ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಎಸ್.‌ ಕೃಷ್ಣಮೂರ್ತಿ


 ಎಸ್.‌ ಕೃಷ್ಣಮೂರ್ತಿ 


ಎಸ್.‌ ಕೃಷ್ಣಮೂರ್ತಿ ಸಿವಿಲ್ ಎಂಜಿನಿಯರಿಂಗ್, ಸಾಫ್ಟ್ವೇರ್ ಎಂಜಿನಿಯರಿಂಗ್, ಸಾಹಿತ್ಯ, ಜ್ಯೋತಿಷ್ಯ, ಛಾಯಾಗ್ರಹಣ ಹಾಗೂ ವಿಶ್ವಪರ್ಯಟನ ಹೀಗೆ ಬಹುಮುಖಿ ಆಸಕ್ತರಾಗಿದ್ದು ಅಧ್ಯಾತ್ಮದಲ್ಲಿ ಒಲವುಳ್ಳವರು. ಇವರು 'ಕೃಷ್ಣಕವಿ' ಕಾವ್ಯನಾಮದಿಂದ ಬರೆಯುತ್ತಿದ್ದಾರೆ. 

ಕೃಷ್ಣಮೂರ್ತಿಯವರು ಸೀತಾರಾಮ ಶೆಟ್ಟಿ ಮತ್ತು ಸರೋಜಮ್ಮ ದಂಪತಿಗಳಿಗೆ 1958ರ ಸೆಪ್ಟೆಂಬರ್‌ 7ರಂದು ಬೆಂಗಳೂರಿನಲ್ಲಿ ಜನಿಸಿದರು.  ಚಿಕ್ಕಂದಿನಲ್ಲೇ  ಸಾಹಿತ್ಯಾಸಕ್ತಿ ಮೂಡಿಸಿಕೊಂಡ ಇವರು ಹತ್ತನೆಯ ತರಗತಿ ಮುಗಿಸುವಷ್ಟರಲ್ಲಿ ಅಂದಿನ ಹೆಸರಾಂತ ಲೇಖಕರಾದ ತ್ರಿವೇಣಿ, ಎನ್.‌ ನರಸಿಂಹಯ್ಯ, ಅನಕೃ,ಇನಾಂದಾರ್‌, ಎಸ್.‌ ಎಲ್.‌ ಭೈರಪ್ಪ ಮತ್ತು ಕುವೆಂಪ. ಮುಂತಾದವರ ಸುಮಾರು ಇನ್ನೂರಕ್ಕೂ ಹೆಚ್ಚು ಜನಪ್ರಿಯ ಕಾದಂಬರಿಗಳನ್ನು ಓದಿ ಮುಗಿಸಿದ್ದರು. 

