ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಚಹಾ ಧ್ಯಾನ


 ಚಹಾ ಧ್ಯಾನ

On World Tea Day 

ಮೈಸೂರು ಬೆಂಗಳೂರಿಗರಿಗೆ ಕಾಫಿ ಅಂದರೆ ಪ್ರಾಣ.  ಹಾಗಂತ ಚಹಾ ಕುಡಿಯಲ್ಲ ಅಂತಲ್ಲ.  ಆದರೆ ಕಾಫಿ ಇಲ್ಲದೆ ಬೆಳಗಾಗಲ್ಲ,  ಕೆಲವು ಕಪ್ ಕಾಫಿ ಇಲ್ಲದಿದ್ರೆ ತಲೆ ನೋವು ಗ್ಯಾರಂಟಿ.  ಆಮೇಲೆ, ಸೊಟ್ಟಗಿರೊ ತಲೆ,  ಅಲ್ಪ ಸ್ವಲ್ಪವೂ ನೆಟ್ಟಗಾಗಲ್ಲ 😊

ಉತ್ತರ ಭಾರತಕ್ಕೆ ಕೆಲಸದ ಮೇಲೆ ಹೋದ ಕಡೆಗಳಲ್ಲಿ ಆಗಾಗ ನಮ್ಮ ಮುಂದೆ ಚಹಾ ಕುಕ್ಕರಿಸಿ ಹೊರಟು ಹೋಗ್ತಾ ಇದ್ರು.  ಕುಡೀದಿದ್ರೆ ಟೇಬಲ್ ಮೇಲೆ ಚೆಲ್ಲಿದರೆ ಅಂತ ಭಯಕ್ಕೆ ಅಷ್ಟೂ ಕುಡೀತಿದ್ದೆ.  ಬೆಂಗಳೂರು ಮೈಸೂರಿಗರ ಹತ್ರ ಬಿಟ್ಟು, ಬಾಕಿಯವರಿಗೆ ಕಾಫಿ ಮಾಡಕ್ಕೆ ಬರೋದು ಡೌಟು ಅಂತ,  ಹೊರ ಊರುಗಳಿಗೆ ಹೋದಾಗ ಚಹಾನೇ ಕೇಳ್ತೀವಿ.

ಆದ್ರೂ ಕೆಲವೊಂದು ಕಡೆ ಮಸಾಲ ಟೀ, saffron ಟೀ ಎಷ್ಟು ಚೆನ್ನಾಗಿ ಮಾಡ್ತಾರೆ ಅಂದ್ರೆ ಹುಡುಕಿ ಹೋಗಿ ಕುಡೀತೀನಿ.

ಟೀ ಎಸ್ಟೇಟ್ ನೋಡೋದು ಕೂಡ  ಖುಷೀನೆ.  ಡಾರ್ಜಿಲಿಂಗ್, ಮೂನಾರ್, ಕಳಸ - ಶೃಂಗೇರಿ ಹಾದಿಯಲ್ಲಿರುವ ಸಂಸೆ ಮುಂತಾದ ಕಡೆ ಚಹಾ ತೋಟ ನೋಡಿದ ನೆನಪು ಸದಾ ಖುಷಿ
ಕೊಟ್ಟಿದೆ.  ಡಾರ್ಜಿಲಿಂಗ್ ತೋಟದಲ್ಲಿ 5 ರೂಪಾಯಿಗೆ ಕೊಂಡ ಚಹಾ (ಸುಂದರ ಹುಡುಗಿ ಕೊಟ್ಟದ್ದು 😊)  ಕೂಡ ಆಹ್ಲಾದಕರವಾಗಿತ್ತು.

ಇವೆಲ್ಲದರ ಜೊತೆಗೆ ಚಹಾ ಅಂದರೆ ನನಗೆ ತಕ್ಷಣ ನೆನಪಾಗೋದು ನಮ್ಮ ಗುರುಗಳು ಹೇಳಿದ ಈ ಕಥೆ

ಚಹಾ ಸೇವನೆಯೂ ಒಂದು ಧ್ಯಾನ!

ಧ್ಯಾನದಲ್ಲಿ  ನಾವು ದೇವರಿಗೆ ಕೃತಜ್ಞರಾಗಿದ್ದೇವೆ ಎಂಬ ಭಾವ ಪ್ರಧಾನವಾದದ್ದು.   ದೇವರಿಗೆ ಕೃತಜ್ಞತೆ ಹೇಳುವುದು ಹೇಗೆ? ಯಾಂತ್ರಿಕವಾಗಿ ನಾಲಗೆಯಿಂದ ಉಚ್ಚರಿಸುವುದು ಕೃತಜ್ಞತೆಯೇ!  

