ತೇನವಿನಾ ತೇನವಿನಾ
ತೇನ ವಿನಾ ತೇನ ವಿನಾ
ತೃಣಮಪಿ ನ ಚಲತಿ ತೇನ ವಿನಾ.
ಮಮತೆಯ ಬಿಡು, ಹೇ ಮೂಢಮನಾ,
ಮೂಢಮನಾ, ಹೇ ಮೂಢಮನಾ!
ತೃಣಮಪಿ ನ ಚಲತಿ ತೇನ ವಿನಾ.
ಮಮತೆಯ ಬಿಡು, ಹೇ ಮೂಢಮನಾ,
ಮೂಢಮನಾ, ಹೇ ಮೂಢಮನಾ!
ರವಿಗಿಲ್ಲದ ಭಯ, ಶಶಿಗಿಲ್ಲದ ಭಯ,
ತಾರಾನಿವಹಕೆ ಇರದ ಭಯ,
ನಿನಗೇತಕೆ ಬಿಡು, ಅಣು! ಶ್ರದ್ಧೆಯನಿಡು;
ನಿನ್ನನೆ ನೈವೇದ್ಯವ ನೀಡು!
ತೇನ ವಿನಾ ……
ತಾರಾನಿವಹಕೆ ಇರದ ಭಯ,
ನಿನಗೇತಕೆ ಬಿಡು, ಅಣು! ಶ್ರದ್ಧೆಯನಿಡು;
ನಿನ್ನನೆ ನೈವೇದ್ಯವ ನೀಡು!
ತೇನ ವಿನಾ ……
ಎಲ್ಲೆಲ್ಲಿಯು ಕಯ್, ಎಲ್ಲೆಲ್ಲಿಯು
ಕಾಲ್
ಎಲ್ಲೆಲ್ಲಿಯು ಕಣ್ ತಾನಾದ
ಸತ್ ಚಿತ್ ಶಕ್ತಿಯ ಆನಂದವಿರಲ್
ಬಿಡು ಏತಕೆ ನಿನಗೆ ವಿಷಾದ!
ತೇನ ವಿನಾ ….
ಎಲ್ಲೆಲ್ಲಿಯು ಕಣ್ ತಾನಾದ
ಸತ್ ಚಿತ್ ಶಕ್ತಿಯ ಆನಂದವಿರಲ್
ಬಿಡು ಏತಕೆ ನಿನಗೆ ವಿಷಾದ!
ತೇನ ವಿನಾ ….
ಸಾಹಿತ್ಯ:
ಕುವೆಂಪು
ಈ ಕವಿತೆಯ ಆಂತರ್ಯ
ಹೀಗಿರಬಹುದೇ?
ತೇನವಿನಾ ಅಂದರೆ ನಿನ್ನನ್ನು ಬಿಟ್ಟರೆ ಅಂತ. ತೇನವಿನಾ
ತೃಣಮಪಿ ನ ಚಲತಿ ಅಂದರೆ ನಿನ್ನನ್ನು ಬಿಟ್ಟರೆ ಒಂದು ಹುಲ್ಲು ಕಡ್ಡಿಯೂ ಮಿಸುಕಾಡುವುದಿಲ್ಲ ಅಂತ.
ಇದು ಆದಿಶಂಕರರ ನುಡಿ ಎಂದು ಕೇಳಿದ್ದೇನೆ. ಅವರು ಇದನ್ನು ಪರಮಾತ್ಮನಿಗೆ ಹೇಳುತ್ತಾರೆ.
