ಹನುಮಾಕ್ಷಿ ಗೋಗಿ
ಹನುಮಾಕ್ಷಿ ಗೋಗಿ
ಹನುಮಾಕ್ಷಿ ಗೋಗಿ ಅವರು ಇತಿಹಾಸ ಸಂಶೋಧಕಿಯಾಗಿ, ಬರಹಗಾರ್ತಿಯಾಗಿ, ಮತ್ತು ಪ್ರಕಾಶಕಿಯಾಗಿ ಹೆಸರಾಗಿದ್ದಾರೆ.
ಹನುಮಾಕ್ಷಿ ಅವರು 1955ರ ಜೂನ್ 7ರಂದು ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ಬೈಚಬಾಳದಲ್ಲಿ ಜನಿಸಿದರು. ಕಲಬುರ್ಗಿ, ಬಾಗಲಕೋಟೆ, ಬೆಳಗಾವಿ ಮತ್ತು ಧಾರವಾಡ ಮುಂತಾದೆಡೆ ಇವರ ವ್ಯಾಸಂಗ ನಡೆಯಿತು. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಮೂರು ಚಿನ್ನದ ಪದಕಗಳೊಂದಿಗೆ ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು, ಅದೇ ವಿಶ್ವವಿದ್ಯಾಲಯದಿಂದ ಶಾಸನ ಶಾಸ್ತ್ರದಲ್ಲಿಯೂ ಪ್ರಥಮ ರ್‍ಯಾಂಕ್ ಸಾಧನೆ ಮಾಡಿದರು.
ಹನುಮಾಕ್ಷಿ ಗೋಗಿ ಅವರು
ರಾಜ್ಯ ಸರ್ಕಾರದ ಸಹಕಾರ ಇಲಾಖೆಯಲ್ಲಿ ಅಧಿಕಾರಿಗಳಾಗಿ ಸೇವೆ ಸಲ್ಲಿಸಿ 2015ರಲ್ಲಿ ನಿವೃತ್ತರಾಗಿದ್ದಾರೆ.
ಪ್ರಸ್ತುತ ಹುಬ್ಬಳ್ಳಿಯಲ್ಲಿ ನೆಲೆಸಿರುವ ಹನುಮಾಕ್ಷಿ ಗೋಗಿ ಅವರು ಸಂಶೋಧಕಿಯಾಗಿ ಮತ್ತು ಬರಹಗಾರ್ತಿಯಾಗಿ ಅಪಾರ ಸಾಧನೆ ಮಾಡುತ್ತಿರುವುದರ ಜೊತೆಗೆ ಮಹಿಳಾ ಸಾಹಿತ್ಯಿಕಾ ಪ್ರಕಾಶನ ಸಂಸ್ಥೆಯನ್ನು ನಡೆಸುತ್ತಿದ್ದಾರೆ.
ಹನುಮಾಕ್ಷಿ ಗೋಗಿ ಅವರ ಇತಿಹಾಸ ಸಂಶೋಧನೆ ಮತ್ತು ಬರಹ ಕಾಯಕದಲ್ಲಿ ಮೂಡಿಬಂದಿರುವ ಕೃತಿಗಳಲ್ಲಿ ವ್ಯಾಸಂಗ, ಮುದ್ನೂರು ಮತ್ತು ಯಡ್ರಾಮಿ ಶಾಸನಗಳು (ಡಾ. ಬಿ. ಆರ್. ಹಿರೇಮಠ ಜೊತೆಯಲ್ಲಿ), ಸುರಪುರ ತಾಲೂಕಿನ ಶಾಸನಗಳು, ಕಲಬುರ್ಗಿ ಜಿಲ್ಲೆಯ ಶಾಸನಗಳು, ಕರ್ನಾಟಕ ಭಾರತಿ ಸೂಚಿ, ಅನುಶಾಸನ, ಉಪ್ಪಾರ ಹಣತೆ, ಬೀದರ ಜಿಲ್ಲೆಯ ಶಾಸನಗಳು, ಕಾಳಾಮುಖ ಮತ್ತು ಪಾಶುಪತ ದೇವಾಲಯಗಳು (ಅನುವಾದ ಕೃತಿ), ಲಕ್ಕುಂಡಿ ಶಾಸನಗಳು, ಡಂಬಳ: ಸಾಂಸ್ಕೃತಿಕ ಅಧ್ಯಯನ (ಡಾ. ಪಿ. ಕೆ. ರಾಥೋಡ ಜೊತೆಯಲ್ಲಿ), ಜಗದ್ಗುರು ತೋಂಟದಾರ್ಯ ಮಠದ ದಾಖಲು ಸಾಹಿತ್ಯ (ಡಾ. ಪಿ. ಕೆ. ರಾಥೋಡ ಜೊತೆಯಲ್ಲಿ), ನವಿಲುಗುಂದ ಸಿರಿ (ಶತಮಾನೋತ್ಸವ ಸ್ಮರಣ ಸಂಚಿಕೆ),
ಅಣ್ಣಯ್ಯ ತಮ್ಮಯ್ಯಗಳ ಪುರಾಣ (ಡಾ. ಪಿ. ಕೆ. ರಾಥೋಡ ಜೊತೆಯಲ್ಲಿ), ಚೈತನ್ಯಶೀಲೆ (ಸರೋಜಿನಿ ಚವಲಾರ ಅವರ ಸಂಭಾವನಾ ಗ್ರಂಥ), ಹುಬ್ಬಳ್ಳಿ ತಾಲೂಕಿನ ಶಾಸನಗಳು, ಡಾ. ಆರ್.ಎನ್.ಗುರವ ಸಂಪ್ರಬಂಧಗಳು, ರಾಜಮನೆತನದ ಚರಿತ್ರೆಗಳು, ಲಕ್ಷ್ಮೇಶ್ವರದ ಶಾಸನಗಳು, ದಂಡಿನ ದಾರಿ, ಜಿನಸಮಯ, ಯಾದಗಿರಿ ಜಿಲ್ಲೆಯ ಶಾಸನಗಳು ಮುಂತಾದವು ಸೇರಿವೆ.
