ನೀಲತ್ತಹಳ್ಳಿ ಕಸ್ತೂರಿ
ನೀಲತ್ತಹಳ್ಳಿ ಕಸ್ತೂರಿ
ನೀಲತ್ತಹಳ್ಳಿ ಕಸ್ತೂರಿ ಕನ್ನಡ ಸಾಂಸ್ಕೃತಿಕ ಲೋಕದ ರಾಯಭಾರಿಗಳಂತಿದ್ದವರು. ಸಾಹಿತಿಗಳಾಗಿ, ಗಮಕಿಗಳಾಗಿ, ಗಾಂಧೀವಾದಿಗಳಾಗಿ, ಮಲ್ಲೇಶ್ವರದ ಗಾಂಧೀ ಸಾಹಿತ್ಯ ಸಂಘದ ಚಟುವಟಿಕೆಗಳ ಕೇಂದ್ರವಾಗಿ ಅವರದ್ದು ವೈವಿಧ್ಯಮುಖಿ ವ್ಯಕ್ತಿತ್ವ.
ನೀಲತ್ತಹಳ್ಳಿ ಕಸ್ತೂರಿಯವರು ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ನೀಲತ್ತಹಳ್ಳಿಯಲ್ಲಿ 1931ರ ಸೆಪ್ಟೆಂಬರ್ 29ರಂದು ಜನಿಸಿದರು. ಇವರ ಪೂರ್ತಿ ಹೆಸರು ಕಸ್ತೂರಿರಂಗನ್. ತಂದೆ ವೆಂಕಟಾಚಾರ್ಯ. ತಾಯಿ ಸೀತಮ್ಮ.
ನೀಲತ್ತಹಳ್ಳಿ ಕಸ್ತೂರಿ ಅವರ ತಂದೆ ವೆಂಕಟಾಚಾರ್ಯರು ಸರ್ಕಾರಿ ಶಾಲೆಯ ಉಪಾಧ್ಯಾಯ ವೃತ್ತಿಯಲ್ಲಿದ್ದು ಊರಿಂದ ಊರಿಗೆ ವರ್ಗವಾಗುತ್ತಿತ್ತು. ಹೀಗಾಗಿ ನೀಲತ್ತಹಳ್ಳಿ ಕಸ್ತೂರಿ ಅವರ ಪ್ರಾಥಮಿಕ ವಿದ್ಯಾಭ್ಯಾಸ ನಾನಾ ಕಡೆಗಳಲ್ಲಿ ನಡೆಯಿತು. ಮುಂದೆ ತಂದೆಯವರಿಗೆ ಬೆಂಗಳೂರಿನ ಮಲ್ಲೇಶ್ವರದ 5ನೇ ಅಡ್ಡ ರಸ್ತೆಯಲ್ಲಿದ್ದ ಸರ್ಕಾರಿ ಪ್ರಾಥಮಿಕ ಶಾಲೆಗೆ ವರ್ಗವಾಯಿತು. ಅಲ್ಲೇ ಅವರ ಮನೆಯೂ ಇತ್ತು. ಕಸ್ತೂರಿಯವರು ತಮ್ಮ ಪ್ರೌಢಶಾಲಾ ಶಿಕ್ಷಣವನ್ನು ಮಲ್ಲೇಶ್ವರದ 18ನೇ ಕ್ರಾಸಿನಲ್ಲಿದ್ದ ಸರ್ಕಾರಿ ಶಾಲೆಯಲ್ಲಿ ಮುಂದುವರೆಸಿ ಎಸ್.ಎಸ್.ಎಲ್.ಸಿ ತೇರ್ಗಡೆ ಆದರು.
ದೇಶಕ್ಕೆ ಸ್ವಾತಂತ್ರ್ಯ ಬಂದ ಸಂದರ್ಭದಲ್ಲಿ ಕಸ್ತೂರಿಯವರು ಎನ್. ಎಸ್. ಹರ್ಡೀಕರ್ ಅವರು ಸ್ಥಾಪಿಸಿದ್ದ ಸೇವಾದಳಕ್ಕೆ ಸೇರಿದರು. ಅಲ್ಲಿ ಅವರಿಗೆ ಗಾಂಧೀಜಿಯವರೊಡನೆ ಕೆಲಸ ಮಾಡಿದ್ದ ಸಿದ್ಧವನಹಳ್ಳಿ ಕೃಷ್ಣಶರ್ಮರ ಪರಿಚಯವಾಯಿತು. ಆಪ್ತರಾದ ಕೃಷ್ಣಶರ್ಮರ 'ಪರ್ಣಕುಟಿ' ಕೃತಿ ಕಸ್ತೂರಿ ಅವರ ಮೇಲೆ ಗಾಢ ಪ್ರಭಾವ ಬೀರಿತು.