"ಪರಮಾತ್ಮ ನಿನ್ನ ಇಚ್ಛೆಯಿಲ್ಲದ ಹೊರತು ಒಂದು ಹುಲ್ಲು ಕಡ್ಡಿಯೂ ಅಲ್ಲಾದುವುದಿಲ್ಲ"
ಎಂಬ ಭಕ್ತಿಭಾವ ಈ ಮಾತಲ್ಲಿದೆ. ಆದಿಶಂಕರರ ಅದ್ವೈತ ಸಿದ್ಧಾಂತದ ಎಳೆಯಾದ 'ನಮ್ಮೊಳಗಿನ ಆತ್ಮನೇ ಪರಮಾತ್ಮ'
ಎಂಬ ತತ್ವ ಕುವೆಂಪು ಅವರ ಈ ಕವಿತೆಯಲ್ಲಿನ ಅಂತರಾಳದ ಎಳೆಯಲ್ಲೂ
ಸೂಕ್ಷ್ಮವಾಗಿದೆ. ಓ ಮನುಷ್ಯ ನಿನ್ನ ಕೈಲಿ ಏನಿದೆ ಅಂದುಕೊಳ್ಳಬೇಡ. ನಿನ್ನ ಇಚ್ಛೆಯಿಲ್ಲದೆ ಏನೂ
ನಡೆಯುವುದಿಲ್ಲ ಎಂಬುದು ಒಂದು ರೀತಿಯಲ್ಲಿ ಆಧ್ಯಾತ್ಮದ ಭಾವ ಹೇಳುತ್ತಿದ್ದರೆ, ಮತ್ತೊಂದೆಡೆ ನಿನ್ನ
ಆಲಸ್ಯವನ್ನು ಬಿಟ್ಟು ಕಾರ್ಯಪ್ರವೃತ್ತನಾಗು, ನೀನು ಮನಸ್ಸು ಮಾಡದಿದ್ದರೆ ಏನೂ ಆಗುವುದಿಲ್ಲ ಎಂಬ
ಮತ್ತೊಂದು ಅರ್ಥವೂ ಮೂಡುತ್ತದೆ. ಮತ್ತೊಮ್ಮೆ ನಮ್ಮ ಆತ್ಮ ಅಂತರಾತ್ಮದ ಶಕ್ತಿ ಎಂಬ ಭಾವಕ್ಕೆ
ಬಂದಾಗ ಅದನ್ನು 'ಹೊರಹೊಮ್ಮಿಸುವುದು ಹೇಗೆ?' ಎಂಬ ಪ್ರಶ್ನೆ ಮೂಡುತ್ತದೆ. ಅದಕ್ಕೆ ಉತ್ತರ ಮುಂದಿನ
ಸಾಲು - 'ಮಮತೆಯ ಬಿಡು ಹೇ ಮೂಢ ಮನ'. ಮಮತೆ
ಅಂದರೆ ನಾವು ಇಡೀ ಅಸ್ತಿತ್ವ ಅಥವಾ ಪರಮಾತ್ಮನ ಭಾಗವೇ ಆಗಿರುವಾಗ, ಈ
ದೇಹ ನನ್ನದು, ಈ ವಸ್ತು ನನ್ನದು, ಅದು
ನನ್ನದು ಎಂದು ಸೀಮಿತವಾದ ಮನೋ ವ್ಯಾಪಾರದಲ್ಲಿ ತೊಡಗುವುದು. ಹಾಗಾದಾಗ ಏನಾಗುತ್ತದೆ ನಾವು
ಭಯದಲ್ಲಿ ಸಿಲುಕುತ್ತೇವೆ.
ಮುಂದಿನ ಸಾಲಿನಲ್ಲಿ ಸೂರ್ಯನಿಗೆ ಭಯವಿಲ್ಲ, ಚಂದ್ರನಿಗೆ ಭಯವಿಲ್ಲ. ನಕ್ಷತ್ರಗಳಿಗೂ ಇಲ್ಲ - ನಿನಗೇತಕೆ ಭಯ ಎಂಬ ಮಾತಿದೆ. ಸೂರ್ಯ, ಚಂದ್ರನು ಈ ವಿಶ್ವ ಶಕ್ತಿಯ ಅಣುಗಳು. ಹಾಗೆಯೇ ನಾವು ಕೂಡ. ಹಾಗಾಗಿ 'ಅಣು' ನೀನು ಶ್ರದ್ಧೆಯನ್ನಿಡು, ನಿನ್ನನ್ನೇ ನೈವೇದ್ಯವ ನೀಡು ಅಂದರೆ ಸೃಷ್ಟಿಯಲ್ಲಿ ಒಂದಾಗಿಸಿಕೋ ಎಂದ ಅರ್ಥೈಸಬಹುದು.
ಹಾಗಾದಾಗ ಏನಾಗುತ್ತದೆ ಎಲ್ಲೆಲ್ಲಿಯೂ ಕೈ, ಎಲ್ಲೆಲ್ಲಿಯೂ ಕಾಲ್, ಎಲ್ಲೆಲ್ಲಿಯೂ ಕಣ್ ತಾನಾದ ಶಕ್ತಿ ಅಂದರೆ ಚೇತನದ ಅರಿವು ನಮಗಾಗಿ ನಾವು 'ನಾನು' ಎಂಬ ಕ್ಷುಲ್ಲಕ ಭಾವದಿಂದ ಸತ್ -ಸತ್ಯ, ಚಿತ್ - ಜ್ಞಾನ, ಆನಂದ ಎಂಬ ಸಚ್ಚಿದಾನಂದವೇ ಆಗಿರುತ್ತೇವೆ. ಹೀಗಿರುವಾಗ ವಿಷಾದ ಎಂಬುದಾದರೂ ಏಕೆ?
Tag: Tenvina trunamapi na chalati
ಸೂಪರ್ 👌🙏 ತುಂಬಾ ಸರಿಯಾಗಿದೆ... 👏👏
ಪ್ರತ್ಯುತ್ತರಅಳಿಸಿ