ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಪೆಂಡ್ಯಾಲ ನಾಗೇಶ್ವರ ರಾವ್


 ಪೆಂಡ್ಯಾಲ ನಾಗೇಶ್ವರ ರಾವ್

'ಸತ್ಯ ಹರಿಶ್ಚಂದ್ರ' ಚಿತ್ರದ ಹಾಡುಗಳನ್ನು ಕನ್ನಡಿಗರು ಮರೆಯುವುದು ಸಾಧ್ಯವೇ ಇಲ್ಲ.   ಆ ಚಿತ್ರದ ಸಂಗೀತ ಸಂಯೋಜಕರು ಪೆಂಡ್ಯಾಲ ನಾಗೇಶ್ವರ ರಾವ್.  ಬಹುವಾದ್ಯಗಳ ನುರಿತ ವಾದಕರಾದ ಪೆಂಡ್ಯಾಲ ನಾಗೇಶ್ವರ ರಾವ್ ಅವರು ತೆಲುಗು, ತಮಿಳು ಮತ್ತು ಕನ್ನಡ ಚಿತ್ರಗಳ ಅಸಾಮಾನ್ಯ ಸಂಗೀತ ಸಂಯೋಜಕರಾಗಿ ಉಳಿಸಿಹೋಗಿರುವ ಕೊಡುಗೆ ಅಸಾಮಾನ್ಯವಾದುದು.

ಪೆಂಡ್ಯಾಲ ಎಂದು ಖ್ಯಾತರಾದ ನಾಗೇಶ್ವರ ರಾವ್ ಅವರು 1917ರ ಮಾರ್ಚ್ 6ರಂದು ವಿಜಯವಾಡ ಬಳಿಯ ವನುಕೂರಿನಲ್ಲಿ ಜನಿಸಿದರು. ಮುಂದೆ  ಕಾಟೂರಿಗೆ ಸ್ಥಳಾಂತರಗೊಂಡರು. ತೆಲುಗಿನ ಮಹಾನ್ ರಂಗಭೂಮಿ ಮತ್ತು ಚಲನಚಿತ್ರ ಕಲಾವಿದ ಮಿಕ್ಕಿಲನೇನಿ ಮತ್ತು ಪೆಂಡ್ಯಾಲ ಇಬ್ಬರೂ ಕಪಿಲವೈ ರಾಮನಾಥ ಶಾಸ್ತ್ರಿಗಳ ವಿದ್ಯಾರ್ಥಿಗಳಾಗಿದ್ದು ನಿಕಟ ಸಂಬಂಧ ಹೊಂದಿದ್ದರು.  ಪೆಂಡ್ಯಾಲ ಅವರ ಕುಟುಂಬದಲ್ಲಿ ತಂದೆ ಸೀತಾರಾಮಯ್ಯ ಅವರೂ  ಸೇರಿದಂತೆ ಹಲವು ತಲೆಮಾರಿನ ಪೂರ್ವಜರು ಸಂಗೀತದಲ್ಲಿ ಅಪಾರ ಪರಿಣತಿ ಹೊಂದಿದ್ದರು. ನಾಗೇಶ್ವರ ರಾವ್ ಕೂಡ ಬಾಲ್ಯದಿಂದಲೇ ಸಂಗೀತದಲ್ಲಿ ಆಸಕ್ತಿ ಮೂಡಿಸಿಕೊಂಡರು. ತಮ್ಮ ತಂದೆಯೊಂದಿಗೆ ನಾಟಕಗಳಿಗೆ ಹಾರ್ಮೋನಿಯಂ ನುಡಿಸುತ್ತಿದ್ದರು. 

ಪೆಂಡ್ಯಾಲ ಅವರು ಮೊದಲ ಬಾರಿಗೆ 'ಕೃಷ್ಣ ತುಲಾಭಾರಂ'  ನಾಟಕದಲ್ಲಿ ಜಾಂಬವತಿಯಾಗಿ ನಟಿಸಿದರು. ನಂತರ ರುಕ್ಮಿಣಿ, ನಾರದ ಪಾತ್ರಗಳನ್ನು ನಿರ್ವಹಿಸಿ ಮೆಚ್ಚುಗೆ ಗಳಿಸಿದರು.   ಆ ಅವಧಿಯಲ್ಲಿ, ಕದರು ನಾಗಭೂಷಣಂ ಅವರು ಪೆಂಡ್ಯಾಲ ಅವರ ಪ್ರತಿಭೆಯನ್ನು ಗಮನಿಸಿ, ತಮ್ಮ 'ಪ್ರೇಮ ತಲ್ಲಿ' (1941) ಚಿತ್ರದ ವಾದ್ಯವೃಂದದಲ್ಲಿ ಕೆಲಸ ಮಾಡಲು ಆಹ್ವಾನಿಸಿದರು. ಹೀಗೆ ಪೆಂಡ್ಯಾಲ ಅವರು ಮದ್ರಾಸ್‌ಗೆ ಹೋಗಿ ರಾಜರಾಜೇಶ್ವರಿ ಫಿಲ್ಮ್ಸ್‌ಗೆ ಸೇರಿ ದಿನಕರ ರಾವ್ ಮತ್ತು ಎಸ್‌ವಿ ವೆಂಕಟರಾಮನ್ ಅವರಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದರು. ಎರಡನೆಯ ಮಹಾಯುದ್ಧದ ಆರಂಭದೊಂದಿಗೆ ಪೆಂಡ್ಯಾಲ ಅವರು ಮನೆಗೆ ಮರಳಿದರು. ನಂತರ ಗುಡವಳ್ಳಿ ರಾಮಬ್ರಹ್ಮಂ ಅವರು ಗಾಲಿ ಪೆಂಚಲ ನರಸಿಂಹ ರಾವ್ ಅವರ ಅಡಿಯಲ್ಲಿ 'ಮಾಯಾಲೋಕಂ' ಚಿತ್ರಕ್ಕೆ ಹಾರ್ಮೋನಿಸ್ಟ್ ಆಗಿ ಕೆಲಸ ಮಾಡಲು ಆಹ್ವಾನಿಸಿದರು. ಕೆ.ಎಸ್. ಪ್ರಕಾಶ್ ರಾವ್ ಅವರು ತಮ್ಮ 'ದ್ರೋಹಿ'  ಚಿತ್ರಕ್ಕಾಗಿ ಸ್ವತಂತ್ರ ಸಂಗೀತ ನಿರ್ದೇಶಕರಾಗಿ ಅವಕಾಶ ನೀಡಿದರು.  ಅದು ಅವರಿಗೆ ಉತ್ತಮ ಖ್ಯಾತಿಯನ್ನು ತಂದುಕೊಟ್ಟಿತು. ಮುಂದೆ ಪೆಂಡ್ಯಾಲ ಸುಮಾರು 100 ಚಿತ್ರಗಳಿಗೆ ಸಂಗೀತ ನೀಡಿದರು.  ಅವುಗಳಲ್ಲಿ ಅನೇಕವು ಅವಿಸ್ಮರಣೀಯ ಜಯಭೇರಿ ಸಾಧಿಸಿವೆ.