ಒಂದು ಹೃದಯದಿಂದ ಇನ್ನೊಂದು ಹೃದಯಕ್ಕೆ ಸ್ಪಂದಿಸುವುದು ಕೃತಜ್ಞತೆ!  ಹೃದಯಪೂರ್ವಕವಾಗಿ ಒಬ್ಬರು ಇನ್ನೊಬ್ಬರಿಗೆ ತಮ್ಮ ಕೃತಜ್ಞತೆಯನ್ನು ಸಲ್ಲಿಸುವಾಗ ನಮಸ್ಕರಿಸುವುದಕ್ಕಾಗಿ ತಾವಾಗಿಯೇ ಕೈಗಳು ಜೋಡಿಸಿಕೊಂಡುಬಿಡುತ್ತವೆ... ತುಟಿಗಳು ಅದುರುತ್ತವೆ.  ಕಣ್ಣುಗಳಲ್ಲಿ ಮುತ್ತಿನ ಹನಿಗಳು ಜಿನುಗುತ್ತವೆ.

ಇದು ಜೆನ್ ವಾಙ್ಮಯದಲ್ಲಿರುವ ಒಂದು ಕಥೆ.  ಜಪಾನ್ ದೇಶದಲ್ಲಿ ನಡೆದ ಒಂದು ಸತ್ಯ ಕಥೆ ಇದು.

ಚಿಕ್ಕದೊಂದು ಹೋಟೆಲಿನ ಯಜಮಾನರು ಅವರು.  ಬೆಳಗ್ಗೆ ಎದ್ದರೆ ರಾತ್ರಿ ಹಾಸುಗೆ ಸೇರುವವರೆಗೂ ಅವರಿಗೆ ಹೋಟೆಲ್ ಕೆಲಸ ನಿರಂತರ ಇರುತ್ತದೆ.  ಹಾಗಿದ್ದರೂ ಅವರ ಮನಸ್ಸು ಮಾತ್ರ ಯಾವಾಗಲೂ ಅಧ್ಯಾತ್ಮದೊಂದಿಗೆ ಬೆರೆತುಹೋಗಿತ್ತು.  ಒಬ್ಬನೇ ಒಬ್ಬ ಜೆನ್ ಮತ ಸಂನ್ಯಾಸಿಯನ್ನಾದರೂ ದರ್ಶಿಸಬೇಕು ಎನ್ನುವುದು ಆ ಹೋಟೆಲ್ ಯಜಮಾನರ ತೀರದ ಆಸೆ.  ಆದರೆ, ಅಂಥ ಸಂನ್ಯಾಸಿಯನ್ನು ಹುಡುಕಿಕೊಂಡು ಹೋಗಲು ಅವರ ಕೆಲಸದ ಹುಳು ಆಸ್ಪದಕೊಡಲಿಲ್ಲ!  ಹೋಟೆಲ್ ಯಜಮಾನರ ಆಸೆ ಆಕಾಂಕ್ಷೆ ಅಲ್ಲಿನ ಕೆಲಸಗಾರರಿಗೆ ಮಾತ್ರವಲ್ಲ, ವಾಡಿಕೆ ಗಿರಾಕಿಗಳಿಗೂ ಕೂಡಾ ಗೊತ್ತಿತ್ತು.

ಜೆನ್ ಸಂನ್ಯಾಸಿಗಳು ಇತರ ಮತ ಸಂನ್ಯಾಸಿಗಳ ಹಾಗೆ ಕಾವಿ ಉಡುಪನ್ನೋ ಅಥವಾ ಮಠದ ಸ್ವಾಮಿಗಳಂತೆ ಒಂದು ಪ್ರತ್ಯೇಕವಾದ ಉಡುಪನ್ನೋ ಉಪಯೋಗಿಸಲಾರರು!  ಒಬ್ಬ ಸಾಮಾನ್ಯ ಜಪಾನೀಯನಂತೆ ಜೆನ್ ಮತ ಸಂನ್ಯಾಸಿಗಳು ಉಡುಪು ಧರಿಸುತ್ತಾರೆ.  ಆದ್ದರಿಂದ ಜೆನ್ ಮತ ಸಂನ್ಯಾಸಿಗಳು ಯಾರು, ಸಾಮಾನ್ಯ ಜನ ಯಾರು ಎಂದು ಪ್ರತ್ಯೇಕಿಸಿ ನೋಡುವುದೇ ಕಷ್ಟ!

