ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬಂಜಗೆರೆ ಜಯಪ್ರಕಾಶ್

 ಬಂಜಗೆರೆ ಜಯಪ್ರಕಾಶ್ 


ಡಾ. ಬಂಜಗೆರೆ ಜಯಪ್ರಕಾಶ್ ಅವರು ಕವಿಯಾಗಿ, ಸಂಸ್ಕೃತಿ ಚಿಂತಕರಾಗಿ, ವಿಮರ್ಶಕರಾಗಿ, ಅಂಕಣಕಾರರಾಗಿ, ಅನುವಾದಕರಾಗಿ ಮತ್ತು ಜನಪರ ಹೋರಾಟಗಾರರಾಗಿ ಹೆಸರಾಗಿದ್ದಾರೆ.

ಜಯಪ್ರಕಾಶ್ ಅವರು 1965ರ ಜೂನ್ 17ರಂದು ಜನಿಸಿದರು. ಬುಡಕಟ್ಟು ಜಾತಿಯ ರೈತಾಪಿ ಕುಟುಂಬದ ಹಿನ್ನೆಲೆ ಹೊಂದಿರುವ ಇವರು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಬಂಜಗೆರೆಯವರು.   ಚಳ್ಳಕೆರೆ ಮತ್ತು ಚಿತ್ರದುರ್ಗಗಳಲ್ಲಿ ಇವರ ಪಿಯುಸಿವರೆಗಿನ ವಿದ್ಯಾಭ್ಯಾಸ ನಡೆಯಿತು. 1985ರಲ್ಲಿ ಮೈಸೂರು ಮಹಾರಾಜ ಕಾಲೇಜಿನಿಂದ ಪತ್ರಿಕೋದ್ಯಮ ಪದವಿ ಪಡೆದು, 1987ರಲ್ಲಿ ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎಸ್.ಡಬ್ಲ್ಯು ಪದವಿ ಗಳಿಸಿದರು.  ಹಂಪಿಯ ಕನ್ನಡ ವಿಶ್ವವಿದ್ಯಾಲಯದಿಂದ 1999ರಲ್ಲಿ ‘ಕನ್ನಡ ರಾಷ್ಟ್ರೀಯತೆ - ಸಾಮಾಜಿಕ ಹಾಗೂ ಸಾಂಸ್ಕೃತಿಕ ಬೇರುಗಳ ರಾಜಕೀಯಾರ್ಥಿಕ ಅಧ್ಯಯನ’ ಮಹಾಪ್ರಬಂಧಕ್ಕೆ
ಡಿ.ಲಿಟ್. ಗೌರವ ಗಳಿಸಿದರು. ಪ್ರಸ್ತುತ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಹಾರೋಹಳ್ಳಿಯಲ್ಲಿ ನೆಲೆಸಿದ್ದಾರೆ. 

ಡಾ. ಬಂಜಗೆರೆ ಜಯಪ್ರಕಾಶ್ ಅವರು ಹೊನ್ನಾರು ಸಾಹಿತ್ಯ ಮಾಸ ಪತ್ರಿಕೆಯ ಗೌರವ ಸಂಪಾದಕರಾಗಿದ್ದರು. ಅವರು ಹಲವಾರು ಪತ್ರಿಕೆಗಳಲ್ಲಿ ಅಂಕಣಗಳನ್ನು ಮೂಡಿಸಿದ್ದಾರೆ. ಇವರು ನಿರಂತರವಾಗಿ ಜನಪರ ಚಳವಳಿಗಳಲ್ಲಿ ಸಕ್ರಿಯ ಪಾತ್ರ ವಹಿಸುತ್ತ ಬಂದಿದ್ದಾರೆ. ಕನ್ನಡ ವಿಶ್ವವಿದ್ಯಾಲಯವು ಆರಂಭಿಸಿರುವ ದೇಸಿ ಸಂಸ್ಕೃತಿ ಅಧ್ಯಯನ ಮಂಡಲಿ ಸದಸ್ಯರಾಗಿ, 2005ರಿಂದ 2008ರವರೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ. ಕರ್ನಾಟಕ ಸರ್ಕಾರದ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಆದಿಮ ಬುಡಕಟ್ಟು ಸಮುದಾಯಗಳ ಅಧ್ಯಯನ ಯೋಜನೆ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ಬೆಂಗಳೂರು ಸಮುದಾಯದ ಅಧ್ಯಕ್ಷರಾಗಿಯೂ ಅವರ ಸೇವೆ ಸಂದಿದೆ.

