ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ವಿಸ್ಮಯವೆಂಬ ಆಧ್ಯಾತ್ಮದ ಎಳೆಯಲ್ಲಿ ತೇಲುವ ‘ಲೈಫ್ ಆಫ್ ಪೈ’

ವಿಸ್ಮಯವೆಂಬ ಆಧ್ಯಾತ್ಮದ ಎಳೆಯಲ್ಲಿ ತೇಲುವ  ‘ಲೈಫ್ ಆಫ್ ಪೈ’

ಇತ್ತೀಚಿನ ಆಸ್ಕರ್ ಪ್ರಶಸ್ತಿ ವಿಜೇತ ಚಿತ್ರ ‘ಲೈಫ್ ಆಫ್ ಪೈ’ ನೋಡಿಬಂದೆ.  ಭಾರತೀಯ ವಾತಾವರಣ, ಒಂದಷ್ಟು ಭಾರತೀಯ ಚಿಂತನೆ ಹಾಗೂ ಭಾರತೀಯ ಇಂಗ್ಲಿಷ್ ಉಚ್ಚಾರಣೆ ಇದ್ದದ್ದರಿಂದ ಅರ್ಥವಾಗದಿದ್ದರೂ ಒಂದು ವಿದೇಶೀ ಚಿತ್ರ ನೋಡುತ್ತಿದ್ದೇನೆ ಎಂಬ ಕಸಿವಿಸಿಯನ್ನೂ, ಅರ್ಥವಾಗದಿದ್ದರೂ ಅರ್ಥವಾಗಲಿಲ್ಲ ಎಂದು ಹೇಳಿಕೊಳ್ಳಲಾಗದ ಕೀಳರಿಮೆಗಳನ್ನು ಈ ಚಿತ್ರ ಹುಟ್ಟಿಸಲಿಲ್ಲ!

ಹಾಗೆಂದ ಮಾತ್ರಕ್ಕೆ ಈ ಚಿತ್ರ ಅರ್ಥವಾಯಿತು ಎಂದು ಹೇಳಬಹುದಾದ ಚಿತ್ರವಲ್ಲ.  ಕಾರಣ ಈ ಚಿತ್ರ, ತನ್ನ ಆಳದಲ್ಲಿ ಆಧ್ಯಾತ್ಮದ ಅಂತರಾಳದ ಪ್ರಶ್ನೆಗಳನ್ನು ಸೂಕ್ಷ್ಮವಾಗಿ ಸ್ಪರ್ಶಿಸುತ್ತಾ ಸಾಗುತ್ತದೆ ಎನ್ನುವುದು.  ಈ ಚಿತ್ರ ತಾಂತ್ರಿಕವಾಗಿ ಹಲವೆಡೆ ವೈಭವ ಮತ್ತು ಹಲವೆಡೆಗಳಲ್ಲಿ ಕೃತಕವಾಗಿ ಕಾಣುವುದರಿಂದ ಅಂತಹ ವೈಭೋಗಗಳ ಅಪೇಕ್ಷೆಗಳನ್ನುಳ್ಳ ವರ್ಗ ಈ ಚಿತ್ರವನ್ನು ಯಾವುದೇ ಚಿಂತನೆಗಳ ಗೋಜಿಗೆ ಹೋಗದೆ ಕೂಡ ಕಾಣಬಹುದು ಎಂಬುದು  ನಿಜ.  ಆದರೆ ಆಧುನಿಕ ಆಧ್ಯಾತ್ಮ ಅಂದರೆ ಅದೆಂತದ್ದೋ ಕುತೂಹಲ ನಿರೀಕ್ಷೆಗಳಲ್ಲಿ ನೋಡುವ ನನ್ನನ್ನು ಈ ಚಿತ್ರ ಮಾನಸಿಕವಾಗಿ ಎಲ್ಲೆಲ್ಲೋ ಅಲೆದಾಡಿಸತೊಡಗಿತು.  ನಾನು ಕೂಡಾ ನಿಮ್ಮನ್ನು ಹೀಗೆ ಎಲ್ಲೆಲ್ಲೂ ಅಲೆದಾಡಿಸತೂಡಗುತ್ತಿದ್ದೇನೆ ಎಂದು ತಮಗನಿಸಿದರೆ ಅದಕ್ಕೆ ಕ್ಷಮೆ ಇರಲಿ.