ನೀಲತ್ತಹಳ್ಳಿ ಕಸ್ತೂರಿ ಅವರು ಬಸಪ್ಪ ಕಾಲೇಜಿನಲ್ಲಿ (ಇಂದಿನ ರೇಣುಕಾಚಾರ್ಯ ಕಾಲೇಜಿನಲ್ಲಿ) ಇಂಟರ್ ಮೀಡಿಯೇಟ್ ಮುಗಿಸಿ ಸೆಂಟ್ರಲ್ ಕಾಲೇಜಿನಲ್ಲಿ ಬಿ.ಎ.(ಆನರ್ಸ್) ಅಧ್ಯಯನ ಮಾಡಿದರು. ಆ ಸಂದರ್ಭದಲ್ಲಿ ಅವರಿಗೆ ವಿ. ಸೀತಾರಾಮಯ್ಯ ಮತ್ತು ಜಿ.ಪಿ. ರಾಜರತ್ನಂ ಅಂತಹ ಮಹನೀಯರು ಗುರುಗಳಾಗಿದ್ದರು. ಅಂತರ ಕಾಲೇಜು ಸಾಹಿತ್ಯಕ ಸ್ಪರ್ಧೆಗಳಲ್ಲಿ ನೀಲತ್ತಹಳ್ಳಿ ಕಸ್ತೂರಿ ಅನೇಕ ಬಹುಮಾನಗಳನ್ನು ಗಳಿಸಿದರು.
1952ರಲ್ಲಿ ನೀಲತ್ತಹಳ್ಳಿ ಕಸ್ತೂರಿ ಅವರು ಅಂಚೆ ಇಲಾಖೆಯಲ್ಲಿ ಉದ್ಯೋಗಕ್ಕೆ ಸೇರಿದರು. ಕನ್ನಡ ವಾತಾವರಣ ಇಲ್ಲದಿದ್ದ ಅಂದಿನ ಅಂಚೆ ಕಚೇರಿಯಲ್ಲಿ ಅನೇಕ ಕನ್ನಡಪರ ಚಟುವಟಿಕೆಗಳನ್ನು ಮೂಡಿಸಿದರು. ಇದೇ ರೀತಿ ಲೇಖಕ-ಲೇಖಕಿಯರ ಸಂಘದ ಸ್ಥಾಪನೆಗೂ ಶ್ರಮಿಸಿದರು.
ನೀಲತ್ತಹಳ್ಳಿ ಕಸ್ತೂರಿ 1948ರಲ್ಲಿ ಗಾಂಧೀ ಸಾಹಿತ್ಯ ಸಂಘವನ್ನು. ಪ್ರವೇಶಿಸಿದರು. ಸೇವಾ ಮನೋಭಾವದಿಂದ ದುಡಿಯುತ್ತಿದ್ದ ಅಂದಿನ ತರುಣರಿಗೆ ಸಂಘಕ್ಕೆ ದಿನಕ್ಕೊಮ್ಮೆ ಬರದಿದ್ರೆ ಸಮಾಧಾನವಿರುತ್ತಿರಲಿಲ್ಲ. ಸಂಘವು ಪ್ರತಿ ವರ್ಷವೂ ಶ್ರದ್ಧೆ ಮತ್ತು ಭಕ್ತಿಗಳಿಂದ ಗಾಂಧೀ ಜಯಂತಿ ಆಚರಿಸುತ್ತಿತ್ತು. ಗಾಂಧೀ ಸಾಹಿತ್ಯ ಸಂಘದಲ್ಲಿ ಎಲ್ಲರೂ, ಎಲ್ಲ ತರಹದ ಕೆಲಸ ಮಾಡುತ್ತಿದ್ದರು. ಈ ಸಂಸ್ಥೆಯ ಮೂಲಕ ನೀಲತ್ತಹಳ್ಳಿ ಕಸ್ತೂರಿ ಅವರಿಗೆ ಹಲವಾರು ಗಣ್ಯವ್ಯಕ್ತಿಗಳ ಒಡನಾಟ ದೊರಕಿತು. ಗಮಕ ವಿದ್ವಾನ್ ರಾಮಾರಾಧ್ಯರು, ಗಾಂಧೀವಾದಿ ಹೊ. ಶ್ರೀನಿವಾಸಯ್ಯ, ಸಾಂಸ್ಕೃತಿಕ ರಾಯಭಾರಿ ಮತ್ತೂರು ಕೃಷ್ಣಮೂರ್ತಿ ಇವರೆಲ್ಲರೂ ನೀಲತ್ತಹಳ್ಳಿ ಕಸ್ತೂರಿಯವರ ಸಮಾನ ಮನಸ್ಕ ಒಡನಾಡಿಗಳಾಗಿದ್ದರು. ಇವರ ಪರಿಚಯದಿಂದ ಕಸ್ತೂರಿಯವರು ಗಮಕವಾಚನ ಕಲೆಯನ್ನೂ ಕಲಿತರು. ನೀಲತ್ತಹಳ್ಳಿ ಕಸ್ತೂರಿ ಹಲವಾರು ಗಮಕಗಳನ್ನು ರಚಿಸಿದ್ದರು ಮತ್ತು ವಾಚಿಸಿದ್ದರು. ನೀಲತ್ತಹಳ್ಳಿ ಕಸ್ತೂರಿ ಅವರು 2007ರಲ್ಲಿ ರಾಮಾರಾಧ್ಯರ ಜನ್ಮಶತಮಾನೋತ್ಸವವನ್ನು ಗಾಂಧೀ ಸಾಹಿತ್ಯ ಸಂಘದಲ್ಲಿ ಎರಡು ದಿನಗಳ ಉತ್ಸವವಾಗಿ ಆಚರಿಸಿದರು.
ನೀಲತ್ತಹಳ್ಳಿ ಕಸ್ತೂರಿ ಅವರು ಆಕಾಶವಾಣಿ ಮತ್ತು ದೂರದರ್ಶನಗಳಲ್ಲಿ ಚಿಂತನ, ನಾಟಕ, ರೂಪಕಗಳು, ಕಾವ್ಯವ್ಯಾಖ್ಯಾನ, ಗಾಂಧೀ ಕುರಿತ ವೈಚಾರಿಕ ವಿಷಯ ಮುಂತಾದ ಹಲವಾರು ರೂಪದ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು.
ಅಮೆರಿಕಕ್ಕೆ ಎರಡು ಬಾರಿ ಪ್ರವಾಸ ಹೋಗಿದ್ದ ನೀಲತ್ತಹಳ್ಳಿ ಕಸ್ತೂರಿ ಅವರು ಸಾನ್‍ಫ್ರಾನ್ಸಿಸ್ಕೋದಾ ಶ್ರೀರಾಮಕೃಷ್ಣಾಶ್ರಮದಲ್ಲಿ ಉಪನ್ಯಾಸವನ್ನು ನೀಡಿದ್ದರು.
ಬರಹಗಾರರಾಗಿ ನೀಲತ್ತಹಳ್ಳಿ ಕಸ್ತೂರಿ ಜಿ.ಪಿ. ರಾಜರತ್ನಂ ಅವರನ್ನು ಕುರಿತು ಬರೆದಿರುವ ಜೀವನ ಚರಿತ್ರೆ ’ಆರದ ಬೆಳಕು’, ನ್ಯಾಷನಲ್ ಬುಕ್ ಟ್ರಸ್ಟ್ ಗಾಗಿ ಬರೆದಿರುವ ’ಡಿ.ವಿ ಗುಂಡಪ್ಪ- ಜೀವನ ಮತ್ತು ಸಾಧನೆ’ , ಖಲೀಲ್ ಗಿಬ್ರಾನ್’ ಮಕ್ಕಳಿಗೆಂದು ಬರೆದಿರುವ ಕೃತಿ, ಕಸ್ತೂರಬಾ, ಸಿದ್ಧವನಹಳ್ಳಿ ಕೃಷ್ಣಶರ್ಮ, ಸರ್. ಎಂ. ವಿಶ್ವೇಶ್ವರಯ್ಯ(ಅನುವಾದ), ರಾಜೇಂದ್ರ ಪ್ರಸಾದ್ ಮತ್ತು ರಾಮಾನುಜಾಚಾರ್ಯರ ಜೀವನ ಚರಿತ್ರೆಗಳು ಪ್ರಸಿದ್ಧವಾಗಿವೆ. ನಮ್ರತೆಯ ಪ್ರಾಮುಖ್ಯತೆಯನ್ನು ಗಾಂಧೀಜಿಯವರ ಜೀವನದ ಹಿನ್ನೆಲೆಯಲ್ಲಿ ಪರಿಣಾಮಕಾರಿಯಾಗಿ ವಿವರಿಸಿದ್ದಾರೆ. 