ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಮ್ಯಾಂಡೋಲಿನ್ ಪ್ರಸಾದ್

 ಮ್ಯಾಂಡೋಲಿನ್ ಪ್ರಸಾದ್ ನಿಧನ

ಸುಗಮ ಸಂಗೀತಲೋಕದಲ್ಲಿ ಪ್ರಧಾನರಾಗಿ ಎದ್ದು ಕಾಣುತ್ತಿದ್ದ ಮಹಾನ್ ವಾದ್ಯಪ್ರವೀಣರಾದ ಮ್ಯಾಂಡೋಲಿನ್ ಪ್ರಸಾದ್ ನಿಧನರಾಗಿದ್ದಾರೆ.  ಮೈಸೂರು ಅನಂತಸ್ವಾಮಿ, ಸಿ. ಅಶ್ವಥ್, ರತ್ನಮಾಲಾ ಪ್ರಕಾಶ್, ಮಾಲತಿ ಶರ್ಮ ಅಂತಹ ಹಿರಿಯ ತಲೆಮಾರಿನಿಂದ ಮುಂದಿನ ಪೀಳಿಗೆಯ ಅನೇಕ ಸುಗಮ ಸಂಗೀತ ಕಲಾವಿದರೊಂದಿಗೆ ಪ್ರಸಾದ್ ಅವರ ಮ್ಯಾಂಡೋಲಿನ್ ಇಂಪು ವ್ಯಾಪಿಸಿತ್ತು.
 ‌
ಮ್ಯಾಂಡೋಲಿನ್ ಪ್ರಸಾದ್ ಎಂದು ಖ್ಯಾತರಾದ ‌ ಎನ್‌.ಎಸ್‌. ಪ್ರಸಾದ್‌ 1960ರ ಮಾರ್ಚ್ 15ರಂದು ಮೈಸೂರಿನಲ್ಲಿ ಜನಿಸಿದರು.  ಅವರು ಮೈಸೂರು ವಿಶ್ವವಿದ್ಯಾಲಯದಿಂದ ವಿಜ್ಞಾನ ಪದವಿ ಪಡೆದಿದ್ದರು. ವಿದ್ವಾನ್‌ ವಿ. ದೇಶಿಕಾಚಾರ್‌ ಅವರಿಂದ ವೀಣೆ ಕಲಿಕೆಯೊಂದಿಗೆ ಅವರ ಸಂಗೀತ ಯಾನ ಆರಂಭಗೊಂಡಿತು.  ನಂತರ ಎಚ್‌.ಎಸ್‌. ಸತ್ಯನಾರಾಯಣ ಅವರ ಮಾರ್ಗದರ್ಶನದಲ್ಲಿ ಮ್ಯಾಂಡೋಲಿನ್‌ ವಾದನದಲ್ಲಿ ಸಾಧನೆ ಮಾಡಿದರು.

ಪ್ರಸಾದ್‌ ಆಲ್‌ ಇಂಡಿಯಾ ರೇಡಿಯೋನಲ್ಲಿ ಮತ್ತು ದೂರದರ್ಶನದಲ್ಲಿ ಶ್ರೇಣೀಕೃತ ಕಲಾವಿದರಾಗಿದ್ದರು.  ಸುಗಮ ಸಂಗೀತಲೋಕದಲ್ಲಿ  ಪ್ರಧಾನರಾಗಿ ಕಂಗೊಳಿಸಿದ್ದ ಪ್ರಸಾದ್ ಚಲನಚಿತ್ರ ಮತ್ತು ಕಿರುತೆರೆ ಲೋಕದಲ್ಲೂ ಪ್ರಕಾಶಿಸಿದ್ದರು.  2005 ರಲ್ಲಿ ಅಭಿನಯ ತಾರೆ ಆರತಿ ಅವರು ನಿರ್ಮಿಸಿ ನಿರ್ದೇಶಿಸಿದ ಅತ್ಯುತ್ತಮ ಮಕ್ಕಳ ಚಲನಚಿತ್ರ ರಾಜ್ಯ ಪ್ರಶಸ್ತಿ ವಿಜೇತ 
'ಮಿಠಾಯಿ ಮನೆ' ಚಿತ್ರಕ್ಕೂ ಸಂಗೀತ ಸಂಯೋಜಿಸಿದ್ದರು.  ಪ್ರಸಿದ್ಧ ವೇದಿಕೆಗಳಲ್ಲಿ ಹಾಗೂ ಅನೇಕ ಸಂಗೀತದ ಆಲ್ಬಮ್ಗಳಲ್ಲಿ ಅವರ ಸಂಗೀತ ಮೂಡಿಬಂದಿತ್ತು.

ಪ್ರಸಾದ್ ಅವರಿಗೆ ಕರ್ನಾಟಕ ಸಂಗೀತ ನೃತ್ಯ ಕಲಾ.ಅಕಾಡೆಮಿಯಿಂದ ಕರ್ನಾಟಕ ಕಲಾಶ್ರಿ ಗೌರವ ಸೇರಿದಂತೆ ಅನೇಕ ಗೌರವಗಳು ಸಂದಿದ್ದವು.

ಮ್ಯಾಂಡೋಲಿನ್ ಪ್ರಸಾದ್ 2026ರ ಜುಲೈ 25ರಂದು ನಿಧನರಾದರು.  ಅಗಲಿದ ಕಲಾಚೇತನಕ್ಕೆ ನಮ್ರ ನಮನ🌷🙏🌷

Respects to departed musical soul Mandolin Prasad 🌷🙏🌷 

 

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!