ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಶ್ರೀಕಂಠ ಕೂಡಿಗೆ

 ಶ್ರೀಕಂಠ ಕೂಡಿಗೆ


ಡಾ. ಶ್ರೀಕಂಠ ಕೂಡಿಗೆ ಅವರು ಮಹಾನ್ ಪ್ರಾಧ್ಯಾಪಕರಾಗಿ, ಶಿಕ್ಷಣ ತಜ್ಞರಾಗಿ, ಸೃಜನಶೀಲ ಲೇಖಕರಾಗಿ, ಜಾನಪದ ತಜ್ಞರಾಗಿ, ಹೀಗೆ ಬಹುಮುಖಿಯಾಗಿ ಪ್ರಸಿದ್ಧರು.

ಶ್ರೀಕಂಠ ಕೂಡಿಗೆ ಅವರು 1947ರ ಸೆಪ್ಟೆಂಬರ್ 5ರಂದು ಜನಿಸಿದರು.
ಇವರು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಕೂಡಿಗೆ ಊರಿನವರು.  ಮೈಸೂರು ವಿಶ್ವವಿದ್ಯಾಲಯದಿಂದ  ಚಿನ್ನದ ಪದಕದೊಂದಿಗೆ ಎಂ.ಎ. ಪದವಿ ಪಡೆದರು. 'ಕನ್ನಡ ಲಾವಣಿಗಳು' ಎಂಬ ವಿಷಯದ ಮೇಲೆ ಸಂಶೋಧನೆ ನಡೆಸಿ ಪಿಎಚ್.ಡಿ ಗಳಿಸಿದರು.

ಡಾ. ಶ್ರೀಕಂಠ ಕೂಡಿಗೆ ಅವರು ಕುವೆಂಪು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಹಾಗೂ ಪ್ರಸಾರಂಗದ ನಿರ್ದೇಶಕರಾಗಿ ಸೇವೆ ಸಲ್ಲಿಸಿದವರು.  ವಿಶ್ವವಿದ್ಯಾಲಯದ ಸೆನೆಟ್ ಸಿಂಡಿಕೇಟ್, ಶಿಕ್ಷಣ ಮಂಡಳಿ, ಕಲಾ ನಿಕಾಯದ ಡೀನ್, ಪರೀಕ್ಷಾಂಗ ಕುಲಸಚಿವರಾಗಿ ಇವರ ಕಾರ್ಯ ನಿರ್ವಹಣೆ ವ್ಯಾಪಿಸಿತ್ತು.

ಡಾ. ಶ್ರೀಕಂಠ ಕೂಡಿಗೆ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ, ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಮತ್ತು ಹಂಪಿ ವಿಶ್ವವಿದ್ಯಾಲಯ ಆಡಳಿತ ಮಂಡಳಿ ಸದಸ್ಯರಾಗಿ ಸಾಂಸ್ಥಿಕ ಜವಾಬ್ದಾರಿ ನಿರ್ವಹಿಸಿದ್ದಾರೆ. ಇವರು ಕರ್ನಾಟಕ ಸರ್ಕಾರದ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ರಾಜ್ಯಮಟ್ಟದ ಪುಸ್ತಕ ಆಯ್ಕೆ ಸಮಿತಿಯ ಅಧ್ಯಕ್ಷರಾಗಿದ್ದರು.
ಯುಜಿಸಿ ನೆಟ್ ಪರೀಕ್ಷಾ ಮಂಡಳಿ ಸದಸ್ಯರಾಗಿ, ದೆಹಲಿಯ ನ್ಯಾಷನಲ್ ಬುಕ್ ಟ್ರಸ್ಟ್ ಸದಸ್ಯರಾಗಿ, ಯುಪಿಎಸ್‍ಸಿ ಕನ್ನಡ ಪಠ್ಯರಚನಾ ಸಮಿತಿ ಸದಸ್ಯರಾಗಿ, ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ, ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (VTU) ಪ್ರಸಾರಂಗದ ಸಲಹಾಮಂಡಳಿ ಸದಸ್ಯರಾಗಿ, ಹೀಗೆ ಇವರ ಬಹುಮುಖಿ ಸೇವೆ ಸಂದಿದೆ. ಇವರು 15 ಮಂದಿ ಎಂ.ಫಿಲ್ ಅಭ್ಯರ್ಥಿಗಳಿಗೆ, 25 ಮಂದಿ ಪಿಎಚ್.ಡಿ ಅಭ್ಯರ್ಥಿಗಳಿಗೆ ಯಶಸ್ವಿ ಮಾರ್ಗದರ್ಶನ ಮಾಡಿದ್ದಾರೆ.

ದೀಪಾವಳಿ ಕಥಾ ಸ್ಪರ್ಧೆ (ಪ್ರಜಾವಾಣಿ, ಉದಯವಾಣಿ, ತುಷಾರ) ಮೂಲಕ ಕನ್ನಡ ಸಣ್ಣ ಕಥಾಲೋಕ ಪ್ರವೇಶಿಸಿದ ಶ್ರೀಕಂಠ ಕೂಡಿಗೆ ಅವರು ಸಣ್ಣಕಥೆಗಾರರೆಂದೇ ಪ್ರಸಿದ್ಧರು. ಇವರ ಕಥೆಗಳು ಹಿಂದಿ, ಇಂಗ್ಲಿಷ್ ಮತ್ತು ಮಲಯಾಳಂ ಭಾಷೆಗಳಿಗೆ ಅನುವಾದಗೊಂಡಿವೆ.

ಡಾ. ಶ್ರೀಕಂಠ ಕೂಡಿಗೆ ಅವರು ತಮ್ಮ ವಿಶಿಷ್ಟ ವೈಚಾರಿಕ ಮನೋಧರ್ಮ, ಜನಪರ ಹೋರಾಟ, ಸುಂದರ ಹಸ್ತಾಕ್ಷರಕ್ಕೆ ನಾಡಿನಾದ್ಯಂತ ಪ್ರಸಿದ್ಧರು.
ಇವರು ಸಾಹಿತ್ಯ, ಜಾನಪದ, ಸಂಶೋಧನೆ ಮತ್ತು ಸಂಶೋಧನಾ ಕ್ಷೇತ್ರಕ್ಕೆ ಸಂಬಂಧಿಸಿದ 40ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

ಇವರ ಪ್ರಕಟಿತ ಕೃತಿಗಳು ಇಂತಿವೆ:

ಸಣ್ಣಕಥೆ: ನಮ್ಮಿಬ್ಬರ ನಡುವೆ, ಹುತ್ತಗಟ್ಟಿದೆ ಚಿತ್ತ, ರೂಪಾಂತರ;

ವಿಮರ್ಶೆ: ಒದಗೆ, ಧ್ಯಾನ, ಕುವೆಂಪು ಕುರಿತು, ಕುವೆಂಪು ಕಥಾಕಥನ;

ಸಂಶೋಧನೆ: ಕನ್ನಡ ಲಾವಣಿಗಳು, ಪಿಎಚ್.ಡಿ ಮಹಾಪ್ರಬಂಧ, ಕರ್ನಾಟಕ ಬೇಟೆಯ ಸಂಪ್ರದಾಯಗಳು (ಯುಜಿಸಿ ಸಂಶೋಧನಾ ಯೋಜನೆ);

ಸಂಪಾದನೆ:  ಪಾಶ್ಚಾತ್ಯ ಮಹಾಕಾವ್ಯಗಳು, 1985ರ ಕಥೆಗಳು, ರನ್ನ (ಮುತ್ತಿನಹಾರ ಮಾಲೆ), ಬಂಡಾಯ ಸಾಹಿತ್ಯ ಚಳವಳಿ: ಹತ್ತು ವರ್ಷ, ಕುವೆಂಪು ಸಾಹಿತ್ಯ: ವೈಚಾರಿಕ ನೆಲೆಗಳು, ವಸುದೇವ ಭೂಪಾಲಂ:  ಸಮಗ್ರ ಸಾಹಿತ್ಯ ಸಂಪುಟ ಭಾಗ 1 ಮತ್ತು 2, ‘ಸೀಮೊಗೆ' ಶಿವಮೊಗ್ಗ ಜಿಲ್ಲಾ ಆಕರ ಗ್ರಂಥ, 'ಶತಮಾನ' ಶಿವಮೊಗ್ಗ ನಗರ ಸಭೆ ಶತಮಾನೋತ್ಸವ ಸಂಪುಟ, 'ಕಡಿದಾಳು' ದಿ. ಕಡಿದಾಳು ಮಂಜಪ್ಪ ಶತಮಾನೋತ್ಸವ ಸಂಸ್ಮರಣ ಗ್ರಂಥ, ಆಧುನಿಕತೆ ಮತ್ತು ಕನ್ನಡ ಕಾದಂಬರಿ, ಆಧುನಿಕತೆ ಮತ್ತು ಕನ್ನಡ ಸಾಹಿತ್ಯ ಪ್ರಕಾರಗಳು, ಚೌಡ್ಲು ಮನೆತನದ ವೈಭವ, 'ದೇವಕೃಪ' ಸಂಸ್ಮರಣ ಸಂಪುಟ;