ಬಂಜಗೆರೆ ಜಯಪ್ರಕಾಶರ ಕೃತಿಗಳು ಇಂತಿವೆ:

ಕವನ ಸಂಕಲನಗಳು: ಪದಾರ್ಪಣ (1983), ಮಹೂವಾ(1992), ನಾಳೆಗಾದರೂ ಸಿಗದೆ ನಿನ್ನ ತಾವಿನ ಗುರುತು (1998), ಕಳೆದ ಕಾಲದ ಪ್ರೇಯಸಿಯರಿಗೆ (ಸಂಯುಕ್ತ ಸಂಕಲನ-2001) ;

ಲೇಖನ ಸಂಗ್ರಹ:  ಬಾಗ್ ಬಹದುರನ  ಸಾವು (2003), ಉಲಿಯ ಉಯ್ಯಲೆ (2005), ನಿಲ-ವರ್ತಮಾನ ಮುಖಾಬಿಲೆ (ಲೇಖನಗಳು-2009), ಪಿಳ್ಳಂಗೋವಿ (ಲೇಖನಗಳು ಮತ್ತು ಮುನ್ನುಡಿಗಳು)-2009;

ಸಂಸ್ಕೃತಿ ಅಧ್ಯಯನ ಕೃತಿಗಳು:  ಇದೇ ರಾಮಾಯಣ (ವಾಲ್ಮೀಕಿ ರಾಮಾಯಣದ ಸಾಂಸ್ಕೃತಿಕ ವಿಶ್ಲೇಷಣೆ-1994, ಕನ್ನಡ ರಾಷ್ಟ್ರೀಯತೆ (ಸಾಮಾಜಿಕ ಹಾಗೂ ಸಾಂಸ್ಕೃತಿಕ ಬೇರುಗಳ ರಾಜಕೀಯಾರ್ಥಿಕ ಅಧ್ಯಯನ) ಡಿ.ಲಿಟ್ ಮಹಾಪ್ರಬಂಧ - 2000, ಕರ್ನಾಟಕತ್ವ ಸಮಾಜೋ ಆರ್ಥಿಕ ತಳಹದಿ-2006, ಆನು ದೇವಾ (ಹೊರಗಣವನು ಬಸವಣ್ಣ ಜಾತಿ ಮೂಲದ ವಿಶ್ಲೇಷಣೆ), ಬಂಡಾಯ ಸಾಹಿತ್ಯ: ಸಂದರ್ಭ ಮೀಮಾಂಸೆ, 
ವಸಂತ ಮೇಘ ಘರ್ಜನೆ (ವಿವಿಧ ಭಾರತೀಯ ಕ್ರಾಂತಿಕಾರಿ ಕವಿತೆಗಳು) - 1990, ಲಾಲ್ ಬನೋ ಗುಲಾಮಿ ಛೋಡೋ ಬೋಲೋ ವಂದೇ ಮಾತರಂ  (ಎನ್ಕೆಯವರ ತೆಲುಗು ಖಂಡಕಾವ್ಯ) - 1991, ಮತ್ತೊಂದು ಪ್ರಸ್ಥಾನ (ಶ್ರೀ ಶ್ರೀ ತೆಲುಗು ಕವಿತೆಗಳು) - 1991,  ಸಮುದ್ರ ಮತ್ತು ಇತರ ಕವಿತೆಗಳು (ವರವರರಾವ್ ಆಯ್ದ ತೆಲುಗು ಕವಿತೆಗಳು) - 1995,  ಅಗೆತವಿಲ್ಲದ ತೋಟಗಾರಿಕೆ (ಸಹಜ ತೋಟಗಾರಿಕೆಯಲ್ಲೊಂದು ಪ್ರಯೋಗ-ಎ ಗೆಸ್ಟ್ ಇಂಗ್ಲಿಷ್ ಕೃತಿ) - 1996,  ಪ್ರವಾದಿ-(ಖಲೀಲ್ ಗಿಬ್ರಾನ್ ದಿ ಪ್ರೊಫೆಟ್ ಇಂಗ್ಲಿಷ್ ಕೃತಿ) -
