ಕೆ.ವೈ.ಜಯಂತಿ
ಕೆ.ವೈ.ಜಯಂತಿ
ಆಕಾಶವಾಣಿ ಮತ್ತು ಪ್ರೆಸ್ ಇನ್ಫರ್ಮೇಷನ್ ಬ್ಯೂರೋಗಳಲ್ಲಿ ಹಿರಿಯ ಅಧಿಕಾರಿಗಳಾಗಿದ್ದ ಕೆ.ವೈ.ಜಯಂತಿ ಅವರು ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರೀತಿಯುಳ್ಳವರಾಗಿ ಹಾಗೂ ಉತ್ತಮ ಬರಹಗಾರ್ತಿಯಾಗಿ ನಮ್ಮ ನಡುವೆ ಕಂಗೊಳಿಸುತ್ತಿರುವ ಸಹೃದಯಿ.
ಜಯಂತಿ ಅವರು 1963ರ ಮೇ 23ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ಕೈಪು ಯಜ್ಞೇಶ್ವರಶಾಸ್ತ್ರಿ ಅವರು ಯಜುರ್ವೇದ ಪಾರಂಗತರಾಗಿದ್ದು ಕಾಶಿವಿವಿಯಿಂದ ಶಾಸ್ತ್ರಿ ಬಿರುದಿಗೆ ಭಾಜನರಾಗಿದ್ದರು. ತಾಯಿ ವೆಂಕಟಲಕ್ಷ್ಮಮ್ಮ. ಪತಿ ಹೆಸರು ಎಸ್ ಆರ್ ವೆಂಕಟೇಶ ಪ್ರಸಾದ್.
ಜಯಂತಿ ಅವರು ಗಾಂಧಿಬಜಾರ್ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ಮಹಾರಾಷ್ಟ್ರ ಮಹಿಳಾ ವಿದ್ಯಾಲಯ( ಈಗ ವಾಸವಿ ವಿದ್ಯಾ ನಿಕೇತನ)ದಲ್ಲಿ ಪ್ರೌಢ ಶಿಕ್ಷಣ ನೆರವೇರಿತು. ಎನ್ ಎಂಕೆ ಆರ್ ವಿ ಕಾಲೇಜಿನಲ್ಲಿ ಪದವಿ ಪಡೆದು, 1986ರಲ್ಲಿ ಬೆಂಗಳೂರು ವಿವಿಯಲ್ಲಿ ಸಸ್ಯಶಾಸ್ತ್ರ ಸ್ನಾತಕೋತ್ತರ ಪದವಿ ಗಳಿಸಿದರು. ಇದಲ್ಲದೆ ಕನ್ನಡ ಕಾವ, ಜಾಣ, ರತ್ನ ಪರಿಷತ್ ನ ಪದವಿ, ಎನ್ ಟಿ ಶ್ರೀನಿವಾಸ ಅಯ್ಯಂಗಾರ್ ಅವರ ಬಳಿ ಸಂಸ್ಕೃತ ಪ್ರಥಮ, ಕಾವ, ಹಿಂದಿ ಪ್ರಭೋದ, ಪ್ರವೀಣ, ಪ್ರಾಜ್ಞ ( ಇದು ವೃತ್ತಿಸಂಬಂಧಿತ) ಪದವಿ ಪಡೆದರು. ರೇಖಿ ಮಾಸ್ಟರ್ಸ್ ಪದವಿಗೆ ಡಾ. ಮಧುಸೂದನ್ ಅವರು ಗುರು. ಬಾಲಕೃಷ್ಣ ಗುರೂಜಿ ಅವರಿಂದ ಸೆಲ್ಫ್ ಹಿಪ್ನಾಸಿಸ್, ಆಕ್ಯುಪ್ರಶರ್ ಕಲಿತರು. ಗಾಂಧಿಬಜಾರ್ ಕಲಾಮಂದಿರದಲ್ಲೂ ಒಂದೆರಡು ವರ್ಷ ಚಿತ್ರಕಲೆ ಕಲಿಕೆ ಮಾಡಿದರು. ನಿರ್ಮಲಾ ಆರ್ಟ್ ಅವರ ಬಳಿ ತೈಲ ಚಿತ್ರ ಹಾಗು ಫಾಬ್ರಿಕ್ ಪೈಂಟಿಂಗ್ ಕಲಿಕೆ ಹಾಗೂ ಸ್ಕ್ರೀನ್ ಪ್ರಿಂಟಿಂಗ್ ತರಬೇತಿ ಪಡೆದರು
