ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಸುಮನಾ (ಎಂ. ವಿ. ವೆಂಕಟೇಶಮೂರ್ತಿ)

 ಸುಮನಾ (ಎಂ. ವಿ. ವೆಂಕಟೇಶಮೂರ್ತಿ)


'ಸುಮನಾ' ಎಂದು ಸಾಹಿತ್ಯಲೋಕದಲ್ಲಿ ಅಸಾಧಾರಣ ನಿಷ್ಠಾವಂತ ಸಾಹಿತ್ಯ ಪರಿಚಾರಿಕೆಗೆ ಹೆಸರಾದವರು ಪೂಜನೀಯ ಹಿರಿಯರಾದ ಎಂ.ವಿ. ವೆಂಕಟೇಶಮೂರ್ತಿ ಅವರು. 

ಹೃದಯವಂತ ಸಾಹಿತಿ ವಿ. ಸೀತಾರಾಮಯ್ಯನವರ, ಮಲ್ಲಿಗೆಯ ಕವಿ ಕೆ. ಎಸ್. ನರಸಿಂಹಸ್ವಾಮಿಯವರ ಅನುಚರರಾಗಿ ಹಲವು ದಶಕಗಳ ಕಾಲ ಸಾಹಿತ್ಯಪರಿಚಾರಿಕೆಯನ್ನು ಸಾರ್ಥಕಗೊಳಿಸಿದ ಮೂರ್ತಿಯವರು ಇಂದಿಗೂ ಅವರ  ನೆನಪನ್ನು ತಮ್ಮ ಮನದಲ್ಲಿ ಮಾತ್ರವಲ್ಲದೆ ಲೋಕದಲ್ಲಿ ಕೂಡ ಹಸುರಾಗಿರಲು ವ್ಯಾಪಕವಾದ  ಕಾರ್ಯಕಲಾಪಗಳನ್ನು ನಡೆಸುತ್ತ ಬಂದಿದ್ದಾರೆ.

ಎಂ. ವಿ. ವೆಂಕಟೇಶಮೂರ್ತಿ (ಸುಮನಾ) ಅವರು  1946ರ ನವೆಂಬರ್ 24ರಂದು ಶಿವನಸಮುದ್ರದಲ್ಲಿ ಜನಿಸಿದರು. ಬ್ಯಾಂಕಿಂಗ್ ಮತ್ತು ವಾಣಿಜ್ಯ ವಿಷಯಗಳಲ್ಲಿ ಸ್ನಾತಕೋತ್ತರ ಪದವೀಧರರಾದ ಇವರು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿ,  ಅಧಿಕಾರಿಯಾಗಿ ಸ್ವಯಂ ನಿವೃತ್ತಿ ಪಡೆದವರು. ವಿಶೇಷವಾಗಿ, ಆ ಅವಧಿಯಲ್ಲಿ ಬ್ಯಾಂಕ್ ಅಧಿಕಾರಿಗಳು ಮತ್ತು ಉದ್ಯೋಗಿಗಳ ಸಂಘಟನೆ ಹಾಗೂ ಅವರ ಕ್ಷೇಮಾಭಿವೃದ್ಧಿಗಾಗಿ ಹೆಚ್ಚು ಶ್ರಮಿಸಿದರು.