ಒಂದು ದಿವಸ ಎಂದಿನಂತೆ ಈ ಹೋಟೆಲ್ ಯಜಮಾನರು ಉಸಿರೂ ಬಿಡಲಾಗದ ಮಟ್ಟಿಗೆ ಬ್ಯುಸಿ!  ಹೀಗಿದ್ದರೂ ನಡುನಡುವೆ ಕೆಲ ನಿಮಿಷಗಳಿಗೆ ಒಮ್ಮೆ ಅವರು ಹೋಟೆಲ್ಲಿನಲ್ಲಿ ಯಾರು ತಿನ್ನುತ್ತಿದ್ದಾರೆ, ಏನು ತಿನ್ನುತ್ತಿದ್ದಾರೆ ಎಂದು ಗಮನಿಸುವುದು ಅವರ ಅಭ್ಯಾಸ.  ಈ ದಿನವೂ ಅದೇ ಅಭ್ಯಾಸಬಲದಿಂದ ಯಜಮಾನರು ತಿಂಡಿ ತೀರ್ಥ ಸ್ವೀಕರಿಸುತ್ತಿದ್ದವರತ್ತ ಒಂದು ಕಣ್ಣೋಟವನ್ನು ಹಾಯಿಸುತ್ತಲೇ ಇದ್ದರು.  ಅಲ್ಲೊಂದು ಕಡೆ ಇಬ್ಬರು ಟೀ ಕುಡಿಯುತ್ತಾ ಕುಳಿತಿದ್ದರು.  ಹೋಟೆಲ್ ಯಜಮಾನರಿಗೆ ಸಂತೋಷೋತ್ಸಾಹ ತಡೆಯಲಾಗಲಿಲ್ಲ.  ನಾನು ಇಷ್ಟು ವರ್ಷ ನೋಡಲು ಕಾದುಕೊಂಡಿದ್ದ ಜೆನ್ ಸಂನ್ಯಾಸಿಗಳು ಕೊನೆಗೆ ನನ್ನ ಹೋಟೆಲ್ಲಿಗೇ ಬಂದುಬಿಟ್ಟಿದ್ದಾರಲ್ಲ..! ಎಂದು ಉತ್ಸಾಹ ಸಂತೋಷಗಳಿಂದ ಅತ್ತ ಓಡಿದರು.  ಅವರ ಶಿಷ್ಯತ್ವ ಬೇಡಿದರು. ಟೀ ಆಸ್ವಾದಿಸುತ್ತಿದ್ದ ಆ ಇಬ್ಬರೂ ಜೆನ್ ಸಂನ್ಯಾಸಿಗಳೇ ಆಗಿದ್ದುದರಿಂದ, ಅವರು ಹೋಟೆಲ್ ಯಜಮಾನರ ಉತ್ಸಾಹವನ್ನು ನೋಡಿ ಅವರನ್ನು ತಮ್ಮ ಶಿಷ್ಯರನ್ನಾಗಿ ಸ್ವೀಕರಿಸಲು ಸಮ್ಮತಿಸಿದರು.  ತಮ್ಮ ಮಗನಿಗೆ ಹೋಟೆಲ್ ಆಡಳಿತವನ್ನು ಒಪ್ಪಿಸಿ ಜೆನ್ ಸಂನ್ಯಾಸಿಗಳ ಹಿಂದೆ ಯಜಮಾನರು ಹೊರಟೇಬಿಟ್ಟರು.  ಆಗ ಅಲ್ಲಿದ್ದವರೆಲ್ಲಾ ಇವರನ್ನು ಕೇಳಿದರು: 'ಅವರಿಬ್ಬರೂ ಜೆನ್ ಸಂನ್ಯಾಸಿಗಳೆಂದು ನೀವು ಹೇಗೆ ಕಂಡುಹಿಡಿದಿರಿ?'

ಸಂನ್ಯಾಸಿಗಳ ಹಿಂದೆಯೇ ಹೆಜ್ಜೆಹಾಕಿದ ಯಜಮಾನರು ಹೇಳಿದರು:

'ಇವರಿಬ್ಬರೂ ಟೀ ಆಸ್ವಾದಿಸುವುದನ್ನು ನೋಡಿಯೇ ಗುರುತು ಹಿಡಿದುಬಿಟ್ಟೆ.  ಮರ್ಯಾದೆಯಿಂದ ಎರಡೂ ಕೈಗಳಿಂದ ಟೀ ಕಪ್ಪನ್ನು ಹಿಡಿಯುವುದರಿಂದ ಹಿಡಿದು ಅದನ್ನು ಧನ್ಯತಾಭಾವದಿಂದ ಪ್ರೀತಿಯಿಂದ ಸ್ವೀಕರಿಸುವವರೆಗೂ ಅವರು ತಮ್ಮ ಕರುಣಾಭಾವವನ್ನು ಪ್ರತಿಬಿಂಬಿಸುತ್ತಿದ್ದರು.'  

ಮುಂದೆ ಈ ಹೋಟೆಲ್ ಯಜಮಾನರು ಜೆನ್ ಸಂನ್ಯಾಸಿಯಾಗಿ ‘ಟೀ ಮೆಡಿಟೇಶನ್’ ಎಂಬ ಪದ್ಧತಿಯನ್ನು ಸಮಾಜಕ್ಕೆ ಕಾಣಿಕೆಯಾಗಿ ನೀಡಿದರು.   ಜಪಾನಿಯರ ಬದುಕಿನಲ್ಲಿ ಕಾಣುವ ಕೃತಜ್ಞತಾ ಭಾವವೆಂಬುದು ಇಂಥಹ ಬದುಕಿನ ಮೌಲ್ಯಗಳಲ್ಲಿ ಅಡಗಿದೆ ಎಂಬುದು ಗಮನಿಸಬೇಕಾದ ಸಂಗತಿ.

ಅಂತಹ ಸುಂದರ ಮೌಲ್ಯಯುತ ಬದುಕು ನಮ್ಮೆಲ್ಲರದಾಗಿರಲಿ


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