ಮನಸ್ಸೇ ರಿಲ್ಯಾಕ್ಸ್ ಪ್ಲೀಸ್

ಮನಸ್ಸೇ ರಿಲ್ಯಾಕ್ಸ್ ಪ್ಲೀಸ್
-ಸ್ವಾಮಿ ಸುಖಬೋಧಾನಂದ ಅವರ ಪುಸ್ತಕ
ಮೊದಲಿಗೆ ಇಲ್ಲಿ ನಾನು ಹೇಳುತ್ತಿರುವುದು ಒಂದು ವೈಯಕ್ತಿಕ ಅನುಭವ ಎಂದು ನಿವೇದಿಸ ಬಯಸುತ್ತೇನೆ. ಏಕೆಂದರೆ ನಮ್ಮ ದೇಶದಲ್ಲಿ ಅಧ್ಯಾತ್ಮ ಮತ್ತು ಧರ್ಮಗಳ ಬಗ್ಗೆ ಹೇಳುವುದು ಕಗ್ಗಂಟಿನ ವಿಷಯ ಎಂಬುದು ತಮಗೆಲ್ಲ ತಿಳಿದಿರುವ ಸಂಗತಿ! ಅದರಲ್ಲೂ ಯಾವುದಾದರೂ ಸ್ವಾಮಿಜಿ ವಿಚಾರ ಅಂದರೆ ಅದು ಇನ್ನೂ ಕ್ಲಿಷ್ಟ. ನಾವು ಅವರ ಬಗ್ಗೆ ಒಳ್ಳೆಯದು ಯೋಚಿಸುವ ಮಾರನೆಯ ದಿನವೇ ಅದಕ್ಕೆ ವ್ಯತಿರಿಕ್ತ ನೂರಾರು ಕಥೆಗಳು ಹಲವು ‘...ಶ್’, ‘ಹಾಯ್’, ‘ಬಯ್’ ಪತ್ರಿಕೆಗಳಲ್ಲಿ ಬಂದಿರುತ್ತದೆ. ವಿಚಿತ್ರ ಬಟ್ಟೆಬರೆ, ನಡಾವಳಿ, ಜಟೆಗಳ ಸ್ವಾಮೀಜಿಗಳನ್ನು ಓದಿ, ನೋಡಿ, ಕೇಳಿ ಸಾಕು ಸಾಕೆನಿಸುವಂತಹ ಯುಗಗಳನ್ನು ಭಾರತ ದೇಶ ಸಾಕಷ್ಟು ಕಂಡಿದೆ.
ಇಲ್ಲಿ ನಾನು ಹೇಳ ಹೊರಟಿರುವುದು ‘ಮನಸ್ಸೇ ರಿಲ್ಯಾಕ್ಸ್ ಪ್ಲೀಸ್’ ಎಂಬ ಪುಸ್ತಕದ ಕುರಿತಾದ ಒಂದು ಅನುಭವದ ಬಗ್ಗೆ. ಆ ಪುಸ್ತಕ ಬರೆದಿರುವವರು ಬೆಂಗಳೂರಿನ ಸ್ವಾಮಿ ಸುಖಬೋಧಾನಂದರು. ನನಗೆ ಅವರ ಈ ಪುಸ್ತಕ ಇಷ್ಟವಾಗಿದೆ. ಅವರ ಕಾರ್ಯಾಗಾರಕ್ಕೆ ಹೋದಾಗ ಅದರಲ್ಲಿ ನನಗೆ ಸಂತಸ ಸಿಕ್ಕಿದೆ ಎಂದು ಮಾತ್ರ ಹೇಳಬಯಸುತ್ತೇನೆ. ಅವರ ಬಗ್ಗೆ ವ್ಯಾಖ್ಯಾನಿಸ ಹೋಗುವುದಿಲ್ಲ. ಕಾರಣ ಅದು ನನಗೆ ಮುಖ್ಯವಲ್ಲ. ನನಗೆ ಅನ್ನಿಸುವುದು ಹೀಗೆ: “ನಮ್ಮ ಬದುಕಿನಲ್ಲಿ ಹಲವು ವ್ಯಕ್ತಿಗಳನ್ನು