ನಗರ ಶ್ರೀನಿವಾಸ ಉಡುಪ
ನಗರ ಶ್ರೀನಿವಾಸ ಉಡುಪ
ನಿತ್ಯ ನಗೆ ಮೊಗದ, ಸುಶ್ರಾವ್ಯ ಕಂಠದ, ಸುಗಮ ಸಂಗೀತ ಕ್ಷೇತ್ರದಲ್ಲಿ ಕಳೆದ ಐದೂವರೆ ದಶಕಗಳಿಂದ ಸಕ್ರಿಯರಾಗಿರುವ ನಗರ ಶ್ರೀನಿವಾಸ ಉಡುಪ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು.
ಶ್ರೀನಿವಾಸ ಉಡುಪರು 1950ರ ಜುಲೈ 26ರಂದು ಶಿವಮೊಗ್ಗ ಜಿಲ್ಲೆಯ ನಗರ ಎಂಬ ಗ್ರಾಮದಲ್ಲಿ ಜನಿಸಿದರು. ಇವರು ಸಂಗೀತ ಸಂಸ್ಕೃತಿಯುಳ್ಳ ಸುಸಂಸ್ಕೃತ ಮನೆತನದಿಂದ ಬಂದವರು. ಇವರ ತಾತ ವಿದ್ದಾನ್ ಶ್ರೀಕೃಷ್ಣ ಉಡುಪ ಅಂದಿನ ಕಾಲದ ಪ್ರಸಿದ್ಧ ಮೃದಂಗ ವಾದಕರಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಪ್ರಸಿದ್ಧರಾಗಿದ್ದವರು. ಶ್ರೀನಿವಾಸ ಉಡುಪರ ತಂದೆ ಸೀತಾರಾಮ ಉಡುಪರು ಶಾಸ್ತ್ರೀಯ ಸಂಗೀತ ಗಾಯಕರು. ತಾಯಿ ಇಂದಿರಾ.
ಶ್ರೀನಿವಾಸ ಉಡುಪರಿಗೆ ಮನೆಯ ವಾತಾವರಣವೇ ಸಂಗೀತ ಕಲಿಸಿತ್ತು. ಮನೆಯಲ್ಲಿ ನಿತ್ಯ ಭಜನೆ ನಡೆಯುತ್ತಿತ್ತು. ಬೆಳವಣಿಗೆಯ ದಿನಗಳಲ್ಲಿ ಪ್ರತಿನಿತ್ಯದ ಭಜನೆಗೆ ತಪ್ಪದೇ ಹಾಜರಾಗತೊಡಗಿದರು. ಈ ಹಂತದಲ್ಲಿ ಅನೇಕ ರಾಗಗಳು ಶ್ರೀನಿವಾಸ ಉಡುಪರಿಗೆ ಪರಿಚಯವಾಗತೊಡಗಿತು. ಶಾಲೆಗೆ ಹೋಗುತ್ತಲೇ ಕೆಲವು ಸಂಗೀತ ವಿದ್ವಾಂಸರಲ್ಲಿ ಶಾಸ್ತ್ರೀಯ ಸಂಗೀತದ ಅಭ್ಯಾಸ ಕೈಗೊಂಡರು.
ಶ್ರೀನಿವಾಸ ಉಡುಪರು ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜಿಗೆ ಬಂದ ಮೇಲೆ ಅವರ ಗಾಯನಕ್ಕೆ ಉತ್ತಮ ವೇದಿಕೆ ದೊರಕಿತು. ಅಲ್ಲಿನ ಸಾಂಸ್ಕೃತಿಕ ವಾತಾವರಣದಲ್ಲಿ ಭಕ್ತಿಗೀತೆಗಳು, ಭಾವಗೀತೆಗಳು, ಚಿತ್ರಗೀತೆಗಳು ಹೀಗೆ ವಿವಿಧ ಪ್ರಕಾರಗಳಲ್ಲಿ ಭಾಗವಹಿಸಿ ಭಾಗವಹಿಸಿ ಬಹುಮಾನಗಳನ್ನು ಗಳಿಸಿದರು. ಅಂದಿನ ದಿನಗಳಲ್ಲಿ ಇವರಿಗೆ ನಿತ್ಯೋತ್ಸವದ ಕವಿ ಕೆ.ಎಸ್. ನಿಸಾರ್ ಅಹಮದ್, ಸಿದ್ದಲಿಂಗಯ್ಯ ಮುಂತಾದ ಪ್ರಸಿದ್ಧ ಕವಿಗಳ ಒಡನಾಟ ದೊರೆತ ಪರಿಣಾಮವಾಗಿ ಶ್ರೀನಿವಾಸ ಉಡುಪರು ಭಾವಗೀತೆಗಳ ಕಡೆಗೆ ಹೆಚ್ಚು ಆಸಕ್ತಿ ಬೆಳೆಸಿಕೊಂಡರು.
ಶ್ರೀನಿವಾಸ ಉಡುಪರು 1967ರ ಸರಿಸುಮಾರಿನಲ್ಲಿ ಬೆ೦ಗಳೂರು ಆಕಾಶವಾಣಿಯ ಭಾವಗೀತೆ ವಿಭಾಗದಲ್ಲಿ ಬಿ-ಗ್ರೇಡ್ ಗಾಯಕರಾಗಿ ಆಯ್ಕೆಯಾದರು. ಮುಂದೆ ಆಕಾಶವಾಣಿಯಿಂದ ಆಹ್ವಾನಿತರಾಗಿ ಹಾಡುತ್ತಾ ಬೆಳೆದರು.
ಪದವಿ ಪಡೆದ ನಂತರದಲ್ಲಿ ಶ್ರೀನಿವಾಸ ಉಡುಪರು ಕರ್ನಾಟಕ ಬ್ಯಾಂಕ್ ಸೇರಿದರು. ಕೆಲಸದ ಜೊತೆಗೆ ಗಾಯನದಲ್ಲೂ ತಮ್ಮನ್ನು ತೊಡಗಿಸಿಕೊಂಡು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಹಾಡಲಾರಂಭಿಸಿದರು. 1979ರಲ್ಲಿ ಉಡುಪರು ರಾಜೇಶ್ಚರಿಯವರನ್ನು ವರಿಸಿದರು. ಮುಂದೆ ಬೆಂಗಳೂರಿಗೆ ವರ್ಗವಾಗಿ ಬಂದಿದ್ದು ಅವರ ಪ್ರತಿಭೆಯ ಪ್ರಕಾಶಕ್ಕೆ ಪೂರಕವಾಯ್ತು.
ಬೆಂಗಳೂರಿಗೆ ಬಂದಮೇಲೆ ಶ್ರೀನಿವಾಸ ಉಡುಪರಿಗೆ ಗಾಯನಕ್ಕೆ ಉತ್ತಮ ಅವಕಾಶಗಳು ಅರಸಿಬಂದವು. ಕುಟುಂಬದ ಸ್ನೇಹಿತರಾದ ಪ್ರಸಿದ್ಧ ಗಾಯಕ ಶಿವಮೊಗ್ಗ ಸುಬ್ಬಣ್ಣನವರೂ ಆ ವೇಳೆಗೆ ಬೆಂಗಳೂರು ನಿವಾಸಿಯಾಗಿದ್ದದ್ದು ಹೆಚ್ಚಿನ ಮಾರ್ಗದರ್ಶನ ಒದಗಿಸಿತು. ಜೊತೆಗೆ ಬಹಳಷ್ಟು ವರ್ಷ ಮೈಸೂರು ಅನಂತಸ್ವಾಮಿಯವರಲ್ಲಿ ಶಿಷ್ಯವೃತ್ತಿ ನಡೆಸಿ, ಗಾಯನದ ವಿಶಿಷ್ಟತೆ, ಹಾಡುವ ಶೈಲಿಯ ತಾಂತ್ರಿಕತೆಯನ್ನು ರೂಡಿಸಿಕೊಂಡು ಬೆಳೆದರು.
ಮುದುವೆಗೆ ಮುಂಚೆಯೇ ಅಕ್ಕಮಹಾದೇವಿ ವಚನ, ಮಂದಾರ (ಭಾವಗೀತೆಗಳು) 3D ಸುರುಳಿಗಳಿಗೆ ಹಾಡಿದ್ದ ಶ್ರೀನಿವಾಸ ಉಡುಪರಿಗೆ ಬೇರೆ ಬೇರೆ ಸಂಯೋಜಕರಿಂದ ಆಹ್ವಾನಗಳು ಆಗಮಿಸಿದವು. ಹೀಗೆ ಅನೇಕ ಧ್ವನಿಸುರುಳಿಗಳಿಗೆ ಧ್ವನಿಯಾದರು. ಪ್ರಸಿದ್ಧ ಗಾಯಕಿ ರತ್ನಮಾಲಾ ಪ್ರಕಾಶ್ ಅವರ ತಂಡದಲ್ಲಿ ಸಕ್ರಿಯವಾಗಿ ಹಾಡಲಾರಂಭಿಸಿದ ಉಡುಪರು ಕರ್ನಾಟಕದ ಉದ್ದಗಲಕ್ಕೂ ಸಂಚರಿಸಿ ಸಂಗೀತ ಸುಧೆಯನ್ನು ಹರಿಸಿಬಂದರು. ಆಕಾಶವಾಣಿಯಲ್ಲಿ ಬಹಳಷ್ಟು ಸಂಗೀತ ನಿರ್ದೇಶಕರ ಗೀತೆಗಳಿಗೆ ಧ್ವನಿಯಾದರು. ಸಿ. ಅಶ್ಚಥ್ ಅವರ ಮಾರ್ಗದರ್ಶನದಲ್ಲೂ ಹಲವಾರು ಧ್ವನಿಸುರುಳಿಗಳಿಗೆ ಹಾಡಿದರು. ಜಿ.ವಿ. ಅತ್ರಿಯವರ ಬಹುತೇಕ ಕಾರ್ಯಕ್ರಮಗಳಲ್ಲಿ ಇವರ ಗಾಯನ ಇರುತ್ತಿತ್ತು. ಇತರ ಪ್ರಸಿದ್ಧ ಕಲಾವಿದರ ಜೊತೆಗೂ ಧ್ವನಿಗೂಡಿಸುತ್ತಿದ್ದರು. ಹೀಗೆ ವಿವಿಧ ತಂಡಗಳಲ್ಲಿ ಹಾಡುತ್ತಾ ತಮ್ಮ ಗಾಯನ ಪ್ರತಿಭೆಯನ್ನು ವ್ಯಾಪಿಸಿದರು. ತಮ್ಮ ಪುತ್ರಿ ಗಾಯನ ಲೋಕದ ವಿಶಿಷ್ಟ ಸಾಧಕಿ ಅರ್ಚನಾ ಉಡುಪರಿಗೂ ಗುರುವಾದರು. ತಂದೆಯ ಮಾರ್ಗದರ್ಶನದಲ್ಲಿ ಹಾಡುತ್ತಾ ಬಂದ ಅರ್ಚನಾ ಅವರು Zee ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಸೋನು ನಿಗಮ್ ನಿರ್ವಹಣೆಯ ಪ್ರಸಿದ್ಧ ರಾಷ್ಟ್ರೀಯ ಮಟ್ಟದ ಟಿ.ವಿ.ಎಸ್. ಸರಿಗಮಪ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿ ಕರ್ನಾಟಕದ ಹಿರಿಮೆಯನ್ನು ಬೆಳಗಿದರು. ಇದೇ ಸಂದರ್ಭದಲ್ಲಿ
ತಮ್ಮದೇ ಆದ ಸಂಗೀತ ತಂಡವನ್ನು ರೂಪಿಸಿ ಉಡುಪರು ಬಹಳಷ್ಟು ಹಲವು ಕಾರ್ಯಕ್ರಮಗಳನ್ನು ನೀಡಿದರು. ಭಾವಗೀತೆ ಕಾರ್ಯಕ್ರಮಗಳಲ್ಲದೆ ಇವರ ಚಲನಚಿತ್ರಗೀತೆಗಳ ಕಾರ್ಯಕ್ರಮಗಳೂ ಅಪಾರ ಜನಪ್ರಿಯತೆ ಗಳಿಸಿತು.
ಬ್ಯಾಂಕಿನಿಂದ ನಿವೃತ್ತಿ ಹೊಂದಿದ ನಂತರ ಶ್ರೀನಿವಾಸ ಉಡುಪರು ಕರ್ನಾಟಕ ಸುಗಮಸಂಗೀತ ಪರಿಷತ್ತಿನಲ್ಲಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಶ್ರೀನಿವಾಸ ಉಡುಪರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 19ನೇ ಸುಗಮ ಸಂಗೀತ ಸಮ್ಮೇಳನಾಧ್ಯಕ್ಷತೆ ಗೌರವ ಸೇರಿದಂತೆ ಅನೇಕ ಪ್ರಶಸ್ತಿ ಗೌರವಗಳು ಸಂದಿವೆ.
ಆತ್ಮೀಯರಾದ ಸಾಧಕ ಶ್ರೀನಿವಾಸ ಉಡುಪರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು. ನಮಸ್ಕಾರ.

ಕಾಮೆಂಟ್‌ಗಳು