ಸೀತಾರಾಮರಾವ್
ಎನ್.ಎಸ್.ಸೀತಾರಾಮ ರಾವ್
ಎನ್.ಎಸ್. ಸೀತಾರಾಮ ರಾವ್ ವಿಜ್ಞಾನ, ಗಣಿತ ಮತ್ತು ಸಂಗೀತ ಲೋಕಗಳ ಅಪೂರ್ವ ಸಾಧಕರು.
ಸೀತಾರಾಮ ರಾವ್ 1941ರ ಜನವರಿ 21ರಂದು, ಅಂದಿನ ಶಿವಮೊಗ್ಗ ಜಿಲ್ಲೆಯ ಚನ್ನಗಿರಿಯಲ್ಲಿ ಜನಿಸಿದರು. ತಂದೆ ನುಲೇನೂರು ಶಂಕರಪ್ಪ. ತಾಯಿ ಸೀತಮ್ಮ. ಈ ದಂಪತಿಗಳ ಹತ್ತು ಮಕ್ಕಳಲ್ಲಿ ಹತ್ತನೆಯವರೇ ಸೀತಾರಾಮ ರಾವ್. ನೂಲೇನೂರು ಶಂಕರಪ್ಪನವರು ಮಹಾನ್ ವಿದ್ವಾಂಸರಾಗಿ, ವಾಗ್ಗೇಯಕಾರರಾಗಿ ಮತ್ತು ಗಮಕಿಗಳಾಗಿ ನಾಡಿನಲ್ಲಿ ಪ್ರಸಿದ್ಧರಾಗಿದ್ದವರು. ಸೀತಾರಾಮ ರಾವ್ ಅವರ ಅಣ್ಣ ಎನ್. ಎಸ್. ಚಿದಂಬರ ರಾವ್ ಕಥೆಗಾರರಾಗಿ ಪ್ರಸಿದ್ಧರಾಗಿದ್ದವರು.
ತಮ್ಮ ಹನ್ನೆರಡನೆಯ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದು ಕೊಂಡ ಸೀತಾರಾಮ ರಾವ್ ಬೆಳೆದಿದ್ದು ಅಣ್ಣಂದಿರ ಮತ್ತು ಅಕ್ಕಂದಿರ ಆಶ್ರಯದಲ್ಲಿ. ಸಂಗೀತದತ್ತ ಒಲವು ಅವರಿಗೆ ಬಾಲ್ಯದಿಂದಲೇ ಬಂದಿತ್ತು. ಚಿತ್ರದುರ್ಗದಲ್ಲಿ ಎಸ್.ಎಸ್.ಎಲ್.ಸಿ ಮುಗಿಸಿದ ಅವರು ಹೊಸದುರ್ಗದಲ್ಲಿ ಟಿ.ಸಿ.ಎಚ್ ಪದವಿಯನ್ನು ಪಡೆದರು. ಕುಟಂಬದ ಅನಿವಾರ್ಯತೆಯಿಂದ ಶಿಕ್ಷಣವನ್ನು ಮುಂದುವರೆಸಲಾಗದೆ ಕೆಲಸಕ್ಕೆ ಸೇರ ಬೇಕಾಯಿತು.
ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲ್ಲೋಕಿನ ಕುದರೆಗುಂಡಿ ಮೂಲಕ ತಮ್ಮ ಶಿಕ್ಷಣ ವೃತ್ತಿಯನ್ನು ಆರಂಭಿಸಿದ ಅವರು ಹೊಸ ಕೊಪ್ಪ, ನಾರ್ವೆ, ಕಲ್ಕೆರೆ, ಅಗಳಗುಂಡಿ, ಹರಿಹರಪುರ, ಜಮ್ಮಿಟ್ಟಿಗೆ ಹೀಗೆ ಕೊಪ್ಪ ತಾಲ್ಲೋಕಿನ ವಿವಿಧ ಊರುಗಳಲ್ಲಿ ಸೇವೆ ಸಲ್ಲಿಸಿ ಎಲ್ಲೆಡೆ ತಮ್ಮ ಛಾಪನ್ನು ಮೂಡಿಸಿದರು. ವೃತ್ತಿ ಜೀವನದ ಕೊನೆಯಲ್ಲಿ ಕೆಲವು ವರ್ಷಗಳ ಕಾಲ ದಾವಣಗರೆ ಸಮೀಪದ ಶಾಲೆಗಳಲ್ಲಿ ಸೇವೆ ಸಲ್ಲಿಸಿದ್ದರು.
