ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಅಚ್ಯುತ ಸಂಕೇತಿ

 ಅಚ್ಯುತ ಸಂಕೇತಿ


ಅಚ್ಯುತ ಸಂಕೇತಿ ಅವರು ಬಹುಮುಖಿ ಕಲಾಸಾಧಕರು ಹಾಗೂ ಸಾಂಸ್ಕೃತಿಕ ಸಹೃದತೆಯುಳ್ಳ ಸ್ವಯಂ ಉದ್ಯಮಿ. 

ನವೆಂಬರ್ 22, ಅಚ್ಯುತ ಸಂಕೇತಿ ಅವರ ಜನ್ಮದಿನ. ಕುಟುಂಬದಲ್ಲಿದ್ದ ಸಾಂಸ್ಕೃತಿಕ ವಾತಾವರಣದ ಪ್ರೇರಣೆಯಿಂದ ಇವರಿಗೆ ಬಾಲ್ಯದಿಂದಲೇ ಸಂಗೀತ, ಸಾಹಿತ್ಯ, ಲಲಿತಕಲೆಗಳ ಆಸಕ್ತಿ ದಕ್ಕಿತು.   ತಂದೆ ಶಿವಶಂಕರ್, ತಾಯಿ ಶಾರದಮ್ಮ ಈರ್ವರೂ ಗಮಕಿಗಳು ಹಾಗೂ ರಂಗಭೂಮಿ, ಆಕಾಶವಾಣಿ, ದೂರದರ್ಶನ ಕಲಾವಿದರು. ಕುಟುಂಬದ ವಾತಾವರಣ ಹಾಗೂ ಇವರ ಎಂ.ಎ. (ಕನ್ನಡ) ಮತ್ತು ಪತ್ರಿಕೋದ್ಯಮ ಡಿಪ್ಲೊಮಾ ವ್ಯಾಸಂಗ ಇವರ ವೃತ್ತಿ ಪ್ರವೃತ್ತಿಗಳಿಗೆ ಪರಸ್ಪರ ಪೂರಕವಾದವು.

ಅಚ್ಯುತ ಸಂಕೇತಿ ಅವರು ವೃತ್ತಿಪರ ಮುದ್ರಕರಾಗಿ  ಮತ್ತು ಪ್ರಕಾಶಕರಾಗಿ ಬದುಕು ಕಟ್ಟಿಕೊಂಡರೂ, ಭಾವಗೀತೆ, ಜಾನಪದಗೀತೆ, ಶಾಸ್ತ್ರೀಯ ಸಂಗೀತ, ನಾಟಕ ಮೊದಲಾದ ಹಲವು ಕಲಾಪ್ರಕಾರ, ಆಯಾಮ, ಪ್ರವೃತ್ತಿಗಳಲ್ಲಿ ಸುದೀರ್ಘಕಾಲದಿಂದ ತೊಡಗಿಕೊಂಡಿದ್ದಾರೆ. ಆಕಾಶವಾಣಿ ಮತ್ತು ದೂರದರ್ಶನ ಇವರ ಕಲಾಪ್ರೇಮಕ್ಕೆ ನೀರೆರೆದು ಪೋಷಿಸಿತು.  ಇಲ್ಲಿ ನಾಟಕ ಮತ್ತು ರೂಪಕಗಳ  ರಚನೆಯ  ಜೊತೆಗೆ ಗಾಯಕರಾಗಿಯೂ ಹೊರಹೊಮ್ಮಿದರು.

ಅಚ್ಯುತ ಸಂಕೇತಿ ಅವರು ಕಾರ್ಯನಿರತ ಪತ್ರಕರ್ತರಾಗಿಯೂ ಕಳೆದ 4 ದಶಕಗಳಿಂದ ಸಕ್ರಿಯರಾಗಿದ್ದಾರೆ. ಶಂಕರ ಟಿವಿಯಲ್ಲಿ ‘ಜ್ಞಾನಶಂಕರ’ ಮಾಸಿಕದ ಸಂಪಾದಕರಾಗಿ, ವಿಶ್ವವಾಣಿ, ಸುವರ್ಣ ಟೈಮ್ಸ್ ಆಫ್ ಕರ್ನಾಟಕ, ದೆಹಲಿವಾರ್ತೆ, ಕರ್ಮವೀರ ಪತ್ರಿಕೆಗಳಲ್ಲಿ ಅಂಕಣಕಾರರಾಗಿ, ಸುದ್ದಿ ಸಂಪಾದಕರಾಗಿ ಹಾಗೂ ಮಾಧ್ಯಮ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. ‘ವಂದೇ ಕರ್ನಾಟಕ’ ಮಾಸಿಕದ ವಿಶೇಷ ವರದಿಗಾರರಾಗಿದ್ದಾರೆ.

ಅಚ್ಯುತ ಸಂಕೇತಿ ಅವರು ಬೆಂಗಳೂರು ಆಕಾಶವಾಣಿ ಕಾರ್ಯಕ್ರಮ ನಿರ್ದೇಶಕರಾಗಿದ್ದ, ಪ್ರಸಾರ ಭಾರತಿಯ ದಕ್ಷಿಣ ವಲಯ ಸಹಾಯಕ ನಿರ್ದೇಶಕರಾಗಿ ನಿವೃತ್ತರಾಗಿರುವ ಡಾ. ಎನ್. ರಘು ಅವರ ದೀರ್ಘಕಾಲೀನ ಒಡನಾಡಿಯಾಗಿ, ಸಹಪಾಠಿಯಾಗಿ, ಬಾಲ್ಯದಿಂದಲೂ ಒದಗಿದ ಸಾಂಸ್ಕೃತಿಕ ಸತ್ಸಂಗ ಹಾಗೂ ವಿದ್ವಾನ್ ಎಚ್.ಕೆ. ನಾರಾಯಣ ಅವರ ಮಾರ್ಗದರ್ಶನದಲ್ಲಿ  ಸುಗಮ ಸಂಗೀತ ಕ್ಷೇತ್ರದಲ್ಲಿ ತೊಡಗಿಕೊಂಡ ಕಾರಣ, ಸದಭಿರುಚಿಯ ಕವಿಗೀತೆಗಳನ್ನು ನಾಡಿನಾದ್ಯಂತ ವಿವಿಧ ವೇದಿಕೆಗಳಲ್ಲಿ ಪ್ರಸ್ತುತ ಪಡಿಸಿರುವ ಭಾಗ್ಯಶಾಲಿಯಾಗಿದ್ದಾರೆ.

ಡಾ. ಆರ್.ಕೆ. ಶ್ರೀಕಂಠನ್, ವಿದ್ವಾನ್ ಆರ್.ಕೆ. ಸೂರ್ಯನಾರಾಯಣ, ಡಾ. ಆರ್.ಕೆ. ಪದ್ಮನಾಭ, ಡಾ. ನಾಗರಾಜ ಹವಾಲ್ದಾರ್ ಮೊದಲಾದ ನಾಡಿನ ಎಲ್ಲಾ ಸಂಗೀತಗಾರರ ಬಾಂಧವ್ಯ; ಪ್ರೊ. ಜೀವಿ, ಪ್ರೊ. ನಿಸಾರ್ ಅಹಮದ್, ಪ್ರೊ. ಎಚ್.ಎಸ್. ವೆಂಕಟೇಶಮೂರ್ತಿ ಮೊದಲಾದ ಉದ್ಧಾಮ ಸಾಹಿತಿಗಳ ನಿಕಟ ಒಡನಾಟ, ಇವರ ಸಾಂಸ್ಕೃತಿಕ-ಸಾರಸ್ವತ ಲೋಕದ ಅನುಭವದ ವ್ಯಾಪ್ತಿಯನ್ನು ವಿಸ್ತೃತಗೊಳಿಸಿದೆ.

ಬಾಲಕಲಾವಿದನಾಗಿ ‘ಅರಿವು’ ಚಿತ್ರದಲ್ಲಿ ನಟಿಸುವ ಮೂಲಕ ಅಚ್ಯುತ ಸಂಕೇತಿ ಚಿತ್ರರಂಗವನ್ನು ಪ್ರವೇಶಿಸಿದರು. ಅಂತಾರಾಷ್ಟ್ರೀಯ ಖ್ಯಾತಿಯ ರಂಗಕರ್ಮಿ ಬಿ.ವಿ. ಕಾರಂತ ಅವರ ಸಂಗೀತ ನಿರ್ದೇಶನದಲ್ಲಿ ‘ನಕ್ಕಳಾ ರಾಜಕುಮಾರಿ’ ಚಿತ್ರದಲ್ಲಿ ಹಾಡಿ ಹಿನ್ನೆಲೆ ಗಾಯಕರಾದರು. ಚಿತ್ರಸಾಹಿತಿಯಾಗಿರುವ ಸಂಕೇತಿಯವರ ಗೀತೆಗಳನ್ನು ಎಸ್.ಪಿ.ಬಿ.ಯವರು ಹಾಡಿದ್ದಾರೆ.

ಆಕಾಶವಾಣಿ ಕವಿಯಾಗಿ ಅಚ್ಯುತ ಸಂಕೇತಿ ಅವರು ರಚಿಸಿದ ಭಾವಗೀತೆಗಳು ಖ್ಯಾತ ಸಂಗೀತ ಸಂಯೋಜಕರಿಂದ ಸಂಯೋಜನೆಗೊಂಡಿವೆ. ಬಾನುಲಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ‘ಮನ್ ಕಿ ಬಾತ್’ ಇವರ ಲೇಖನಿಯಲ್ಲಿ ಕನ್ನಡಕ್ಕೆ ಅನುವಾದಗೊಂಡಿವೆ. ಬಾನುಲಿಗಾಗಿ ಯಶಸ್ವಿಯಾಗಿ ಅನೇಕ ಹಿಂದಿ ನಾಟಕಗಳ ಅನುವಾದ ಮಾಡಿದ್ದಾರೆ. ಬೆಂಗಳೂರು ದೂರದರ್ಶನದಲ್ಲಿ ವಿವಿಧ ಕಾಲಘಟ್ಟಗಳಲ್ಲಿ ಪ್ರಸಾರಗೊಂಡ ಅನೇಕ ಧಾರಾವಾಹಿ, ಸಂಚಿಕೆಗಳಿಗೆ ಕಥೆ, ಚಿತ್ರಕಥೆ, ಸಂಭಾಷಣೆಗಳನ್ನು ರಚಿಸಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ‘ಮನೋನಂದನ’ ಸಾಕ್ಷ್ಯಚಿತ್ರ ನಿರ್ದೇಶಿಸಿದ್ದಾರೆ. ಜೋಯಾಲಕ್ಕಾಸ್ ಸಂಸ್ಥೆಯ ಕನ್ನಡಾನುವಾದವನ್ನು ಕಳೆದ 3 ದಶಕಗಳಿಂದ ಸತತವಾಗಿ ಮಾಡಿಕೊಂಡು ಬರುತ್ತಿದ್ದಾರೆ.