ನೋಡುತ್ತೇವೆ. ನಾವು ಅವರನ್ನು ಇಷ್ಟ ಪಡುತ್ತೇವೆ ಅಥವ ಇಲ್ಲ ಎಂಬುದು ನಾವು ಅವರೊಡನೆ ಇದ್ದ ಸೀಮಿತ ಕ್ಷಣಗಳಲ್ಲಿ ನಾವು ಅವರಿಂದ ಪಡೆದ ಅನುಭವಗಳಿಗೆ ಮಾತ್ರ ಸೀಮಿತವಾಗಿರುತ್ತದೆಯೇ ವಿನಹಃ ಅದು ಆ ವ್ಯಕ್ತಿಯ ಬಗೆಗೆ ಇರುವ ಪೂರ್ಣ ಅರಿವಾಗಿರಲು ಸಾಧ್ಯವಿಲ್ಲ. ಅಂತಹ ಅರಿವು ಬಹುಶಃ ಯೋಗಿಗಳಿಗೆ ಮಾತ್ರ ಸಾಧ್ಯವೇನೊ!”. ಹೀಗಿರುವುದರಿಂದ ನಾನು ಯಾರ ಬಗ್ಗೆಯೋ ಪ್ರಚಾರ ನಡೆಸುತ್ತಿದ್ದೇನೆ ಎಂದು ನನ್ನ ಗೆಳೆಯ, ಗೆಳತಿಯರು ಭಾವಿಸಬೇಕಿಲ್ಲ ಎಂದು ವಿನಂತಿಸುತ್ತೇನೆ.
ಒಂದೆಂಟು ವರ್ಷಗಳ ಹಿಂದೆ, ಒಮ್ಮೆ ನಾನು ನಡೆಸುತ್ತಿದ್ದ ಸಂಸ್ಥೆಯಿಂದ, ವೆಬ್ ಸೈಟ್ ಮಾಡುವ ಬಗೆಗೆ ತಿಳಿದುಕೊಳ್ಳಬೇಕೆಂದು ಬಯಸಿದ್ದ ಚಾಮರಾಜ ಪೇಟೆಯಲ್ಲಿರುವ ರಾಷ್ಟ್ರೋತ್ತಾನದ ಮುಖ್ಯಸ್ತರ ಕಚೇರಿಗೆ ಹೋಗಿದ್ದೆ. ಅವರನ್ನು ನೋಡಿ ಹೊರಬಂದಾಗ ಪುಸ್ತಕಗಳನ್ನು ಕೊಳ್ಳುವ ಹವ್ಯಾಸ ಇರುವ ನನಗೆ ರಾಷ್ಟ್ರೋತ್ತಾನದ್ದವರದೇ ಆದ ‘ಪುಸ್ತಕ ಮಳಿಗೆಗಳ ಶೋಕೇಸ್’ ಕಂಡಿತು. ಅಲ್ಲಿ ಪುಸ್ತಕಗಳನ್ನು ನೋಡುವಾಗ ನೀವು ಈ ಫೋಟೋದಲ್ಲಿ ನೋಡುತ್ತಿರುವ ಚಿಟ್ಟೆ ಚಿತ್ರದ ಸುಂದರ ಹೊದಿಕೆ ಇರುವ ‘ಮನಸ್ಸೇ ರಿಲ್ಯಾಕ್ಸ್ ಪ್ಲೀಸ್!’ ಪುಸ್ತಕದ ಹೊರನೋಟ ನನ್ನನ್ನು ಆಕರ್ಷಿಸತೊಡಗಿತು. ಆದರೆ, ಇದನ್ನು ಬರೆದವರು ಒಬ್ಬರು ಸ್ವಾಮಿ. ನನ್ನ ಅಂದಿನ ದಿನದವರೆಗಿನ ಬದುಕಿನಲ್ಲಿ ಸ್ವಾಮಿ ರಾಮಕೃಷ್ಣ ಪರಮಹಂಸ ಮತ್ತು ಸ್ವಾಮಿ ವಿವೇಕಾನಂದರ ಹೊರತು ಬೇರೆ ಸ್ವಾಮಿಗಳ ಬಗೆಗೆ ಓದದ ಮತ್ತು ಬೇರೆಯ ಸ್ವಾಮಿಗಳ ಬಗೆಗೆ ನಕಾರಾತ್ಮಕ ಕಥೆಗಳನ್ನೇ ಕೇಳಿದ್ದ ನನಗೆ ಈ ಪುಸ್ತಕದ ಆಕರ್ಷಕ ಹೊದಿಕೆ ಮತ್ತು ಸ್ವಾಮಿ ಎಂಬ ಪದಗಳು ಸಂದಿಗ್ಧತೆ ಉಂಟು ಮಾಡಿಬಿಟ್ಟವು. ಆ ಒಂದು ಕ್ಷಣದಲ್ಲಿ ನನಗೆ ರಾಷ್ಟ್ರೋತ್ತಾನದ ಬಾಬು ಕೃಷ್ಣಮೂರ್ತಿ ಅವರ ‘ಅಜೇಯ’, ಪುರುಷೋತ್ತಮ್ ಎನ್ ಓಕ್ ಅವರ ‘ಇತಿಹಾಸದ ಮೇಲೆ ಬೆಳಕು’ ಪುಸ್ತಕಗಳನ್ನು ಓದಿದ ನೆನಪಾಯಿತು. ಆ ಓದಿನ ನಂತರ ನನಗೆ ರಾಷ್ಟ್ರೋತ್ತಾನದ ಪುಸ್ತಕಗಳು ಎಂದರೆ ಏನೋ ಅಭಿಮಾನ. ಆಗ ಮನಸ್ಸಿನಲ್ಲಿ ಮೂಡಿದ ಒಂದು ಚಿಂತನೆ ಅಂದರೆ “ರಾಷ್ಟ್ರೋತ್ತಾನದವರು ಪ್ರಕಾಶನ ಮಾಡಿರುವ ಪುಸ್ತಕ ಅಂದರೆ ಅದು ಒಂದಿಷ್ಟು ಉತ್ತಮ ಆಗಿರಬಹುದಲ್ಲವೇ?”. ಆ ನಿರ್ಧಾರ ಮೂಡಿದ್ದೇ ತಡ ಹೆಚ್ಚಿಗೆ ಯೋಚಿಸದೆ ಎಪ್ಪತ್ತೈದು ರೂಪಾಯಿ ಕೊಟ್ಟು ಪುಸ್ತಕ ತೆಗೆದುಕೊಂಡು ಹೊರಟುಬಿಟ್ಟೆ. ಅದರ ಮಾರನೇ ದಿನವೇ ಮೈಸೂರಿಗೆ ಪ್ರಯಾಣ ಮಾಡಬೇಕಾದ ಸಂದರ್ಭ ಒದಗಿ ಬಂದಾಗ ಈ ಪುಸ್ತಕ ಮತ್ತು ಒಂದು ವಾರಪತ್ರಿಕೆಯನ್ನು ಬ್ಯಾಗಿನೊಳಗೆ ಹಾಕಿಕೊಂಡೆ. ಬಸ್ಸಿನೊಳಗೆ ಕುಳಿತು ಸ್ವಲ್ಪ ಹೊತ್ತಿನಲ್ಲೇ ಈ ಪುಸ್ತಕದ ಎರಡು ಪುಟಗಳ ಕಥೆಯನ್ನು ಓದುತ್ತಿದ್ದಂತೆಯೇ ನಾನೆಲ್ಲೋ ಬದಲಾಗುತ್ತ ಹೋದಂತ ಅನುಭವ. ಮುಂದೆ ಆ ಪುಸ್ತಕ ಸಂಜೆಯ ಪಯಣದ ವೇಳೆಗೆ ಓದಿ ಮುಗಿದಿತ್ತು. ಸಾಮಾನ್ಯವಾಗಿ ಬಸ್ಸಿನಲ್ಲಿ ಕುಳಿತ ತಕ್ಷಣದಿಂದಲೇ ಅಯ್ಯೋ ಇನ್ನೆಷ್ಟು ಹೊತ್ತಪ್ಪ ಎಂಬಂತಹ ಬೇಸರ, ಅತೃಪ್ತಿಯ ಜೀವನ ನಡೆಸುತ್ತಿದ್ದ ನನಗೆ ಅಂದು ಬಸ್ಸಿನಲ್ಲಿ ಬೆಂಗಳೂರಿಗೆ ಹಿಂದಿರುಗುವಾಗ ಅಂತಹ ಯಾವುದೇ ಕ್ಷೋಭೆಗಳಿಲ್ಲದೆ ನಾನು ಯಾವುದೋ ಶಕ್ತಿಯ ಸಂಚಲನದ ಒಂದು ವಸ್ತು ಎಂಬ ಅನುಭಾವದಲ್ಲಿದ್ದೆ. ಮುಂದೆ ಸುಖಬೋಧಾನಂದರ ಹಲವು ಪುಸ್ತಕಗಳನ್ನು ಓದಿದೆ. ನನ್ನ ಹಲವು ಬಂಧುಗಳಿಗೆ ಈ ಪುಸ್ತಕವನ್ನು ಕೊಡುಗೆಯಾಗಿ ಹಂಚಿದೆ. ಸುಖ ಬೋಧಾನಂದರ ಹಲವು ಶಿಬಿರಗಳಲ್ಲೂ ಪಾಲ್ಗೊಂಡೆ. ಈ ಅನುಭವಗಳು ನನಗೆ, ಅಂತರಾಳಕ್ಕೆ ಬೇಕಾದಾಗ ಹೋಗಿ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಂಡು, ಗೊತ್ತು ಗುರಿ ಇಲ್ಲದ ಅಂದಿನ ಜೀವನದಿಂದ ಇಂದಿನ ಸಮಾಧಾನಕರ ಬದುಕಿಗೆ ಬರಲು ಸಹಾಯ ಮಾಡಿದೆ. ಇಂತಹ ಅನುಭವಗಳು ಎಲ್ಲರದ್ದೂ ಆಗಿರಲೇಬೇಕೆಂದೇನಿಲ್ಲ. ಕೆಲವೊಮ್ಮೆ ಅಧ್ಯಾತ್ಮ ಎಂದು ಅದನ್ನೇ ಹುಚ್ಚು ಹುಚ್ಚಾಗಿ ಹಚ್ಚಿಕೊಂಡು ವೈಪರೀತ್ಯದ ಬದುಕು ನಡೆಸುವ ಜನ ಕೂಡ ಇದ್ದಾರೆ. ನಾನು ಹೇಳಿದ್ದು ನನ್ನ ಅನುಭವ ಮಾತ್ರ. ಅದು ಕೂಡ ಹುಚ್ಚಿದ್ದರೂ ಇರಬಹುದು. ಆದ್ದರಿಂದ ಎಲ್ಲರೂ ಬದುಕು ನಡೆಸುವಾಗ ನಾವು ವೈಪರೀತ್ಯದ ದಾರಿಯಲ್ಲಿಲ್ಲವಷ್ಟೇ ಎಂದು ಪರೀಕ್ಷಿಸಿಕೊಳ್ಳುವುದು ಕೂಡ ಅತ್ಯಗತ್ಯ ಎಂಬ ಮಾತನ್ನು ಒತ್ತಿ ಹೇಳಬಯಸುತ್ತೇನೆ.
ನಾನು ಇಲ್ಲಿನ ಪುಸ್ತಕದ ಬಗ್ಗೆ ಹೇಳುವುದಕ್ಕೆ ಬದಲಾಗಿ, ನನ್ನನ್ನು ಓದಿದ ತಕ್ಷಣವೇ ಸೆಳೆದ ಮೊದಲ ಎರಡು ಪುಟಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ.
‘ಇದೇ ಬದುಕು ಇದೇ ಪ್ರಪಂಚ!’
