ಒಂದೇ ಒಂದಡಿ ಹೆಜ್ಜೆ
ಒಂದೇ ಒಂದಡಿ ಹೆಜ್ಜೆ
ಆತನ ಹೆಸರು ಆರ್. ಯು ಡರ್ಬಿ. ಆತ ಅಮೆರಿಕದಲ್ಲಿ ಒಂದು ಕಾಲದಲ್ಲಿ ಅತ್ಯಂತ ಹೆಚ್ಚು ವಿಮೆ ಪಾಲಿಸಿಗಳನ್ನು ಮಾರಿದ ವಿಕ್ರಮ ಸಾಧಿಸಿದ್ದ. ತನ್ನ ಈ ಅಮೋಘ ಸಾಧನೆಯ ಹಿನ್ನೆಲೆಗೆ ನೆರವಾದ ಎರಡು ಘಟನೆಗಳನ್ನು ಆತ ಹೀಗೆ ನೆನಪಿಸಿಕೊಳ್ಳುತ್ತಾನೆ.
ಈ ಡರ್ಬಿ ಬಾಲಕನಾಗಿದ್ದಾಗ ಆತನ ಚಿಕ್ಕಪ್ಪನಿಗೆ ‘ಚಿನ್ನದ ಹುಚ್ಚು’ ಹಿಡಿದಿತ್ತು. ತಾನಿರುವ ಪ್ರದೇಶ ಚಿನ್ನದ ನಿಕ್ಷೇಪವಿರುವ ಪ್ರದೇಶ ಎಂಬ ಸ್ಥೂಲ ಅರಿವಿದ್ದ ಆತ, ಒಂದು ದಿನ ತನ್ನ ಹಾರೆ ಗುದ್ದಲಿಗಳನ್ನು ತೆಗೆದುಕೊಂಡು ತನ್ನ ಮನೆಯಿಂದ ಪಶ್ಚಿಮದಿಕ್ಕಿಗೆ ಹೊರಟೇ ಬಿಟ್ಟ. “ಭೂಮಿಯಿಂದ ಎಷ್ಟು ಚಿನ್ನವನ್ನು ತೆಗೆಯಬಹುದೋ, ಅದಕ್ಕಿಂತ ಹೆಚ್ಚಿನ ಚಿನ್ನವನ್ನು ಮನುಷ್ಯ ತನ್ನ ಬುದ್ಧಿಶಕ್ತಿಯಿಂದ ತೆಗೆಯಬಹುದೆಂಬ ಪರಿಕಲ್ಪನೆ” ಈ ಡರ್ಬಿಯ ಚಿಕ್ಕಪ್ಪನಿಗಿರಲಿಲ್ಲ. ಆದರೂ ಆತನ ಆಕಾಂಕ್ಷೆಗೆ ಪ್ರತಿಫಲವೋ ಎಂಬಂತೆ ಆತ, ತನ್ನ ಭೂ ಅಗೆತದ ಶ್ರಮದಲ್ಲಿ ಫಳ ಫಳವೆಂಬ ಚಿನ್ನದ ನಿಕ್ಷೇಪವನ್ನು ಕಂಡೇಬಿಟ್ಟ. ಸುತ್ತಮುತ್ತಲೂ ಯಾರೂ ಕಾಣದಂತೆ ತಾನು ಅಗೆದ ಜಾಗವನ್ನು ಮುಚ್ಚಿ, ತಾನು ಹಿಂದಿರುಗಿದ ದಾರಿಯನ್ನು ಅತ್ಯಂತ ಜಾಗರೂಕವಾಗಿ ನೆನಪಿಸಿಕೊಳ್ಳುತ್ತಾ ಮನೆಗೆ ಹಿಂದಿರುಗಿದ. ತನ್ನ ಬಂಧುಗಳ ಜೊತೆ ತನ್ನ ಈ ಶೋಧದ ಬಗ್ಗೆ ತಿಳಿಸಿ, ಅವರಲ್ಲೂ ಲಾಭದ ಪಾಲು ನಿರೀಕ್ಷೆ ಹುಟ್ಟಿಸಿ, ಅವರೆಲ್ಲರನ್ನೂ ಪಾಲುಮಾಡಿಕೊಂಡು ಒಂದು ಭೂಮಿ ಅಗೆಯುವ ಯಂತ್ರವನ್ನು ಕೊಂಡುಕೊಂಡು ಗಣಿಗಾರಿಕೆಗೆ ತೊಡಗಿಯೇ ಬಿಟ್ಟ.