ಅಚ್ಯುತ ಸಂಕೇತಿ ಅವರು ಕಳೆದ ಮೂರೂವರೆ ದಶಕಗಳಿಂದ ಸ್ವಂತ ಮುದ್ರಣ ಘಟಕ ನಡೆಸುತ್ತಾ, ಕಾಲಕಾಲಕ್ಕೆ ಆಧುನೀಕರಿಸುತ್ತಾ, ಡಿಟಿಪಿಯಲ್ಲೂ ಕ್ರಿಯಾಶೀಲರಾಗಿ ಒಳಪುಟ/ರಕ್ಷಾಪುಟ ವಿನ್ಯಾಸಕಾರರೂ ಆಗಿದ್ದಾರೆ. 'ತುಲನ' ಪ್ರಕಾಶನದ ಮೂಲಕ ಸಾವಿರಕ್ಕೂ ಹೆಚ್ಚು ಕೃತಿಗಳನ್ನು ಪ್ರಕಾಶನ ಮಾಡಿದ್ದಾರೆ. ಖ್ಯಾತ ಹಿನ್ನೆಲೆ ಗಾಯಕ ವಿಷ್ಣುರಾಮನ್ ಕುರಿತು ‘ವಿಷ್ಣುಪುರಾಣ’ ಕೃತಿಯನ್ನು ರಚಿಸಿದ್ದಾರೆ. ಖ್ಯಾತ ತಬಲಾ ವಾದಕ, ಗಾಯಕ ಪಂ. ವಿಶ್ವನಾಥ ನಾಕೋಡ್ ಅವರ ಜೀವನಗಾಥೆ ಆಧಾರಿತ ಕೃತಿ ‘ವಿಶ್ವದರ್ಶನ’ ಮೂಡಿಸಿದ್ದಾರೆ.

‘ಕಲಾರತ್ನ’ ಪ್ರಶಸ್ತಿ ಪುರಸ್ಕೃತರಾದ ಅಚ್ಯುತ ಸಂಕೇತಿ ಅವರು ಸ್ವತಂತ್ರವಾಗಿ ವಿವಿಧ ವೇದಿಕೆಗಳಲ್ಲಿ ಹಾಡುವುದಲ್ಲದೆ, ವಿವಿಧ ಪ್ರತಿಷ್ಠಿತ ಸಂಸ್ಥೆಗಳಿಂದ  ಆಹ್ವಾನಿತರಾಗಿ ತಮ್ಮ ಗಾನ-ನುಡಿಗಳಿಂದ ಮನ್ನಣೆ ಗೌರವಗಳಿಗೆ ಪಾತ್ರರಾಗಿದ್ದಾರೆ.
ಇವರು 'ಸಂಪದ' (ಸಂಸ್ಕೃತಿ ಪರಂಪರೆ-ದರ್ಶನ) ಸಾಂಸ್ಕೃತಿಕ ವೇದಿಕೆ ಮೂಲಕ, ಎಲ್ಲಾ ಕಲಾಪ್ರಕಾರಗಳ ಹವ್ಯಾಸಿ, ವೃತ್ತಿಪರ ಕಲಾವಿದರಿಗೆ ಸದಭಿರುಚಿಯ ವೇದಿಕೆ ಕಲ್ಪಿಸಿದ್ದು, ನಾಡಿನಾದ್ಯಂತ ಸಾಂಸ್ಕೃತಿಕ-ಸಾಹಿತ್ಯಿಕ ಸಂಘಟನೆ, ಶಾಸ್ತ್ರೀಯ ಸಂಗೀತ-ವಾದ್ಯಸಂಗೀತ-ಹಿನ್ನೆಲೆ ಗಾಯನ ತರಬೇತಿ, ವಿಚಾರ ಸಂಕಿರಣ, ರಾಜ್ಯಮಟ್ಟದ ಸುಗಮ ಸಂಗೀತ ಸ್ಪರ್ಧೆ, ಚಿತ್ರಗೀತೆ ಕರೋಕೆ ಆಯೋಜಿಸುತ್ತಿದ್ದಾರೆ.

ಅಚ್ಯುತ ಸಂಕೇತಿ ಅವರು ಕನ್ನಡ ಜಾನಪದ ಪರಿಷತ್ತಿನ ಬಸವನಗುಡಿ ವಿಧಾನಸಭಾ ಕ್ಷೇತ್ರ ಘಟಕ ಮತ್ತು ಬಸವನಗುಡಿ ಘಟಕದ ಮಕ್ಕಳ ಸಾಹಿತ್ಯ ಪರಿಷತ್ತಿನ. ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಸಾಧಕರಾದ ಅಚ್ಯುತ ಸಂಕೇತಿ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಹಾರೈಕೆಗಳು.

Happy birthday Achyuta Sankethi Sampada 🌷🌷🌷

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!