ಭಾರತದ ಪಾಂಡಿಚೇರಿಯ ಭಾಗದಲ್ಲಿ ತನ್ನ ಬಾಲ್ಯವನ್ನು ಕಳೆದ ಹುಡುಗ ತನ್ನ ಶಾಲೆಯಲ್ಲಿ  ತನ್ನ ಹೆಸರಿನಲ್ಲಿನ ‘pissin’ ಎಂಬುದಕ್ಕೆ ಅಪಹಾಸ್ಯಕ್ಕೊಳಗಾದವನಾದರೂ, ಎಲ್ಲ ಪದ, ಅರ್ಥವಿವರಣೆಗೆ ನಿಲುಕದ ಹಾಗೆ ಅಸಾಮಾನ್ಯ ಗ್ರಹಣ ಶಕ್ತಿ ಹೊಂದಿರುತ್ತಾನೆ.  ಪುಟ್ಟ ವಯಸ್ಸಿನಲ್ಲೇ ಮೂವತ್ಮೂರು ಕೋಟಿ ದೇವತೆಗಳ ವಿವಿಧ ವಿವರಣೆಗಳ ಕುರಿತು ವಿಸ್ಮಿತನೂ ಆಗುತ್ತಾನೆ.  ತಾಯಿಗೆ ಬಾಯಲ್ಲಿ ಜಗವನ್ನೇ ತೋರಿದ ಕೃಷ್ಣನ ಬಗ್ಗೆ ಹೊಂದಿದ್ದ ಅಪ್ಯಾಯಮಾನತೆಗಷ್ಟೇ ನಿಲ್ಲದೆ, ಕ್ರೈಸ್ತ ಮಹಮ್ಮದೀಯ ಹಾದಿಗಳಲ್ಲೂ ಏನಾದರೂ ಸಿಲುಕಬಹುದೇ ಎಂದು ಹುಡುಕುತ್ತ ಸಾಗುತ್ತಾನೆ.  ದೇವರನ್ನು ಇಷ್ಟಪಡುತ್ತೇನೆ ಎಂದುಕೊಳ್ಳುತ್ತಾ, ಬದುಕನ್ನು, ಪ್ರೀತಿಯನ್ನು ಬೆರಗು ಕಣ್ಣುಗಳಿಂದ ಅರಸುತ್ತಾ ಸಾಗುತ್ತಾನೆ.

ಈ ಜಗದಲ್ಲಿ ಎಲ್ಲವನ್ನೂ ಒಂದೇ ಎಂದು ಭಾವಿಸುತ್ತಿದ್ದಾನೇನೋ ಎನ್ನುವ ಹಾದಿಯಲ್ಲಿ ತನ್ನ ಅಪ್ಪ ಪೋಷಿಸಿಕೊಂಡು ಬರುತ್ತಿದ್ದ ಪ್ರಾಣಿಗಳ ಬಳಗದಲ್ಲಿ ಭರ್ಜರಿ ಹುಲಿಯೊಂದನ್ನು ಕೂಡಾ ಕಣ್ಣಲ್ಲಿ ಕಣ್ಣಿಟ್ಟು ನೋಡುವ ಮನಃಸ್ಥಿತಿಗೆ ಬಂದಿಳಿದ ಹುಡುಗ, ತನ್ನ ಕೈಯಾರೆ ಆಹಾರ ತಿನ್ನಿಸಿಬಿಡುತ್ತೇನೆ ಎನ್ನುವ  ಅಪಾಯಕಾರಿ ಪ್ರಯೋಗಕ್ಕೆ  ಇಳಿದಿರುತ್ತಾನೆ.  ಆ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿದ ಅಪ್ಪ, ಹುಲಿಯೆಂಬ ಮೃಗೀಯತ್ವವೆಂದರೆ ಏನು ಎಂಬ ಪಾಠವನ್ನು ಅದರ ಮುಂದೆ ಕುರಿಯೆಂಬ ಬಲಿಯೊಂದನ್ನು ಕಟ್ಟುವುದರ ಮೂಲಕ  ನಿರೂಪಿಸುತ್ತಾನೆ.  ಹೀಗೆ ಸೃಷ್ಟಿಯ ವಿಶಿಷ್ಟತೆಯ ಬಗೆಗಿನ ಹೊಸ ಪಾಠ ಅವನ ಜೀವನದಲ್ಲಿ ತೆರೆದುಕೊಳ್ಳುತ್ತದೆ