ಚಿನ್ನದ ಲಭ್ಯತೆಯಿಂದ ಅವರಿಗೆ ತಾವು ಕೊಲರಾಡೋ ಪ್ರದೇಶದಲ್ಲೇ ಶ್ರೀಮಂತ ಗಣಿ ಹೊಂದಿದ್ದೇವೆ ಎಂಬ ಭರವಸೆ ಬಂತು. ಕೆಲವೊಂದು ತಿಂಗಳುಗಳಲ್ಲೇ ಒಂದಾದ ಮೇಲೆ ಒಂದರಂತೆ ಕೆಲವು ಚಿನ್ನದ ಸರಕುಗಳು ಮಾರಾಟವಾದವು. ಬಂದ ಲಾಭದಿಂದ ಸಾಲ ತೀರಿತು. ಆದರೆ ಮುಂದಿನ ಕೆಲವೇ ದಿನಗಳಲ್ಲೇ ಲಾಭ ಇಳಿಕೆಗೊಂಡು ಒಂದು ದಿನ ಅಲ್ಲಿದ್ದ ನಿಕ್ಷೇಪವೆಲ್ಲವೂ ಬರಿದಾಗಿತ್ತು. ಏನು ಮಾಡಿದರೂ ಕಿಂಚಿತ್ತು ಚಿನ್ನವೂ ಸಿಗಲಿಲ್ಲ.
ಸರಿ ಡರ್ಬಿಯ ಚಿಕ್ಕಪ್ಪ ತನ್ನ ಯಂತ್ರವನ್ನೂ ತನಗಿದ್ದ ಜಾಗವನ್ನೂ ಗುಜರಿಯವನಿಗೆ ಸಿಕ್ಕ ಹಣಕ್ಕೆ ಮಾರಿ, ಊರು ಬಿಟ್ಟು ಬೇರೆ ಊರಿಗೆ ಹೋಗಿ ನೆಲೆಸಿಬಿಟ್ಟ. ಈ ಗಣಿಗಾರಿಕೆ ಯಂತ್ರವನ್ನು ಡರ್ಬಿಯ ಚಿಕ್ಕಪ್ಪನಿಂದ ಕೊಂಡ ಗುಜರಿಯವ ಬಹುತೇಕರಂತೆ ತನಗೆ ಬಂದದ್ದನ್ನು ಏನೋ ಒಂದು ಎಂದು ಸ್ವೀಕರಿಸುವವನಾಗಿರಲಿಲ್ಲ. ಆತ ಒಬ್ಬ ಸಮರ್ಥ ತಂತ್ರಜ್ಞನಿಗೆ ಈ ಗಣಿಯನ್ನು ಒಮ್ಮೆ ಪರೀಕ್ಷಿಸಿ ವರದಿ ನೀಡುವ ಕಾರ್ಯವನ್ನು ವಹಿಸಿಕೊಟ್ಟ. ಈ ತಂತ್ರಜ್ಞ ಗಣಿಯನ್ನು ಪರೀಕ್ಷಿಸಿ, “ಗಣಿಗಳಲ್ಲಿ ಕೆಲವೊಂದು ತೊಂದರೆಗೀಡಾದ ಜಾಡು(faulty lines)ಗಳಿರುವುದು ಸಾಮಾನ್ಯವೆಂದೂ, ಅದರಿಂದ ಸಾಮಾನ್ಯರು ಗಣಿ ಬರಿದಾಗಿ ಹೋಯ್ತು ಎಂದು ತಪ್ಪಾಗಿ ಭ್ರಮಿಸುವುದನ್ನು ತಿಳಿಸಿ, ಇನ್ನು ಮೂರ್ನಾಲ್ಕು ಅಡಿ ಆಳಕ್ಕೆ ಇಳಿದರೆ ಪುನಃ ಚಿನ್ನದ ನಿಕ್ಷೇಪ ಇರುವುದಾಗಿ ಅಭಿಪ್ರಾಯ ವ್ಯಕ್ತಪಡಿಸಿದ.” ಆ ತಂತ್ರಜ್ಞನ ಚಿಂತನೆ ಸುಳ್ಳಾಗಿರಲಿಲ್ಲ. ಕೇವಲ ಮೂರಡಿ ಅಗೆದಾಗ ಚಿನ್ನದ ನಿಕ್ಷೇಪ ಪುನಃ ದೊರಕಿ ಆ ಗುಜರಿ ಅಂಗಡಿಯವ ತನ್ನ ಚಿಂತನೆಯ ಕ್ರಮ, ತಜ್ಞರ ಸಲಹೆ ಪಡೆದುಕೊಳ್ಳುವಂತಹ ಪ್ರಾಜ್ಞತೆಯಿಂದ ಕುಬೇರನಾಗಿಬಿಟ್ಟ. ಅಸಹನಶೀಲನಾಗಿ ತನ್ನೆದುರಿಗಿದ್ದ ತಾತ್ಕಾಲಿಕ ಹಿನ್ನೆಡೆಯನ್ನು ಜೀವನದ ಸೋಲು ಎಂದು ಅರ್ಥೈಸಿ, ತನ್ನ ಶ್ರಮದಲ್ಲಿ ಆಸಕ್ತಿ ಕಳೆದುಕೊಂಡ ಡರ್ಬಿಯ ಚಿಕ್ಕಪ್ಪ, ಕೇವಲ ತಾನು ನಿಂತ ನೆಲದಿಂದ ಮೂರಡಿಯ ವೆತ್ಯಾಸದಲ್ಲಿ ದೊಡ್ಡ ಪ್ರಪಾತವನ್ನೇ ಅನುಭವಿಸಿದ್ದ. ಇದು ಡರ್ಬಿಯ ಜೀವನದ ಅರ್ಥೈಕೆಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು.
ಈಗಾಗಲೇ ಹೇಳಿದ ಹಾಗೆ ಡರ್ಬಿ ತನ್ನ ಜೀವನದಲ್ಲಿ ಕಲಿತ ಪಾಠಗಳಿಂದ ಯಶಸ್ವಿ ವಿಮೆ ಮಾರಾಟಗಾರನಾಗಿ ಬದಲಾದ. ಈತನ ಬಂಧುಗಳನೇಕರು ಈತನಿಗೆ ಸಹಾಯ ಮಾಡಿ ಈತ ಮುಂದೆ ಬರುವಂತೆ ಸಹಾಯ ನೀಡಿದ್ದರು. ಅದೆಲ್ಲವನ್ನೂ ಆತ ಬಡ್ಡಿ ಸಮೇತವಾಗಿ ತನ್ನ ಬಂಧುಗಳಿಗೆ ಹಿಂದಿರುಗಿಸಿದ್ದ. ಆದರೆ ಅವೆಲ್ಲಾ ಸುಲಭವಾಗಿ ಆದದ್ದಲ್ಲ. ಆತ ಬಹಳಷ್ಟು ಜನರ ಮುಂದೆ ವಿಮೆ ತೆಗೆದುಕೊಳ್ಳಿ ಎಂದು ಕೇಳಿದಾಗ ಬೇಡ ಅಂದರು. ಆದರೆ ಡರ್ಬಿಗೆ ತನ್ನ ಮುಂದಿರುವ ಗ್ರಾಹಕ ‘ಬೇಡ’ ಎಂದರೆ ಅದು ಆಕ್ಷಣಕ್ಕೆ ಹೇಳಿದ ಒಂದು ಮಾತಷ್ಟೇ. ಅದು ‘ಬೇಡವೇ ಬೇಡ’ ಎಂಬ ಅಚಲ ನಿರ್ಧಾರವೇನಲ್ಲ ಎಂಬುದು ಅರಿವಿಗೆ ಬಂದಿತ್ತು. “ಆತನಲ್ಲಿ ಆ ಅರಿವು ಮೂಡಿದ್ದಾದರೂ ಹೇಗೆ?”.
