ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ದಿನೇಶ್‌ ಅಮ್ಮಣ್ಣಾಯ


 ಯಕ್ಷಗಾನ ರಸರಾಗ ಚಕ್ರವರ್ತಿ 
ದಿನೇಶ್‌ ಅಮ್ಮಣ್ಣಾಯ ನಿಧನ


ಯಕ್ಷರಂಗ ಕ್ಷೇತ್ರದಲ್ಲಿ ತಮ್ಮ ಸುಮಧುರ ಗಾಯನದಿಂದ ರಸರಾಗ ಚಕ್ರವರ್ತಿ ಎಂದೇ ಪ್ರಸಿದ್ಧರಾಗಿದ್ದ ಯಕ್ಷಗಾನ ಭಾಗವತ ದಿನೇಶ್‌ ಅಮ್ಮಣ್ಣಾಯ ಅವರು ನಿಧನರಾಗಿದ್ದಾರೆ.  ಅವರಿಗೆ 65 ವರ್ಷ ವಯಸ್ಸಾಗಿತ್ತು. 

ತೆಂಕುತಿಟ್ಟಿನ ತುಳು ಯಕ್ಷಗಾನ ಪರಂಪರೆಯನ್ನು ಬೆಳೆಸಿದ ದಾಮೋದರ ಮಂಡೆಚ್ಚರ ಮೆಚ್ಚಿನ ಶಿಷ್ಯರಾದ ದಿನೇಶ್ ಅಮ್ಮಣ್ಣಾಯ ಅವರು ಯಕ್ಷಗಾನ ಕಲಾಕ್ಷೇತ್ರದಲ್ಲಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಶೋಭಿಸಿದವರು.  ಪುತ್ತೂರು ಮೇಳದಲ್ಲಿ ಚಂಡೆ, ಮದ್ದಲೆ ವಾದಕರಾಗಿ ಸೇರಿದ ದಿನೇಶ್ ಅಮ್ಮಣ್ಣಾಯ ಅವರು ಅಲ್ಲಿಯೇ ಭಾಗವತರಾಗಿಯೂ ಮಿಂಚಿದರು. ಮುಂದೆ ಕರ್ನಾಟಕ ಮೇಳ ಸೇರಿ ದಾಮೋದರ ಮಂಡೆಚ್ಚರ ನಿಧನಾನಂತರ ತುಳು ಪ್ರಸಂಗಗಳನ್ನು ಮೆರೆಸಿದರು. ಕಾಡಮಲ್ಲಿಗೆ, ಕಚ್ಚೂರಮಾಲ್ದಿ, ಪಟ್ಟದಪದ್ಮಲೆ ಅಂತಹ ಯಕ್ಷಗಾನ ಪ್ರಸಂಗಗಳು ಅಮ್ಮಣ್ಣಾಯರ ಭಾಗವತಿಕೆಯಲ್ಲಿ ಜಯಭೇರಿ ಬಾರಿಸಿದವು.

ಪೌರಾಣಿಕ ಪ್ರಸಂಗಗಳ ಭಾಗವತಿಕೆಯಲ್ಲಿಯೂ ಅಮ್ಮಣ್ಣಾಯರದ್ದು ಬಹುದೊಡ್ಡ ಹೆಸರಾಗಿತ್ತು.  ಮಾನಿಷಾದ ಪ್ರಸಂಗವನ್ನು ಮನೆಮಾತಾಗಿಸಿದ ಕೀರ್ತಿ ಅಮ್ಮಣ್ಣಾಯರಿಗೆ ಸಲ್ಲುತ್ತದೆ. ಅಕ್ಷಯಾಂಬರ ಪ್ರಸಂಗದ ಭಾಗವತಿಕೆ ಬರೇ ಅಮ್ಮಣ್ಣಾಯ ಅವರಿಗೇ ಮೀಸಲು ಎಂಬ ಪ್ರಶಂಸೆಯಿತ್ತು. ನಳದಮಯಂತಿ, ಸತ್ಯ ಹರಿಶ್ಚಂದ್ರ ಪ್ರಸಂಗಗಳ ಅಮ್ಮಣ್ಣಾಯರ ಭಾಗವತಿಕೆ ಸದಾ ಸ್ಮರಣೀಯವೆನಿಸಿತ್ತು. 'ಸತ್ಯಹರಿಶ್ಚಂದ್ರ' ಪ್ರಸಂಗದ ಅವರ ಹಾಡುಗಳಿಗೆ ಅಭಿಮಾನಿಗಳು ಸಹಸ್ರಾರು. ಮಲ್ಪೆ ರಾಮದಾಸ ಸಾಮಗ, ಅಳಿಕೆ ರಾಮಯ್ಯ ರೈ, ಮಿಜಾರು ಅಣ್ಣಪ್ಪ, ಕೋಳ್ಯೂರು ರಾಮಚಂದ್ರ ರಾವ್, ಗುಂಪೆ ರಾಮಯ್ಯ ರೈ, ಅರುವ ಕೊರಗಪ್ಪ ಶೆಟ್ಟಿ ಮುಂತಾದ ಕಲಾವಿದರ ಒಡನಾಟವು ಇವರ ಅನುಭವಕ್ಕೆ ಆಳ ವಿಸ್ತಾರಗಳ ವ್ಯಾಪ್ತಿ ತಂದಿತ್ತು. ಹಲವಾರು ಪ್ರಮುಖ ಮೇಳಗಳಲ್ಲಿ ತಿರುಗಾಟ ನಡೆಸಿ ಅನುಭವ ಹೊಂದಿದ್ದ ಇವರು, ಇತ್ತೀಚಿನ ವರ್ಷಗಳಲ್ಲಿ ಹವ್ಯಾಸಿ ಭಾಗವತರಾಗಿ ತಮ್ಮ ಕಲಾ ಸೇವೆಯನ್ನು ಮುಂದುವರೆಸಿದ್ದರು.


ಭಾಗವತ ದಿನೇಶ್‌ ಅಮ್ಮಣ್ಣಾಯ ಅವರ ಅನುಪಮ ಕಲಾ ಸೇವೆಗೆ ಉಡುಪಿ ತುಳುಕೂಟವು ಪ್ರತಿಷ್ಠಿತ 'ಸಾಮಗ ಪ್ರಶಸ್ತಿ' ನೀಡಿ ಗೌರವಿಸಿತ್ತು. ಕಡಬ ಸಂಸ್ಮರಣಾ ಸಮಿತಿ ವತಿಯಿಂದ ಯಕ್ಷಗಾನ ಕಲಾವಿದರಿಗೆ ನೀಡುವ, ‘ಕಡಬ ವಿನಯ, ನಾರಾಯಣ ಆಚಾರ್ಯ ಸಂಸ್ಮರಣಾ ಪ್ರಶಸ್ತಿ 2025’ ಗೌರವ ಸಂದಿತ್ತು. ಪದ್ಯಾಣ ಗಣಪತಿ ಭಟ್ಟರ ಹೆಸರಲ್ಲಿ ನೀಡುವ ಪದ್ಯಾಣ ಪ್ರಶಸ್ತಿ ಹಾಗೂ ತಮ್ಮ ಗುರುಗಳಾದ ದಾಮೋದರ ಮಂಡೆಚ್ಚರ ಹೆಸರಿನಲ್ಲಿ ನೀಡುವ ಮಂಡೆಚ್ಚ ಪ್ರಶಸ್ತಿಯೂ ಸೇರಿದಂತೆ ಅನೇಕ ಗೌರವಗಳು ಇವರಿಗೆ ಸಂದಿದ್ದವು.

ಅಗಲಿದ ಭಾಗವತ ದಿನೇಶ್ ಅಮ್ಮಣ್ಣಾಯ ಚೇತನಕ್ಕೆ ಗೌರವಪೂರ್ವಕ ನಮನ🌷🙏🌷


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!