ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವೈರಮುತ್ತು


ವೈರಮುತ್ತು


ತಮಿಳಿನ ಕವಿ ಹಾಗೂ ಗೀತರಚನೆಕಾರ ವೈರಮುತ್ತು ಅವರಿಗೆ 2025ನೇ ಸಾಲಿನ ಜ್ಞಾನಪೀಠ ಪ್ರಶಸ್ತಿಗೆ ಸಂದಿದೆ.

ವೈರಮುತ್ತು ಅವರು 1953ರ ಜುಲೈ 13ರಂದು ತೇನಿ ಜಿಲ್ಲೆಯ ಕೃಷಿಕ ದಂಪತಿ ರಾಮಸ್ವಾಮಿ ಮತ್ತು ಅಂಗಮ್ಮಾಳ್ ಅವರ ಪುತ್ರನಾಗಿ ಜನಿಸಿದರು. 1957 ರಲ್ಲಿ ಅವರ ಕುಟುಂಬವು ವೈಗೈ ನದಿಗೆ ಅಡ್ಡವಾಗಿ ಕಟ್ಟಿದ ಅಣೆಕಟ್ಟಿನಿಂದಾಗಿ ತೇನಿಜಿಲ್ಲೆಯ ಇನ್ನೊಂದು ಸ್ಥಳವಾದ ವಡಗುಪಟ್ಟಿಗೆ ಸ್ಥಳಾಂತರಗೊಂಡಿತು.  ಅವರು ತಮ್ಮ ವಿದ್ಯಾಭ್ಯಾಸದ ಜೊತೆಗೆ ಕೃಷಿಯಲ್ಲಿಯೂ ತೊಡಗಿಸಿಕೊಂಡು ಕೆಲಸ ಮಾಡುತ್ತ ಬೆಳೆದರು. 

ತಮ್ಮ ಎಳವೆಯಿಂದಲೇ ವೈರಮುತ್ತು ಅವರು ಸಾಹಿತ್ಯದ ಕಡೆಗೆ ಆಕರ್ಷಿತರಾದರು. ಅರವತ್ತರ ದಶಕದಲ್ಲಿ ತಮಿಳುನಾಡಿನಲ್ಲಿ ನಡೆದ ದ್ರಾವಿಡ ಚಳವಳಿಯು ವೈರಮುತ್ತು ಅವರ ಮೇಲೆ ಗಣನೀಯ ಪರಿಣಾಮವನ್ನು ಬೀರಿತು. ಅವರು ಪೆರಿಯಾರ್ ರಾಮಸ್ವಾಮಿ, ಅಣ್ಣಾದುರೈ,  ಎಂ ಕರುಣಾನಿಧಿ, ಸುಬ್ರಮಣ್ಯ ಭಾರತಿ, ಭಾರತಿದಾಸನ್, ಕಣ್ಣದಾಸನ್ ಮೊದಲಾದವರಿಂದ ಪ್ರಭಾವಿತರಾದರು. 