ಅದಕ್ಕೊಂದು ಪುಟ್ಟ ಹುಡುಗಿ ಕಾರಣ. ಡರ್ಬಿಯ ಚಿಕ್ಕಪ್ಪ ಒಬ್ಬ ಪಾಳೆಯಗಾರನಂತಹ ಒರಟು ವ್ಯಕ್ತಿ. ಒಂದು ದಿನ ಡರ್ಬಿ ತನ್ನ ಚಿಕ್ಕಪ್ಪನೊಡನೆ ಆತನ ದೊಡ್ಡ ಹೊಲಕ್ಕೆ ಹೊಂದಿಕೊಂಡಂತೆ ಇದ್ದ ಹಳೆಯ ಕಾಲದ ಗಿರಣಿಯಲ್ಲಿ ಹಿಟ್ಟು ಬೀಸುವ ಕೆಲಸದಲ್ಲಿ ತೊಡಗಿದ್ದ. ಅಲ್ಲಿ ಆ ಹೊಲದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಒಬ್ಬಾಕೆಯ ಮಗಳಾದ ಈ ಪುಟ್ಟ ಹುಡುಗಿ, ಬಾಗಿಲಲ್ಲಿ ಬಂದು ಡರ್ಬಿಯ ಚಿಕ್ಕಪ್ಪನ ದೃಷ್ಟಿಯನ್ನೇ ಪ್ರತೀಕ್ಷಿಸುತ್ತಾ ನಿಂತಿದ್ದಳು.
ಡರ್ಬಿಯ ಚಿಕ್ಕಪ್ಪ ಸಿಡುಕಿದ. “ಏಯ್ ಏನಿಲ್ಲಿ ನಿಂತಿದ್ದೀಯ, ಹೋಗು ಆ ಕಡೆ”. ಪುಟ್ಟ ಹುಡುಗಿ ಹೇಳಿತು, “ಅಮ್ಮನಿಗೆ 50 ಕಾಸು ಬೇಕಂತೆ”.
ಡರ್ಬಿಯ ಚಿಕ್ಕಪ್ಪ “ಅದೆಲ್ಲಾ ಆಗೋಲ್ಲ ಅಂತ ಹೇಳು ಹೋಗು” ಅಂದ. ‘ಆಯ್ತು ಧಣಿ’ ಎಂದಿತು ಹುಡುಗಿ. ಆದರೆ ಅಲ್ಲೇ ನಿಂತಿತ್ತು.
ಪುನಃ ಡರ್ಬಿಯ ಚಿಕ್ಕಪ್ಪ ಕಿರುಚಿದ. “ಒಂದ್ಸಲ ಹೇಳಿದ್ರೆ ಅರ್ಥ ಆಗೋಲ್ಲ ನಿಂಗೆ, ಹೊರಡು, ಹುಂ”. ‘ಆಯ್ತು ಧಣಿ’ ಎಂದಿತು ಹುಡುಗಿ. ಆದರೆ ಕಿಂಚಿತ್ತೂ ಅಲುಗಲಿಲ್ಲ.
ಪುನಃ ಆ ಹುಡುಗಿ ಅಲ್ಲೇ ನಿಂತದ್ದು ನೋಡಿದ ಈ ದುಷ್ಟ ಚಿಕ್ಕಪ್ಪ ಅಲ್ಲೇ ಕೈಗೆ ಸಿಕ್ಕಿದ ಸಲಾಕೆ ತೆಗೆದುಕೊಂಡು “ಬಂದೆ ತಾಳು ನಿನ್ನ ಹುಟ್ಲಿಲ್ಲ ಅನ್ನಿಸಿಬಿಡ್ತೀನಿ ಅಂತ ಅತ್ತ ಕಡೆ ಧಾವಿಸಿದ”. ತನ್ನ ಚಿಕ್ಕಪ್ಪನ ದುಷ್ಟತನವನ್ನು ಚೆನ್ನಾಗಿ ಬಲ್ಲ ಡರ್ಬಿಯ ಕೈ ಕಾಲುಗಳೆಲ್ಲಾ ಆ ಕ್ಷಣಕ್ಕೆ ನಡುಗಿ ಹೋದವು. ಇಂದು ಒಂದು ಜೀವದ ಕಥೆ ಆಗಿಯೇ ಹೋಯ್ತು ಎಂದು ಆತ ತರತರ ನಡುಗಿಹೋದ.
