ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಕೆ. ಜಯಶ್ರೀ ಗಿರಿಧರ್


 ಕೆ. ಜಯಶ್ರೀ ಗಿರಿಧರ್ 


ಇಂದು ವಿದುಷಿ ಶ್ರೀಮತಿ ಕೆ. ಜಯಶ್ರೀ ಗಿರಿಧರ್ ರವರ ಜನ್ಮದಿನ (27.04.1973). ನಮ್ಮ ನಡುವಿನ ನಿಷ್ಠಾವಂತ ಸಾಧಕಿಯಾದ ಇವರು ವಯಲಿನ್ ವಾದಕಿ. 

ತೀರಾ ಚಿಕ್ಕ ವಯಸ್ಸಿನಲ್ಲಿಯೇ (8 ವರ್ಷದವರಾಗಿದ್ದಾಗ ) ಸಂಗೀತದ ಮೂಲ ಪಾಠಗಳನ್ನು ಅಭ್ಯಾಸ ಮಾಡಲು ಪ್ರಾರಂಭಿಸಿದ ಜಯಶ್ರೀ ಅವರು ಎಂ.ಎ. ಸಂಗೀತ ಪದವಿಯನ್ಬು ಸ್ವರ್ಣಪದಕದೊಂದಿಗೆ ಗಳಿಸಿದರು. 

ಅತ್ಯಂತ ವಿದ್ಯಾ ಶ್ರೀಮಂತ ಗುರು ಪರಂಪರೆಯಿಂದ ಬಂದಿರುವ ಜಯಶ್ರೀಯವರು ವಿದ್ವಾನ್ ನೇತಿ ಶ್ರೀರಾಮ ಶರ್ಮ (ಹೈದರಾಬಾದ್), ವಿದ್ವಾನ್ ಆನೂರು ಎಸ್. ರಾಮಕೃಷ್ಣ (ಬೆಂಗಳೂರು) ಮತ್ತು ವಿದ್ವಾನ್ ಡಿ.ವಿ. ನಾಗರಾಜನ್ (ಬೆಂಗಳೂರು)  ರವರ ಬಳಿ ಸಂಗೀತ ಅಭ್ಯಾಸ ಮಾಡಿರುತ್ತಾರೆ.  ಪ್ರಸ್ತುತ ಆಕಾಶವಾಣಿಯ ಶ್ರೇಣೀಕೃತ ಕಲಾವಿದರಾಗಿರುವ ವಿದ್ವಾನ್ ವೈದ್ಯನಾಥನ್ ಬಾಲಸುಬ್ರಮಣ್ಯಂ(ಹೈದರಾಬಾದ್) ರವರಲ್ಲಿ ಅಭ್ಯಾಸವನ್ನು ಮುಂದುವರೆಸಿರುತ್ತಾರೆ.

ಮನೆಯ ಪ್ರತಿಕೂಲ ವಾತಾವರಣದ ಹೊರತಾಗಿಯೂ ತನ್ನನ್ನು ಮಾನಸಿಕವಾಗಿ ಕುಗ್ಗುವುದರಿಂದ ಕಾಪಾಡಿದ್ದು ತಮ್ಮ ಸಂಗೀತವೇ ಎಂದು ನಂಬುವ ಇವರು ಸಾಧನೆಯ ಒಂದೊಂದೇ  ಮೆಟ್ಟಿಲನ್ನು ಹತ್ತುವಂತಾದದ್ದು ತಮ್ಮ ಮದುವೆಯ ನಂತರವೇ. ಇವರ ಪತಿ ಗಿರಿಧರರು ನಿಜದ ಅರ್ಥದಲ್ಲಿ ಇವರ ಸಹಚರ, ಬೆನ್ನೆಲುಬು, ಪತ್ನಿಯ ಸಾಧನೆಯಲ್ಲಿ ಸಂತೋಷವನ್ನು ಕಂಡವರು ಎಂದೇ ಹೇಳಬೇಕು. ಇವರದೊಂದು ಅಪರೂಪ ಮತ್ತು ಅನುರೂಪದ ದಾಂಪತ್ಯ. ಗಿರಿಧರರು ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯವನ್ನು ಅಳವಾಗಿ ಓದಿಕೊಂಡವರು, ಕೆಲವು ವರ್ಷಗಳ ಕಾಲ ಸಂಗೀತವನ್ನೂ ಅಭ್ಯಾಸ ಮಾಡಿರುವಂಥವರು. ಹೆಂಡತಿಗೆ ಬೇಕಾದ ಸಾಹಿತ್ಯವನ್ನು ಕ್ಷಣಾರ್ಧದಲ್ಲಿ  ಕರಾರುವಾಕ್ಕಾಗಿ ಒದಗಿಸಿಕೊಡುತ್ತಾರೆ. ಹೆಂಡತಿ ವೇದಿಕೆಯ ಮೇಲೆ ಪಿಟೀಲು ಹಿಡಿದು ಕೂತಿರಲಿ ಅಥವಾ ಮನೆಯಲ್ಲಿ ಅಭ್ಯಾಸದಲ್ಲಿ ನಿರತರಾಗಿರಲಿ, ಇವರು ಅವರ ಎದುರಿಗೆ ಕೂತು ತಾಳ ಹಾಕಲೇ ಬೇಕು. ಈ ಒಂದು ಸಾಮರಸ್ಯವನ್ನು ನೋಡಿಯೇ ಆನಂದಿಸಬೇಕು. 

