ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರಾಜೇಂದ್ರ ಚೆನ್ನಿ


 ರಾಜೇಂದ್ರ ಚೆನ್ನಿ


ಡಾ. ರಾಜೇಂದ್ರ ಚೆನ್ನಿ ಅವರು ಪ್ರಾಧ್ಯಾಪಕರಾಗಿ, ಚಿಂತಕರಾಗಿ ಮತ್ತು ಬರಹಗಾರರಾಗಿ ಹೆಸರಾದವರು. 

ರಾಜೇಂದ್ರ ಚೆನ್ನಿ ಅವರು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಾಗರಗಾಳಿ ಗ್ರಾಮದವರು.  ಇವರು 1955ರ ಅಕ್ಟೋಬರ್ 21ರಂದು ಜನಿಸಿದರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಹಾಗೂ ಮೈಸೂರು ವಿ.ವಿ.ಯಿಂದ ಪಿಎಚ್.ಡಿ ಪಡೆದರು. 

ರಾಜೇಂದ್ರ ಚೆನ್ನಿ ಅವರು ಸಂಡೂರು, ಬೆಳಗಾವಿ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಹೀಗೆ ವಿವಿಧೆಡೆ ಬೋಧನೆಯ ಸೇವೆ ಸಲ್ಲಿಸಿ,  1981ರಿಂದ 1991ರವರೆಗೆ ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜಿನಲ್ಲಿ ಅಧ್ಯಾಪಕರಾಗಿ, ನಂತರ, ಕುವೆಂಪು ವಿ.ವಿ. ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿ ಹಾಗೂ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.‍

ರಾಜೇಂದ್ರ ಚೆನ್ನಿ ಅವರು ಕನ್ನಡ-ಇಂಗ್ಲಿಷ್ ಎರಡೂ ಭಾಷೆಯಲ್ಲಿ ವಿಮರ್ಶೆ, ಲೇಖನ ಹಾಗೂ ಕತೆಗಳನ್ನು ಬರೆಯುತ್ತಲೇ  ಜನಪರ ಚಳವಳಿಗಳಲ್ಲಿ ಭಾಗಿಯಾದವರು. ಬಾಬಾ ಬುಡನ್ ಗಿರಿ ದೇವಾಲಯವನ್ನು ರಕ್ಷಿಸಲು, ಕುದುರೆಮುಖದಲ್ಲಿ ಗಣಿಗಾರಿಕೆ ವಿರುದ್ಧ ಮತ್ತು ತುಂಗಾ ನದಿಯನ್ನು ಉಳಿಸಲು ಅವರು ಕರ್ನಾಟಕದಲ್ಲಿ ಹಲವಾರು ಜನಪರ ಚಳವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ . ಫ್ಯಾಸಿಸಂ ವಿರುದ್ಧ ಬರಹಗಾರರು ಮತ್ತು ಕಲಾವಿದರ ಸಾಮೂಹಿಕವಾದ ದಕ್ಷಿಣಾಯನ ಕರ್ನಾಟಕದ ಸಂಚಾಲಕರಾಗಿ ಅವರ ಸೇವೆ ಸಂದಿದೆ.

ದೇಶೀವಾದ, ಬೇಂದ್ರೆ ಕಾವ್ಯ ಸಂಪ್ರದಾಯ ಮತ್ತು ಸ್ವಂತಿಕೆ, ಸಾಹಿತ್ಯ ವಿಮರ್ಶೆ (ಸಂಪಾದಿತ ಕೃತಿ-1989), ಮಾಸ್ತಿ ಕತೆಗಳು: ಒಂದು ಅಧ್ಯಯನ, ದೊಡ್ಡ ಮರ (ಕಥಾ ಸಂಕಲನ-1991), ಕರುಳ ಬಳ್ಳಿಯ ಸೊಲ್ಲು,  ನಡುಹಗಲಿನಲ್ಲಿ  ಕಂದೀಲುಗಳು (ವಿಮರ್ಶೆ -2004), ಅಮೂರ್ತತೆ ಮತ್ತು ಪರಿಸರ (ವಿಮರ್ಶೆ-2003) , ಜಾಗತೀಕರಣ: ಒಂದು ಸಮಗ್ರ ಮಂಥನ (ಎಸ್.ಸಿರಾಜ್ ಅಹಮದ್ ಅವರೊಂದಿಗೆ ಸಂಪಾದಿತ) (2014), ಮಳೆಯಲ್ಲಿ ಬಂದಾತ (ಕಥಾ ಸಂಕಲನ-1999),  ಎಂದಿಗೂ ಹೊಸದು, ಲೋಕವಿಮರ್ಶೆ, ಅರಿವಿನ ನೆಲೆಗಳು, ಸದ್ಯದ ಹಂಗು, ಅಸಮಗ್ರ, ಧಾರವಾಡದ ಪಡ್ಡೆ ದಿನಗಳು, ಯಶವಂತ ಚಿತ್ತಾಲರ ಸಾಹಿತ್ಯಲೋಕ (ಸಂಪಾದನೆ), ನಾನು ಕಲಬುರ್ಗಿ (ಸಂಪಾದನೆ ರಹಮತ್ ತರೀಕೆರೆ ಮತ್ತು ಮೀನಾಕ್ಷಿ ಬಾಳಿ ಅವರೊಂದಿಗೆ);  ಇಂಗ್ಲಿಷಿನಲ್ಲಿ: ಸ್ಟೀಕಿಂಗ್ ಫಾರ್ ಸಮ್‌‌ಒನ್‌ (ವಿಮರ್ಶೆ- 2004), ಆಫ್ ಮೆನಿ ವಲ್ಡ್೯ (ವಿಮರ್ಶೆ- 2007), ಮಡ್ ಟೌನ್ (ಕಾದಂಬರಿ-2007), ಟ್ರೆಡಿಷನ್ಸ್‌ ಆಫ್ ಮಾಡರ್ನಿಟಿ: ಎ ಕಂಪಾರೇಟೀವ್ ಸ್ಟಡಿಸ್‌ ಆಫ್ ಟಿ.ಎಸ್. ಎಲಿಯೆಟ್ ಆಂಡ್ ಗೋಪಾಲಕೃಷ್ಣ ಅಡಿಗ, ಸಾಹಿತ್ಯ ಮತ್ತು ಸಿದ್ಧಾಂತಗಳು ಇವರ ಕೃತಿಗಳಲ್ಲಿ ಸೇರಿವೆ.

ಡಾ. ರಾಜೇಂದ್ರ ಚೆನ್ನಿ ಅವರಿಗೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಜೀವಮಾನ ಸಾಧನೆ ಪ್ರಶಸ್ತಿ (2012), ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (1987 ಮತ್ತು 2003), ಜಿಎಸ್‌ಎಸ್ ಪ್ರಶಸ್ತಿ (2009), ಬಿಎ ಶ್ರೀಧರ ಪ್ರಶಸ್ತಿ (2012), ವರ್ಧಮಾನ ಉದಯೋನ್ಮುಖ ಪ್ರಶಸ್ತಿ (1992), ಕಾವ್ಯಾನಂದ ಪ್ರಶಸ್ತಿ, ವಿ.ಎಂ.ಇನಾಂದಾರ್ ಪ್ರಶಸ್ತಿ, ದ.ರಾ. ಬೇಂದ್ರೆ ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ ಹಲವಾರು ಗೌರವಗಳು ಸಂದಿವೆ. 

ಹಿರಿಯರಾದ ಡಾ. ರಾಜೇಂದ್ರ ಚೆನ್ನಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

On the birthday of Great Scholar and writer Prof. Rajendra Chenni 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