ಆದರೆ ಆ ಹುಡುಗಿಗೆ ಅದೆಲ್ಲಿಂದ ಧೈರ್ಯ ಬಂದಿತ್ತೋ. ಡರ್ಬಿಯ ಚಿಕ್ಕಪ್ಪ ಆ ಹಡುಗಿಯ ಕಡೆ ಸಲಾಕೆಯೊಂದಿಗೆ ಸಮೀಪಿಸುತ್ತಿರುವಾಗಲೇ ಆ ಹುಡುಗಿ ಹಿಂದೆ ಓಡುವುದರ ಬದಲಾಗಿ, ಚಿಕ್ಕಪ್ಪನ ಕಡೆಗೇ ಮುಂದಕ್ಕೆ ಒಂದಡಿ ಹೆಜ್ಜೆಯನ್ನಿಟ್ಟು ಅಸಾಮಾನ್ಯ ಧೈರ್ಯದಿಂದ ಕಣ್ಣಗಲಿಸಿ ನಿಂತಿತು. ಆ ಹುಡುಗಿ ಹೀಗೆ ದೃಢ ನಿಶ್ಚಯದಿಂದ ಹೆಜ್ಜೆ ಇಟ್ಟ ರೀತಿಗೆ, ಡರ್ಬಿಯ ಚಿಕ್ಕಪ್ಪ ಒಂದು ಕ್ಷಣ ಏನೂ ತೋಚದೆ ಪೆಚ್ಚಾಗಿ ನಿಂತುಬಿಟ್ಟ. ಹಾಗೆ ನಿಂತ ಆ ಪುಟ್ಟ ದೃಢವಾಗಿ ಹೇಳಿತು “ಅಮ್ಮನಿಗೆ ಆ 50 ಕಾಸು ಬೇಕೇ ಬೇಕು. ಅದಿಲ್ಲದೆ ನಾನು ಇಲ್ಲಿಂದ ಕದಲುವುದಿಲ್ಲ”.
ಮಂತ್ರಮುಗ್ಧನಾದಂತೆ ಡರ್ಬಿಯ ಚಿಕ್ಕಪ್ಪ ತನ್ನ ಜೇಬಿನಿಂದ ಅರ್ಧ ಡಾಲರ್ ತೆಗೆದು ಆ ಹುಡುಗಿಯ ಕೈಯಲ್ಲಿಟ್ಟು, ಮುಂದಿನ ಹತ್ತು ಹದಿನೈದು ನಿಮಿಷ ತನ್ನನ್ನೇ ಅಚಲ ದೃಷ್ಟಿಯಿಂದ ನೋಡುತ್ತಾ ಹಿಂದೆ ಹಿಂದೆ ಸರಿದ ಆ ಹುಡುಗಿ ಹೋದ ದಿಕ್ಕನ್ನೇ ನೋಡುತ್ತಾ, ಭ್ರಮಿತನಾಗಿ ನಿಂತುಬಿಟ್ಟ.
ಆ ಹುಡುಗಿ ಅಂದು ತೋರಿದ ದೃಢ ನಿಶ್ಚಯ, ಡರ್ಬಿ ಮುಂದೆ ಸಾಧಿಸಿದ ಅಸಾಮಾನ್ಯ ಯಶಸ್ಸಿಗೆ ಪ್ರೇರಣೆ ನೀಡಿತ್ತು.
(ನನ್ನ ಮೆಚ್ಚಿನ ಪುಸ್ತಕವಾದ ನೆಪೋಲಿಯನ್ ಹಿಲ್ ಅವರ ‘ಥಿಂಕ್ ಅಂಡ್ ಗ್ರೋ ರಿಚ್’ ಪುಸ್ತಕದಲ್ಲಿ ಇಂಗ್ಲಿಷಿನಲ್ಲಿ ಓದಿದ್ದನ್ನು ಇಲ್ಲಿ ಕನ್ನಡದಲ್ಲಿ ನಿರೂಪಿಸಲಿಕ್ಕೆ ಪ್ರಯತ್ನಿಸಿದ್ದೇನೆ.)
ಕಾಮೆಂಟ್‌ಗಳು