ಪ್ರೌಢನಾದ ಹುಡುಗ ತನ್ನೊಳಗಿಗೆ ಸಂವೇದನೆಯನ್ನರಸುತ್ತಾ, ಕಲೆಯ ಹಾದಿಯಲ್ಲಿ ಪ್ರೇಮವನ್ನು ಗಳಿಸುತ್ತಿರುವ ಹೊತ್ತಿನಲ್ಲಿ ವ್ಯಾಪಾರಿಯಾದ ಅಪ್ಪ ತನ್ನ ವ್ಯಾಪಾರವನ್ನು ಮಾರಿ ತನ್ನ ಕೆಲವೊಂದು ಪ್ರಾಣಿಗಳನ್ನೂ ಸಂಸಾರವನ್ನೂ ವಿದೇಶಕ್ಕೆ ಹಡಗಿನಲ್ಲಿ ಹೊತ್ತುಕೊಂಡು ಸಾಗುತ್ತಾನೆ.  ಮತ್ತೊಮ್ಮೆ ನಿರೀಕ್ಷಿಸದೇ ಇದ್ದ ರೀತಿಯಲ್ಲಿ ವಿಸ್ಮಯವೆಂಬುದು ಆತನ ಬದುಕಿನಲ್ಲಿ ಕಣ್ತೆರೆಯುತ್ತದೆ.

ಬಿರುಗಾಳಿಗೆ ಸಿಕ್ಕ ಹಡಗು ನುಚ್ಚುನೂರಾಗುತ್ತದೆ.  ಆದರೆ ಎಲ್ಲರೂ ನಿದ್ರಿಸುತ್ತಿರುವಾಗ, ಎಂತದ್ದೋ ವಿಸ್ಮಯವನ್ನು ಅರಸಿ ತಾನು ಪಯಣಿಸುತ್ತಿದ್ದ ಹಡಗಿನ ಮೇಲೆ  ಬಂದ  ಈತ, ‘ಜೀವನಾಧಾರ ದೋಣಿ’ಯ ಆಸರೆಗೆ ಸಿಕ್ಕಿ ಆಕಸ್ಮಿಕವೋ ಎಂಬಂತೆ ಉಳಿದುಕೊಳ್ಳುತ್ತಾನೆ.  ಈತ ಹೇಗೆ ದೋಣಿಯೊಳಕ್ಕೆ ಬಂದು ಬಿದ್ದನೋ ಎಂಬ ವಿಧಿಯ ಲಿಖಿತದ ಹಾಗೆಯೇ, ಇವನಿರುವ ದೋಣಿಗೆ ಗಾಯಗೊಂಡು  ಬಿದ್ದ ಹೇಸರಗತ್ತೆ (ಝೀಬ್ರಾ),  ಕಿರುಬ(ಹೈನಾ),  ವಾನರ ಜಾತಿಯ ಓರನ್ ಗುಟನ್ ಪ್ರಾಣಿಗಳು ಇರುತ್ತವೆ.  ಇವುಗಳ ಮಧ್ಯೆ ತನ್ನ ಪ್ರಾಣವನ್ನು ಹೇಗೆ ರಕ್ಷಿಸಿಕೊಳ್ಳಬೇಕೆಂದು ಗೊಂದಲಕ್ಕೆ ಸಿಲುಕಿದ್ದ ಹುಡುಗನ ಕಣ್ಣೆದುರಿನಲ್ಲೇ ಕಿರುಬವು ಹೇಸರಗತ್ತೆ ಮತ್ತು ವಾನರಗಳ  ಜೀವ ತೆಗೆಯುತ್ತದೆ.  ಈ ನಡುವೆ ಅನಿರೀಕ್ಷಿತವೋ ಎಂಬಂತೆ ದೋಣಿಯ ಟಾರ್ಪಾಲಿನಲ್ಲಿ ಅಡಗಿದ್ದ ಹುಲಿ ಹೈನಾದ ಜೀವವನ್ನು ತೆಗೆಯುತ್ತದೆ.