ಜಾನಪದ: ಅಂಟಿಗೆ ಪಂಟಿಗೆ ಪದಗಳು, ಭೂಮಿ ಹುಣ್ಣಿಮೆ, ಜನಪದ ಶಿಶುಪ್ರಾಸಗಳು, ಜನಪದ ಗಣಿತ, ಕೊಂಡ ಮಾಮ, ಪ್ರಶಸ್ತಿ ಪಡೆದ ಮಹನೀಯರು (ಸಂ. ಇತರರೊಂದಿಗೆ), ಜಾನಪದ ವಿವಿಧ ಮುಖಗಳು, ಜಾನಪದ ಶೋಧ;

ಪ್ರಧಾನ ಸಂಪಾದಕರಾಗಿ: ಕುವೆಂಪು ವಿಶ್ವವಿದ್ಯಾಲಯದ ಎಂಟು ಪದವಿ ಕನ್ನಡ ಪಠ್ಯ ಪುಸ್ತಕಗಳು.

ಸಿದ್ಧತೆಯಲ್ಲಿ: ಡಾ.ಶ್ರೀಕಂಠ ಕೂಡಿಗೆ ಅವರ ಸಮಗ್ರ ಸಾಹಿತ್ಯ ಆರು ಸಂಪುಟಗಳು: ಪ್ರಧಾನ ಸಂಪಾದಕರು: ಡಾ. ಚನ್ನೇಶ್ ಹೊನ್ನಾಳಿ.

ಪ್ರೊ.  ಶ್ರೀಕಂಠ ಕೂಡಿಗೆ ಅವರ ಸಾಧನೆಗೆ ಸಂದಿರುವ ಪ್ರಶಸ್ತಿ ಗೌರವಗಳಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ(2013), ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (2010), ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿಯ 'ಜಾನಪದ ತಜ್ಞ' ಪ್ರಶಸ್ತಿ, ಕರ್ನಾಟಕ ಜಾನಪದ ಅಕಾಡೆಮಿಯ ಬೆಳ್ಳಿಹಬ್ಬದ ಪುರಸ್ಕಾರ (2007), ಶಿವಮೊಗ್ಗ ಜಿಲ್ಲಾ ಗಣರಾಜ್ಯೋತ್ಸವ ಪ್ರಶಸ್ತಿ, ಕುವೆಂಪು ವಿಶ್ವವಿದ್ಯಾಲಯದ ಸಾಧನಾ ಪ್ರಶಸ್ತಿ, ಮಂಡ್ಯ ಕರ್ನಾಟಕ ಸಂಘದ ಡಾ.ರಾಗೌ ಸಾಹಿತ್ಯ ಪ್ರಶಸ್ತಿ, ಹೊನ್ನಾವರದ ವಿಶ್ವಜ್ಞಾನಪದ ಪ್ರತಿಷ್ಠಾನದ 'ಕುವೆಂಪು ದೀಪ' ಪ್ರಶಸ್ತಿ,  ತೀರ್ಥಹಳ್ಳಿ ತಾಲ್ಲೂಕು ಮತ್ತು ಶಿವಮೊಗ್ಗ ಜಿಲ್ಲಾ ಸಾಹಿತ್ಯ ಸಮ್ಮೇಳನಗಳ ಸರ್ವಾಧ್ಯಕ್ಷತೆಯ ಗೌರವಗಳು ಸೇರಿವೆ. 'ಕೂಡಿಗೆ' ಮತ್ತು 'ಆರು ಮುನಿದು' ಎಂಬ ಎರಡು ಅಭಿನಂದನ ಗ್ರಂಥಗಳು  ಅವರಿಗೆ ಸಮರ್ಪಿತವಾಗಿವೆ.

ಮಹಾನ್ ಸಾಧಕರಾದ ಗುರುವರ್ಯ ಪ್ರೊ.  ಶ್ರೀಕಂಠ ಕೂಡಿಗೆ ಅವರಿಗೆ ಹುಟ್ಟುಹಬ್ಬದ ಶುಭಾಶಯಪೂರ್ವಕ ನಮನಗಳು.

On the birthday of Great Teacher, Educationist, Folklore Specialist, writer and administrator Prof. Srikanta Koodige Sir 🌷🙏🌷




ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!