ವೈರಮುತ್ತು ತಮ್ಮ ಹತ್ತನೇ ವಯಸ್ಸಿನಿಂದಲೇ ಕವಿತೆಗಳನ್ನು ಬರೆಯಲು ಆರಂಭಿಸಿದ್ದರು. ತಮ್ಮ ಹದಿನಾಲ್ಕನೇ ವಯಸ್ಸಿನಲ್ಲಿ ಅವರು ತಿರುವಳ್ಳುವರ್ ಅವರ ತಿರುಕ್ಕುರಳ್ ನಿಂದ ಪ್ರಭಾವಿತರಾಗಿ “ವೆಂಬ ಕವಿತೆಗಳ್” ಎಂಬ ಕವನಸಂಕಲನವನ್ನು ಪ್ರಕಟಿಸಿದರು. ತಮ್ಮ ಹದಿಹರೆಯದಲ್ಲಿ ಅವರು ವಿದ್ಯಾಲಯದಲ್ಲಿ ಕವಿ ಮತ್ತು ಉತ್ತಮ ಭಾಷಣಕಾರರಾಗಿ ಪ್ರಸಿದ್ಧರಾದರು. ಹತ್ತೊಂಭತ್ತನೆಯ ವಯಸ್ಸಿನಲ್ಲಿ ತಮ್ಮ ಮೊದಲ ಕವನಸಂಕಲನವಾದ  ವೈಗರೈ ಮೇಗಂಗಳ್('ಮುಂಜಾನೆಯ ಮೋಡಗಳು') ಪ್ರಕಟಿಸಿದರು. ಈ ಕವನಸಂಕಲನವು ಕಾಲೇಜಿನ ಪಠ್ಯಕ್ರಮದಲ್ಲಿ ಒಳಗೊಂಡು, ವೈರಮುತ್ತು ಅವರಿಗೆ ವಿದ್ಯಾರ್ಥಿಯಾಗಿರುವಾಗಲೇ ಪಠ್ಯಪುಸ್ತಕ ಲೇಖಕರೆಂಬ ಹೆಸರನ್ನು ತಂದುಕೊಟ್ಟಿತು. ಅವರು ಮದ್ರಾಸ್ ವಿಶ್ವವಿದ್ಯಾಲಯದಿಂದ ತಮಿಳು ಸಾಹಿತ್ಯದಲ್ಲಿ 2 ವರ್ಷದ ಸ್ನಾತಕೋತ್ತರ ಪದವಿ ಶಿಕ್ಷಣವನ್ನು ಮುಗಿಸಿದರು.  ತಮ್ಮ ವಿದ್ಯಾಭ್ಯಾಸದ ಆನಂತರ ಅವರು 1970ರ ದಶಕದ ಮಧ್ಯಕಾಲಾವಧಿಯಲ್ಲಿ ತಮಿಳುನಾಡು ಅಧಿಕೃತ ಭಾಷಾ ಆಯೋಗದಲ್ಲಿ ಜಸ್ಟಿಸ್ ಮಹಾರಾಜನ್ ಅವರ ಮಾರ್ಗದರ್ಶನದಲ್ಲಿ ಕಾನೂನಿನ ಪುಸ್ತಕಗಳ ಮತ್ತು ಕಡತಗಳ ಅನುವಾದಕರಾಗಿ ತಮ್ಮ ವೃತ್ತಿಜೀವನವನ್ನು ಆರಂಭಿಸಿದರು. ಇದಲ್ಲದೆ ಅವರು ಕವಿತೆಗಳನ್ನು ಬರೆಯುವುದನ್ನು ಮುಂದುವರಿಸಿದರು. 1979ರಲ್ಲಿ ಅವರು 'ತಿರುತ್ತಿ ಎಳುದಿಯ ಕವಿತೈಗಳ್ ('ಪರಿಷ್ಕೃತ ಮತ್ತು ಪುನಃ ಬರೆಯಲಾದ ಕವಿತೆಗಳು') ಎಂಬ ಶೀರ್ಷಿಕೆಯಡಿ ತಮ್ಮ ಎರಡನೆಯ ಕವನಸಂಕಲನವನ್ನು ಪ್ರಕಟಿಸಿದರು. 'ಕಲ್ಲಿಕಟ್ಟು ಇತಿಹಾಸಮ್', 'ಕರುವಾಚ್ಚಿ ಕಾವಿಯಂ', 'ಮೂಡ್ರಾಂ ಉಲಗಪ್ಪೋರ್' ಮುಂತಾದ ಇತರ ಕೃತಿಗಳೂ ಸೇರಿದಂತೆ ಅವರ 40ಕ್ಕೂ ಹೆಚ್ಚು ಕೃತಿಗಳು ತಮಿಳಿನಲ್ಲಿ ಹಾಗೂ ಹಲವು ಕೃತಿಗಳು ಇಂಗ್ಲಿಷ್, ಹಿಂದಿ ಮೊದಲಾದ ಭಾಷೆಗಳಲ್ಲಿ ಪ್ರಕಟಗೊಂಡಿವೆ.

ವೈರಮುತ್ತು ಅವರು 1980ರಲ್ಲಿ ಪಿ. ಭಾರತಿರಾಜ ಅವರ ನಿರ್ದೇಶನದ 'ನಿಳಲ್ಗಳ್' ಚಿತ್ರದೊಂದಿಗೆ ತಮಿಳು ಚಿತ್ರೋದ್ಯಮವನ್ನು ಪ್ರವೇಶಿಸಿದರು. ಮುಂದಿನ 5 ದಶಕಗಳಲ್ಲಿ ಅವರು 150 ಕ್ಕೂ ಹೆಚ್ಚು ಸಂಗೀತ ನಿರ್ದೇಶಕರ ಜೊತೆಗೆ ಕೆಲಸ ಮಾಡಿದ್ದು, 7500ಕ್ಕೂ ಹೆಚ್ಚು ಹಾಡುಗಳನ್ನೂ ಕವಿತೆಗಳನ್ನೂ ಬರೆದಿದ್ದಾರೆ.  ಕಿರುತೆರೆಯ ಪ್ರಸಿದ್ಧ 'ಚಿತ್ತಿ' ಅಂತಹ ಕಾರ್ಯಕ್ರಮಗಳಿಗೂ ಇವರ ಸಾಹಿತ್ಯವಿದೆ.  ಇವರಿಗೆ ಏಳು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಸಂದಿದ್ದು ಅತಿ ಹೆಚ್ಚು ವೈಯಕ್ತಿಕ ರಾಷ್ಟ್ರಪ್ರಶಸ್ತಿ ಗೆದ್ದ ಗೀತರಚನಕಾರರೆಂಬ ಕೀರ್ತಿ ಇವರದ್ದಾಗಿದೆ. ಇವರು ಸಾಹಿತ್ಯಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಪದ್ಮಶ್ರೀ, ಪದ್ಮಭೂಷಣ,  ಕೇಂದ್ರ ಸಾಹಿತ್ಯಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಂದಿದ್ದು ಇದೀಗ ಅವರಿಗೆ ಜ್ಞಾನಪೀಠ ಸಂದಿದೆ.

Jnanapitha Award for poet Vyramuthu 

 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