ಸಾಹಿತ್ಯದಲ್ಲಿ ಮೊದಲಿನಿಂದ ಅತೀವ ಪ್ರೀತಿ, ಆಸಕ್ತಿಯನ್ನು ಬೆಳೆಸಿಕೊಂಡ ‘ಸುಮನಾ’ ಹಲವು ಹಿರಿಯ ಕನ್ನಡ ಸಾಹಿತಿಗಳೊಂದಿಗೆ ನಿಕಟ ಸಂಪರ್ಕವಿರಿಸಿಕೊಂಡಿದ್ದರು ಮಾತ್ರವಲ್ಲ, ಅವರ ಕೃತಿ ರಚನೆ ಮತ್ತು ಪ್ರಕಟಣೆಯಲ್ಲಿ ಬಹುವಾಗಿ ನೆರವಾದವರು.  ಇವರನ್ನು ಮನೆಯವರು, ಓರಗೆಯವರು, ವಿ.ಸೀ., ಕೆ.ಎಸ್.ನ., ವಿ. ಎನ್. ಇನಾಂದಾರ್ ಮೊದಲಾದ ಹಲವರು ಹಿರಿಯರು
ಕರೆಯುತ್ತಿದ್ದುದು ‘ಕುಮಾರ್’ ಎಂದು. (ಇದು ಅವರ ಹುಟ್ಟುಹೆಸರಾದ ‘ಪ್ರೇಮಕುಮಾರ್’ ಎಂಬುದರ ಹ್ರಸ್ವರೂಪ.)  ಇನ್ನು ಅವರೇ ತಮಗಾಗಿ ಇರಿಸಿಕೊಂಡ ಸಾಹಿತ್ಯಸಂಜ್ಞೆ ‘ಸುಮನಾ’.  ಸಾಹಿತ್ಯ ಮತ್ತು ಮಹಾಜನಸಂಸರ್ಗ
ಕೊಡಬಹುದಾದ ಎಲ್ಲ ಸತ್ಸಂಸ್ಕಾರಗಳಿಗೂ ಆಗರವಾದ ಇವರು ನಿಜಾರ್ಥದಲ್ಲೂ ಸುಮನಸರು. ಕಿರಿಯರು ಇವರಿಗೆ ನಮಸ್ಕಾರ ಮಾಡಹೋದರೆ ಅದಕ್ಕೆ ಸಮ್ಮತಿಸದೆ “ನಾನು ತುಂಬ ಚಿಕ್ಕವನು. We know what we are - non-entities” ಎನ್ನುತ್ತಾರೆ.