ಕೃಷ್ಣಮೂರ್ತಿಯವರು 1980ರಲ್ಲಿ ಎರಡು ಚಿನ್ನದ ಪದಕಗಳ ಪ್ರಥಮ ರ‍್ಯಾಂಕ್ ಸಾಧನೆಯೊಂದಿಗೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಸಿವಿಲ್ ಎಂಜಿನಿಯರಿಂಗ್‌ ಪದವಿಯನ್ನು ಗಳಿಸಿದರು. ಸ್ನಾತಕೋತ್ತರ ಪದವಿಗಾಗಿ ಬೆಂಗಳೂರಿನ ಟಾಟಾ ವಿಜ್ಞಾನ ಸಂಸ್ಥೆಯ ಅಖಿಲ ಭಾರತ ಮಟ್ಟದ ಪ್ರವೇಶ ಪರೀಕ್ಷೆಯಲ್ಲಿ ಕೂಡ ಪ್ರಥಮ ಸ್ಥಾನ ಗಳಿಸಿದರು.  ಸ್ನಾತಕೋತ್ತರ ಪದವಿ ಮುಗಿಸಿ ಟಾಟಾಕನ್ಸಲ್ಟಿಂಗ್ ಎಂಜಿನಿಯರ್ಸ್ ಸಂಸ್ಥೆಯಲ್ಲಿ  ಉದ್ಯೋಗಕ್ಕೆ ಸೇರಿದರು. ವೃತ್ತಿಜೀವನದಲ್ಲಿನ ನಿತ್ಯನೂತನ ಅಗತ್ಯತೆಗಳಿಗೆ ನಿರಂತರವಾಗಿ  ಕಲಿಯುವ ಪ್ರವೃತ್ತಿಯನ್ನು ರೂಡಿಸಿಕೊಂಡು ಅನೇಕ ಸಾಧನೆಗಳನ್ನು ಮಾಡಿದರು. ಇವರು ವೃತ್ತಿನಿಮಿತ್ತ ಸುಮಾರು ನಾಲ್ಕು ವರ್ಷಗಳ ಕಾಲ ಸ್ವಿಟ್ಸರ್‌ಲೆಂಡ್‌ನಲ್ಲಿ ವಾಸವಿದ್ದರು. ಅನಂತರ ಬೆಂಗಳೂರಿಗೆ ಹಿಂದಿರುಗಿ ವಿಶ್ವದ ಹೆಸರಾಂತ ಸಾಫ್ಟ್ವೇರ್‌ ಕಂಪನಿಯಾದ ಆರಕಲ್‌ ಸೇರಿದರು. ಇಲ್ಲಿ ಹಂತಹಂತವಾಗಿ ಬೆಳೆದು ಒಂದು ವಿಭಾಗದ ನಿರ್ದೇಶಕರಾಗಿ ಕಾರ್ಯನಿರ್ವಹಿಸಿ ಸ್ವಯಂನಿವೃತ್ತಿ ಪಡೆದರು. ವೃತ್ತಿ ಸಂಬಂಧವಾಗಿ ಹತ್ತಾರು ದೇಶಗಳನ್ನು ಸುತ್ತಿಬಂದರು. ಬ್ರೆಜಿಲ್‌ ದೇಶದ ಒಂದು ಕಂಪನಿಗಾಗಿ ʻಟೆನ್‌ಕೋರ್ʼ ಎನ್ನುವ ತಂತ್ರಾಂಶದ ಎರಡು ವಾರಗಳ ಕಾರ್ಯಶಿಬಿರವನ್ನು ಬೆಲೋ ಹಾರಿಜಾಂಟೆ ಎನ್ನುವ ಊರಿನಲ್ಲಿ ನಡೆಸಿಕೊಟ್ಟರು. 

ಕೃಷ್ಣಮೂರ್ತಿಯವರ ಸಾಹಿತ್ಯ ಪ್ರವೃತ್ತಿ ಪ್ರಾರಂಭವಾದದ್ದು ವೃತ್ತಿಯಿಂದ ನಿವೃತ್ತರಾದಮೇಲೆ. ಚಿಕ್ಕಂದಿನ ಸಾಹಿತ್ಯಾಭಿರುಚಿ ಗರಿಗೆದರಿ ಕಾವ್ಯವನ್ನು ರಚಿಸಲು ತೊಡಗಿದರು. ತಾವೇ ಕ್ಲಿಕ್ಕಿಸಿದ ಛಾಯಾಚಿತ್ರಗಳ ಭಾವವನ್ನು ಆಧರಿಸಿದ ಕವನಗಳನ್ನು ರಚಿಸಿ, ʻದೃಶ್ಯಕಾವ್ಯʼ ಎನ್ನುವ ಸಂಪೂರ್ಣ ವರ್ಣರಂಜಿತಚಿತ್ರ-ಕವನ ಸಂಕಲನವನ್ನು ಪ್ರಕಟಿಸಿದ್ದಾರೆ. ಅನೇಕ ಛಂದೋಬದ್ಧ ಹಾಗೂ ನವ್ಯ ಪ್ರಕಾರದ ಕವನಗಳನ್ನು ರಚಿಸಿದ್ದಾರೆ. ಇವರು ರಚಿಸಿದ ʻಸಿರಿಗನ್ನಡದ ಸೊಬಗುʼ ಎನ್ನುವ ಗೀತೆಯನ್ನು ಕರ್ನಾಟಕ ಆರ್ಯವೈಶ್ಯ ಸಾಹಿತ್ಯ ಪರಿಷತ್ತಿನ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ 68 ಜನ ಗಾಯಕ ಗಾಯಕಿಯರು ವೇದಿಕೆಯ ಮೇಲೆ ಪ್ರಸ್ತುತ ಪಡಿಸಿದರು. ಈ ಗೀತೆಯೂ ಸೇರಿದಂತೆ  ಇವರ ಗೀತೆಗಳನ್ನು ಇವರ YouTube ಚಾನೆಲ್‌ (https://youtu.be/3vT4jgCgqS4 )ನಲ್ಲಿ ವೀಕ್ಷಿಸಬಹುದು. 

ಕೃಷ್ಣಮೂರ್ತಿ ಅವರು ಡಿವಿಜಿಯವರ ʻಮಂಕುತಿಮ್ಮನ ಕಗ್ಗʼ ದಿಂದ ಪ್ರಭಾವಿತರಾಗಿ ಛಂದೋಬದ್ಧ ನಿಯಮಗಳನ್ನು ಕಲಿತು ಮುಕ್ತಕಗಳನ್ನು ರಚಿಸತೊಡಗಿ,  ಒಂದು ಸಾವಿರಕ್ಕೂ ಹೆಚ್ಚಿನ ಮುಕ್ತಕಗಳನ್ನು ರಚಿಸಿದ್ದಾರೆ. ಇವರ ಅಧಿಕಾಂಶ ಮುಕ್ತಕಗಳಲ್ಲಿ ಅಧ್ಯಾತ್ಮದ ಛಾಯೆಯಿದೆ. ಐನೂರಕ್ಕೂ ಹೆಚ್ಚು ಮುಕ್ತಕಗಳುಳ್ಳ ʻಸ್ವಾತಿ ಮುತ್ತುಗಳುʼ ಎನ್ನುವ ಮುಕ್ತಕ ಸಂಕಲನವನ್ನು ಹೊರತಂದಿದ್ದಾರೆ.  ಹೊಸ ಹೊಸತನ್ನು ಮಾಡುವ ಉತ್ಸಾಹವುಳ್ಳ ಇವರು ʻಏಕಾಕ್ಷರʼ ಕವನಗಳನ್ನು ರಚಿಸಿದ್ದಾರೆ. ಈ ಕವನಗಳಲ್ಲಿ ಭಾವಕ್ಕೆಭಂಗ ಬರದಂತೆ ಪ್ರತಿ ಪದವೂ ಒಂದೇ ಅಕ್ಷರದ ಕಾಗುಣಿತದಿಂದ ಪ್ರಾರಂಭವಾಗುವುದು. ಇವರ 'ಪುರಾಣಪ್ರಸಿದ್ಧ ಪಾತ್ರಗಳು' ಎನ್ನುವ ಕೃತಿ ಈಗ ಪ್ರಕಟಣೆಗೆ ಸಿದ್ಧವಾಗಿದೆ. 