ಜಯಂತಿ ಅವರು ಜಯನಗರ ನ್ಯಾಷನಲ್ ಕಾಲೆಜಿನಲ್ಲಿ ಸಸ್ಯಶಾಸ್ತ್ರ ಅಧ್ಯಾಪಕಿಯಾಗಿ (86-89), ದೊಡ್ಡಬಳ್ಳಾಪುರದ ಕೊಂಗಾಡಿಯಪ್ಪ ಕಾಲೇಜಿನಲ್ಲಿಜೀವಶಾಸ್ತ್ರ ಅಧ್ಯಾಪಕಿಯಾಗಿ (89-90) ಕಾರ್ಯನಿರ್ವಹಿಸಿದರು. ಬೆಂಗಳೂರಿನ ಸಂಯುಕ್ತ ಕರ್ನಾಟಕದಲ್ಲಿ ಉಪಸಂಪಾದಕಿ(90-92 ರವರೆಗೆ) ಜತೆಗೆ ವಿಜ್ಞಾನ ಅಂಕಣ ಬರೆಹಗಾರ್ತಿಯಾಗಿ ಕಾರ್ಯನಿರ್ವಹಿಸಿದರು. ಸಾಂಬಾರ ಮಂಡಳಿ, ಕೊಚ್ಚಿ- ಸ್ಪೈಸ್ ಇಂಡಿಯಾ, ಪತ್ರಿಕೆ ಸಂಪಾದಕಿಯಾಗಿ 1993 ಅಕ್ಟೋಬರ್ ವರೆಗೆ ಕಾರ್ಯನಿರ್ವಹಿಸಿದರು. ಕೇಂದ್ರ ವಾರ್ತಾ ಇಲಾಖೆಗೆ ಸೇರ್ಪಡೆಗೊಂಡು 1993 ಅಕ್ಟೋಬರ್ ನಿಂದ ವಿವಿಧ ಮಾಧ್ಯಮ ಘಟಕಗಳಲ್ಲಿನ 30 ವರ್ಷಗಳ ಕಾರ್ಯ ನಿರ್ವಹಣೆಯಲ್ಲಿ ಜಾಹಿರಾತು ವಿಭಾಗದಲ್ಲಿ ಕ್ಯಾಂಪೇನ್ ಅಧಿಕಾರಿ, ದೂರದರ್ಶನ, ಆಕಾಶವಾಣಿ, ಬೆಂಗಳೂರು- ಸುದ್ದಿಸಂಪಾದಕಿ, ಧಾರವಾಡ ಆಕಾಶವಾಣಿ - ಸುದ್ದಿವಿಭಾಗದ ಮುಖ್ಯಸ್ಥೆ, ಯೋಜನಾ ಪತ್ರಿಕೆ ಸಂಪಾದಕಿ, ಪಿಐಬಿಯಲ್ಲಿ ಉಪನಿರ್ದೇಶಕಿಯಾಗಿ ಸೇವೆ ಸಲ್ಲಿಸಿ 2023ರಲ್ಲಿ ನಿವೃತ್ತರಾದರು.
ಚಿತ್ರಕಲೆ, ರಂಗೋಲಿ, ಒಣಗಿದಹೂವು, ಎಲೆಗಳನ್ನು ಬಳಸಿ ಗ್ರೀಟಿಂಗ್ಸ್ ಮಾಡುವುದು, ಹೊಲಿಗೆ, ಗಿಡ ಬೆಳೆಸುವುದು, ಔಷಧೀಯ ಸಸ್ಯಗಳ ಕುರಿತು ಅಧ್ಯಯನ, ಆರೋಗ್ಯ ಪತ್ರಕರ್ತೆಯಾಗಿಯೂ ಅದರ ಬಗ್ಗೆ ಹೆಚ್ಚಿಗೆ ಅಧ್ಯಯನ, ಜ್ಯೋತಿಷ್ಯ, ಮೆಟಾಫಿಸಿಕ್ಸ್, ಇತ್ಯಾದಿಗಳ ಬಗ್ಗೆ ಓದು ಮುಂತಾದವು ಜಯಂತಿ ಅವರ ಹವ್ಯಾಸಗಳು. 1984ರಿಂದ ಮೂರು ವರ್ಷ ಚಿಪ್ಪಣಬೆ ಕೃಷಿ ಮಾಡಿ ನಾಲ್ಕು ಹೋಟೆಲ್ ಗಳಿಗೆ ಪೂರೈಕೆ ಮಾಡಿದರು.
