ಎಂ.ಎಸ್.ವಿಶ್ವನಾಥನ್
ಎಂ. ಎಸ್. ವಿಶ್ವನಾಥನ್
ಎಂ. ಎಸ್. ವಿಶ್ವನಾಥನ್ ದಕ್ಷಿಣ ಭಾರತೀಯ ಚಲನಚಿತ್ರಲೋಕದ ಮಹಾನ್ ಸಂಗೀತ ನಿರ್ದೇಶಕರಲ್ಲೊಬ್ಬರು. “ಮೆಲ್ಲಿಸೈ ಮನ್ನಾರ್” - ಲಘು ಸಂಗೀತ ಲೋಕದ ಚಕ್ರವರ್ತಿ ಎಂದು ಶ್ಲಾಘನೆಗೆ ಪಾತ್ರರಾದ ಎಂಎಸ್‍ವಿ ಅವರು ಪ್ರಾರಂಭಿಕ ವರ್ಷಗಳಲ್ಲಿ ಟಿ ಕೆ ರಾಮಮೂರ್ತಿ ಅವರೊಂದಿಗೆ ಜೋಡಿಯಾಗಿ ಸುಮಾರು 100 ಚಿತ್ರಗಳಲ್ಲಿ ಸಂಗೀತ ಸಂಯೋಜಿಸಿದ್ದರು. ಈ ಜೋಡಿ ಸಂಗೀತ ನೀಡಿದ “ವಿಜಯನಗರ ವೀರಪುತ್ರ”ದ ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು ಗೀತೆ ಇಂದಿಗೂ ಜನಪ್ರಿಯ. ಮುಂದೆ ಎಂಎಸ್‍ವಿ ಅವರು ಸ್ವತಂತ್ರ ಸಂಗೀತ ನಿರ್ದೇಶಕರಾಗಿ 700ಕ್ಕೂ ಹೆಚ್ಚು ಚಲನಚಿತ್ರಗಳಿಗೆ ಸಂಗೀತ ನೀಡಿದರು.
ಎಂ. ಎಸ್. ವಿಶ್ವನಾಥನ್ ಅವರು 1928ರ ಜೂನ್ 24ರಂದು ಮದ್ರಾಸ್ ಪ್ರಾಂತ್ಯಕ್ಕೆ ಸೇರಿದ್ದ ಈಗಿನ ಕೇರಳದ ಪಾಲಕ್ಕಾಡ್ ಜಿಲ್ಲೆಯ ಎಲಪುಳ್ಳಿ ಎಂಬಲ್ಲಿ ಜನಿಸಿದರು. ಮೂರನೇ ವಯಸ್ಸಿನಲ್ಲಿ ತಂದೆಯನ್ನು ಕಳೆದುಕೊಂಡು ಬದುಕೇ ಇಲ್ಲವಾಗಬಹುದಾದ ಹೊತ್ತಿನಲ್ಲಿ ಅವರ ತಾತನ ಪ್ರವೇಶದಿಂದ ಬದುಕು ಮುಂದೆ ಸಾಗಿತು. ಹಾಡು ಕೇಳುವ ಆಸೆಯಿಂದ ಚಿತ್ರಮಂದಿರದಲ್ಲಿ ತಿಂಡಿ ತಿನಿಸು ಮಾರುವ ಕಾಯಕ ಮಾಡಿದರು. ಕಣ್ಣೂರಿನಲ್ಲಿ ಬದುಕು ಸಾಗುತ್ತಿದ್ದಾಗ ನೀಲಕಂಠ ಭಾಗವತರ್ ಎಂಬ ಸಂಗೀತ ಗುರುಗಳು ತಮ್ಮ ಶಿಷ್ಯರಿಗೆ ಸಂಗೀತ ಪಾಠ ಹೇಳುವುದನ್ನು ಅವರ ಮನೆಯ ಗೋಡೆಯ ಹೊರಗೆ ನಿಂತು ಕೇಳುತ್ತಲೇ ಸಂಗೀತ ಪ್ರಾವೀಣ್ಯತೆ ಗಳಿಸಿದ್ದರು. ಅಚ್ಚರಿಗೊಂಡ ನೀಲಕಂಠ ಭಾಗವತರ್ ಅವರೇ ಬಾಲಕನಾದ ಎಂ.ಎಸ್. ವಿಶ್ವನಾಥನ್ ಸಂಗೀತ ಕಚೇರಿಯನ್ನು ಕಣ್ಣೂರು ಟೌನ್ ಹಾಲ್ನಲ್ಲಿ ವ್ಯವಸ್ಥೆಗೊಳಿಸಿದರಂತೆ. ಎಂಎಸ್‍ವಿ 13ನೇ ವಯಸ್ಸಿನಲ್ಲಿ ಟ್ರಿವೇಂಡ್ರಂನಲ್ಲಿ ಕಚೇರಿ ನೀಡಿದರು. ಜೂಪಿಟರ್ ಫಿಲಂ ಸಂಸ್ಥೆಯಲ್ಲಿ ಕೆಲಸದ ಹುಡುಗನಾಗಿದ್ದರು. ಸಂಗೀತ ಕಲಾವಿದ ಟಿ. ಆರ್. ಪಾಪಾ ಅವರ ಪರಿಚಯವಾಗಿ ಅವರ ಮೂಲಕ ಎಸ್ ವಿ ವೆಂಕಟರಾಮನ್ ಅವರ ಸಂಗೀತ ತಂಡ ಸೇರಿದರು. ಮುಂದೆ ಎಸ್ ಎಮ್ ಸುಬ್ಬಯ್ಯನಾಯ್ಡು ಅವರ ಸಹಾಯಕರಾಗಿದ್ದರು. ಮುಂದೆ ಸಿ. ಆರ್. ಸುಬ್ಬುರಾಮನ್ ಅವರ ಬಳಿ ಕಾರ್ಯನಿರ್ವಹಿಸುವಾಗ ಟಿ. ಕೆ. ರಾಮಮೂರ್ತಿ ಮತ್ತು ಟಿ.ಜಿ. ಲಿಂಗಪ್ಪ ಪರಿಚಯವಾಯಿತು. 1952ರಲ್ಲಿ ಸಿ ಆರ್ ಸುಬ್ಬುರಾಮನ್ ಅವರ ಅಕಾಲಿಕ ಮರಣದ ಕಾರಣ ಅವರು ಸಂಗೀತ ಸಂಯೋಜಿಸುತ್ತಿದ್ದ ಚಿತ್ರಗಳ ಕೆಲಸ ಟಿ.ಕೆ. ರಾಮಮೂರ್ತಿ ಮತ್ತು ಎಂ. ಎಸ್. ವಿಶ್ವನಾಥನ್ ಜೋಡಿಗೆ ಬಂತು. ಈ ಜೋಡಿ 1952-65 ಅವಧಿಯಲ್ಲಿ ಸುಮಾರು ನೂರು ಚಿತ್ರಗಳಿಗೆ ಸಂಗೀತ ನೀಡಿದರು. ಮುಂದೆ ಎಂಎಸ್‍ವಿ ಪ್ರತ್ಯೇಕವಾಗಿ 2015 ವರೆಗೆ ಸುಮಾರು 700 ಚಿತ್ರಗಳಿಗೆ ಸಂಗೀತ ನೀಡಿದರು. ಪಿ. ಸುಶೀಲಾ ಅವರಿಗೆ ಇವರ ಸಂಗೀತ ಸಂಯೋಜನೆಯಲ್ಲಿ ಪ್ರಥಮ ರಾಷ್ಟ್ರೀಯ ಪ್ರಶಸ್ತಿ ಸಂದಿತು.
ಎಂಎಸ್‍ವಿ ಅವರಿಗೆ ಸಂಗೀತದ ಜೊತೆ ನಟನೆಯಲ್ಲಿ ಆಸಕ್ತಿ ಇತ್ತು. ಕೆಲ ಚಿತ್ರಗಳಲ್ಲಿ ನಟಿಸಿದ್ದರು. ಸುಮಾರು 700 ಹಾಡುಗಳಿಗೆ ತಾವೇ ಗಾಯಕರಾಗಿದ್ದರು. ಇಳಯರಾಜಾ ಮತ್ತು ಎ ಆರ್ ರಹಮಾನ್ ಅವರ ಸಂಯೋಜನೆಯಲ್ಲೂ ಹಾಡಿದ್ದರು.
