ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಯುಗಾಂತ


 ಯುಗಾಂತ


ನಾನು ಇನ್ನೂ ಓದಿಲ್ಲ ಎಂದು ಬಹಳ ವರ್ಷಗಳಿಂದ ಮನದ ಮೂಲೆಯ ಭಾವದಲ್ಲುಳಿದಿದ್ದ 'ಯುಗಾಂತ' ಕೃತಿಯನ್ನು ಇಂದು ಓದಿ ಮುಗಿಸಿದ ಸ್ವಲ್ಪ ಹೊತ್ತಿನಲ್ಲೇ ಅದರ (ಮರಾಠಿ) ಮೂಲದ ಕರ್ತೃ ಇರಾವತಿ ಕರ್ವೆ ಅವರ ಜನ್ಮದಿನ ಎಂದು ತಿಳಿದು ಮತ್ತಷ್ಟು ಸಂತೋಷವಾಯಿತು.

ಇರಾವತಿ ಕರ್ವೆ ಅವರು ಸಾಹಿತಿಯಾಗಿ, ಮಾನವಶಾಸ್ತ್ರಜ್ಞೆಯಾಗಿ, ಸಮಾಜಶಾಸ್ರಜ್ಞೆಯಾಗಿ ಮತ್ತು ಶಿಕ್ಷಣತಜ್ಞೆಯಾಗಿ ಪ್ರಸಿದ್ಧರಾಗಿದ್ದಾರೆ.  ಇರಾವತಿ ಕರ್ವೆ, ಭಾರತದಲ್ಲಿ ಮಾನವಶಾಸ್ತ್ರದ ಕುರಿತ ಚಿಂತನೆಗಳು ಇನ್ನೂ ಶೈಶವಾವಸ್ಥೆಯಲ್ಲಿ ಇದ್ದಂತಹ ಕಾಲದಲ್ಲಿ ಆ ಕುರಿತು ಮಹತ್ವದ  ಸಾಧನೆ ಮಾಡಿದವರು.

ಇರಾವತಿ ಕರ್ವೆ ಅವರ ನಿಟ್ಟಿನಲ್ಲಿ ಯುಗಾಂತ ಎಂಬುದು ಒಂದು ಯುಗದ ಅಂತ್ಯವೇನಲ್ಲ.  ಒಂದು ಕಾಲಘಟ್ಟದಲ್ಲಿನ ಸಮಾಜ ತನ್ನೊಳಗೇ ಬಡಿದಾಡಿಕೊಂಡು ಕಾಲಪ್ರವಹಿನಿಯಲ್ಲಿ ವ್ಯಕ್ತಿಗಳ ಮರಣಗಳು ಸಂಭವಿಸಿದರೂ, ಆ ವಂಶಗಳ ಮುಂದುವರಿಕೆಯಾಗಿರುವುದನ್ನೂ ಕಾಣಿಸುತ್ತಾರೆ. 