ಪೆಂಡ್ಯಾಲ ಅವರು ಸಾಂಪ್ರದಾಯಿಕ 
ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತ ಶೈಲಿಗಳ ಜೊತೆಗೆ ಭಿನ್ನ ಸಂಗೀತ ಸಂಪ್ರದಾಯ ವಿಶೇಷ ಪ್ರವೀಣಜ್ಞರಾಗಿ, ರಂಗಗಾಯನ, ಗದ್ಯ ಆಲಾಪನ, ಹರಿಕಥಾ, ಬುರ್ರಾ ಕಥಾ, ಜನಪದ / ಲೋಕ ಸಂಗೀತ ಮುಂತಾದವುಗಳ ಸಮ್ಮೋಹಕ ಶೈಲಿಗಳನ್ನು ಕರಗತಮಾಡಿಕೊಂಡಿದ್ದರು. 

ಪೆಂಡ್ಯಾಲ ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿದ ತೆಲುಗಿನ 'ಮಹಾಕವಿ ಕಾಳಿದಾಸು' (1960) ಚಿತ್ರದ 'ಮಾಣಿಕ್ಯವೀಣಾ ಮುಪಲಾಲಯಂತಿ', 'ಜಗದೇಕವೀರುನಿ ಕಥಾ' (1961) ಚಿತ್ರದ 'ಶಿವಶಂಕರಿ', ಕನ್ನಡದ 'ಸತ್ಯ ಹರಿಶ್ಚಂದ್ರ' ಚಿತ್ರದ 'ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ' ಮುಂತಾದ ನೂರಾರು ಗೀತೆಗಳು ಇಂದಿಗೂ ಪೆಂಡ್ಯಾಲ ಅವರ ಅಸಾಮಾನ್ಯ ಸಾಮರ್ಥ್ಯಕ್ಕೆ ಸಾಕ್ಷಿಯಾಗಿ ನಿಂತಿವೆ.

ಪೆಂಡ್ಯಾಲ ಅವರು ಕನ್ನಡದಲ್ಲಿ ಸಂಗೀತ ಸಂಯೋಜಿಸಿರುವ ರಾಯರ ಸೊಸೆ (1957),  ಶ್ರೀಕೃಷ್ಣ ಗಾರುಡಿ (1958), ಭಕ್ತ ಶಬರಿ (1960), ಜಗದೇಕವೀರನ ಕಥೆ (1961), ಸತ್ಯ ಹರಿಶ್ಚಂದ್ರ (1965) ಮುಂತಾದ ಚಿತ್ರಗಳಲ್ಲಿನ ಗೀತೆಗಳು ಅಪಾರ ಜನಪ್ರಿಯವಾಗಿದ್ದು, ಮುಂದಿನ ಯುಗದ ಅನೇಕ ಚಿತ್ರಗೀತೆಗಳಿಗೆ ಪ್ರೇರಣೆಯೂ ಆಗಿವೆ.

ಚಲನಚಿತ್ರಲೋಕದ ಮಹಾನ್ ಹಿನ್ನೆಲೆ ಗಾಯಕಿಯರಾದ ಪಿ. ಸುಶೀಲಾ ಅವರನ್ನು 'ಕನ್ನ ತಲ್ಲಿ' ಚಿತ್ರದಲ್ಲಿ 1953ರಲ್ಲಿ ಮತ್ತು  ಎಸ್.  ಜಾನಕಿ ಅವರನ್ನು 1957ರಲ್ಲಿ ‘ಎಂ. ಎಲ್.ಎ' ಚಿತ್ರದಲ್ಲಿ ಪ್ರಥಮ ಬಾರಿಗೆ ಪರಿಚಯಿಸಿದ ಕೀರ್ತಿ ಪೆಂಡ್ಯಾಲ ಅವರದ್ದು.

ಪೆಂಡ್ಯಾಲ ನಾಗೇಶ್ವರರಾವ್ ಅವರು 1984ರ ಆಗಸ್ಟ್ 31ರಂದು ಈ ಲೋಕವನ್ನಗಲಿದರು.

Great Music Composer Pendyala Nageswara Rao

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