ಜಯಶ್ರೀಯವರು ಇದುವರೆಗೂ ಹಲವಾರು ವೇದಿಕೆಗಳಲ್ಲಿ ತಮ್ಮ ವಾದನವನ್ನು ಪ್ರಸ್ತುತಪಡಿಸಿರುತ್ತಾರೆ.  ಭಾರತದ ಆಗಿನ ರಾಷ್ಟ್ರಪತಿ ಶ್ರೀಮತಿ ಪ್ರತಿಭಾ ಪಾಟೀಲ್ ಅವರ ಸಮ್ಮುಖದಲ್ಲಿ ಆಗಸ್ಟ್ ತಿಂಗಳಲ್ಲಿ ರಾಜಭವನ್, ಬೆಂಗಳೂರು (2008) ನಲ್ಲಿ ಪ್ರದರ್ಶನ ನೀಡಿದ್ದಾರೆ.  2004ರಲ್ಲಿ ಹೈದರಾಬಾದ್‌ನ ಮ್ಯೂಸಿಕ್ ಲವರ್ಸ್ ಅಸೋಸಿಯೇಷನ್‌ನಿಂದ "ವಯಲಿನ್ ವಿದ್ವಾಂಸ” (VIOLIN VIRTUUSO) ಎಂಬ ಬಿರುದು ಪಡೆದಿದ್ದಾರೆ. "ಘಟ ತರಂಗ” ಎಂಬ ಮಹಿಳಾ ಪರ್ಕಷನ್ ತಂಡದ ಸದಸ್ಯೆಯಾಗಿದ್ದು, ಭಾರತದೆಲ್ಲೆಡೆ ಹಾಗೂ  ವಿದೇಶಗಳಲ್ಲಿಯೂ ಪ್ರದರ್ಶನ ನೀಡಿದ್ದಾರೆ. ತಿರುಪತಿ ತಿರುಮಲ ದೇವಸ್ಥಾನದ (TTD) ಆಸ್ಥಾನ  ಮಂಟಪದಲ್ಲಿ ಸೋಲೋ ವಯಲಿನ್ ಕಚೇರಿ ನೀಡಿದ್ದಾರೆ.ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಖ್ಯಾತಿಯ ಹಲವಾರು ದೊಡ್ಡ ದೊಡ್ಡ ಕಲಾವಿದರಿಗೆ ಪಕ್ಕವಾದ್ಯ ನುಡಿಸಿರುತ್ತಾರೆ. ಟೈಮ್ಸ್ ಆಫ್ ಇಂಡಿಯಾ, ದ ಹಿಂದು, ಡೆಕ್ಕನ್ ಹೆರಾಲ್ಡ್ ಹಾಗೂ ಕರ್ನಾಟಕ ಮತ್ತು ಆಂಧ್ರ ಪ್ರದೇಶದ ಸ್ಥಳೀಯ ಪತ್ರಿಕೆಗಳು (ಸಾಕ್ಷಿ, ಪ್ರಭ, ಈನಾಡು ಮುಂತಾದವು) ಇವರ ಸಾಧನೆಯನ್ನು   ಪರಿಚಯಿಸಿರುತ್ತವೆ.
ಕರ್ನಾಟಕದ ಆಗಿನ ರಾಜ್ಯಪಾಲರಾದ ಶ್ರೀಮತಿ ರಾಮಾ ದೇವಿ ಅವರ ಸಮ್ಮುಖದಲ್ಲಿ ರಾಜಭವನದಲ್ಲಿಯೂ ಪ್ರದರ್ಶನ ನೀಡಿರುತ್ತಾರೆ. ರವೀಂದ್ರ ಭಾರತೀ (ಹೈದರಾಬಾದ್), ರವೀಂದ್ರ ಕಲಾಕ್ಷೇತ್ರ (ಬೆಂಗಳೂರು), ತ್ಯಾಗರಾಜ ಗಾನಸಭಾ (ಹೈದರಾಬಾದ್), ಗಾಯನ ಸಮಾಜ (ಬೆಂಗಳೂರು), ಮಹತಿ (ತಿರುಪತಿ), TTD (ಚೆನ್ನೈ), ಇಸ್ಕಾನ್ (ಬೆಂಗಳೂರು), ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ದೆಹಲಿಯ ವರ್ಲ್ಡ್ ಸ್ಕೂಲ್ ಆಫ್ ಮ್ಯೂಸಿಕ್‌,  ಕರ್ನಾಟಕ ಸರ್ಕಾರದ ಪ್ರಾಯೋಜಿತ ಸಂಗೀತೋತ್ಸವಗಳಲ್ಲಿ, ಕಲಾಸಾಗರಂ (ಹೈದರಾಬಾದ್), ವೈಎಂಸಿಎ (ಹೈದರಾಬಾದ್) ನಲ್ಲಿ, ಮೈಸೂರು ರಾಜಕುಮಾರಿ ಮೀನಾಕ್ಷಿ ದೇವಿ ಅವರ ನೇತೃತ್ವದ ಇಂಟರ್ನ್ಯಾಷನಲ್ ಮ್ಯೂಸಿಕ್ & ಆರ್ಟ್ಸ್ ಸೊಸೈಟಿಯಲ್ಲಿ, ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯ ಪ್ರಾಯೋಜಿತ ಕಾರ್ಯಕ್ರಮದ ಭಾಗವಾಗಿ ಅಸ್ಸಾಂನಲ್ಲಿ, ದೂರದರ್ಶನ ಹಾಗೂ ಇತರ ಖಾಸಗಿ ಟಿವಿ ವಾಹಿನಿಗಳಲ್ಲಿ ನಿರಂತರವಾಗಿ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿರುವ ಇವರು   ಇನ್ನೂ ಹಲವಾರು ದೇಶದ ಪ್ರತಿಷ್ಟಿತ ವೇದಿಕೆಗಳಲ್ಲಿ ತಮ್ಮ ಅದ್ಭುತ ಪ್ರದರ್ಶನ ನೀಡಿ ಶ್ರೋತೃಗಳನ್ನು ರಂಜಿಸಿರುತ್ತಾ ಬಂದಿರುತ್ತಾರೆ.