ಜಯಂತಿ ಅವರು ಶೈಕ್ಷಣಿಕವಾಗಿ ಉಪಯುಕ್ತವಾಗುವ ಎರಡು ಕೃತಿಗಳ ಅನುವಾದ (ಇಂಗ್ಲಿಷ್ ನಿಂದ ಕನ್ನಡಕ್ಕೆ) ಮಾಡಿದ್ದಾರೆ. ಎಚ್ ಐವಿ/ ಏಡ್ಸ್ - ಇಂಡಿಯಾ ಕೆನಡಾ ಫೆಲೋಷಿಪ್ ಗಾಗಿ ಬರೆದ ಒಂದು ಕೃತಿಯಾಗಿದ್ದು ಸಾಹಿತ್ಯ ಪರಿಷತ್ -ಕುವೆಂಪು ಶತಮಾನೋತ್ಸವ ಮಾಲಿಕೆಯಲ್ಲಿ ಬಿಡುಗಡೆಯಾಗಿದೆ. ಸುಮಾರು 300 ವಿಜ್ಞಾನ ಲೇಖನಗಳನ್ನು ಆಕಾಶವಾಣಿ ವಿಜ್ಞಾನದ ಮುನ್ನಡೆ ಕಾರ್ಯಕ್ರಮಗಳಿಗಾಗಿ ಬರೆದಿದ್ದಾರೆ. ಸುಧಾ- ಯುಗಾದಿ ವಿಶೇಷಾಂಕ-2026, ಕರ್ನಾಟಕ ಸಾಹಿತ್ಯ ಅಕಾಡೆಮಿಯ 2021ರ ಆಯ್ದ ಕವನ ಸಂಕಲನಕ್ಕೆ ಇವರ ಕವಿತೆ ಅಯ್ಕೆಗೊಂಡಿವೆ. ಅನ್ವೇಷಣೆ-ಸಾಹಿತ್ಯ ಪತ್ರಿಕೆ, ಸಂಚಯ, ಮುಂಗಾರು, ಕಸ್ತೂರಿ, ಹೊಸತು, ವಿಶ್ವವಾಣಿ ಮೊದಲಾದ ಪತ್ರಿಕೆಗಳಲ್ಲಿ ಇವರ ಕವಿತೆಗಳು ಪ್ರಕಟಗೊಂಡಿವೆ. ಕನ್ನಡ ಪ್ರಭ, ವಿಜಯಕರ್ನಾಟಕ, ಉದಯವಾಣಿ, ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ಬಾಲವಿಜ್ಞಾನ, ಜನಪದ, ಜನಪ್ರಿಯ ವಿಜ್ಞಾನ, ತರಂಗ,ಕರ್ಮವೀರ ಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ಆಕಾಶವಾಣಿ- ಅವಲೋಕನ- ಕಾರ್ಯ ಕ್ರಮದಲ್ಲಿ ಕರೆಂಟ್ ಅಫೇರ್ಸ್- ಸುದ್ದಿ ಕುರಿತ ಭಾಷಣಗಳು, ಪ್ರಚಲಿತ ವಿದ್ಯಮಾನ, ಆಕಾಶವಾಣಿ ಗೆ 25 ನಾಟಕಗಳು, ರೂಪಕಗಳು, ದೂರದರ್ಶನ, ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರ್ವಹಣೆ, ಸಂವಾದ, ಚರ್ಚೆಯಲ್ಲಿ ಭಾಗಿಯಾಗಿದ್ದಾರೆ. ಪತ್ರಿಕೋದ್ಯಮ ವಿಭಾಗ-ಬೆಂಗಳೂರು, ಧಾರವಾಡ, ಹಂಪಿ ವಿವಿಗೆ ಮಾಧ್ಯಮ ಸಂಪನ್ಮೂಲ ವ್ಯಕ್ತಿಯಾಗಿ ಭಾಗಿಯಾಗಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ನಡೆಸಿದ ಯುವ ಕಾವ್ಯ ಗೋಷ್ಠಿ ಗೆ ಆಯ್ಕೆಯಾಗಿದ್ದರು (1989) ಇಂದಿರಾಗಾಂಧಿ ಮುಕ್ತ ವಿವಿಯ ರೇಡಿಯೋಗೆ ಸರಣಿ ಸಂವಾದ ಕಾರ್ಯಕ್ರಮ ನಡೆಸಕೊಟ್ಟಿದ್ದರು.
ಜಯಂತಿ ಕೆ ವೈ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.
Happy birthday Jayanthi Ky 🌷🙏🌷

ಕಾಮೆಂಟ್‌ಗಳು