ಹನುಮಾಕ್ಷಿ ಗೋಗಿ ಅವರ ಸಾಧನೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಗೌರವ ಪ್ರಶಸ್ತಿ, ಕರ್ನಾಟಕ ಇತಿಹಾಸ ಅಕಾಡೆಮಿಯ ಡಾ. ಬಾ. ರಾ. ಗೋಪಾಲ ಪ್ರಶಸ್ತಿ, ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಬಹುಮಾನ, 'ಕಲ್ಬುರ್ಗಿ ಜಿಲ್ಲೆಯ ಶಾಸನಗಳು' ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ, ನರಗುಂದದಲ್ಲಿ ನಡೆದ ೪ನೆಯ ಧಾರವಾಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಆಡಳಿತಾತ್ಮಕ ಸೇವೆಗೆ ಸನ್ಮಾನ, ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ದತ್ತಿನಿಧಿ ಪ್ರಶಸ್ತಿ, ಡಾ. ಜ. ಚ. ನಿ. ಪ್ರಶಸ್ತಿ, ನರೇಗಲ್ಲದ ಬಾಲಕೃಷ್ಣ ಪ್ರಶಸ್ತಿ, ಬೆಂಗಳೂರಿನ ಲೇಪಾಕ್ಷಸ್ವಾಮಿ ಪ್ರಶಸ್ತಿ, ಕಲಬುರ್ಗಿಯ ಡಾ. ಶೈಲಜ ಉಡಚಣ ಪ್ರಶಸ್ತಿ, ಬೆಂಗಳೂರಿನ ರುಕ್ಮಿಣಿಬಾಯಿ ಸ್ಮಾರಕ ಪ್ರಶಸ್ತಿ, ಅಡ್ನೂರಿನ ಡಾ. ದ. ರಾ. ಬೇಂದ್ರೆ ಪ್ರಶಸ್ತಿ, ಉತ್ತರ ಕರ್ನಾಟಕ ಲೇಖಕಿಯರ ಸಂಘದಿಂದ ಇನ್ಫೋಸಿಸ್ ಫೌಂಡೇಶನ್ ಪ್ರಶಸ್ತಿ, ಚಂದ್ರಗಿರಿ ಮಹೋತ್ಸವ ಸಮಿತಿ ವತಿಯಿಂದ ಶಾಸನ ಸಾಹಿತ್ಯ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದಿಂದ ಜಯಮ್ಮ ಕರಿಯಣ್ಣ ದತ್ತಿ ಬಹುಮಾನ, ಕರ್ನಾಟಕ ಲೇಖಕಿಯರ ಸಂಘದಿಂದ ಡಾ. ಕಮಲ ಹಂಪನಾ ಪ್ರಶಸ್ತಿ, ಅಖಿಲ ಭಾರತ ಕವಿಯಿತ್ರಿಯರ ಸಮ್ಮೇಳನದಲ್ಲಿ ಲೋಪಾಮುದ್ರಾ ಪ್ರಶಸ್ತಿ, ಜಗದ್ಗುರು ತೋಂಟದಾರ್ಯ ಮಠದಿಂದ ಸನ್ಮಾನ, ಕಸಾಪದಿಂದ ಟಿ.ಗಿರಿಜಮ್ಮ ಸಾಹಿತ್ಯ ಪ್ರಶಸ್ತಿ, ಮಲ್ಲೆಪುರಂ ಪ್ರತಿಷ್ಠಾನ ಸಾಹಿತ್ಯ ಪ್ರಶಸ್ತಿ, ಬೇಲೂರು ಬಸವಕಲ್ಯಾಣದ ಉರಿಲಿಂಗ ಪೆದ್ದಿ ಸಾಹಿತ್ಯ ಪ್ರಶಸ್ತಿ, ಮನಸೂರ ಮಠದಿಂದ 'ಹುಬ್ಬಳ್ಳಿ ತಾಲೂಕಿನ ಶಾಸನಗಳು' ಕೃತಿಗೆ ಕನಕ ಪ್ರಶಸ್ತಿ, ಧಾರವಾಡ ಜಿಲ್ಲಾ ಆಡಳಿತದಿಂದ ದೇವರಾಜ ಅರಸು ಪ್ರಶಸ್ತಿ, ಸುರ್ವೆ ಪ್ರತಿಷ್ಠಾನದಿಂದ ಕರ್ನಾಟಕ ರತ್ನ ಪ್ರಶಸ್ತಿ, ಕರ್ನಾಟಕ ಕಲ್ಪವಲ್ಲಿ ಪ್ರಶಸ್ತಿ (ಎನ್.ಎಂ.ಕೆಆರ್.ವಿ ಕಾಲೇಜು), ಗಣಕರಂಗ ಧಾರವಾಡದಿಂದ ಸಾಹಿತ್ಯ ಪ್ರಶಸ್ತಿ ಚಿಕ್ಕಮಲ್ಲಿಗವಾಡದ ವಾಲ್ಮೀಕಿ ಸಂಘದಿಂದ ವಾಲ್ಮೀಕಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ.
ಸರಳ ಸಹೃದಯಿ ಸಾಧಕಿ ಹನುಮಾಕ್ಷಿ ಗೋಗಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.
Happy birthday to Historian, writer and publisher Hanumakshi Gogi 🌷🙏🌷

ಕಾಮೆಂಟ್‌ಗಳು