'ದೀಪ ದಾನ', 'ಇದು ಭಾರತದ ದಾರಿ' ಹಾಗೂ 'ಬೇಬಿ ನಾಚ್ಚಿಯಾರ್' ಇವು ಅವರು ಬರೆದಿರುವ ನಾಟಕಗಳು. ಕಸ್ತೂರಿ ಅವರು ಭಾರತ ಭಾರತಿ ಪುಸ್ತಕಮಾಲೆಗೆ ಆರು ಮಕ್ಕಳ ಪುಸ್ತಕಗಳನ್ನು ರಚಿಸಿಕೊಟ್ಟಿದ್ದಾರೆ. ಮನುಷ್ಯನ ಪೂರ್ವೋತ್ತರ ಇತಿಹಾಸದ 'ನಮ್ಮ ಕಥೆ' ಅವರ ಮತ್ತೊಂದು ಅಮೂಲ್ಯ ಕೃತಿ.
ನೀಲತ್ತಹಳ್ಳಿ ಕಸ್ತೂರಿಯವರು ಗಾಂಧೀಜಿ ವಿಚಾರ ಸಾಹಿತ್ಯದಲ್ಲಿ ಹಲವಾರು ಕೃತಿಗಳನ್ನು ಬರೆದಿದ್ದು, ಚೀನಾ ಜಪಾನ್ ಕತೆಗಳು ಅಲ್ಲದೆ ಇನ್ನೂ ಹಲವು ಕೃತಿಗಳನ್ನು ಭಾಷಾಂತರಿಸಿದ್ದಾರೆ.
ತೆರೆಯಮರೆಯ ಸಾಧಕರೆಂದೇ ಹೆಸರಾಗಿದ್ದ ನೀಲತ್ತಹಳ್ಳಿ ಕಸ್ತೂರಿ ಅವರಿಗೆ ಕರ್ನಾಟಕ ಅಕಾಡಮಿ ಪ್ರಶಸ್ತಿ, ಅಳಸಿಂಗಪೆರುಮಾಳ್ ಪ್ರಶಸ್ತಿ, ಕರ್ನಾಟಕ ಸಂಗೀತ ನೃತ್ಯ ಅಕಾಡಮಿಯ 'ಕರ್ನಾಟಕ ಕಲಾಶ್ರೀ' ಪ್ರಶಸ್ತಿ, ಭಾರತೀಯ ವಿದ್ಯಾಭವನದಿಂದ ಮಹಾತ್ಮ ಗಾಂಧೀ ಕೃತಿ ಸಂಚಯಕ್ಕಾಗಿ ಸನ್ಮಾನ ಮುಂತಾದ ಅನೇಕ ಗೌರವಗಳು ಸಂದಿದ್ದವು.
ನೀಲತ್ತಹಳ್ಳಿ ಕಸ್ತೂರಿ ಅವರು ಈಗ ಇಲ್ಲ. ಆದರೆ ಮಲ್ಲೇಶ್ವರ, ಅಲ್ಲಿನ ಗಾಂಧೀ ಸಾಹಿತ್ಯ ಸಂಘ, ಮಲ್ಲೇಶ್ವರದ ಸಾಂಸ್ಕೃತಿಕ ಪರಿಸರ ಇವೆಲ್ಲವುಗಳನ್ನೂ, ನಮ್ಮ ಬದುಕಿನ ಅಮೂಲ್ಯ ಸವಿನೆನಪುಗಳನ್ನಾಗಿ ಇರಿಸಿರುವವರಲ್ಲಿ ನೀಲತ್ತಹಳ್ಳಿ ಅವರ ಕೊಡುಗೆ ಅಸಾಮಾನ್ಯವಾದುದು.
On the birth anniversary of great scholar, Gandhian, Centre of cultural activities Neelath Halli Kasthuri 🌷🙏🌷
ಕಾಮೆಂಟ್‌ಗಳು