 - 1999, ತಲೆಮಾರು (ಅಲೆಕ್ಸ್ ಹೆಲಿ ಅವರ  ದಿ ರೂಟ್ಸ್ ಇಂಗ್ಲಿಷ್ ಕೃತಿ)- 2005, ಜಾತಿ-ರಾಷ್ಟ್ರದೊಳಗೊಂದು ರಾಷ್ಟ್ರ (ವಿ.ಟಿ.ರಾಜಶೇಖರ್ ಇಂಗ್ಲಿಷ್ ಕೃತಿ), ದೇಗುಲದಲ್ಲಿ ದೆವ್ವ (ಗೂಗಿ ವಾ ಥಿಯಾಂಗೊ ಅವರ ಡೆವಿಲ್ ಆನ್ ದ ಕ್ರಾಸ್ ಇಂಗ್ಲಿಷ್ ಕಾದಂಬರಿ)-2007,  ಪಾಪ ನಿವೇದನೆ (ಜಾನ್ ಪೆರ್ಕಿನ್ಸ್ ಕನ್ಫೆಶನ್ಸ್ ಆಫ್ ಆ್ಯನ್ ಎಕನಾಮಿಕ್ ಹಿಟ್ಮನ್ ಇಂಗ್ಲಿಷ್ ಕೃತಿ - 2008,  ಮಧ್ಯಯುಗೀನ ಭಾರತ- ಅಂತ್ಯಜನ ತತ್ವ ಚಿಂತನೆ-( ಶಂಕರ ಮೊಕಾಶಿ ಪುಣೇಕರ್ ಅವರ Harijan contribution to medeaval india thought-2011), ಬೇಗಂಪುರ (ಗೇಲ್ ಓಮ್ವೆಟ್ ಅವರ ಕೃತಿಯ ಅನುವಾದ), ಡೆವಿಲ್ ಆನ್ ದ ಕ್ರಾಸ್ (ಗೂಗಿ ವಾ ಥಿಯಾಂಗೋ ಅವರ ಕೃತಿ ಅನುವಾದ), ಕೆ. ಬಾಲಗೋಪಾಲ್ ಅವರ ಪ್ರಬಂಧಗಳ ಅನುವಾದ, ಭೂಮಿ (ಎಮಿಲೆ ಝೋಲಾ ಅವರ ದ ಅರ್ಥ್ ಕಾದಂಬರಿ ಅನುವಾದ).

ಬಂಜಗೆರೆ ಜಯಪ್ರಕಾಶರ  ಇಂಗ್ಲಿಷ್ ಅನುವಾದಿತ ಕೃತಿ ‘ಪಾಪ ನಿವೇದನೆ’ಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2008ರ ಪುಸ್ತಕ ಪ್ರಶಸ್ತಿ ಸಂದಿದೆ. ಅವರಿಗೆ 2022ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ‘ಸಾಹಿತ್ಯಶ್ರೀ’ ಪ್ರಶಸ್ತಿ ಸಂದಿದೆ.

ಡಾ. ಬಂಜಗೆರೆ ಜಯಪ್ರಕಾಶ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

Happy birthday Banjagere Jayaprakash 🌷🙏🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!