– ಸ್ವಾಮಿ ಸುಖಬೋದಾನಂದ ಅವರ ಬರಹ
ನಾನು ಕಂಡಂತೆ ಪ್ರಪಂಚದ ಮಾನವರೆಲ್ಲರೂ, ಭಾಷೆ ಬೇರೆ ಬೇರೆ ಆದರೂ ಅರ್ಥ ಅದೇ ಎಂಬಂತೆ ದುಃಖದ ಸಂದರ್ಭದಲ್ಲಿ ಹೊರಹಾಕುವ ನಿವೇದನೆ – ‘ದೇವರು ನನಗೆ ಮಾತ್ರ ಯಾಕೆ ಇಷ್ಟೊಂದು ಕಷ್ಟಗಳನ್ನು ಕೊಡಬೇಕು’ ಎಂದು.
ಹೀಗೆಲ್ಲ ಭಾವನೆಗಳನ್ನು, ಪ್ರಶ್ನೆಗಳನ್ನು ನನ್ನ ಮುಂದಿಟ್ಟಾಗಲೆಲ್ಲ, ಗೌತಮಬುದ್ಧನ ಅನುಯಾಯಿಗಳು ಹೇಳುವ ಒಂದು ಚಿಕ್ಕ ಕಥೆಯನ್ನು ನಾನು ಮತ್ತೆ ಅವರುಗಳಿಗೆ ಹೇಳುವುದೊಂದು ಅಭ್ಯಾಸ.
ಅದೊಂದು ಗ್ರಾಮ. ಕಿರಿಯವನೊಬ್ಬ ಕೆರೆ ಏರಿಯ ಮೇಲೆ ಆಡಲು ಹೋಗುತ್ತಾನೆ. ಆಗಲೇ ‘ನನ್ನನ್ನು ಕಾಪಾಡು, ಕಾಪಾಡು!’ ಎಂದೊಂದು ಆರ್ತ ಮೊರೆ. ಕೆರೆಯಲ್ಲೊಂದು ಕಡೆ ನೀರಿನಲ್ಲಿ ಬಲೆಯೊಳಗೆ ಸಿಕ್ಕಿಕೊಂಡಿರುವ ಮೊಸಳೆಯೊಂದು ಈ ಕಿರಿಯನನ್ನು ನೋಡಿ ಸಂಕಟದಿಂದ ಕೂಗಿಕೊಳ್ಳುತ್ತದೆ. ‘ನಿನ್ನನ್ನು ಬಲೆಯಿಂದ ಕಾಪಾಡಿದರೆ, ನೀನು ನನ್ನನ್ನು ತಿಂದುಬಿಡುತ್ತೀಯ, ಬೇಡಪ್ಪಾ ಬೇಡ’ ಎಂದು ಮೊಸಳೆಯನ್ನು ಕಾಪಾಡಲು ನಿರಾಕರಿಸುತ್ತಾನೆ ಆ ಹುಡುಗ. ಆದರೆ, ಆ ಮೊಸಳೆ, ‘ನಾನು ಸತ್ಯವಾಗಿಯೂ ನಿನ್ನನ್ನು ತಿನ್ನೋದಿಲ್ಲ, ನನ್ನನ್ನು ಕಾಪಾಡು’ ಎಂದು ಕಣ್ಣೀರು ಸುರಿಸುತ್ತದೆ. ಮೊಸಳೆಯ ಈ ಮಾತುಗಳನ್ನು ಕೇಳಿ ನಂಬಿದ ಹುಡುಗ ಆ ಬಲೆಯನ್ನು ಕಡಿದುಹಾಕಲು ಪ್ರಾರಂಭಿಸುತ್ತಾನೆ. ಬಲೆಯೋಳಗಿನಿಂದ ಮೊಸಳೆಯ ತಲೆ ಹೊರಬಂದ ಕೂಡಲೇ ಅದು ಹುಡುಗನ ಕಾಲನ್ನು ಹಿಡಿದುಕೊಳ್ಳುತ್ತದೆ. ‘ಪಾಪಿ ಮೊಸಳೆ! ಇದು ನ್ಯಾಯಾನ?’ ಎಂದು ಕಣ್ಣೀರು ಸುರಿಸುತ್ತ ಕೇಳಿದಾಗ, ‘ಏನ್ಮಾಡೋದು! ಇದೇ ಬದುಕು, ಇದೇ ಪ್ರಪಂಚ!’ ಎನ್ನುತ್ತ ಮೊಸಳೆ ಆ ಹುಡುಗನನ್ನು ನುಂಗಲು ಆರಂಭಿಸುತ್ತದೆ. ಹುಡುಗನಿಗೆ ಸಾಯುವುದರ ಬಗ್ಗೆ ಚಿಂತೆಯಿಲ್ಲ. ಆದರೆ, ಕೃತಘ್ನತೆಯಿಂದ ನಡೆದುಕೊಂಡ ಆ ಮೊಸಳೆ ಮುಂದಿಟ್ಟ ಸಿದ್ಧಾಂತವನ್ನು ಮಾತ್ರ ಅವನಿಂದ ಅರಗಿಸಿಕೊಳ್ಳಲಾಗಲಿಲ್ಲ.
