ಶೇಷಗಿರಿ ಆಚಾರ್
ಶೇಷಗಿರಿ ಆಚಾರ್
ಸಂಗೀತ ಲೋಕದಲ್ಲಿ ಬಳ್ಳಾರಿ ಸಹೋದರರೆಂದು ಪ್ರಖ್ಯಾತರಾದವರು ಶೇಷಗಿರಿ ಆಚಾರ್ ಮತ್ತು ವೆಂಕಟೇಶ ಆಚಾರ್. ಇಂದು ಈ ಸಹೋದರರಲ್ಲಿ ಕಿರಿಯರಾಗಿದ್ದ ಸಂಗೀತ ವಿದ್ವಾನ್ ಮತ್ತು ವಾಗ್ಗೇಯಕಾರರಾದ ಶೇಷಗಿರಿ ಆಚಾರ್ ಅವರ ಜನ್ಮದಿನ.
ಶೇಷಗಿರಿ ಆಚಾರ್ ಅವರು 1935 ರ ಜೂನ್ 24 ರಂದು ಬಳ್ಳಾರಿಯಲ್ಲಿ ಕಮಲಮ್ಮ ಮತ್ತು ರಾಘವೇಂದ್ರಚಾರ್ ದಂಪತಿಗಳಿಗೆ ಜನಿಸಿದರು. ಹಿರಿಯರಾದ ವೆಂಕಟೇಶಾಚಾರ್ 2033ರಲ್ಲಿ ಜನಿಸಿದರು.
ಧಾರವಾಡ ಜಿಲ್ಲೆಯ ಮುಂಡರಗಿಯ ಮೂಲದ ಈ ಕುಟುಂಬವು ತಲೆಮಾರುಗಳ ಹಿಂದೆ ಹಸಿರು ಹುಲ್ಲುಗಾವಲುಗಳನ್ನು ಹುಡುಕುತ್ತಾ ಬಳ್ಳಾರಿಯಲ್ಲಿ ನೆಲೆಸಲು ಬಂದಿತ್ತು. ಸ್ವತಃ ಪ್ರತಿಭಾನ್ವಿತ ಸಂಗೀತಗಾರರೂ ನಾಟಕ ಕಲಾವಿದರೂ ಆಗಿದ್ದ ರಾಘವೇಂದ್ರಚಾರ್ ಅವರು ಮದ್ರಾಸ್ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಸಂಗೀತ ಉಪನ್ಯಾಸಕರಾಗಿ ನೇಮಕಗೊಂಡಿದ್ದರು. ಅಲ್ಲಿ ನಾಲ್ಕು ವರ್ಷಗಳ ಸೇವೆಯ ನಂತರ, ಬಳ್ಳಾರಿಗೆ ಮರಳಿ ಬಳ್ಳಾರಿ ಪ್ರೌಢಶಾಲೆಯಲ್ಲಿ ಸಂಗೀತವನ್ನು ಕಲಿಸುವುದನ್ನು ಮುಂದುವರೆಸಿದರು. ಸಂಗೀತವು ಈ ಕುಟುಂಬದ ಉಸಿರಂತಿತ್ತು. ಶೇಷಗಿರಿ ಅವರು ತಮ್ಮ ಅಣ್ಣನಂತೆಯೇ, ತಂದೆಯ ಅಡಿಯಲ್ಲಿ ಸಂಗೀತವನ್ನು ಕಲಿಯಲು ಪ್ರಾರಂಭಿಸಿದರು. 1947 ರಲ್ಲಿ ತಂದೆ ರಾಘವೇಂದ್ರಚಾರ್ ಅವರ ನಿಧನವು ಕುಟುಂಬವನ್ನು ಛಿದ್ರಗೊಳಿಸಿತು. ಆದರೆ ಆರ್ಥಿಕ ತೊಂದರೆಗಳು ಕುಟುಂಬದಲ್ಲಿನ ಸಂಗೀತ ಪ್ರಿಯತೆಯನ್ನು ಕುಂಟಿತಗೊಳಿಸಲಿಲ್ಲ. ಪಟ್ಟಣದ ಸಣ್ಣ ಉಪಾಹಾರ ಗೃಹದಲ್ಲಿದ್ದ ರೇಡಿಯೋದಲ್ಲಿ ಸಂಗೀತ ಕೇಳಲು ಶೇಷಗಿರಿ ಅವರು ಅಣ್ಣ ವೆಂಕಟೇಶಚಾರ್ ನಿಯಮಿತವಾಗಿ ಹೋಟೆಲ್‌ಗೆ ಭೇಟಿ ನೀಡುತ್ತಿದ್ದರು.