ಸೀತಾರಾಮ ರಾವ್ ನೇಮಕವಾಗಿದ್ದು ಹಿಂದಿ ಅಧ್ಯಾಪಕರೆಂದು ಆದರೆ ಹೆಸರು ಮಾಡಿದ್ದು ಗಣಿತದ ಅಧ್ಯಾಪಕರಾಗಿ. ಸ್ವ-ಅಧ್ಯಯನದಿಂದಲೇ ಈ ವಿಷಯದಲ್ಲಿ ಪರಿಣತಿ ಸಂಪಾದಿಸಿ ಸಂಶೋಧನೆಯನ್ನು ನಡೆಸಿದರು. ಈ ಕುರಿತು ಪರಿಣಿತ ಲೇಖನಗಳನ್ನು ಬರೆದರು. ಆಗ ವಿಜ್ಞಾನಕ್ಕೆಂದೇ ಮೀಸಲಾದ ಪತ್ರಿಕೆಗಳು ಇರಲಿಲ್ಲ. ವಿಜ್ಞಾನ ಕ್ಷೇತ್ರದ ಬರವಣಿಗೆ ಕೂಡ ವ್ಯಾಪಕವಾಗಿ ಇರಲಿಲ್ಲ. ಈ ಕೊರತೆಯ ನಡುವೆಯೇ ಇವರ ಬರವಣಿಗೆ ಸಾಗಿತು. ತಮ್ಮ ಬರವಣಿಗೆಯ ಮೂಲಕವೇ ವಿಜ್ಞಾನ ಕ್ಷೇತ್ರದಲ್ಲಿ ಬರವಣಿಗೆ ಮಾಡುತ್ತಿದ್ದ ಪ್ರೊ. ಜೆ.ಆರ್.ಲಕ್ಷ್ಮಣ ರಾವ್, ಪ್ರೊ. ಎಂ.ಎ.ಸೇತುರಾವ್, ಪ್ರೊ. ಎಂ.ಎ.ಸವದತ್ತಿ, ಪ್ರೊ. ಜಿ.ಟಿ.ನಾರಾಯಣ ರಾವ್, ಡಾ. ಹಾ.ಮಾ.ನಾಯಕ್, ಡಿ.ಆರ್. ಬಳೂರಗಿ, ಬಿ.ಜಿ.ಎಲ್.ಸ್ವಾಮಿ, ಆಡ್ಯನಡ್ಕ ಕೃ಼ಷ್ಣಭಟ್, ನಾಗಲೋಟಿಮಠ, ಎನ್.ಎಸ್.ಶ್ರೀಗಿರಿ ನಾಥ್, ಶ್ರೀಮತಿ ಹರಿ ಪ್ರಸಾದ್ ಮೊದಲಾದವರ ನಿಕಟ ಒಡನಾಟ ಬೆಳೆಸಿ ಕೊಂಡಿದ್ದರು. ಇವರೆಲ್ಲರ ಶ್ರಮದ ಫಲವಾಗಿ ರೂಪುಗೊಂಡಿದ್ದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್. ಇದನ್ನು ರೂಪಿಸುವಲ್ಲಿ ಸೀತಾರಾಮ ರಾವ್ ಅವರ ಶ್ರಮವೂ ಇತ್ತು. ನಾಡಿನ ವಿವಿದೆಡೆಗಳಲ್ಲಿ ವಿಜ್ಞಾನ ಸಮ್ಮೇಳನಗಳನ್ನು ರೂಪಿಸುವಲ್ಲಿ ಅವರ ಒತ್ತಾಸೆ ಕೂಡ ಇತ್ತು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‍ನ ‘ಬಾಲ ವಿಜ್ಞಾನ’ಕ್ಕೆ ಸೀತಾರಾಮ ರಾವ್ ಸರಿ ಸುಮಾರು ಎರಡು ದಶಕಗಳ ಕಾಲ ನಿರಂತರವಾಗಿ ಬರೆದರು. ಅವರ ಲೇಖನಗಳು ಬಹಳ ಜನರ ಮೆಚ್ಚುಗೆಯನ್ನು ಪಡೆದಿದ್ದನ್ನು ಗಮನಿಸಿ ಆಡ್ಯನಡ್ಕ ಕೃಷ್ಣಭಟ್ ಅವರ ಒತ್ತಾಯದಿಂದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‍ನಿಂದಲೇ ‘ವಿನೋದ ಗಣಿತ’ ಎನ್ನುವ ಪುಸ್ತಕ ಬಂದಿತು. ಇದು ಸೀತಾರಾಮ ರಾವ್ ಅವರ ಏಕೈಕ ಪ್ರಕಟಿತ ಕೃತಿ. ಇದುವರೆವಗೂ ಹದಿನೈದಕ್ಕೂ ಹೆಚ್ಚಿನ ಮುದ್ರಣವನ್ನು ಕಂಡು ಇಂದಿಗೂ ಜನಪ್ರಿಯವಾಗಿರುವುದು ಇದರ ವಿಶೇಷತೆ.