ಮೊಸಳೆಯ ಬಾಯೊಳಗೆ ನಿಧಾನವಾಗಿ ಜಾರುತ್ತಿದ್ದ ಹುಡುಗ ಮೇಲೆ ಮರದಲ್ಲಿ ಕುಳಿತಿದ್ದ ಪಕ್ಷಿಗಳನ್ನು ನೋಡುತ್ತ ಕೇಳಿದ – ‘ಈ ಮೊಸಳೆ ಹೇಳೋ ಹಾಗೆ ಇದೇ ಪ್ರಪಂಚಾನ ? ಇದೇ ಬದುಕೇ?’ ಅದಕ್ಕುತ್ತರವಾಗಿ ಪಕ್ಷಿಗಳು – ‘ಎಷ್ಟೋ ಜೋಪಾನವಾಗಿ ಮರದಲ್ಲಿ ಗೂಡು ಕಟ್ಟಿ ಮೊಟ್ಟೆಗಳನ್ನಿಡುತ್ತೇವೆ. ಆದರೆ ಅವನ್ನು ಹಾವುಗಳು ಬಂದು ನುಂಗಿಬಿಡುತ್ತವಲ್ಲ?... ಆದ್ದರಿಂದ ಮೊಸಳೆ ಹೇಳೋದು ಸರಿ’ ಎಂದವು.
ಕೆರೆ ಏರಿ ಮೇಲೆ ಮೇಯ್ದುಕೊಂಡಿದ್ದ ಕತ್ತೆಯೊಂದನ್ನು ನೋಡಿ ಹುಡುಗ ಅದೇ ಪ್ರಶ್ನೆಯನ್ನು ಕೇಳುತ್ತಾನೆ.
ನಾನು ಯೌವನದಲ್ಲಿ ಗಟ್ಟಿಮುಟ್ಟಾಗಿದ್ದಾಗ ನನ್ನ ಯಜಮಾನ ಕೊಳೆಬಟ್ಟೆಗಳನ್ನು ನನ್ನ ಮೇಲೆ ಹೊರಿಸಿ ನನ್ನ ಶಕ್ತಿಯನ್ನೆಲ್ಲ ಹಿಂಡುತ್ತಿದ್ದ. ನನಗೆ ವಯಸ್ಸಾಗಿ ಕಾಲು ತೊಡರತೊಡಗಿದಮೇಲೆ ನನಗೆ ಆಹಾರ ಹಾಕೊದಕ್ಕಾಗೋಲ್ಲ ಎಂದು ಹೇಳಿ ನನ್ನನ್ನು ಹೊರದಬ್ಬಿಬಿಟ್ಟ. ಮೊಸಳೆ ಹೇಳೋದ್ರಲ್ಲಿ ತಪ್ಪೇ ಇಲ್ಲ. ‘ಇದೇ ಬದುಕು! ಇದೇ ಪ್ರಪಂಚ’ ಎಂದಿತು ಕತ್ತೆ.