ಯಾವ ಹುಲಿಯ ಜೊತೆ ನೀನು ಒಂದಾಗಿ ಬದುಕು ಸಾಗಿಸುವುದಕ್ಕಾಗುವುದಿಲ್ಲ ಎಂದು ಅಪ್ಪಾ ನಿದರ್ಶಿಸಿ ಬೋಧಿಸಿದ್ದನೋ ಅದೇ ಹುಲಿಯ ಜೊತೆ ಹಲವಾರು ದಿನ ಅಳಿವು ಉಳಿವೆಂಬ  ಕಣ್ಣಾಮುಚ್ಚಾಲೆ ಆಟದಲ್ಲಿ, ನಂತರದಲ್ಲಿ ಅದಕ್ಕೆ ಕಾಲ ಕಾಲಕ್ಕೆ ಆಹಾರ ಒದಗಿಸಿ, ಬುದ್ಧಿವಂತಿಕೆಯಿಂದ ತಪ್ಪಿಸಿಕೊಳ್ಳುವ ಚಾಕಚಕ್ಯತೆಯ   ಜೊತೆಗೆ,  ತನ್ನ ಮತ್ತು ಹುಲಿಯ ನಡುವೆ ಸಂವೇದನಾತ್ಮಕ ಸಂಭಾಷಣೆಯನ್ನು ಸ್ವಯಂ ನಿರ್ಮಿಸಿಕೊಳ್ಳುತ್ತಾನೆ.  ಇದೆಲ್ಲಕ್ಕೂ ಆಗಾಗ ‘ಧನ್ಯವಾದಗಳು ದೇವರೇ’ ಎಂದೆನ್ನುತ್ತಾ ತನ್ನ ಬದುಕಿನಲ್ಲಿ ಆಗ್ಗಿಂದಾಗ್ಗೆ ಸಂಭವಿಸುತ್ತಿರುವ ವಿಸ್ಮಯಗಳ ಬಗ್ಗೆ ಒಮ್ಮೊಮ್ಮೆ ಅಚ್ಚರಿಗೊಳ್ಳುತ್ತಾ, ತಾನು ಅಷ್ಟೊಂದು ದಿನಗಳ ವರೆಗೆ ಬದುಕಿರುವ ಬಗೆಗೆ ಆಗಾಗ  ಕೃತಜ್ಞತಾ ಭಾವವನ್ನು ಅಭಿವ್ಯಕ್ತಿಸುತ್ತಾ  227ದಿನಗಳ ಬದುಕನ್ನು ದೋಣಿಯಲ್ಲಿ ಕಳೆಯುತ್ತಾನೆ.