'ಯುಗಾಂತ' ಕೃತಿ ಮಹಾಭಾರತದ ಪ್ರಮುಖ ಪಾತ್ರಧಾರಿಗಳ ಮನೋವಿಶ್ಲೇಷಣಾತ್ಮಕ ಅಧ್ಯಯನವಾಗಿದೆ. ಆ ವ್ಯಕ್ತಿಗಳು ಇಲ್ಲಿ ಪೌರಾಣಿಕ ಪಾತ್ರಗಳಾಗುವ ಬದಲಾಗಿ ಐತಿಹಾಸಿಕ ವ್ಯಕ್ತಿಗಳಾಗಿ ಮೂಡಿವೆ. ಜೊತೆಗೆ ಕರ್ವೆ ಅವರು ಮಹಾಭಾರತದ ಘಟನೆಗಳನ್ನು ಸಾಮಾಜಿಕ-ರಾಜಕೀಯ ಸಂದರ್ಭಗಳ ಮೂಲಕ  ನಮ್ಮ ಕಣ್ಮುಂದೆ ತರುತ್ತಾರೆ. ಹೀಗಾಗಿ ಇಲ್ಲಿನ ಮಹಾಭಾರತವು ಪುರಾಣವಾಗದೆ ಸಾವಿರಾರು ವರ್ಷಗಳ ಹಿಂದೆ ಭಾರತ ದೇಶದಲ್ಲಿ ವಾಸ್ತವವಾಗಿ ನಡೆದ ಐತಿಹಾಸಿಕ ಘಟನೆಗಳ ವೃತ್ತಾಂತದಂತೆ ನಮಗೆ ಗೋಚರಿಸುತ್ತದೆ. ಈ ಸಂದರ್ಭದಲ್ಲಿ, ಲೇಖಕರು ಭಾರತೀಯ ಇತಿಹಾಸದಲ್ಲಿ ಆ ಅವಧಿಯಲ್ಲಿ ಪ್ರಚಲಿತದಲ್ಲಿದ್ದ ರಾಜಕೀಯ ಮತ್ತು ಸಾಮಾಜಿಕ ಸನ್ನಿವೇಶಗಳ ಬಗ್ಗೆ ಆಳವಾದ ಒಳನೋಟವನ್ನು ಕೊಡುತ್ತಾರೆ.

ಮನಃಶಾಸ್ತ್ರಜ್ಞೆಯಾದ ಇರಾವತಿ ಕರ್ವೆ  ಅವರು ಪಾತ್ರಗಳ ಒಳಹೊಕ್ಕು ಅವುಗಳ ಆಂತರಿಕ ವಿಶ್ವವನ್ನು ಅನಾವರಣ  ಮಾಡಿರುವುದು ಮನಮುಟ್ಟುವಂತಿದೆ. ಇಲ್ಲಿ ಶ್ರೀಕೃಷ್ಣನಿಗೂ ಸೇರಿದಂತೆ ಯಾವ ಪಾತ್ರದ ಮೇಲೂ  ದೈವತ್ವದ ಪ್ರೋಕ್ಷಣೆಯಿಲ್ಲ. ಮಹಾಭಾರತದ ಪ್ರಮುಖ ಪಾತ್ರಗಳಾದ ಭೀಷ್ಮ, ವಿದುರ, ಗಾಂಧಾರಿ, ಕುಂತಿ, ದ್ರೌಪದಿ, ಕೃಷ್ಣ, ಕರ್ಣ, ಮುಂತಾದವರ ವ್ಯಕ್ತಿತ್ವ, ಮನೋಧರ್ಮ, ಆಲೋಚನೆಗಳು, ಮತ್ತು ಆಶೋತ್ತರಗಳನ್ನು, ವೈಜ್ಞಾನಿಕವಾಗಿ ಮತ್ತು ವಸ್ತುನಿಷ್ಠವಾಗಿ ವಿವರಿಸಿದ್ದಾರೆ. ಅಲ್ಲಿನ ಪಾತ್ರಗಳಲ್ಲಿ ಇದ್ದಿರಬಹುದಾದ ಗುಣಾವಗುಣಗಳನ್ನು ಎತ್ತಿ ತೋರಿಸಿದ್ದಾರೆ. ಹೀಗೆ ಓದುವಾಗ ಮಹಾಭಾರತವು ಮಾನವಸಹಜವಾದ ದೌರ್ಬಲ್ಯಗಳಿಂದ ಕೂಡಿದ ಪಾತ್ರಗಳ ಸರಮಾಲೆಯಾಗಿ  ನಮ್ಮ ಕಣ್ಮುಂದೆ ಹಾದುಹೋಗುತ್ತವೆ. ಅಲ್ಲಿನ ಪಾತ್ರಗಳು, ಅವುಗಳ ಗುಣದೋಷಗಳು ಕತೆಯ ಹರಿವನ್ನು ಹೇಗೆ ನಿರ್ದೇಶಿಸಿವೆ ಎಂಬುದನ್ನು ಕರ್ವೆಯವರು ವಿಶ್ಲೇಷಿಸಿರುವ ಪರಿ ಮನಮುಟ್ಟುವಂತಿದೆ.

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