ಪೂರ್ವಸೂರಿಗಳಲ್ಲಿ ಅವರ ಆದರ
ಯಾವ ಮಟ್ಟದ್ದೆಂದರೆ, ಡಿ.ವಿ.ಜಿ., ವಿ.ಸೀ., ಕೆ.ಎಸ್.ನ. ಮೊದಲಾದವರ ಕೈಬರೆಹವರಿರುವ ಸಣ್ಣ-ಪುಟ್ಟ ಚೀಟಿಗಳನ್ನೂ - ಅವು ಲೌಕಿಕವಾಗಿ ಎಷ್ಟೇ ಅನುಪಯುಕ್ತವಾಗಿದ್ದರೂ - ಜತನವಾಗಿ ಕಾಪಿಟ್ಟುಕೊಂಡು ಬಂದರು. ಈ ಸಂಗ್ರಹ ಪತ್ರಿಕೆಯ ಪ್ರಕಟನೆಗಳು, ವಿವಿಧ ಕಾರ್ಯಕ್ರಮಗಳ ಆಹ್ವಾನ-ಸೂಚನೆಗಳು, ಪತ್ರಗಳು, ಕರಡು-ಟಿಪ್ಪಣಿಗಳು, ರೇಖಾಚಿತ್ರ-ಛಾಯಾಚಿತ್ರಗಳವರೆಗೆ ವಿಸ್ತರಿಸಿಕೊಂಡಿದೆ. ನಿಜವಾಗಿ ವಿಶ್ವವಿದ್ಯಾಲಯವೊಂದು ಮಾಡಬೇಕಾದ ಸಾಹಿತ್ಯಸೇವೆಯನ್ನು ಮೂರ್ತಿಯವರು ಈ ಮೂಲಕ ಮಾಡಿದರು. ಈ ಮೌಲಿಕ ಸಂಗ್ರಹವನ್ನು ಇವರು ಈಚೆಗೆ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಗೆ ಉದಾರವಾಗಿ ನೀಡಿದ್ದಾರೆ. ಸಂಸ್ಥೆಯು ಇದನ್ನು
ಗೌರವದಿಂದ ಸ್ವೀಕರಿಸಿ ಜೋಪಾನವಾಗಿ ಸಂರಕ್ಷಿಸಿದೆ. ಮೂರ್ತಿಯವರ ಈ ಸಾರಸ್ವತ ಸಂಪದ ಅದೆಷ್ಟು ಮೌಲಿಕವಾದುದು ಎಂದು
ತೋರ್ಪಡಿಸಲು ಅಲ್ಲಿಯ ಕೆಲವು ಅಂಶಗಳನ್ನು ಪ್ರಸ್ತಾವಿಸಬಹುದು:
ಪ್ರಾಕ್ತನವಿಮರ್ಶವಿಚಕ್ಷಣ ರಾ. ನರಸಿಂಹಾಚಾರ್ಯರ ಹಸ್ತಾಕ್ಷರವಿರುವ - ಕಿಸೆಯಲ್ಲಿ ಇರಿಸಿಕೊಳ್ಳಬಹುದಾದ - ಹೋಮರಿನ ಇಲಿಯಡ್ ಮತ್ತು ಒಡೆಸ್ಸಿ ಕಾವ್ಯಗಳು. ಇವು ನರಸಿಂಹಾಚಾರ್ಯರ ವಿಸ್ತಾರವಾದ ವ್ಯಾಸಂಗದ ಪ್ರತೀಕಗಳಾಗಿದ್ದು ಐತಿಹಾಸಿಕ
ಮಹತ್ವವನ್ನು ಹೊಂದಿವೆ. ಬಿ. ಎಂ. ಶ್ರೀಕಂಠಯ್ಯನವರು ಛಂದಃಶಾಸ್ತ್ರ
ಇತಿಹಾಸದ ಬಗೆಗೆ ಮಾಡಿಕೊಂಡಿದ್ದ ಟಿಪ್ಪಣಿಗಳು. ಇವು ಬಿ.ಎಂ.ಶ್ರೀ. ಅವರು ಬರೆಯಲಾಗದ ಗ್ರಂಥವೊಂದರ ಆಕೃತಿಯನ್ನು ಕಾಣಿಸಿ ಯಾವುದೇ ವಿಷಯವನ್ನು ಕುರಿತ ಅವರ ತಯಾರಿ ಎಷ್ಟು ಸರ್ವತೋಮುಖವಾಗಿರುತ್ತಿತ್ತು ಎಂದು ತೋರ್ಪಡಿಸುತ್ತವೆ. ವಿ.ಸೀ. ಅವರ ‘ದ್ರಾಕ್ಷಿ-ದಾಳಿಂಬೆ’ ಕವನಸಂಕಲನದ ಹಾಗೂ ಕೆ. ವಿ. ಅಯ್ಯರ್ ಅವರ ‘ಶಾಂತಲಾ’ ಕಾದಂಬರಿಯ ಹಸ್ತಪ್ರತಿಗಳು. ಇವು ಆಧುನಿಕ ಕನ್ನಡಸಾಹಿತ್ಯದ ಎರಡು ವಿಶಿಷ್ಟ ಕೃತಿಗಳ ನಿರ್ಮಾಣಸ್ತರದ ಗುರುತುಗಳನ್ನೂ ವಿಕಾಸದ ಪಥವನ್ನೂ ಅಂತಿಮವಾಗಿ ಅವು ಪಡೆದ ರೂಪವನ್ನೂ ಕೃತಿಕಾರರ ಕೈಬರೆಹದಲ್ಲಿಯೇ ಕಾಣಿಸಿ ಅಧ್ಯಯನಾಸಕ್ತರ ಪಾಲಿಗೆ ಹಬ್ಬವಾಗಿವೆ; ಹೆಚ್ಚಿನ ಸಂಶೋಧನೆಗೆ ನಾಂದಿಯಾಗಿವೆ. ಇವಲ್ಲದೆ ವಿ.ಸೀ. ಅವರ ಹೆಚ್ಚಿನ
ಕವನಗಳನ್ನು ಒಳಗೊಂಡ ಅವರದೇ ಬರೆಹದಲ್ಲಿರುವ ಹಸ್ತಪ್ರತಿ; ಎಂ. ಹಿರಿಯಣ್ಣ, ಎ. ಆರ್. ಕೃಷ್ಣಶಾಸ್ತ್ರಿ ಮೊದಲಾದ ಆಚಾರ್ಯರಲ್ಲಿ ವಿ.ಸೀ. ಕಲಿಯುವಾಗ ತರಗತಿಯಲ್ಲಿ ಮಾಡಿಕೊಂಡ ಟಿಪ್ಪಣಿಗಳು, ಅಲಂಕಾರಶಾಸ್ತ್ರವನ್ನು ಕುರಿತ ವಿ.ಸೀ. ಅವರ ಟಿಪ್ಪಣಿಗಳು - ಬೆಲೆಕಟ್ಟಲಾಗದ ಇಂಥ ಹತ್ತಾರು ಸಾರಸ್ವತ ಶಕಲಗಳು ಈ ಸಂಗ್ರಹದಲ್ಲಿವೆ. ಎಸ್. ಆರ್. ರಾಮಸ್ವಾಮಿಯವರ ಎಳವೆಯಲ್ಲಿಯೇ ಅವರ ಸತ್ವವನ್ನು ಡಿ.ವಿ.ಜಿ. ಗುರುತಿಸಿ ಗೋಖಲೆ ಸಂಸ್ಥೆಗೆ ತಮ್ಮ ಉತ್ತರಾಧಿಕಾರಿಯಾಗಲು ಇವರು
ಸಮರ್ಥರೆಂದು ಹೇಳಿ ವಿ.ಸೀ. ಅವರಿಗೆ ಬರೆದ ಪತ್ರವೇ ಇರಬಹುದು, ವಿದ್ವಾನ್. ಎನ್. ರಂಗನಾಥಶರ್ಮರು ವ್ಯಾಕರಣಶಾಸ್ತ್ರದ ಹಿನ್ನೆಲೆಯಲ್ಲಿ ಪ್ರಾಚೀನ ಭಾರತದ ವಿದ್ಯಾಪದ್ಧತಿಯನ್ನು ನಿರೂಪಿಸಿರುವ ಲೇಖನವೇ ಇರಬಹುದು, ಎಸ್. ಕೆ. ರಾಮಚಂದ್ರರಾಯರ
ಕೆಲವು ಸಂಗೀತರಚನೆಗಳ ಸ್ವರಾಂಕನಸಹಿತ ಹಸ್ತಪ್ರತಿಯೇ ಆಗಿರಬಹುದು, ‘The Listener,’ ‘Times Literary Supplement’ ಪತ್ರಿಕೆಗಳ ವಿಶೇಷಸಂಚಿಕೆಗಳೇ ಆಗಿರಬಹುದು - ಒಂದೊಂದೂ ಅನರ್ಘ್ಯ ರತ್ನ. ಬಲುಪಾಲು ವಿ.ಸೀ. ಅವರಿಂದ ಹಸ್ತಾಂತರವಾಗಿ ತಮಗೆ ಬಂದ ಈ ಸಂಗ್ರಹವನ್ನು ಮೂರ್ತಿಯವರು ಯಾರ ಒತ್ತಾಸೆಯೂ ಇಲ್ಲದೆ ‘ಸ್ವಾಂತಃ ಸುಖಾಯ’ ಹಲವು ದಶಕಗಳ ಕಾಲ ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿಕೊಂಡು ಬಂದದ್ದು ಅವರ ಅವ್ಯಾಜ ಸಾಹಿತ್ಯಪ್ರೀತಿಯ ದ್ಯೋತಕವಾಗಿದೆ.

‘ವಿ.ಸೀ. ಸಂಪದ’ ಎಂಬ ಸ್ನೇಹಸಂಘಟನೆಯನ್ನು 1990ರಲ್ಲಿ ಸ್ಥಾಪಿಸಿ ಅಂದಿನಿಂದ ಇಂದಿನವರೆಗೆ ಆ ವೇದಿಕೆಯ ಮೂಲಕ ನಲವತ್ತಕ್ಕೂ ಹೆಚ್ಚು ಮಹತ್ವದ ಹೊತ್ತಿಗೆಗಳನ್ನು ಹೊರತಂದಿದ್ದಾರೆ, ನೂರಾರು ಅರ್ಥಪೂರ್ಣ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ‘ಸ್ನೇಹಸಂಘಟನೆ’ ಎಂಬ ವಿಶಿಷ್ಟ ಶಬ್ದ ಮೂರ್ತಿಯವರ ವ್ಯಕ್ತಿತ್ವದ ಎರಡು ಪ್ರಮುಖ ಆಯಾಮಗಳನ್ನು ಕಂಡರಿಸುತ್ತದೆ. ಈ ಸಂಸ್ಥೆಯ ಸ್ಫೂರ್ತಿಸ್ಥಾನವೂ ಶಕ್ತಿಕೇಂದ್ರವೂ ಆದ ವಿ. ಸೀತಾರಾಮಯ್ಯನವರ ಸಮಗ್ರ ಸಾಹಿತ್ಯವನ್ನು ಇಪ್ಪತ್ತೆಂಟು ಸಂಪುಟಗಳಲ್ಲಿ ಪ್ರಕಟಿಸುವ ಬೃಹದ್‌ಯೋಜನೆಯನ್ನು ಮೂರ್ತಿಯವರು ರೂಪಿಸಿ ಕುಂದಿಲ್ಲದಂತೆ ಸಂಪನ್ನಗೊಳಿಸಿದ್ದಾರೆ. ಈ ಸಂಪುಟಗಳ ಅಚ್ಚು, ಕಟ್ಟು, ಅಕ್ಷರಿಕೆ, ವಿನ್ಯಾಸ - ಎಲ್ಲವೂ ಪ್ರಥಮಪಂಕ್ತಿಯವು. ಕೆಲವು ಪುಸ್ತಕಗಳನ್ನು ಕಂಡೊಡನೆ ‘ಕಣ್ಣಿಗೆ ಒತ್ತಿಕೊಳ್ಳಬೇಕಾದ ಕೃತಿ’ ಎಂದು ಹಾ. ಮಾ. ನಾಯಕರು ಹೇಳುತ್ತಿದ್ದುದನ್ನು ಮೂರ್ತಿಯವರೇ ನೆನೆದಿದ್ದಾರೆ. ಈ ಕೃತಿಗಳು ಅಂಥವು. ಮೂರ್ತಿಯವರು
ಸ್ವಯಂ ಒಳ್ಳೆಯ ವಿಮರ್ಶಕರಾದರೂ ಪ್ರತಿಯೊಂದು ಸಂಪುಟಕ್ಕೂ ಆಯಾ ವಿಷಯತಜ್ಞರಿಂದ ಪ್ರಸ್ತಾವನೆಗಳನ್ನು ಬರೆಯಿಸಿದ್ದಾರೆ.

ಇದರ ಜೊತೆಗೆ ‘ಪ್ರತಿಭಾಸಂಪನ್ನರು’ ಎಂಬ ವಿನೂತನ ಪ್ರಕಲ್ಪದ ಮೂಲಕ
ಸಾಹಿತ್ಯ, ಸಮಾಜಸೇವೆ, ಸಂಸ್ಕೃತಿ-ಜನಪರ ಆಂದೋಲನ ಮುಂತಾದ ಆಯಾಮಗಳಲ್ಲಿ ಸೇವೆ ಸಲ್ಲಿಸಿದ ಮಹನೀಯರನ್ನು ಗೌರವಿಸಿ ಅವರ ಬಗೆಗೆ ಚಿಕ್ಕ-ಚೊಕ್ಕ ಲೇಖನಗಳನ್ನು ಬರೆಯಿಸಿ ಅವನ್ನೆಲ್ಲ ಸಂಕಲಿಸಿ ಪುಸ್ತಕರೂಪದಲ್ಲಿ ಪ್ರಕಟಿಸುವ (ಎಂಟು ಸಂಪುಟಗಳು) ಸಾಹಸವನ್ನೂ ಮೂರ್ತಿಯವರು ಮಾಡಿದ್ದಾರೆ. 'ಸಂಪದ’ದ ಮೂಲಕ ಹಲವಾರು ಅಮೂಲ್ಯ ಕೃತಿಗಳನ್ನು ಮೂರ್ತಿಯವರು ಹೊರತಂದಿದ್ದಾರೆ. ಎಸ್. ಕೆ. ರಾಮಚಂದ್ರರಾಯರ
‘ಪ್ರತಿಭೆಯೆಂದರೇನು?’ ಮತ್ತು 'ಸಂಗೀತಸಾಮ್ರಾಜ್ಞಿ ಎಂ. ಎಸ್. ಸುಬ್ಬುಲಕ್ಷ್ಮಿ', ಎಂ. ರಾಮಚಂದ್ರ ಅವರು ಸಂಪಾದಿಸಿಕೊಟ್ಟ ಸೇಡಿಯಾಪು ಕೃಷ್ಣ ಭಟ್ಟರ ‘ಪತ್ರಾವಳಿ’, ಸೇಡಿಯಾಪು ಅವರದ್ದೇ ‘ಗಮಕಸಮಾಸ’, ಎಚ್. ಕೆ. ರಂಗನಾಥ್ ಅವರ ‘ನೆನೆದವರು
ಮನದಲ್ಲಿ’, ಟಿ. ವಿ. ವೆಂಕಟಾಚಲ ಶಾಸ್ತ್ರಿ ಅವರ ‘ಉದಾರಚರಿತರು, ಉದಾತ್ತಪ್ರಸಂಗಗಳು’, ಶತಾವಧಾನಿ ಗಣೇಶರ 'ವಾಣೀವಾಹನ’, ‘ಸರ್ವತಂತ್ರಸ್ವತಂತ್ರ’ ಮತ್ತು ‘ಆರ್ದ್ರಜ್ಯೋತಿ’ ಅಂಥ ಕೆಲವು ಪ್ರಮುಖವಾದ ಹೊತ್ತಿಗೆಗಳು ಇಲ್ಲಿ ಸೇರಿವೆ.

ವಿ.ಸೀ. ಅವರ ಮೇಲೆ ಹೇಳಿದ ಬೃಹತ್ ಕಾರ್ಯಗಳ ಜೊತೆಗೆ ಇತ್ತೀಚೆಗೆ ವಿ.ಸೀ. ಅವರ ಬಗೆಗೆ ಸಮಸ್ತ ವಿವರಗಳನ್ನೂ ಒಳಗೊಂಡ - ಅವರ ಸಾಹಿತ್ಯಸಮಷ್ಟಿಯ ‘ಸಾಫ್ಟ್ ಕಾಪಿ’ಗಳೂ ಸೇರಿದ - ಮೌಲಿಕವಾದ ಜಾಲತಾಣವೊಂದನ್ನು ತಜ್ಞರಿಂದ ನಿರ್ಮಿಸಿದ್ದಾರೆ. ಈ ಮೂಲಕ ವಿ.ಸೀ. ಅವರ ಸಾಹಿತ್ಯವು ಪ್ರಪಂಚದ ಯಾವುದೇ ಭಾಗದಲ್ಲಿರುವ ಆಸಕ್ತ ಕನ್ನಡಿಗರಿಗೆ ಮುಕ್ತವಾಗಿ ದೊರಕುವಂತಾಗಿದೆ. ಮತ್ತೂ ಮುಂದುವರಿದು ಮೂರ್ತಿಯವರು ತಾವು ಪ್ರತಿದಿನ ವಿ.ಸೀ. ಅವರಲ್ಲಿಗೆ ಹೋಗಿಬರುತ್ತಿದ್ದಾಗ ಮಾಡಿಕೊಂಡಿದ್ದ ಟಿಪಣ್ಣಿಗಳನ್ನು ಈಗ ವ್ಯವಸ್ಥಿತವಾಗಿ ಬರೆದಿಡುತ್ತಿದ್ದಾರೆ. ಈ ಮೂಲಕ
ಹಿರಿಯ ಸಾಹಿತಿಯೊಬ್ಬರ ಮನಸ್ಸು ಹೇಗೆ ವರ್ತಿಸುತ್ತಿತ್ತು, ಜೀವನದ ವಿವಿಧ ಸಂದರ್ಭಗಳಲ್ಲಿ ಅವರು ಹೇಗೆ ನಡೆದುಕೊಳ್ಳುತ್ತಿದ್ದರು, ಕಲೆ-ಸಾಹಿತ್ಯಗಳ ಬಗೆಗೆ ಅವರ ಆಲೋಚನೆ ಹೇಗೆ ಹರಿಯುತ್ತಿತ್ತು ಎಂಬ ವಿಶದ ಚಿತ್ರಣ ನಮಗೆ ದೊರೆಯಲಿದೆ.  ಇದೇ ಬಗೆಯ ಪರಿಚಾರಿಕೆಯನ್ನು ಕೆ. ವಿ. ಅಯ್ಯರ್, ವಿ. ಎಂ. ಇನಾಂದಾರ್, ಕೆ. ನರಸಿಂಹಮೂರ್ತಿ, ಎಚ್. ಕೆ.
ರಾಮಚಂದ್ರಮೂರ್ತಿ, ಎಲ್. ಎಸ್. ಶೇಷಗಿರಿ ರಾವ್, ಜಿ. ಎಸ್. ಆಮೂರ್, ಸುಮತೀಂದ್ರ ನಾಡಿಗ್, ಟಿ. ವಿ. ವೆಂಕಟಾಚಲ ಶಾಸ್ತ್ರಿ, ಅ. ರಾ. ಮಿತ್ರ, ಶತಾವಧಾನಿ ಗಣೇಶ್ ಮುಂತಾದ ಅನೇಕರ ಬರೆವಣಿಗೆಗೆ ಅವ್ಯಾಜವಾಗಿ ಮಾಡಿದ್ದಾರೆ.