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಮುಖ್ಯವಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪಸರಿಸುವಲ್ಲಿ ಸೀತಾರಾಮ ರಾವ್ ಅವರು ಮುಖ್ಯ ಪಾತ್ರ ವಹಿಸಿದರು. ಹರಿಹರಪುರದಲ್ಲಿ ಅದರ ಘಟಕ ಸ್ಥಾಪಿಸಿ ಮುಂದೆ ಅಲ್ಲಿಗೆ ವಿಜ್ಞಾನ ಕೇಂದ್ರವನ್ನೂ ತಂದರು. ವಿಜ್ಞಾನ ಬರವಣಿಗೆಗೆ ಮನ್ನಣೆ ಸಿಗ ಬೇಕು ಎನ್ನುವುದು ಅವರ ಕನಸಾಗಿತ್ತು.
ಸೀತಾರಾಮ ರಾವ್ ಅವರ ಇನ್ನೊಂದು ಆಸಕ್ತಿಯ ಕ್ಷೇತ್ರ ಸಂಗೀತ. ಅವರಿಗೆ ಶಾಸ್ತ್ರೀಯ ಸಂಗೀತದಲ್ಲಿ ಆಳವಾದ ಪರಿಶ್ರಮ ಇತ್ತು. ಕರ್ನಾಟಕಿ ಮತ್ತು ಹಿಂದೂಸ್ತಾನಿ ಎರಡನ್ನು ಅವರು ಚೆನ್ನಾಗಿ ಬಲ್ಲವರಾಗಿದ್ದರು. ಅವರ ಕಂಠ ಕೊನೆಯವರೆಗೂ ತುಂಬಾ ಸೊಗಸಾಗಿ ಇತ್ತು. ಅವರು ನಾರ್ವೆಯಲ್ಲಿ ಇದ್ದಾಗ ಅವರ ಗಾಯನಕ್ಕೆ ಮಹತ್ವ ಬಂದಿತು. ರಾಮನವಮಿ ರಾಮೋತ್ಸವದಲ್ಲಿ ಒಂಬತ್ತು ದಿನವೂ ಅವರ ಹಾಡುಗಾರಿಕೆ ಇರುತ್ತಾ ಇತ್ತು. ಪ್ರತಿ ದಿನವೂ ಹೊಸ ಕೀರ್ತನೆಗಳನ್ನು ಬರೆದು ಹಾಡುತ್ತಿದ್ದರು. ಅದಕ್ಕಾಗಿಯೇ ಕಾಯುವವರೂ ಇರುತ್ತಿದ್ದರು. ಆಗ ಅನೇಕ ಕಡೆಯಲ್ಲಿ ಅವರು ಸಂಗೀತ ಕಚೇರಿಗಳನ್ನು ನೀಡುತ್ತಿದ್ದರು. "ಅವರ ಸಂಗೀತ ಕಚೇರಿಯಲ್ಲಿ ಅಂಗಚೇಷ್ಟೆ ಇರುತ್ತಲೇ ಇರಲಿಲ್ಲ. ಅವರು ಹಾಡುವಾಗ ತಪಸ್ಸಿಗೆ ಕುಳಿತ ಋಷಿಯಂತೆ ಕಂಗೊಳಿಸುತ್ತಿದ್ದರು.” ಎಂಬುದು ಅದನ್ನು ಕಂಡು ಅವರ ಸಂಗೀತ ಸ್ವಾದವನ್ನು ಅನುಭವಿಸಿದವರ ಮಾತು. ಅವರ ಸಂಗೀತ ಕಚೇರಿಯ ವಿಶೇಷ ಎಂದರೆ ಅವರು ಯಾವ ರಾಗದಲ್ಲಿ ಕೀರ್ತನೆಯನ್ನು ಹಾಡುತ್ತಿದ್ದರೋ ಅದೇ ರಾಗದ ಚಿತ್ರಗೀತೆಯನ್ನೂ ಹಾಡುತ್ತಿದ್ದರು. ಅದು ಆ ಕಾಲದ ಮಟ್ಟಿಗೆ ಪುಟ್ಟ ಕ್ರಾಂತಿಯೇ ಆಗಿತ್ತು.