ಹುಡುಗರು ಬಂದಾಗ ಅತೃಪ್ತ ಹೋಟೆಲ್ ಮಾಲೀಕರು ರೇಡಿಯೋ ಆಫ್ ಮಾಡಲು ಪ್ರಾರಂಭಿಸುವವರೆಗೂ ಈ ಆಚರಣೆ ಮುಂದುವರೆಯಿತು. ಇದರಿಂದ ವಿಚಲಿತರಾಗದ ಹುಡುಗರು ನಂತರ ಸಂಗೀತವನ್ನು ಅವಿತುಕೊಂಡು ಕೇಳಿ, ಮನೆಗೆ ಬಂದು ಅದನ್ನು ಪರಿಪೂರ್ಣವಾಗಿ ಅಭ್ಯಾಸ ಮಾಡುತ್ತಿದ್ದರು. ಕಠಿಣ ಸಾಧನೆಯೊಂದಿಗೆ ಈ ಸಹೋದರರು ತಮ್ಮದೇ ಆದ ವಿಶಿಷ್ಟ ಶೈಲಿಯನ್ನು ಸ್ಥಾಪಿಸಿ ಬಳ್ಳಾರಿ ಸಹೋದರರು ಎಂದು ವಿದ್ವಾಂಸರು ಮತ್ತು ಜನಸಾಮಾನ್ಯ ಸಂಗೀತಪ್ರಿಯರಲ್ಲಿ ಜನಪ್ರಿಯರಾಗುವ ಮಟ್ಟಕ್ಕೆ ಏರಿದರು. ಪರಮೇಶ್ವರ ಭಾಗವತರ್ (ವಿದ್ವಾನ್ ಟಿ ಎ ಎಸ್ ಮಣಿಯ ತಂದೆ) ಅವರ ಸಲಹೆಯ ಮೇರೆಗೆ ಈ ಸಹೋದರರು ಬೆಂಗಳೂರಿಗೆ ಬಂದಾಗ ಅಲ್ಲಿ ಅವರಿಗೆ ಉತ್ತಮ ಅವಕಾಶಗಳು ದೊರೆತವು.
ಆಕಾಶವಾಣಿಯ ಎ-ಗ್ರೇಡ್ ಕಲಾವಿದರಾದ ಬಳ್ಳಾರಿ ಸಹೋದರರು, ಲಾಲ್ಗುಡಿ ಜಯರಾಮನ್, ಎಂ ಚಂದ್ರಶೇಖರನ್, ಪಾಲ್ಘಾಟ್ ಮಣಿ ಅಯ್ಯರ್, ಗುರುವಾಯೂರ್ ದೊರೈ ಮುಂತಾದ ಶ್ರೇಷ್ಠ ಕಲಾವಿದರೊಂದಿಗೆ ದೇಶದ ಅನೇಕ ಸಭೆಗಳಲ್ಲಿ ಕಚೇರಿ ನೀಡಿದರು. ಅವರ ಸಂಸ್ಕರಿಸಿದ ಶೈಲಿಯು ಅಭಿಜ್ಞರು ಮತ್ತು ವಿಮರ್ಶಕರಿಂದ ಅಪಾರ ಮೆಚ್ಚುಗೆಯನ್ನು ಗಳಿಸಿತು. ಗಾಯನ ಗಂಧರ್ವ, ಗಾನಸುಧಾಕರ, ಕಲಾನಿಧಿ ಮುಂತಾದ ಬಿರುದುಗಳು ಅವರಿಗೆ ಸಲ್ಲುತ್ತಿದ್ದವು. ವೆಂಕಟೇಶ್ ಆಚಾರ್ ಆಕಾಶವಾಣಿಯ ಮೈಸೂರಿನಲ್ಲಿ ಸೇವೆ ಸಲ್ಲಿಸಿದರೆ, ಶೇಷಗಿರಿ ಆಚಾರ್ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸಂಗೀತದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು.