ಸುಮನಾ ಅವರ ಸ್ವಂತ ಕೃತಿಗಳಲ್ಲಿ
ಚ. ವಾಸುದೇವಯ್ಯ (ಐಬಿಎಚ್ ಪ್ರಕಾಶನ); ವಿ. ಸೀತಾರಾಮಯ್ಯ ಬದುಕು, ಬರೆಹ, ವ್ಯಕ್ತಿತ್ವ (ಹಲವು ಮುದ್ರಣ ಕಂಡಿದೆ); ಆಸ್ವಾದ (ವಿಮರ್ಶಾ ಲೇಖನ ಸಂಕಲನ–ವಸಂತ ಪ್ರಕಾಶನ); ಎಚ್. ಕೆ. ರಂಗನಾಥ್ (ರಾಷ್ಟ್ರೋತ್ಥಾನ ಸಾಹಿತ್ಯ); ಚಿರಸ್ಮರಣೀಯರು (ನುಡಿಚಿತ್ರಗಳು–ವಸಂತ ಪ್ರಕಾಶನ) ಮುಂತಾದವು ಸೇರಿವೆ. ಇವರ ಸಂಪಾದಿತ ಕೃತಿಗಳಲ್ಲಿ ಕಾದಂಬರಿ ಲೋಕ (30 ವಿಶ್ವ ಕಾದಂಬರಿ ಕುರಿತ ವಿಮರ್ಶಾ ಲೇಖನ ಸಂಕಲನ–ಡಾ. ಹಾ. ಮಾ. ನಾಯಕ ಅವರೊಂದಿಗೆ); ವಿ.ಸೀ. ನೂರರ ನೆನಪು (ವಿ.ಸೀ. ಶತಮಾನೋತ್ಸವ ಸಂಪುಟ–ಪ್ರೊ. ಎಲ್.ಎಸ್.ಎಸ್. ಜೊತೆಗೆ); ಅಪೂರ್ವ (ಬಿ.ಸಿ. ರಾಮಚಂದ್ರಶರ್ಮರ ಬದುಕು, ಸಾಹಿತ್ಯ ಕುರಿತ ವಿಮರ್ಶಾ ಲೇಖನ ಸಂಪುಟ–ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರೊಂದಿಗೆ); ಪ್ರತಿಭಾ ಸಂಪನ್ನರು (8 ಭಾಗಗಳಲ್ಲಿ - ಹಿರಿಯ ಸಾಧಕರ ಬದುಕು ಸಾಧನೆ ಕುರಿತ ಲೇಖನ ಸಂಕಲನ); ಭಾವಲಹರಿ, ನೆನಪಿಗೆ ಸಾವಿಲ್ಲ, ಪಂಪಾಯಾತ್ರೆಯ ಪರಾಮರ್ಶೆ, ಮೈಸೂರು ಮಲ್ಲಿಗೆಯ ಪರಿಮಳದ ಪರಿಧಿಯಲ್ಲಿ, ರಂಗನಾಥ ಸಾರಸ್ವತ, ವ್ಯಾಸಪಥ, ಮೊಲ್ಲೆ–ಮಲ್ಲಿಗೆ, ಪ್ರೊ. ಕೆ.ವಿ. ಅಯ್ಯರ್ ಸ್ಮರಣೆ ಇತ್ಯಾದಿ ಸೇರಿವೆ.