ಈ ಮಧ್ಯೆ ಆತನ ದೋಣಿ ಒಂದು ದ್ವೀಪವನ್ನು ತಲುಪುತ್ತಾನೆ.  ಅಲ್ಲಿ ಈತನಿಗೆ ಮತ್ತು ಈತನ ಸಹವಾಸಿ ಹುಲಿಗೆ ಬೇಕಾದ ಆಹಾರವೆಲ್ಲವೂ ಕೈಗೆಟುಕುವ ಹಾಗಿದೆ.  ಆದರೆ ಪ್ರಕೃತಿಯ ಮತ್ತೊಂದು ವೈಚಿತ್ರ್ಯ ಆತನಿಗೆ ಕಾಣಸಿಗುತ್ತದೆ.  ಅಲ್ಲಿ ಬೇಕಿದ್ದೆಲ್ಲವೂ ಇದ್ದರೂ ವಾತಾವರಣ ಆಗ್ಗಿಂದಾಗ್ಗೆ  ಉಂಟುಮಾಡುವ ವಿಷಪೂರಿತ ಅನಿಲಗಳ ಸೃಷ್ಟಿ ಅಲ್ಲಿನ ಬದುಕು ಅಶಾಶ್ವತ ಎಂಬ ಅರಿವನ್ನು ತರುತ್ತದೆ.  ಹೀಗೆ ಒಳಿತು ಕೆಡುಕು ಇವೆಲ್ಲವುಗಳ ಸೃಷ್ಟಿಯ ಸಮಷ್ಟಿಯ ಬಗೆಗೆ ವಿಸ್ಮಯಗೊಳ್ಳುತ್ತಾ ಮತ್ತೊಮ್ಮೆ ಅನಿಶ್ಚಿತತೆಯ ಬದುಕೆಂಬ ತೇಲುವ ದೋಣಿಗೆ ಬಂದು ಸೇರುತ್ತಾನೆ.  ತನ್ನ ಜೊತೆಗಾರ ಹುಲಿಯನ್ನೂ ತನ್ನೊಡನೆ ಕರೆದೊಯ್ಯುತ್ತಾನೆ. ಆಹಾರದ ಕೊರತೆ ಮತ್ತು ಅಪೌಷ್ಠಿಕತೆಯಿಂದಾಗಿ ಇನ್ನೇನು ಬದುಕು ನಿಸ್ಸಹಾಯತೆಯಲ್ಲಿ ಕೊನೆಗೊಳ್ಳುತ್ತಿದೆ ಎಂದುಕೊಳ್ಳುವ ಸಮಯದಲ್ಲಿ  ಮೆಕ್ಸಿಕೋದ ಸಮುದ್ರ ತೀರದಲ್ಲಿ ತೀರದಲ್ಲಿ ಬಂದು  ಬೀಳುತ್ತಾನೆ.  ಇವನ ಮುಂದೆಯೇ ದೋಣಿಯಿಂದ ಕೆಳಕ್ಕೆ ಹಾರಿದ ಹುಲಿ ತನ್ನ ಮುಂದಿರುವ ವಿಶಾಲವಾದ ಕಾಡಿನೊಳಕ್ಕೆ ನುಸುಳುತ್ತದೆ.  ಸಮುದ್ರತೀರದಲ್ಲಿನ ಜನ ಈತನಿಗೆ ಆರೈಕೆ ಸಿಗುವ ಹಾಗೆ ಮಾಡುತ್ತಾರೆ.    

ಈ ಅಪಘಾತ ಹೇಗಾಯಿತು ಎಂದು ಇವನಿಂದ ಉತ್ತರವನ್ನು ಅಪೇಕ್ಷಿಸಿ ಬಂದ ಹಡಗಿನ ಸಂಸ್ಥೆಯ ನೌಕಾಧಿಕಾರಿಗಳಿಗೆ ಅಪಾಘಾತ ಹೇಗಾಯಿತು ಎಂಬುದಕ್ಕೆ ಅವನಲ್ಲಿ ಉತ್ತರವಿಲ್ಲ.  ಅದರ ಬದಲು  ಮೇಲ್ಕಂಡ ಕಥೆ ಹೇಳುತ್ತಾನೆ.   ಈತ ತನ್ನ ಹಾಗೂ ತನ್ನ ಪ್ರಾಣಿ ಸಹಜೀವನದ ಕಥೆಯನ್ನು ಹೇಳಿದಾಗ ಅವರು ನಂಬುವುದಿಲ್ಲ..  ಅದಕ್ಕಾಗಿ ಈ ಪ್ರಾಣಿಗಳ ಪಾತ್ರದಲ್ಲಿ  ಮನುಷ್ಯ ಪಾತ್ರಗಳನ್ನು ಸೃಷ್ಟಿಸಿ ಕಥೆ ಹೇಳುತ್ತಾನೆ.  ಮನುಷ್ಯನೇ ಮೃಗಗಳಾಗಿ ಒಬ್ಬರಿಗೊಬ್ಬರು ಅಸ್ತಿತ್ವಕ್ಕಾಗಿ ಹೋರಾಡುವ ಭಯಾನಕತೆಗಿಂತ ಪ್ರಾಣಿಗಳೊಂದಿಗಿನ ಆತನ ಬದುಕೇ ವಾಸಿಯದು ಎಂಬ ಅನಿಸಿಕೆಯಲ್ಲಿ ಚಿತ್ರ ಕೊನೆಗೊಳ್ಳುತ್ತದೆ.

