗಳು