ಮಂಗಳವಾರ, ಸೆಪ್ಟೆಂಬರ್ 3, 2013

ಬೈಚುಂಗ್ ಭುಟಿಯ

ಬೈಚುಂಗ್ ಭುಟಿಯ 

ಭಾರತವನ್ನು ಅಂತರಾಷ್ಟ್ರೀಯ  ಫುಟ್ಬಾಲ್ ಮಟ್ಟದಲ್ಲಿ ಕಿಂಚಿತ್ತು ಗುರುತಿಸಬೇಕೆಂದರೆ ಬೈಚುಂಗ್ ಭುಟಿಯ ಅವರ ಬಗ್ಗೆ ಅವಶ್ಯಕವಾಗಿ ಮಾತನಾಡಬೇಕಾಗುತ್ತದೆ.  ಫುಟ್ಬಾಲ್ ಕ್ರೀಡೆಯಲ್ಲಿ ಭಾರತದ ಹೆಮ್ಮೆ ಎಂದೇ ಪರಿಗಣಿತರಾದ ಬೈಚುಂಗ್ ಭುಟಿಯ ಡಿಸೆಂಬರ್ 15, 1976ರಂದು ಸಿಕ್ಕಿಂನಲ್ಲಿ ಜನಿಸಿದರು.  

1995ರಲ್ಲಿ ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ಪಾದಾರ್ಪಣೆ ಮಾಡಿದ ಭುಟಿಯ ಭಾರತದ ತಂಡದ ಪರವಾಗಿ 109 ಪಂದ್ಯಗಳಲ್ಲಿ 43 ಗೋಲು ದಾಖಲಿಸಿದ್ದಾರೆ.  ಈಸ್ಟ್ ಬೆಂಗಾಲ್, ಜೆಸಿಟಿ ಮಿಲ್ಸ್, ಯುನೈಟೆಡ್ ಸಿಕ್ಕಿಂ ತಂಡಗಳ ಪರವಾಗಿ 1993ರಿಂದ ವಿವಿಧ ಅವಧಿಗಳಲ್ಲಿ ಆಡಿದ ಭುಟಿಯ ಭಾರತದ ರಾಷ್ಟ್ರೀಯ ಫುಟ್ಬಾಲ್ ತಂಡದಲ್ಲಿ ಒಟ್ಟು 16 ವರ್ಷಗಳ ಕಾಲ  ಸ್ಟ್ರೈಕರ್ ಆಗಿ ಆಡಿದ್ದಾರೆ.

ಭುಟಿಯ ನಾಯಕರಾಗಿದ್ದಾಗ ಭಾರತದ ಫುಟ್ಬಾಲ್ ತಂಡ ಸೌತ್ ಏಶ್ಯನ್ ಫುಟ್ಬಾಲ್ ಚಾಂಪಿಯನ್‌ಷಿಪ್‌ನ್ನು 3 ಬಾರಿ ಗೆದ್ದುಕೊಂಡಿತು. 2007 ಮತ್ತು 2009ರಲ್ಲಿ ನೆಹರು ಕಪ್, 2008ರಲ್ಲಿ ಎಎಫ್‌ಸಿ ಚಾಲೆಂಜ್ ಕಪ್ ಗೆದ್ದುಕೊಂಡಿತ್ತು. ಎಎಫ್‌ಸಿ ಚಾಲೆಂಜ್ ಕಪ್ ಗೆಲ್ಲುವುದರೊಂದಿಗೆ ಭಾರತ 1984ರ ಬಳಿಕ ಮೊದಲ ಬಾರಿಗೆ ಏಶ್ಯನ್ ಕಪ್‌ನಲ್ಲಿ ಆಡುವ ಅರ್ಹತೆ ಪಡೆದಿತ್ತು.  1999ರಲ್ಲಿ ಇಂಗ್ಲಿಷ್ ಫುಟ್ಬಾಲ್ ಕ್ಲಬ್ ಬರಿ ಎಫ್‌ಸಿಗೆ ಸೇರ್ಪಡೆಗೊಂಡು, ಇಂಗ್ಲಿಷ್ ತಂಡದಲ್ಲಿ ಆಡಿದ ಭಾರತದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

ಪದೇ ಪದೇ ಗಾಯದ ಸಮಸ್ಯೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಈ ವರ್ಷ  ಅಂತಾರಾಷ್ಟ್ರೀಯ ಫುಟ್ಬಾಲ್‌ಗೆ ವಿದಾಯ ಹೇಳಿರುವ ಭುಟಿಯ ಅವರು  ‘‘ಕಳೆದ ಹದಿನಾರು ವರ್ಷಗಳಿಂದ ಫುಟ್ಬಾಲ್‌ನಲ್ಲಿ ದೇಶವನ್ನು ಪ್ರತಿನಿಧಿಸಲು ನನಗೆ ದೊರೆತ ಅವಕಾಶ ದಲ್ಲಿ ನಾನು ದೇಶಕ್ಕಾಗಿ ನನ್ನಿಂದ ಸಾಧ್ಯವಿರುವ ಕೊಡುಗೆಯನ್ನು ನೀಡಿರುವೆನು. ಹಾಗೂ ಫುಟ್ಬಾಲ್‌ನಲ್ಲಿ ದೊರೆತ ಪ್ರತಿಯೊಂದು ಕ್ಷಣವನ್ನು ಅನುಭವಿಸಿರುವೆನು’’ ಎಂದು ನುಡಿದಿರುವುದು ಆತನಿಗೆ ಕ್ರೀಡೆಯಲ್ಲಿ ಇರುವ ಆಸಕ್ತಿ ಮತ್ತು ಪ್ರೀತಿಗಳನ್ನು ತೋರುತ್ತದೆ.

1995 ಮತ್ತು 2008ರಲ್ಲಿ ‘ಭಾರತದ ವರ್ಷದ ಫುಟ್ಬಾಲ್ ಆಟಗಾರ ಪ್ರಶಸ್ತಿ, 1999ರಲ್ಲಿ ಸಿಕ್ಕಿಂ ರಾಜ್ಯ ಪ್ರಶಸ್ತಿ ಮತ್ತು ಅರ್ಜುನ ಪ್ರಶಸ್ತಿ ಮತ್ತು  2008ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಬೈಚುಂಗ್ ಭುಟಿಯ ಭಾಜನರಾಗಿದ್ದಾರೆ.

ಈ ಮಹಾನ್ ಕ್ರೀಡಾಪ್ರೇಮಿ ಮತ್ತು ಆಟಗಾರನ ಬದುಕು ಸುಂದರವಾಗಿರಲಿ ಅತನ ಮಾರ್ಗದರ್ಶನ ದೇಶದ ಕ್ರೀಡಾಭಿವೃದ್ಧಿಗೆ ಸೂಕ್ತವಾಗಿ ಒದಗಲಿ ಎಂದು ಆಶಿಸುತ್ತಾ ಬೈಚುಂಗ್ ಭುಟಿಯ ಅವರಿಗೆ ಹುಟ್ಟು ಹಬ್ಬದ ಶುಭ ಹಾರೈಕೆಗಳನ್ನು ಹೇಳೋಣ.

Tag: Baichung Bhutia

ಕಾಮೆಂಟ್‌ಗಳಿಲ್ಲ: