ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ಜಯಶ್ರೀ ಕಾಸರವಳ್ಳಿ


ಜಯಶ್ರೀ  ಕಾಸರವಳ್ಳಿ

ಇಂದು  ನಮ್ಮ  ಜಯಶ್ರೀ  ಕಾಸರವಳ್ಳಿ  ಅವರ  ಜನ್ಮದಿನ.   ಕನ್ನಡ  ಸಾಹಿತ್ಯ  ಲೋಕದಲ್ಲಿ  ಜಯಶ್ರೀ  ಕಾಸರವಳ್ಳಿಯವರು  ಮಕ್ಕಳಿಗೆ,  ಪತ್ರಿಕೆ  ಓದುವವರಿಗೆ,  ಬ್ಲಾಗ್  ಓದುಗರಿಗೆ,  ಕಥಾ  ಪ್ರಿಯರಿಗೆ, ಸಾಹಿತ್ಯ – ಸಾಂಸ್ಕೃತಿಕ  ಕಾರ್ಯಕ್ರಮಗಳಲ್ಲಿ  ಭಾಗವಹಿಸುವವರಿಗೆ,  ಫೇಸ್ಬುಕ್ ಗೆಳೆಯರಿಗೆ  ಹೀಗೆ  ಎಲ್ಲೆಲ್ಲೂ  ಪ್ರಿಯರು.  

ಜಯಶ್ರೀ  ಕಾಸರವಳ್ಳಿ  ಅವರು  ಕಾಸರವಳ್ಳಿ ಸಮೀಪದ  ಕೇಸಲೂರಿನಲ್ಲಿ  1959ರ ಆಗಸ್ಟ್ 9ರಂದು  ಜನಿಸಿದರು.  ಶಾಲೆಯಿಂದ  ಪದವಿಯವರೆಗಿನ ತಮ್ಮ    ವಿದ್ಯಾಬ್ಯಾಸವನ್ನು  ಶಿವಮೊಗ್ಗದಲ್ಲಿ  ಪೂರೈಸಿದ   ಅವರು   ಮೈಸೂರು  ವಿಶ್ವವಿದ್ಯಾಲಯದಿಂದ  ಎಂ. ಎ ಪದವಿಯನ್ನು  ಪಡೆದವರು.  ಬಹಳಷ್ಟು   ವರ್ಷ  ಚೆನ್ನೈನಲ್ಲಿ  ನೆಲೆಸಿ, ಅಲ್ಲಿನ  ಭಾರತ್  ಸೀನಿಯರ್  ಸೆಕೆಂಡರಿ ಶಾಲೆಯಲ್ಲಿ  ಶಿಕ್ಷಕಿಯಾಗಿ  ಕಾರ್ಯ  ನಿರ್ವಹಿಸಿದ  ಅವರು  ಪ್ರಸ್ತುತ  ಬೆಂಗಳೂರಿನಲ್ಲಿ  ನೆಲೆಸಿದ್ದಾರೆ.