ಆ ಹುಡುಗನಿಗೆ ಆ ಅನಿಸಿಕೆಯನ್ನು ಸ್ವೀಕರಿಸಲು ಸಾಧ್ಯವಾಗಲಿಲ್ಲ! ಕೊನೆಗೆ ಒಂದು ನವಿಲನ್ನು ನೋಡಿ ಹುಡುಗ ಅದೇ ಪ್ರಶ್ನೆಯನ್ನು ಕೇಳುತ್ತಾನೆ. ‘ಇಲ್ಲ, ಮೊಸಳೆ ಹೇಳೋದನ್ನು ನಾನು ಒಪ್ಪೋದಿಲ್ಲ. ಮೊಸಳೆ ಏನೋ ಒದರ್ತಿದೆ’ – ಎಂದು ನವಿಲು ಹೇಳಲು, ಮೊಸಳೆಗೆ ಕೋಪ ಬಂದುಬಿಟ್ಟಿತು. ಹುಡುಗನ ಕಾಲನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಂತೆಯೇ ವಾದ ಮಾಡತೊಡಗಿತು. ‘ಊಹೂಂ, ಹುಡುಗನನ್ನು ನೀನು ಬಾಯಲ್ಲಿ ಕಚ್ಕೊಂಡೇ ಮಾತಾಡೋದ್ರಿಂದ ನನಗೆ ನೀನು ಏನು ಹೇಳ್ತಿದೀಂತ ಅರ್ಥಾನೇ ಆಗ್ತಾಯಿಲ್ಲ ಎಂದಿತು ನವಿಲು. ದೊಡ್ಡದಾಗಿ ನಕ್ಕ ಮೊಸಳೆ, ‘ನಾನು ಪೆದ್ದ ಅಲ್ಲ ಹುಡುಗನನ್ನು ಬಿಟ್ರೆ ಓಡಿಹೋಗಿಬಿಡ್ತಾನೆ’ ಎಂದು ಹೇಳಿದಾಗ, ‘ನವಿಲು ‘ಪೆದ್ದುಮುಂಡೇದೆ, ನಿನ್ನ ಬಾಲದ ಶಕ್ತೀನೂ ನೀನು ಮರೆತುಬಿಟ್ಯಾ? ಹುಡುಗ ಓಡೋಕ್ಕೆ ಪ್ರಾರಂಭ ಮಾಡಿದರೆ ಒಂದೇ ಏಟಿಗೆ ನಿನ್ನ ಬಾಲದಿಂದ ಅವನನ್ನ ಬೀಳ್ಸೋಕ್ಕೆ ನಿನಗಾಗುತ್ತೆ’ ಎಂದು ಹುರಿದುಂಬಿಸಲು ಮೊಸಳೆ ಹುಡುಗನನ್ನು ಬಾಯಿಂದ ಹೊರಬಿಟ್ಟು ಮಾತನಾಡಲು ತೊಡಗಿತು. ಆ ಸಮಯದಲ್ಲೆ ನವಿಲು ಆ ಹುಡುಗನನ್ನು ನೋಡಿ ‘ಓಡು ಓಡು, ಒಂದು ನಿಮಿಷಾನೂ ತಡಮಾಡ್ಬೇಡ’ – ಎಂದು ಕೂಗಿತು. ಹುಡುಗ ತಪ್ಪಿಸಿಕೊಂಡು ಓಡಿದ. ಆಗ ಮೊಸಳೆ ಹುಡುಗನನ್ನು ಬೀಳಿಸಲು ಬಾಲ ಎತ್ತಿದಾಗಲೇ ಅದಕ್ಕೊಂದು ವಿಷಯ ತಿಳಿಯಿತು. ಅದು ಬಲೆಯಿಂದ ಬಾಲದವರೆಗೂ ಪೂರ್ತಿಯಾಗಿ ಬಿಡಿಸಿಕೊಳ್ಳುವುದಕ್ಕೆ ಮೊದಲೇ ಹುಡುಗನನ್ನು ನುಂಗತೊಡಗಿತ್ತು. ಈಗ ಅದಕ್ಕದು ಗೊತ್ತಾಯಿತು. ಹುಡುಗ ತಪ್ಪಿಸಿಕೊಂಡು ಓಡಿಬಿಟ್ಟ. ಆಗ ಕೋಪದಿಂದ ತನ್ನನ್ನು ನೋಡಿದ ಆ ಮೊಸಳೆಗೆ ನವಿಲು ಹೀಗೆಂದಿತು: ‘ಗೊತ್ತಾಯ್ತಾ? ಇದೇ ಬದುಕು, ಇದೇ ಪ್ರಪಂಚ!’
