ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಬಿ.ಎಂ. ಹನೀಫ್

 ಬಿ.ಎಂ. ಹನೀಫ್


ಬಿ.ಎಂ. ಹನೀಫ್ ಪತ್ರಕರ್ತರಾಗಿ, ಪತ್ರಿಕಾ ಸಂಪಾದಕರಾಗಿ, ಸಾಹಿತಿಯಾಗಿ, ಚಿಂತಕರಾಗಿ, ವಾಗ್ಮಿಗಳಾಗಿ ಹಾಗೂ ಸಂಘಟಕರಾಗಿ ಹೆಸರಾದವರು.

ಮಹಮ್ಮದ್ ಹನೀಫ್ ಅವರು 
1962ರ ಆಗಸ್ಟ್ 4ರಂದು ಮಂಗಳೂರು ತಾಲ್ಲೂಕಿನ ಹಳೆಯಂಗಡಿ ಗ್ರಾಮದ ಬೆಳ್ಳೆಯಾರು ಎಂಬಲ್ಲಿ ಜನಿಸಿದರು.
ತಂದೆ ಬಿ.ಕೆ. ಮೊಯ್ದೀನಬ್ಬ.  ತಾಯಿ ಜೈನಬ.  ವಾಣಿಜ್ಯ ಪದವೀಧರರಾದ ಇವರು ಪತ್ರಿಕೋದ್ಯಮದತ್ತ ಆಕರ್ಷಿತರಾದರು. ತಮ್ಮ ವೃತ್ತಿಜೀವನದ ಅವಧಿಯಲ್ಲಿ ಜರ್ಮನಿಯ ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಜರ್ನಲಿಸಂನಲ್ಲಿ Business Journalism ಕುರಿತ ವಿಶೇಷ ತರಬೇತಿಯನ್ನು ಪಡೆದರು.

 ಹನೀಫ್ ಅವರು 1984ರಲ್ಲಿ 'ಮುಂಗಾರು' ದಿನಪತ್ರಿಕೆಯಲ್ಲಿ ಉಪಸಂಪಾದಕರಾಗಿ ಪತ್ರಿಕೋದ್ಯಮವನ್ನು ಆರಂಭಿಸಿದರು. 1989ರಲ್ಲಿ ಪ್ರಜಾವಾಣಿಗೆ ಸೇರ್ಪಡೆಗೊಂಡು ಉಪಸಂಪಾದಕರಾಗಿ, ವರದಿಗಾರರಾಗಿ, ವಾಣಿಜ್ಯ ವಿಭಾಗದ ಮುಖ್ಯಸ್ಥರಾಗಿ ಹಾಗೂ ವಾಣಿಜ್ಯ ಪುರವಣಿಯ ಮುಖ್ಯಸ್ಥರಾಗಿ ಹೀಗೆ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು.
ಪ್ರಜಾವಾಣಿಯ ಮೈಸೂರು ಬ್ಯೂರೋ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಅವರು, ಬಳಿಕ ಸಹಾಯಕ ಸಂಪಾದಕರಾಗಿ ಪದೋನ್ನತಿ ಹೊಂದಿ ಬೆಂಗಳೂರಿಗೆ ವರ್ಗಾವಣೆಗೊಂಡರು. ಅಲ್ಲಿ ಸುಧಾ ವಾರಪತ್ರಿಕೆಯ ಸಂಪಾದಕೀಯ ಜವಾಬ್ದಾರಿಯನ್ನೂ ನಿರ್ವಹಿಸಿದರು.

ಬಿ.ಎಂ. ಹನೀಫ್ ಅವರು ಸಾಹಿತ್ಯ ಕ್ಷೇತ್ರದಲ್ಲಿಯೂ ವಿಶಿಷ್ಟ ಗುರುತನ್ನು ಮೂಡಿಸಿದ್ದಾರೆ.  ಅವರ ಪ್ರಕಟಿತ ಕೃತಿಗಳಲ್ಲಿ ಅನನ್ಯ ಸಮಾಜವಾದಿ ಲೋಹಿಯಾ, ಇತಿಹಾಸ ಮತ್ತು ಇಸ್ಲಾಂ ಎಂ.ಎನ್.ರಾಯ್ ಅವರ ಆಂಗ್ಲ ಪುಸ್ತಕದ ಕನ್ನಡ ಅನುವಾದ), ಕತ್ತಲೆಗೆ ಯಾವ ಬಣ್ಣ(ಕವನ ಸಂಕಲನ), ಮಾತೇ ಮಾತು (ಸುಧಾ ಪತ್ರಿಕೆಯಲ್ಲಿ ಪ್ರಕಟವಾದ, ಕನ್ನಡದ ಪ್ರಮುಖ ಸಾಹಿತಿಗಳ ಸಂದರ್ಶನಗಳ ಸಂಕಲನ), ಬಣ್ಣದ ಬುಗುರಿ (ಅಂಕಣ ಬರಹಗಳ ಸಂಕಲನ), ಸಜ್ಜನ ರಾಜಕಾರಣಿ ಎಸ್.ಎಂ.ಯಾಹ್ಯಾ (ವಿಧಾನ ಮಂಡಲ ಗ್ರಂಥಾಲಯಕ್ಕೆ ಬರೆದ ಅಧ್ಯಯನ ಪುಸ್ತಕ), ಕೆಂಪರಾಜ ಅರಸು (ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪ್ರಕಟಿಸಿದ ಪುಸ್ತಕ), ಕನಸು ಕನ್ನಡಿ (ಪ್ರಜಾವಾಣಿ ಸಿನಿಮಾ ಪುರವಣಿಯಲ್ಲಿ ಪ್ರಕಟವಾದ ಅಂಕಣಗಳ ಸಂಕಲನ), ಕೊಲಾಝ್ (ಕಥೆ, ಕವಿತೆ, ಪ್ರವಾಸ ಕಥನ, ಸಂದರ್ಶನ, ವಿಡಂಬನೆಗಳ ಸಂಕಲನ), ಮೈನಾರಿಟಿ ಕಾಂಪ್ಲೆಕ್ಸ್ (ಮುಸ್ಲಿಮರ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ತಲ್ಲಣಗಳ ಕುರಿತು ಬರಹಗಳ ಸಂಕಲನ),  ಮಾಂಜಿ ರವಾ ಫ್ರೈ (ಕಥಾಸಂಕಲನ) ಮುಂತಾದವು ಇವರ ಕೃತಿಗಳಲ್ಲಿ ಸೇರಿವೆ. 

ಹನೀಫ್ ಅವರ ಸಂಪಾದನೆಗಳಲ್ಲಿ ಬ್ಯಾರಿ-ಕನ್ನಡ-ಇಂಗ್ಲಿಷ್ ಶಬ್ದಕೋಶ,  ಮೈಕಾಲ ಎನ್ನುವ ಅಹ್ಮದ್ ನೂರೀ ಅವರ ಬ್ಯಾರಿಗಳ ಕುರಿತ ಸಂಶೋಧನಾ ಗ್ರಂಥ, ನವರಸ ನಗು (ನವರಸಪುರ ಉತ್ಸವದ ಅಂಗವಾಗಿ ರಾಜ್ಯ ಮಟ್ಟದ ಹಾಸ್ಯ ಕವಿಗೋಷ್ಠಿಯ ಸಂಕಲನ), ಮುತ್ತುಮಾಲೆ (ಬ್ಯಾರಿ ಭಾಷೆಯ ನುಡಿಮುತ್ತುಗಳ ಸಂಗ್ರಹ) ಮುಂತಾದವು ಸೇರಿವೆ.

ಹನೀಫ್ ಅವರು ಬ್ಯಾರಿ–ಕನ್ನಡ–ಇಂಗ್ಲಿಷ್ ನಿಘಂಟು ಸಲಹಾ ಮಂಡಳಿಯ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಜೊತೆಗೆ ದಿ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಷನ್, ಬೆಂಗಳೂರು ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದು, ಸಂಘದ Beary Times ಪ್ರಕಟಣೆಯ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ಬೆಂಗಳೂರು ದೂರದರ್ಶನದ ಚಲನಚಿತ್ರ ಸೆನ್ಸಾರ್ ಸಮಿತಿ ಹಾಗೂ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಮಿತಿಗಳ ಸದಸ್ಯರಾಗಿಯೂ ತಮ್ಮ ಸೇವೆಯನ್ನು ನೀಡಿದ್ದಾರೆ.

ಹನೀಫ್ ಅವರ ಬಹುಮುಖ ಸಾಧನೆಗಳಿಗಾಗಿ ಬೆಂಗಳೂರು ತುಳು ಕೂಟದ ತೌಲವ ಪ್ರಶಸ್ತಿ, ಗದಗಿನ ದಂಬಳ ಸ್ವಾಮೀಜಿ ಸಾಂಸ್ಕೃತಿಕ ಪ್ರತಿಷ್ಠಾನದ ಮಾಧ್ಯಮ ಮಂದಾರ ರಾಜ್ಯ ಪ್ರಶಸ್ತಿ, ಬೆಂಗಳೂರು ಕರಾವಳಿ ಒಕ್ಕೂಟದ ಕರಾವಳಿ ಸಿರಿ ಪ್ರಶಸ್ತಿ, ಕರ್ನಾಟಕ ಪತ್ರಿಕಾ ಅಕಾಡೆಮಿಯ ಗೌರವ ಪ್ರಶಸ್ತಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಅನೇಕ ಗೌರವಗಳು ಸಂದಿವೆ.

ಹನೀಫ್ ಅವರು ಅವರು ಮೀಡಿಯಾ ಸೆಂಟರ್ನ ಮುಖ್ಯಸ್ಥರಾಗಿಯೂ  ಕಾರ್ಯನಿರ್ವಹಿಸಿದ್ದಾರೆ. ಮಾಧ್ಯಮ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

ಬಿ.ಎಂ. ಹನೀಫ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

Happy birthday Bellairu Mohammed Haneef Sir 🌷🙏🌷


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!