ಜಯಶ್ರೀ  ಕಾಸರವಳ್ಳಿ  ಅವರ ಬರಹ  ಲೋಕವನ್ನು ಒಂದೆಡೆ  ವಿಶ್ಲೇಷಿಸಿರುವ   ಪ್ರಸಿದ್ಧ  ಲೇಖಕಿ  ಎಂ. ಎಸ್.  ಆಶಾದೇವಿ ಅವರು “ಸುಮಾರು  ಎರಡು  ದಶಕಗಳ  ಕಾಲ  ತಮ್ಮ  ಬರವಣಿಗೆಯುದ್ದಕ್ಕೂ   ಜಯಶ್ರೀಯವರು  ಕಥನ  ಶೈಲಿಯಲ್ಲಿ  ನಡೆಸಿರುವ  ಪ್ರಯತ್ನಗಳು  ಮಹಿಳಾ  ಕಥಾ  ಪರಂಪರೆಯಲ್ಲಿ  ಮಾತ್ರವಲ್ಲ, ಒಟ್ಟು  ಕನ್ನಡ  ಕಥನ  ಪರಂಪರೆಯಲ್ಲೂ  ಮುಖ್ಯವಾಗಿವೆ..... ಆಧುನಿಕತೆಯೂ  ಸೇರಿದಂತೆ  ಇತರ  ಹತ್ತು  ಹಲವು  ಕಾರಣಗಳಿಗಾಗಿ  ಅನೂಹ್ಯ  ಬದಲಾವಣೆಗಳನ್ನು  ಕಂಡಿರುವ ಬದುಕು ಮತ್ತು  ಮನುಷ್ಯ  ಸಂಬಂಧಗಳಲ್ಲಿನ  ಸಮೀಕರಣಗಳು  ನಮ್ಮಲ್ಲಿ  ಹುಟ್ಟಿಸಿರುವ,  ಹುಟ್ಟಿಸುತ್ತಿರುವ  ದಿಗ್ಭ್ರಮೆಗಳು ಜಯಶ್ರೀ ಅವರ  ಕಥೆಗಳ ಮೂಲ  ವಸ್ತುಗಳಲ್ಲೊಂದಾಗಿವೆ ” ಎಂದು  ಗುರುತಿಸುತ್ತಾರೆ.

ವಿಶಿಷ್ಟ ಸಂವೇದನೆಯ ಕತೆಗಾರ್ತಿಯೆಂದು  ಹೆಸರು  ಮಾಡಿರುವ  ಜಯಶ್ರೀ  ಕಾಸರವಳ್ಳಿ  ಅವರ  ಕಥೆಗಳು  ಕನ್ನಡದ  ಎಲ್ಲಾ  ಪ್ರಮುಖ  ಪತ್ರಿಕೆಗಳಲ್ಲೂ  ನಲಿದಿವೆ.  ಅಂತರಜಾಲದ  ಜನಪ್ರಿಯ  ತಾಣವಾದ  ‘ಅವಧಿ’ಯಲ್ಲಿ ಅವರ  ಕಥೆಗಳಷ್ಟೇ  ಅಲ್ಲದೆ  ವೈವಿಧ್ಯಮುಖೀ  ಬರಹಗಳೂ  ಹರಿದುಬರುತ್ತಿವೆ.   ಹಿಂದಿನ  ವರ್ಷಗಳಲ್ಲಿ ಹೀಗೆ ಬಿಡಿ ಬಿಡಿಯಾಗಿ    ಮೂಡಿಬಂದ     ಅವರ ಕಥೆಗಳು    ‘ತಂತಿ ಬೇಲಿಯ ಒಂಟಿ  ಕಾಗೆ’,  ‘ದಿನಚರಿಯ  ಕಡೇ ಪುಟದಿಂದ’, 'ಚಿತ್ರಗುಪ್ತನ ಸನ್ನಿಧಿಯಲ್ಲಿ' ಮುಂತಾದ  ಕಥಾಸಂಕಲನಗಳಲ್ಲಿ  ಪ್ರಕಟಗೊಂಡಿವೆ.  ‘ಮದರ್  ತೆರೆಸಾ’ ಒಂದು  ಜೀವನ ಚಿತ್ರ.  