ಎಂಎಸ್‍ವಿ ಅವರ ಸಂಗೀತ ಸಂಯೋಜನೆಯ ಕನ್ನಡ ಚಿತ್ರಗಳಲ್ಲಿ ಭಕ್ತ ಮಾರ್ಕಂಡೇಯ (1957), ವಿಜಯನಗರದ ವೀರಪುತ್ರ (1961), ಮಕ್ಕಳ ಸೈನ್ಯ(1980), ಗಣೇಶನ ಮಹಿಮೆ(1981), ಬೆಂಕಿಯಲ್ಲಿ ಅರಳಿದ ಹೂವು (1983), ಎರಡು ರೇಖೆಗಳು(1984), ಬಾಳೊಂದು ಉಯ್ಯಾಲೆ (1985), ಮಮತೆಯ ಮಡಿಲು (1985), ದೇವತೆ (1986), ಸೂಪರ್ ಬಾಯ್ (1986), ಶ್ರೀ ವೆಂಕಟೇಶ್ವರ ಮಹಿಮೆ (1988), ಮಣಿಕಂಠನ ಮಹಿಮೆ (1993) ಸೇರಿವೆ.
ಕಲೈಮಾಮಣಿ, ಡಾಕ್ಟರೇಟ್, ಫಿಲಂಫೇರ್ ಜೀವಮಾನ ಸಾಧನೆ ಮುಂತಾದ ಗೌರವಗಳು ಎಂ. ಎಸ್. ವಿಶ್ವನಾಥನ್ ಅವರಿಗೆ ಸಂದವು. ಜಯಲಲಿತಾ ಅವರು 2012ರಲ್ಲಿ ಅವರಿಗೆ “ತಿರೈ ಇಸೈ ಚಕ್ರವರ್ತಿ”- ಸಿನಿ ಸಂಗೀತದ ಚಕ್ರವರ್ತಿ ಬಿರುದು, 60 ಚಿನ್ನದ ನಾಣ್ಯಗಳು ಮತ್ತು ಒಂದು ಕಾರನ್ನಿತ್ತು ಗೌರವಿಸಿದ್ದರು.
ಎಂ.ಜಿ.ಆರ್ ಮತ್ತು ಶಿವಾಜಿ ಗಣೇಶನ್ ಅವರ ಅಪಾರ ಯಶಸ್ಸಿನ ಹಿಂದೆ ಎಂಎಸ್‍ವಿ ಅವರ ಸಂಗೀತ ಕೆಲಸ ಮಾಡಿತ್ತು. ಕೆ. ಬಾಲಚಂದರ್ ಅಂತಹ ನಿರ್ದೇಶಕರು, ವಾಲಿ ಮತ್ತು ಕಣ್ಣದಾಸನ್ ಅಂತಹ ಗೀತರಚನಕಾರರು ಎಂಎಸ್‍ವಿ ಅವರ ಬೆಂಬಲವಿಲ್ಲದೆ ಅಷ್ಟೊಂದು ಪ್ರಕಾಶಿಸುತ್ತಿರಲಿಲ್ಲ. ಎಂಎಸ್‍ವಿ ಅವರು ತಾವು ಪ್ರಾರಂಭದಲ್ಲಿ ಕೆಲಸ ಮಾಡುತ್ತಿದ್ದ ಎಸ್ ವಿ ಸುಬ್ಬಯ್ಯನಾಯ್ಡು ಅವರು ನಷ್ಟದಿಂದ ಕಂಗೆಟ್ಟು ಸಂಕಷ್ಟಕ್ಕೀಡಾದಾಗ ಸ್ವಯಂ ತಾವೇ ಅವರನ್ನು ಕೊನೆಯವರೆಗೂ ಪೋಷಿಸಿದರು. ದಕ್ಷಿಣ ಭಾರತದ ಬಹುತೇಕ ಎಲ್ಲ ಪ್ರಮುಖ ಹಿನ್ನೆಲೆ ಗಾಯಕ - ಗಾಯಕಿಯರು, ನಟ-ನಟಿಯರು ಇವರ ಸಂಗೀತದಲ್ಲಿ ತಮ್ಮ ಜನಪ್ರಿಯತೆ ಹೆಚ್ಚಿಸಿಕೊಂಡರು.
ಹೀಗೆ ಅನೇಕರ ಯಶಸ್ಸಿಗೆ ಕಾರಣರಾಗಿ ತಮ್ಮ ವೈಯಕ್ತಿಕ ಬದುಕಿನಲ್ಲಿ ಸರಳ ಸಂತರಂತೆ ಬದುಕಿದ ಎಂ. ಎಸ್. ವಿಶ್ವನಾಥನ್ 2015ರ ಜುಲೈ 14ರಂದು ಈ ಲೋಕವನ್ನಗಲಿದರು.
On the birth anniversary of Great Music Composer M. S. Viswanathan 🌷🙏🌷

ಕಾಮೆಂಟ್‌ಗಳು