ತಪ್ಪಿ ಓಡಿದ ಹುಡುಗ ಸ್ವಲ್ಪ ಹೊತ್ತಿಗೆಲ್ಲ ಗ್ರಾಮಸ್ಥರನ್ನು ಕರೆದುಕೊಂಡು ಬರಲು, ಅವರೆಲ್ಲ ಸೇರಿ ಮೊಸಳೆಯನ್ನು ಕೊಂದುಬಿಡುತ್ತಾರೆ. ಆಗ ಹುಡುಗನೊಂದಿಗೆ ಬಂದ ನಾಯಿ ಆ ಬುದ್ಧಿಶಾಲಿ ನವಿಲನ್ನು ನೋಡಿ ಅದನ್ನು ಅಟ್ಟಿಸಿಕೊಂಡು ಹೋಗಿ, ಆ ಹುಡುಗ ಅಡ್ಡಬರುವ ಮೊದಲೇ ನವಿಲನ್ನು ಕೊಂದುಬಿಡುತ್ತದೆ. ಹುಡುಗ ನಿಟ್ಟುಸಿರಿಳಿಸುತ್ತಾನೆ. ‘ಇದೇ ಬದುಕು, ಇದೇ ಪ್ರಪಂಚ!’ ಎಂದು ಸಮಾಧಾನಪಟ್ಟುಕೊಳ್ಳುತ್ತಾನೆ.
’ಬದುಕಿನ ಅನೇಕ ವಿಷಯಗಳು ನಮ್ಮಿಂದ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ!’ ಎಂದು ಪ್ರಾಚೀನ ಮಹರ್ಷಿಗಳು ಹೇಳಿದ್ದನ್ನೇ ಬೌದ್ಧಮತವೂ ಹೇಳುತ್ತದೆ.
ಹೀಗೆ ಕಥೆ ಹೇಳುವ ಸುಖಬೋಧಾನಂದರ ಈ ಪುಸ್ತಕದಲ್ಲಿ ಅವರು ಮುಂದಿನ ಪುಟಗಳಲ್ಲಿ ಹೇಳಿರುವ ಒಂದು ಪ್ರಮುಖ ಮಾತನ್ನು ಹೇಳಿ ಈ ಬರಹವನ್ನು ಮುಗಿಸುತ್ತೇನೆ: “ದೇವರೇ! ನನ್ನಿಂದ ಏನೆಲ್ಲವನ್ನೂ ಬದಲಾಯಿಸಲು ಸಾಧ್ಯವೋ ಅದನ್ನು ಬದಲಾಯಿಸುವ ಶಕ್ತಿಯನ್ನು ನನಗೆ ಕೊಡು! ನನ್ನಿಂದ ಬದಲಾಯಿಸಲು ಸಾಧ್ಯವಾಗದ್ದು ಯಾವುದು ಎಂದು ತಿಳಿದುಕೊಳ್ಳುವ ಆರಿವನ್ನು ನನಗೆ ಕೊಡು! ನನ್ನಿಂದ ಬದಲಾಯಿಸಲು ಸಾಧ್ಯವಾಗುವುದು, ಸಾಧ್ಯವಾಗದಿರುವುದು – ಇವೆರಡಕ್ಕೂ ನಡುವೆ ಇರುವ ವೆತ್ಯಾಸವನ್ನು ವಿಂಗಡಿಸಿ ನೋಡಿ ತಿಳಿದುಕೊಳ್ಳುವ ಪಕ್ವತೆಯನ್ನು ನನಗೆ ಕೊಡು!”
Tag: Manasse Relax Please, Oh Mind Relax Please
ಕಾಮೆಂಟ್‌ಗಳು