ಶೇಷಗಿರಿ ಆಚಾರ್ ಒಬ್ಬ ವಾಗ್ಗೇಯಕಾರರೂ ಆಗಿದ್ದರು. ಧರ್ಮನಿಷ್ಠ ಸ್ವಭಾವದ ವ್ಯಕ್ತಿ ಮತ್ತು ಅಪರೂಪದ ಸಂಗೀತಗಾರರಾದ ಅವರ ಸಂಯೋಜನೆಗಳು ಹೆಚ್ಚಾಗಿ ಭಕ್ತಿಯ ಮೇಲೆ ಆಧಾರಿತವಾಗಿವೆ. ಅವರೇ ಬರೆದಿರುವಂತೆ, 1961 ರ ನರಕ ಚತುರ್ದಶಿ ದಿನದಂದು, ಅವರು ತಮ್ಮ ಬಲ ಕಿವಿಯಲ್ಲಿ ಪ್ರಣವನಾದವನ್ನು ಕೇಳಿದರು. ಅದಾದ ಕೆಲವೇ ನಿಮಿಷಗಳಲ್ಲಿ ಗಣೇಶನನ್ನು ಸ್ತುತಿಸುವ ಕೃತಿಯು ಅವರಿಂದ ಹೊರಹೊಮ್ಮಿತು. ಇದೇ ತೆರನಾಗಿ ಅವರು ರಚಿಸಿದ 400 ಕೃತಿಗಳು ಅಸಾಧಾರಣವಾಗಿವೆ. ಕನ್ನಡ ಮತ್ತು ತೆಲುಗು ಅಲ್ಲದೆ ತಮಗೆ ಪರಿಚಿತವಲ್ಲದ ತಮಿಳಿನಲ್ಲೂ ಅವರಿಗೆ ಕೃತಿ ರಚಿಸಲು ಸಾಧ್ಯವಾದದ್ದು ಒಂದು ವಿಸ್ಮಯ.
1969 ರಲ್ಲಿ ಶಿವಮೊಗ್ಗದಲ್ಲಿ ಏಳು ಗಂಟೆಗಳ ಸಂಗೀತ ಕಚೇರಿಯ ನಂತರ, ಶೇಷಗಿರಿ ಆಚಾರ್ ತಮ್ಮ ಧ್ವನಿಯನ್ನು ಕಳೆದುಕೊಂಡರು, ಅವರು 1964 ರಲ್ಲಿ ರಚಿಸಿದ ಕೃತಿಯಲ್ಲಿ ಸೂಕ್ಷ್ಮವಾಗಿ ಭವಿಷ್ಯ ನುಡಿದಿದ್ದರು. ಆದರೆ ಸಹಿಷ್ಣುತೆ ಮತ್ತು ಶಕ್ತಿಯ ಚಿಲುಮೆ ಅವರಲ್ಲಿ ಶಾಶ್ವತವಾಗಿ ಹರಿಯುತ್ತಿತ್ತು.
ನಿಜವಾದ ಗುರು ಮತ್ತು ದೃಢ ಪರಿಪೂರ್ಣತಾವಾದಿಯಾಗಿ, ಅವರು ನಿಸ್ವಾರ್ಥವಾಗಿ ತಮ್ಮ ಶಿಷ್ಯರಿಗೆ ತಮಗೆ ತಿಳಿದಿದ್ದನ್ನೆಲ್ಲಾ ಕಲಿಸಿದರು.
ಶೇಷಗಿರಿ ಆಚಾರ್ ಅವರದು 50 ವರ್ಷಗಳ ಅಲ್ಪಾವಧಿಯ ಜೀವನ. ಆದರೆ ಸಂಗೀತ ಕ್ಷೇತ್ರಕ್ಕೆ ಅವರ ಕೊಡುಗೆಗಳು ಅಪಾರ. ಇವರ ಅಣ್ಣ ವೆಂಕಟೇಶ ಆಚಾರ್ 2015ರಲ್ಲಿ ಈ ಲೋಕವನ್ನಗಲಿದರು.
On the birth anniversary of Great Musician and Composer Vidwan Sheshagiri Achar of Bellary Brothers Fame 🌷🙏🌷

ಕಾಮೆಂಟ್‌ಗಳು