ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ರಾಜಗೋಪಾಲ ಶಾಸ್ತ್ರಿ

ರಾಜಗೋಪಾಲ ಶಾಸ್ತ್ರಿ 

ಇಂದು ಮಡಿಕೇರಿಯಲ್ಲಿರುವ ಹಿರಿಯ ವಿದ್ವಾಂಸರಾದ ರಾಜಗೋಪಾಲ ಶಾಸ್ತ್ರಿ ಅವರ 90ನೇ ಜನ್ಮದಿನ.

ರಾಜಗೋಪಾಲ ಶಾಸ್ತ್ರಿ ಅವರು 1936ರ ಜುಲೈ 25ರಂದು ಮಂಗಳೂರಿನ ಪೆರ್ಮುದೆ ಗ್ರಾಮದಲ್ಲಿ ಜನಿಸಿದರು. ತಂದೆ ಪಿ. ನಾರಾಯಣ ಶಾಸ್ತ್ರಿ. ತಾಯಿ ಭವಾನಿ ಶಾಸ್ತ್ರಿ ಈ ದಂಪತಿಯ ಹತ್ತು ಜನ ಮಕ್ಕಳಲ್ಲಿ ರಾಜಗೋಪಾಲ ಶಾಸ್ತ್ರಿ ನಾಲ್ಕನೆಯವರು.   ತಂದೆ ಕೃಷಿಕ ಕುಟುಂಬದಲ್ಲಿ ಪೌರೋಹಿತ್ಯ ವೃತ್ತಿಯನ್ನು ನಡೆಸುತ್ತಾ ಹಿರಿಯ ಕುಟುಂಬವನ್ನು ಸಲಹಿದವರು.

ಪ್ರಾಥಮಿಕ ಶಿಕ್ಷಣವನ್ನು ಮಂಗಳೂರಿನ ಕಳವಾರು ಶಾಲೆಯಲ್ಲಿ ಪೂರೈಸಿದರು ನಂತರ ಮಾಧ್ಯಮಿಕ ಶಿಕ್ಷಣವನ್ನು ಪೇಜಾವರದಲ್ಲಿ ಮುಗಿಸಿದರು. 1949 ರಿಂದ ಉಡುಪಿಯ ಶ್ರೀಮನ್ ಮಧ್ವ ಸಿದ್ದಾಂತ ಪ್ರಬೋಧಿನಿ ಮಹಾ ಪಾಠಶಾಲೆಯಲ್ಲಿ 1960ರವರೆಗೆ ಶಿಕ್ಷಣವನ್ನು ಪೂರೈಸಿದರು. 1960 ರಲ್ಲಿ ಮದ್ರಾಸ್ ವಿಶ್ವವಿದ್ಯಾನಿಲಯದಿಂದ ಸಂಸ್ಕೃತ ಶಿರೋಮಣಿ ಪದವಿಯನ್ನು ಗಳಿಸಿದರು. ಜೊತೆಗೆ ಕನ್ನಡ ವಿದ್ವಾನ್ ಪಾಂಡಿತ್ಯವನ್ನು ಪಡೆದರು. 

ರಾಜಗೋಪಾಲ ಶಾಸ್ತ್ರಿ ಅವರು ಎರಡು ವರ್ಷಗಳ ಕಾಲ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಗ್ರಂಥಪಾಲಕರಾಗಿ ಕಾರ್ಯನಿರ್ವಹಿಸಿದರು. 1962 ರಲ್ಲಿ ಜುಲೈ ತಿಂಗಳಲ್ಲಿ ಕೊಡಗಿನ ಮಡಿಕೇರಿಯ ಚೇರಂಬಾಣೆಯಲ್ಲಿ ತನ್ನ ಹಿಂದಿ ಶಿಕ್ಷಕ ವೃತ್ತಿಯನ್ನು ಪ್ರಾರಂಭಿಸಿದರು. ಇದುವೇ ಅವರ ಜೀವನದ ಕರ್ಮ ಕ್ಷೇತ್ರವು ಆಯಿತು. ಶಿಕ್ಷಕ ವೃತ್ತಿಯ ಜೊತೆಗೆ ಹಿಂದಿ ಪಾಠವನ್ನು ಪ್ರತ್ಯೇಕವಾಗಿ ವಿದ್ಯಾರ್ಥಿಗಳಿಗೆ ಹೇಳಿಕೊಡುತ್ತಿದ್ದರು ಇದರಲ್ಲಿ ನೂರಾರು ಜನ ಹಿಂದಿ ಶಿಕ್ಷಕರಾಗಿ ರೂಪುಗೊಂಡು ಇವತ್ತಿಗೂ ನಾಡಿನಾದ್ಯಂತ ಕಾರ್ಯನಿರ್ವಹಿಸುತ್ತಿದ್ದಾರೆ. 

ರಾಜಗೋಪಾಲ ಶಾಸ್ತ್ರಿ ಅವರು 1967ರಲ್ಲಿ ರತ್ನಾವತಿ ಅವರೊಂದಿಗೆ ದಾಂಪತ್ಯ ಜೀವನ ಪ್ರಾರಂಭಿಸಿದರು. ಮೈಸೂರು ವಿಶ್ವವಿದ್ಯಾನಿಲಯದಿಂದ ಹಿಂದಿ ಎಂ.ಎ.ಪದವಿಯನ್ನು ಪಡೆದರು. 

ರಾಜಗೋಪಾಲ ಶಾಸ್ತ್ರಿ ಅವರು ಕರ್ನಾಟಕದ ಆಗಿನ ವಿದ್ಯಾಮಂತ್ರಿಯಾಗಿದ್ದ ಶ್ರೀಯುತ ಸೋಮಶೇಖರ್ ಅವರಿಂದ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೂ ಭಾಜನರಾಗಿದ್ದಾರೆ. 1962ರಿಂದ 1994ರ ವರೆಗೆ ಹಿಂದಿ ಶಿಕ್ಷಕರಾಗಿ ಅರುಣ ಜೂನಿಯರ್ ಕಾಲೇಜಿನಲ್ಲಿ ತನ್ನ ವೃತ್ತಿ ಜೀವನವನ್ನು ನಿಭಾಯಿಸಿದ್ದಾರೆ. ಸುಮಾರು 32 ವರ್ಷ ಏಳು ತಿಂಗಳು.

ತನ್ನ ವೃತ್ತಿ ಜೀವನದಲ್ಲಿ ಅನೇಕ ಬಡ ಮಕ್ಕಳನ್ನು ಶಾಲೆಗೆ ಬರುವಂತೆ ಮಾಡಿ ಹುರಿದುಂಬಿಸಿ ಅವರಿಗೆ ಶಿಕ್ಷಣ ದೊರಕುವಂತೆ ಮಾಡಿದ್ದಾರೆ. ಅವರು ಕೊಡಗಿಗೆ ಕಾಲಿಟ್ಟಾಗ ಚೇರಂಬಾಣಿ ಕೋಪಟ್ಟಿಎನ್ನುವುದು ಒಂದು ಕುಗ್ರಾಮವಾಗಿತ್ತು. ಯಾವುದೇ ಆಧುನಿಕ ವ್ಯವಸ್ಥೆಯನ್ನು ಕಾಣದ ದಿನವಾಗಿತ್ತು. ಅಲ್ಲಿ ಬ್ಯಾಂಕು ಪೋಸ್ಟ್ ಆಫೀಸ್ ವಿದ್ಯುತ್ ವ್ಯವಸ್ಥೆ, ಬಾವಿಗಳು ರಸ್ತೆ ಬೀದಿ ದೀಪಗಳು, ಬಸ್ಸುಗಳು ಈ ರೀತಿಯಲ್ಲಿ ಸುಧಾರಣೆಯಾಗುವಂತೆ ಕಾಳಜಿ ವಹಿಸಿ ಅನೇಕ ಸಾಮಾಜಿಕ ಸೇವೆಯನ್ನು ಸಲ್ಲಿಸಿದ್ದಾರೆ. ನಿವೃತ್ತಿಯ ನಂತರ ಕೃಷಿ ಬದುಕಿನಲ್ಲಿ ಆಸಕ್ತಿ ಹೊಂದಿದ್ದಾರೆ. ಇವರಿಗೆ ಒಬ್ಬ ಗಂಡು ಮಗ ನಾಲ್ಕು ಜನ ಹೆಣ್ಣು ಮಕ್ಕಳು ಎಲ್ಲರೂ ಮದುವೆಯಾಗಿ ತಮ್ಮ ತಮ್ಮ ಜೀವನದಲ್ಲಿ ತೃಪ್ತಿಯನ್ನು ಕಂಡುಕೊಂಡಿದ್ದಾರೆ.

ರಾಜಗೋಪಾಲ ಶಾಸ್ತ್ರಿ  ಅವರು ಸತ್ಯ ನಿಷ್ಠೆ ಪ್ರಾಮಾಣಿಕತನ ಶಿಸ್ತುಬದ್ಧವಾದ ಜೀವನ ಇದನ್ನೇ ತಮ್ಮ ಮಕ್ಕಳಿಗೂ ಕೂಡ ಕಲಿಸಿಕೊಟ್ಟಿದ್ದಾರೆ. ಹಿರಿಯ ಕುಟುಂಬ. ಬಂದು ಬಾಂಧವರನ್ನೆಲ್ಲ ಪೊರೆದವರು ಸಲಹಿದವರು. ತುಂಬು ಜೀವನ ಒಲವೇ ನಮ್ಮ ಬದುಕು ಎನ್ನುವುದು ಅವರ ಜೀವನದ ಧ್ಯೇಯ .ಇದನ್ನೇ ಬದುಕಿನ ಉದ್ದಕ್ಕೂ ಬೋಧಿಸುತ್ತಾ  ಪಾಲಿಸುತ್ತಾ ಬಂದರು. ಶಾಲೆಯಲ್ಲಿ ಮಾತ್ರ ಶಿಕ್ಷಕನಾಗಿರಲಿಲ್ಲ. ಶಾಲೆಯ ಆಚೆಯ ಬದುಕಿಗೂ ಕೂಡ ಸಮಾಜಕ್ಕೂ ಇವತ್ತಿಗೂ ಕೂಡ ಎಲ್ಲರಿಗೂ ಅವರು "ಶಾಸ್ತ್ರೀಮಾಸ್ಟರ್."

ಪೂಜ್ಯ ರಾಜಗೋಪಾಲ ಶಾಸ್ತ್ರಿ  ಅವರಿಗೆ ಜನ್ಮದಿನದಂದು ನಮನ ಪೂರ್ವಕ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. 

On 90th birthday of Great Scholar  Rajagopala Shastri 🌷🙏🌷


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!