ಸೀತಾರಾಮ ರಾವ್ ಉತ್ತಮ ವಾಗ್ಗೇಯಕಾರರೂ ಆಗಿದ್ದರು. ಅವರು ರಚಿಸಿದ ‘ಹೇ ಜಗದಂಬೆ ನಾ ಶರಣೆಂಬೆ’ ಎಂಬ ಕೀರ್ತನೆಯನ್ನು ಇಂದಿಗೂ ಮಲೆನಾಡಿನ ಅನೇಕ ಮನೆಗಳಲ್ಲಿ ಹಾಡುತ್ತಾರೆ. ಅವರದು ಅಪಾರ ಜ್ಞಾಪಕ ಶಕ್ತಿ. ಅವರು ಕನಿಷ್ಟ ಮೂರು ಸಾವಿರ ಚಿತ್ರಗೀತೆಗಳನ್ನು ನೆನಪಿನಿಂದಲೇ ಹಾಡುತ್ತಾ ಇದ್ದರು. ಅವರ ಬಾಲ್ಯವೆಲ್ಲವೂ ಈ ಚಿತ್ರಗೀತೆಗಳ ಜೋಗಳದಿಂದಲೇ ಕಳೆದಿತ್ತು. ಅವರು ‘ಶಿವಶಂಕರಿ ಶಿವಾನಂದ ಲಹರಿ’ ಗೀತೆಯನ್ನು ಅದ್ಭುತವಾಗಿ ಹಾಡುತ್ತಿದ್ದರು. ‘ರತ್ನಗಿರಿ ರಹಸ್ಯ’ದ ಗೀತೆಗಳು ಅವರಿಗೆ ಆಪ್ತವಾಗಿದ್ದವು. ಅದರಲ್ಲಿಯೂ ‘ಅನುರಾಗದ ಅಮರಾವತಿ’ಯನ್ನು ಅವರು ಅದ್ಭುತವಾಗಿ ಹಾಡುತ್ತಿದ್ದರು. ಶಂಕರಲಿಂಗ ಮಹೇಶ, ಬಾನಿನ ಸಾಗರ ಮುಂತಾದ ಅಣ್ಣ ಚಿದಂಬರ ರಾವ್ ರಚನೆಗಳು..ನಿನ್ನ ಚರಣ ನಂಬಿ ಭಜಿಪೆ, ಶ್ರೀದೇವಿ ಪೂರೆ ಎನ್ನ, ರಾಮ ಕೃಪಾ ಪ್ರೇಮ ಮೂರ್ತಿ ಮುಂತಾದ ಅವರ ತಂದೆ ಶಂಕರಪ್ಪನವರ ರಚನೆಗಳು ಮೊದಲಾದವುಗಳನ್ನು ಸೊಗಸಾಗಿ ಹಾಡುತ್ತಿದ್ದರು. ನಗಮೋಮೋ ಅವರ ಮತ್ತೊಂದು ಟ್ರಂಪ್ ಕಾರ್ಡ್ ಗಾಯನ.
ಸೀತಾರಾಮ ರಾವ್ ರಂಗ ಗೀತೆಗಳನ್ನೂ ಸಾಕಷ್ಟು ಹಾಡುತ್ತಿದ್ದರು. ಪುಂಡಲೀಕ ಧತ್ತರಗಿಯವರ ‘ನಮೋ ನಾಟ್ಯ ಮಾತೆ’ ಸಾಮಾನ್ಯವಾಗಿ ಅವರ ಎಲ್ಲಾ ಕಚೇರಿಗಳಲ್ಲಿಯೂ ಕೇಳಿ ಬರುತ್ತಾ ಇದ್ದ ರಂಗ ಗೀತೆ. ಅಭೇರಿ ಅಥವಾ ಭೀಮ್ ಪಲಾಸ್ ಅವರ ನೆಚ್ಚಿನ ರಾಗ. ಅವರ ಅನೇಕ ಮಹತ್ವದ ಕೀರ್ತನೆಗಳು ಈ ರಾಗದಲ್ಲಿಯೇ ಇವೆ.