ಮಾನವ ತಾನು ಸೃಷ್ಟಿಸಿಕೊಂಡಿರುವ ಜಗತ್ತಿನಲ್ಲಿ ನಿರ್ದಿಷ್ಟತೆಯ ಸ್ಪಷ್ಟ ಉತ್ತರಗಳನ್ನು ಅಪೇಕ್ಷಿಸುತ್ತಿರುತ್ತಾನೆ.  ಆದರೆ ಹಾಗೆ ಹುಡುಕುವಲ್ಲೆಲ್ಲ ಆತ ತಲುಪುವುದು ಮಾತ್ರ ಇದ್ದುದ್ದರಲ್ಲಿ ತನ್ನ ಕಿವಿಗೆ ಹಿತವಾಗುವ  ವ್ಯಾಖ್ಯಾನವನ್ನು ಮಾತ್ರ.  ಆದರೆ ಆ ವಿಶ್ವನಿಯಾಮಕ ಸೃಷ್ಟಿಯ ರಹಸ್ಯವನ್ನು ಅರಸುತ್ತ ಹೋದಂತೆಲ್ಲ ಅದು ತೆರೆದಿಡುವ ದಿವ್ಯತೆ, ಅನಿರೀಕ್ಷತೆ, ನಮ್ಮ ಎಣಿಕೆಗಿಂತ ವೈವಿಧ್ಯತೆಯಲ್ಲಿ ಸಾಗುತ್ತಿರುವ ಸೃಷ್ಟಿ ವಿಚಿತ್ರಗಳ ಅಗಾಧತೆಯನ್ನು.  ಇವೆಲ್ಲವುಗಳನ್ನು ನಾವು ದೃಷ್ಟಿಸುವುದನ್ನು ಕಲಿತಂತೆಲ್ಲ  ಇವೆಲ್ಲವನ್ನೂ ಪೋಣಿಸಿದಂತಹ ಸೂಕ್ಷ್ಮ ಎಳೆ ಕಾಣಿಸತೊಡಗುತ್ತದೆ,  ಆ ಸೂಕ್ಷ್ಮ ಎಳೆಗೆ ವಿನಮ್ರರಾಗಿ ಬದುಕತೊಡಗಿದಾಗ  ಹುಟ್ಟು ಬದುಕು ಸಾವುಗಳಾಚೆಗಿನ ಅನುಭಾವ  ನಮಗೆ ದೊರಕುತ್ತಾ ಹೋಗುತ್ತದೆ.  ಹಾಗೆಂದ ಮಾತ್ರಕ್ಕೆ ನಾವು ಅದನ್ನು ತಿಳಿದುಬಿಟ್ಟೆವು ಎಂದುಕೊಳ್ಳುವುದು, ನಮ್ಮ ಕಲಿಕೆಯ ಕೊನೆಯನ್ನು ಕಾಣಿಸಬಹುದೇ  ವಿನಹಃ ಸೃಷ್ಟಿರಹಸ್ಯದ ಮೇರೆಯನ್ನಲ್ಲ.

ಈ ಬರಹ ನನ್ನಲ್ಲಿ ಹುಟ್ಟಿಸಿದ ಚಿಂತನೆಯೇ ವಿನಹಃ ಮೂಲ ಕಥೆಗಾರನ, ಇದನ್ನು ಸಿನಿಮಾ ರೂಪದಲ್ಲಿ ಮೂಡಿಸಿದವನ ಇಲ್ಲವೇ ಇದನ್ನು ಅತ್ಯಂತ ವಿದ್ವತ್ಪೂರ್ಣವಾಗಿ ಅರ್ಥೈಸಿರಬಹುದಾದ ವಿದ್ವಾಂಸರ ಅಭಿಪ್ರಾಯವಾಗಿರಲೇಬೇಕೆಂದೇನೂ ಇಲ್ಲ.  ನನ್ನ ಅಲ್ಪಮತಿ ಚಿಂತಿಸಿದ್ದು ಹೀಗೆ. ಅಷ್ಟೇ!

Tag: Life of Pie

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