ಸುಮನಾ ಅವರ ಈ ಎಲ್ಲ ಸಾಹಿತ್ಯಕ, ಸಾಂಸ್ಕೃತಿಕ ಯೋಗದಾನವನ್ನು ಪರಿಗಣಿಸಿ ‘ಡಿ.ವಿ.ಜಿ. ಸ್ಮಾರಕ ಪುರಸ್ಕಾರ’ವನ್ನು ಅವರಿಗೆ ಸಮರ್ಪಿಸುವ
ಮೂಲಕ ಸಮಾಜದ ಪರವಾಗಿ ಗೌರವವನ್ನು ಸಲ್ಲಿಸಲು ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯು 2023ರಲ್ಲಿ ಸಂಕಲ್ಪಿಸಿತು.  ಇದಕ್ಕೆ ಮೊದಲು ಮುಜುಗರಗೊಂಡರೂ ಅನಂತರ “ಡಿ.ವಿ.ಜಿ. ಅವರ ಆಶೀರ್ವಾದ, ಬೇಡವೆನ್ನಲಾರೆ” ಎಂದು ಮೂರ್ತಿಯವರು ಒಪ್ಪಿಕೊಂಡರು.

ಮೂರ್ತಿಯವರು ಪ್ರತಿವರ್ಷ ತಮ್ಮ ಹುಟ್ಟುಹಬ್ಬದಂದು ತಾವು ಗೌರವಿಸುವ ಮಹನೀಯರ ಮನೆಗೆ ಹೋಗಿ ಅವರನ್ನು ಕಂಡು ಬರುತ್ತಾರೆ. ಎಷ್ಟೋ ಬಾರಿ ಇಂದು ತಮ್ಮ ಜನ್ಮದಿನವೆಂದೂ ಹೇಳುವುದಿಲ್ಲ; ಲೋಕಾಭಿರಾಮವಾಗಿ ಮಾತನಾಡಿ ತೆರಳುತ್ತಾರೆ. ಮಹನೀಯರ ಮಾತೇ ತಮಗೆ ಆಶೀರ್ವಾದ ಎಂದು ಅವರ ಭಾವನೆ. ಇದು ಮತ್ತೆ ಮನುಜರಲ್ಲಿ ದೈವವನ್ನು ಕಾಣುವ ಅವರ ಮನೋಧರ್ಮವನ್ನು ತೋರಿಸುತ್ತದೆ.  ಇಂತಹ ಮಹಾನುಭಾವರನ್ನು ಅವರ ಜನ್ಮದಿನದಂದು ಹೀಗೆ ಚಿಂತಿಸುವ ನಮ್ಮ ಸೌಭಾಗ್ಯವೂ ಹಿರಿದೆ.

ಕೃತಜ್ಞತೆಗಳು: 
1. ಬಿ. ಎನ್. ಶಶಿಕಿರಣ್ ಅವರ ಬರಹ 'ಎಂ.ವಿ. ವೆಂಕಟೇಶಮೂರ್ತಿಯವರ ವಿನಯೋನ್ನತಿ'
2. ಎಂ.ವಿ. ವೆಂಕಟೇಶಮೂರ್ತಿ ಅವರ ಕುರಿತಾದ ಶಶಿಕಿರಣ್ ಅವರ ಬರಹ, ಚಿತ್ರಗಳು ಮತ್ತು ಹಲವು ಮಾಹಿತಿ ಒದಗಿಸಿಕೊಟ್ಟು ಲೇಖನ ಬರೆಯಲು ಪ್ರೇರೇಪಿಸಿದ ರಾಜಕುಮಾರ್ ಹೊಳೆ ಆಲೂರು

On the birthday of M. V. Venkatesh Murthy  Sir


ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!