ಸೀತಾರಾಮ ರಾವ್ ಅವರಿಗೆ ರಂಗಭೂಮಿಯಲ್ಲಿ ಕೂಡ ಆಸಕ್ತಿ ಇತ್ತು. ಅವರು ಉತ್ತಮ ನಟರೂ ಆಗಿದ್ದರು. ತಾವು ಅಭಿನಯಿಸುವ ನಾಟಕಕ್ಕೆ ತಕ್ಕಂತೆ ಚಿತ್ರಗೀತೆಗಳನ್ನು ಅವರು ಹಾಡುತ್ತಿದ್ದರು. ‘ದೇವದಾಸಿ’ ನಾಟಕದಲ್ಲಿ ವಸಂತನ ಪಾತ್ರಕ್ಕೆ ಅವರು ಬಹಳ ಜನಪ್ರಿಯರಾಗಿದ್ದರು. ‘ನಾದಬ್ರಹ್ಮ’ ನಾಟಕದಲ್ಲಿ ತ್ಯಾಗರಾಜರ ಪಾತ್ರವನ್ನು ವಹಿಸಿ ಅವರು ಕೀರ್ತನೆಗಳ ಹೊಳೆಯನ್ನೇ ಹರಿಸಿದ್ದರು. ಈ ನಾಟಕ ಬಹು ಜನಪ್ರಿಯವಾಗಿ ಅನೇಕ ಯಶಸ್ವಿ ಪ್ರಯೋಗಗಳನ್ನು ಕಂಡಿತ್ತು.
ಸೀತಾರಾಮ ರಾವ್ ಅವರಿಗೆ 41ನೆಯ ವಯಸ್ಸಿನಲ್ಲಿ ಮೊದಲು ಮಧುಮೇಹ ಇರುವುದು ಪತ್ತೆ ಆಯಿತು. ಅದು ಅವರನ್ನು ನಿರಂತರವಾಗಿ ಬಾಧಿಸುತ್ತಲೇ ಬಂದಿತು. 1987ರಲ್ಲಿ ಮೊದಲ ಸಲ ಅವರ ಕಾಲಿನ ಒಂದು ಬೆರಳನ್ನು ತೆಗೆಯ ಬೇಕಾಯಿತು. 1990ರಲ್ಲಿ ಇನ್ನೆರಡು ಬೆರಳನ್ನು ತೆಗೆಯ ಬೇಕಾಯಿತು. ಅಲ್ಲಿಗೆ ಅವರು ಓಡಾಡುವ ಶಕ್ತಿಯನ್ನು ಕಳೆದು ಕೊಂಡರು. ಅವರ ಚಟುವಟಿಕೆಯ ಜೀವನಕ್ಕೆ ಇದರಿಂದ ಬಲವಂತದ ಬ್ರೇಕ್ ಬಿದ್ದಿತು. ಅಲ್ಲಿಂದ ಮುಂದೆ ಅವರು ಅವರಾಗಿ ಇರಲಿಲ್ಲ. 2002ರ ಸೆಪ್ಟಂಬರ್ 7ರಂದು ಅವರು ಈ ಲೋಕವನ್ನಗಲಿದಾಗ ಅವರಿಗಿನ್ನೂ 61ನೆಯ ವಯಸ್ಸು.
ಈ ಮಹನೀಯರ ಪುತ್ರರಾದ ಪ್ರತಿಭಾವಂತ ಸಾಧಕ ಪುತ್ರರಾದ ಎನ್. ಎಸ್. ಶ್ರೀಧರಮೂರ್ತಿ ಮತ್ತು ಎನ್. ಎಸ್. ಶ್ರೀನಿವಾಸಮೂರ್ತಿ ನಮ್ಮೆಲ್ಲರ ಆತ್ಮೀಯರಾಗಿ ನಮ್ಮೊಡನಿದ್ದಾರೆ.
On the birth anniversary of great achiever in the field of Maths, science and music N. S. Seetharama Rao
ಕಾಮೆಂಟ್‌ಗಳು