ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಯಶವಂತ ಸರದೇಶಪಾಂಡೆ


 ಯಶವಂತ ಸರದೇಶಪಾಂಡೆ ನಮನ

Respects to departed soul Yashwant Saradeshpande 🌷🙏🌷

ಹೆಸರಾಂತ ರಂಗಕರ್ಮಿ ಯಶವಂತ ಸರದೇಶಪಾಂಡೆ  ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.  ಅವರಿಗೆ 60 ವರ್ಷ ವಯಸ್ಸಾಗಿತ್ತು. ಅವರು ಶನಿವಾರ ರಾತ್ರಿ ಕೂಡ ಧಾರವಾಡದಲ್ಲಿ ನಾಟಕ ಪ್ರದರ್ಶನ ನೀಡಿದ್ದರು..

ಯಶವಂತ ಸರದೇಶಪಾಂಡೆ ಅವರು ನಟಿಸಿ-ನಿರ್ದೇಶಿಸಿರುವ 'ಆಲ್ ದಿ ಬೆಸ್ಟ್ ನಾಟಕ' ಅಪಾರ ಯಶಸ್ಸು ಕಂಡಿತ್ತು.  ಅವರು ಕಿರುತೆರೆ ಮತ್ತು ಚಲನಚಿತ್ರಗಳಲ್ಲಿಯೂ ಅಭಿನಯಿಸಿದ್ದರು. ಹಾಸ್ಯ ನಾಟಕಗಳ ಮೂಲಕ ಯಶವಂತ ಸರದೇಶಪಾಂಡೆ ಚಿರಪರಿಚಿತರಾದವರು. ಅವರ ಪತ್ನಿ ಮಾಲತಿ ಸಹ ರಂಗಭೂಮಿ ಮತ್ತು ಕಿರುತೆರೆಯಲ್ಲಿ ಜನಪ್ರಿಯ ಕಲಾವಿದರು.

ಮೂಲತಃ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನ ಉಕ್ಕಲಿ ಗ್ರಾಮದವರಾದ ಯಶವಂತರು  ಹೆಗ್ಗೋಡಿನ 'ನಿನಾಸಂ' ಇಂದ ಡಿಪ್ಲೊಮಾ ಪಡೆದವರು. ನ್ಯೂಯಾರ್ಕ್‌ ವಿಶ್ವವಿದ್ಯಾಲಯದಿಂದ ನಾಟಕ ರಚನೆ, ಚಲನಚಿತ್ರ ಸಂಭಾಷಣೆಯ ವಿಶೇಷ ತರಬೇತಿಯನ್ನೂ ಸಹ ಪಡೆದಿದ್ದರು. ಅಂಧಯುಗ, ಇನ್‌ಸ್ಪೆಕ್ಟರ್‌ ಜನರಲ್, ಮಿಡ್‌ಸಮರ್‌ ನೈಟ್ಸ್‌ ಡ್ರೀಮ್, ಬಾಡಿಗೆ ಮನೆ, ಕಿತ್ತೂರು ರಾಣಿ ಚೆನ್ನಮ್ಮ, ಪುಷ್ಪರಾಣಿ, ಗಲಿವರನ ಯಾತ್ರೆ, ಬೆಪ್ಪುತಕ್ಕಡಿ ಬೋಳೇ ಶಂಕರ, ತುಂಟ ಮಕ್ಕಳ ತಂಟೆ, ಮಕ್ಕಳೆರಡೇ ಇರಲಿ, ಕುಂಟಾ ಕುಂಟ ಕುರವತ್ತಿ, ಆಲ್‌ ದಿ ಬೆಸ್ಟ್, ರಾಶಿ ಚಕ್ರ, ಸಹಿ ರೀ ಸಹಿ, ದಿಲ್ ಮಾಂಗೆ ಮೋರ್‌ ಸೇರಿದಂತೆ ಅರವತ್ತಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದರು. ರಂಗವರ್ತುಲ, ಬೇಂದ್ರೆ ರಂಗಾವಳಿಯ ಮುಖಾಂತರ ಬೇಂದ್ರೆಯವರ ಎಲ್ಲ ನಾಟಕಗಳನ್ನೂ ರಂಗಕ್ಕೆ ತಂದ ಕೀರ್ತಿ ಯಶವಂತರು ಅವರದ್ದು. ರೇಡಿಯೋ, ದೂರದರ್ಶನಗಳಿಗಾಗಿಯೂ ಕಾರ್ಯಕ್ರಮಗಳನ್ನು ಸಿದ್ಧಪಡಿಸಿದ್ದರು.
ಯದ್ವಾ-ತದ್ವಾ, ಬಣ್ಣದ ಬುಗುರಿ, ದಶಾವತಾರ, ಪರ್ವ, ತುಂತುರು ಧಾರಾವಾಹಿಗಳಲ್ಲಿ ನಟನೆಯ ಜತೆಗೆ, ಸಂಭಾಷಣೆಕಾರರಾಗಿಯೂ ಕೆಲಸ ಮಾಡಿದ್ದರು. ರಾಮ ಶ್ಯಾಮ ಭಾಮ ಚಲನಚಿತ್ರಕ್ಕೆ ಸಂಭಾಷಣೆ ಬರೆದ ಅವರು, ಕಮಲ್‌ಹಾಸ್‌ ಅವರಿಂದ ಉತ್ತರ ಕರ್ನಾಟಕದ ಆಡುಭಾಷೆಯನ್ನು ಆಡಿಸಿದ್ದರು. ಅತಿಥಿ, ಮರ್ಮ, ಜೂಜಾಟ, ಸ್ಟೂಡೆಂಟ್, ಅಮೃತಧಾರೆ ಚಿತ್ರದಲ್ಲೂ ನಟಿಸಿದ್ದರು.

ಯಶವಂತ ಸರದೇಶಪಾಂಡೆ ದಾವಣಗೆರೆಯ ವೃತ್ತಿ ರಂಗಭೂಮಿ,  ರಂಗಾಯಣದ ಮಾಜಿ ನಿರ್ದೇಶಕರಾಗಿದ್ದರು. ಅಕ್ಟೋಬರ್‌ನಲ್ಲಿ ಕೊಳಲು ವಾದಕ ಪಂ.ಪ್ರವೀಣ ಗೋಡಖಿಂಡಿ ಅವರೊಂದಿಗೆ 'ಕೊಳಲು' ನಾಟಕದಲ್ಲಿ ಅವರು 
ಅಭಿನಯಿಸಬೇಕಿತ್ತು.

ಅಗಲಿದ‍ ರಂಗಕರ್ಮಿ ಕಲಾವಿದ  ಯಶವಂತ ಸರದೇಶಪಾಂಡೆ ಚೇತನಕ್ಕೆ ನಮನಗಳು. 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