ಜಯಶ್ರೀ ಗಿರಿಧರ್  ಒಬ್ಬ ಒಳ್ಳೆಯ ಗುರುವೂ ಹೌದು. ತಮ್ಮ ಶಿಷ್ಯರೂ ತಮ್ಮಂತೆಯೇ ಸಂಗೀತ ಅಭ್ಯಾಸ ಮಾಡಬೇಕು, ಸಂಗೀತ ಕ್ಷೇತ್ರದಲ್ಲಿ ಅತ್ಯಂತ ಎತ್ತರದ ಸಾಧನೆ ಮಾಡಬೇಕು  ಎಂದು ನಿರಂತರವಾಗಿ  ಅವರಲ್ಲಿ ಸ್ಫೂರ್ತಿ ತುಂಬುತ್ತಾ ಬಂದಿದ್ದಾರೆ. ಮಕ್ಕಳು ಆಸಕ್ತಿ, ಛಲ, ಪರಿಶ್ರಮದಿಂದ ಕಲಿಯಲು ಪ್ರೇರಣೆ ನೀಡುತ್ತಾರೆ. ಅವರ ಶಿಷ್ಯ ವೃಂದದ ಹೆಮ್ಮೆಯ, ಪ್ರೀತಿಯ ಹಾಗೂ ತಾಯಿ ಮಮತೆಯ ಗುರುವೂ ಆಗಿರುತ್ತಾರೆ. ಎಷ್ಟೆಲ್ಲಾ ಸಾಧನೆ ಮಾಡಿದ್ದರೂ ತುಂಬಿದ ಕೊಡ ತುಳುಕುವುದಿಲ್ಲ ಎನ್ನುವ ಹಾಗೆ ವಿನೀತರಾಗಿ ನಡೆದುಕೊಳ್ಳುವ ಅವರ ಗುಣ ಎಲ್ಲರ ಹೃದಯವನ್ನೂ ಗೆಲ್ಲುವಂತಥದ್ದು.

ಇಂತಹ ಸಹೃದಯ ಸಂಗೀತಗಾರ್ತೀಯ ಜನ್ಮದಿನವಾದ ಇಂದು ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. ದೇವರು ಅವರಿಗೆ ತುಂಬು  ಆಯುಷ್ಯ, ಅರೋಗ್ಯ ಮತ್ತು ಯಶಸ್ಸು ಕೊಟ್ಟು ಕಾಪಾಡಲಿ ಎಂಬುದು ದೇವರ ಪಾದದ ಮೇಲೆ ಅರಳಿದ ಹೂವಿನ ಗಂಧದಂತಹ ಪ್ರಾರ್ಥನೆ.


ಲೇಖಕಿ: ಆಶಾ ಜಗದೀಶ್ Asha Jagadish


 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