ಕೃಷ್ಣಮೂರ್ತಿ ಅವರ  ʻಸ್ವಾತಿ ಮುತ್ತುಗಳುʼ ಸಂಕಲನಕ್ಕೆ ಕರ್ನಾಟಕ ಆರ್ಯವೈಶ್ಯ ಸಾಹಿತ್ಯ ಪರಿಷತ್ತಿನಿಂದ ದತ್ತಿ ಪುರಸ್ಕಾರ ಹಾಗೂ ʻಆರ್ಯವೈಶ್ಯ ಸಾಧಕ ಸಿರಿʼ ಎನ್ನುವ ಗೌರವ ಲಭಿಸಿದೆ. ಚಿಕ್ಕಬಳ್ಳಾಪುರ ಜಿಲ್ಲಾ ಕನ್ನಡಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ʻಕೈವಾರ ತಾತಯ್ಯʼ ಕವನ ಸ್ಪರ್ಧೆಯಲ್ಲಿ ಕೃಷ್ಣಮೂರ್ತಿ ಎರಡನೆಯ ಬಹುಮಾನಗಳಿಸಿದ್ದಾರೆ. ಬೆಂಗಳೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇವರಿಗೆ ʻಕನ್ನಡ ಸೇವಾರತ್ನ' ಗೌರವ ನೀಡಿದೆ. ಇವರ ಸಂಪಾದಕತ್ವದಲ್ಲಿ ʻಅಕ್ಷರ ನೀರಾಜನʼ ಮತ್ತು ʻಪ್ರಾತಃಸ್ಮರಣೀಯರುʼ ಮಾಲಿಕೆಯ ಕೃತಿಗಳು ಪ್ರಕಟಗೊಂಡಿವೆ. ಕನ್ನಡಿಗರಿಗೋಸ್ಕರ ಇವರು ಆಂಡ್ರಾಯಿಡ್‌ ಸನಿಹವಾಣಿಗಾಗಿ ʻರಸಪ್ರಶ್ನೆ ಪ್ರಪಂಚʼ ಎನ್ನುವ ಕನ್ನಡದ ಆಪನ್ನು ನಿರ್ಮಿಸಿದ್ದಾರೆ.  ಈ ಆಪ್‌ ನಿರ್ಮಾಣಕ್ಕಾಗಿ ಇವರಿಗೆ ಕರ್ನಾಟಕ ಆರ್ಯವೈಶ್ಯ ಸಾಹಿತ್ಯ ಪರಿಷತ್ತು ದತ್ತಿ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಜ್ಯೋತಿಷ್ಯದಲ್ಲಿ ಪರಿಣತಿಯನ್ನು ಗಳಿಸಿರುವ ಕೃಷ್ಣಮೂರ್ತಿ ಅವರು ಆಂಗ್ಲ ಭಾಷೆಯಲ್ಲಿ ಜ್ಯೋತಿಷ್ಯದ ಬಗೆಗಿನ ಸಂಶೋಧನಾತ್ಮಕ ಲೇಖನಗಳನ್ನೂ ಅಂತರ್ಜಾಲದ ತಮ್ಮ ಬ್ಲಾಗಿನಲ್ಲಿ ಬರೆಯುತ್ತಿದ್ದಾರೆ.

ಪ್ರವಾಸ ಪ್ರಿಯರಾಗಿರುವ ಕೃಷ್ಣಮೂರ್ತಿ ಅವರು  ಅಮೇರಿಕಾ, ಆಸ್ಟ್ರೇಲಿಯ, ನ್ಯೂಜೀಲೆಂಡ್‌, ಇಂಡೋನೇಷಿಯ, ಮಲೇಷಿಯ, ಸಿಂಗಪೂರ್‌, ಜರ್ಮನಿ, ಫ್ರಾನ್ಸ್‌, ಇಂಗ್ಲೆಂಡ್‌, ಆಸ್ಟ್ರಿಯಾ, ಹಾಲೆಂಡ್‌, ಸ್ಪೇನ್‌, ಇಟಲಿ, ಬಹಾಮಾಸ್‌,
ವಿಯೆಟ್ನಾಂ, ಕಾಂಬೋಡಿಯಾ ಸೇರಿದಂತೆ  ಅನೇಕ ದೇಶಗಳ ಪ್ರವಾಸ ಮಾಡಿ, ಈ ಪ್ರವಾಸಗಳ ಅನುಭವವನ್ನು ಲೇಖನಗಳ ಮೂಲಕ ಪ್ರಕಟಿಸಿದ್ದಾರೆ. 

ಕೃಷ್ಣಮೂರ್ತಿ ಅವರು ಕರ್ನಾಟಕ ಆರ್ಯವೈಶ್ಯ ಸಾಹಿತ್ಯ ಪರಿಷತ್ತಿನಲ್ಲಿ ಮೊದಲು ಕೋಶಾಧ್ಯಕ್ಷರಾಗಿ, ಅನಂತರ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ʻನಿಮ್ಮ ವೈಶ್ಯವಾರ್ತೆʼ ಮಾಸಪತ್ರಿಕೆಯಲ್ಲಿ ಸಹಸಂಪಾದಕರಾಗಿ ಸೇವೆಸಲ್ಲಿಸುತ್ತಿದ್ದಾರೆ. ಮಹಾಲಕ್ಷ್ಮೀಪುರ ಶ್ರೀ ವಾಸವಿ ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿಯಲ್ಲಿ ನಿರ್ದೇಶಕರಾಗಿದ್ದಾರೆ.

ಕೃಷ್ಣಮೂರ್ತಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

ಕೃತಜ್ಞತೆ: K Rajakumar Kolar 🌷🙏🌷

Happy birthday Krishnamurthy Seetharama 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