ಮಕ್ಕಳ  ಕತೆಗಳಲ್ಲಿ  ವಿಶೇಷ  ಒಲವಿರುವ  ಜಯಶ್ರೀ  ಕಾಸರವಳ್ಳಿ  ಅವರು  ಅನೇಕ  ಮಕ್ಕಳ  ಕಥೆಗಳನ್ನು  ಅನುವಾದಿಸಿ  ಪ್ರಕಟಿಸಿದ್ದಾರೆ.  ‘ತೊಳರಾಯನ ತಿಪ್ಪರಲಾಗ’, ಗಾಬ್ರಿಯೇಲ್ ಗಾರ್ಸಿಯಾ  ಮಾರ್ಕೆಸ್ ಕತೆಗಳ  ಅನುವಾದ ‘ಈ  ಊರಿನಲ್ಲಿ  ಕಳ್ಳರೇ ಇಲ್ಲ’ ಮುಂತಾದ  ಕತೆಗಳೇ ಅಲ್ಲದೆ  ನವದೆಹಲಿಯ  ಪ್ರತಿಷ್ಠಿತ ತುಲಿಕಾ  ಸಂಸ್ಥೆಗಾಗಿ  30ಕ್ಕೂ  ಹೆಚ್ಚು  ಮಕ್ಕಳ  ಪುಸ್ತಕಗಳನ್ನು  ಜಯಶ್ರೀ  ಅವರು ಅನುವಾದಿಸಿದ್ದಾರೆ.  ಅವುಗಳಲ್ಲಿ  ‘ಬ್ರಹ್ಮನ ಚಿಟ್ಟೆ’,  ‘ಗೋಡೆಯ ಮೇಲಿನ ನರ್ತನ’, ‘ಇಸ್ಮತ್’ನ ಈದ್’, ‘ಕಪ್ಪು ಚಿರತೆ’, ‘ಭೂಮಿ ಹುಟ್ಟಿತು’, ‘ಬೋನ್ ಬೀದಿಯ ಕಾಡಿನಲ್ಲಿ’ ಮುಂತಾದವು  ಸೇರಿವೆ.  ಜಮೈಕಾ ಕಿಂಕೇಡ್, ಆಲಿವ್ ಸೀನಿಯರ್,  ಮರಿಯಾ  ಡೆರ್ಮೂತ್  ಮೊದಲಾದ  ವಿದೇಶೀ ಲೇಖಕಿಯರ  ಕತೆಗಳನ್ನೂ  ಜಯಶ್ರೀ ಕಾಸರವಳ್ಳಿ ಅವರು  ಅನುವಾದಿಸಿದ್ದಾರೆ.

ವಿವಿಧ ಲೇಖಕರ ಕಥೆಗಳ ಅಂತರಾಳಗಳನ್ನು ಆಗಾಗ ನಮ್ಮ ಕಣ್ಣ್ಮುಂದೆ ತೆರೆದಿಡುವ ಜಯಶ್ರೀ ಅವರು ಕಥೆಗಳನ್ನು ಓದುವ ಮತ್ತು ಬರಹಗಳಲ್ಲಿ ತೆರೆದಿಡುವ ರೀತಿ ಅವರು ಉತ್ತಮ ವಿಮರ್ಶಕರು ಎಂಬುದನ್ನು ಕಾಣಿಸಿಕೊಡುತ್ತಿವೆ.

ಹೀಗೆ  ನಿರಂತರವಾಗಿ  ಸಾಹಿತ್ಯಸೇವೆ  ಮಾಡುತ್ತಾ  ಬಂದಿರುವ  ಜಯಶ್ರೀ ಕಾಸರವಳ್ಳಿ ಅವರಿಗೆ  ಕರ್ನಾಟಕ ಸಾಹಿತ್ಯ ಅಕಾಡೆಮಿ ಪುರಸ್ಕಾರ, ಕರ್ನಾಟಕ  ಲೇಖಕಿಯರ ಸಂಘದ  ಎಚ್. ವಿ. ಸಾವಿತ್ರಮ್ಮ  ದತ್ತಿನಿಧಿ ಪ್ರಶಸ್ತಿ, ಕನ್ನಡ  ಸಾಹಿತ್ಯ ಪರಿಷತ್ತಿನ  ಮಲ್ಲಿಕಾ  ಪ್ರಶಸ್ತಿ,  ಧಾರವಾಡದ  ವಿದ್ಯಾವರ್ಧಕ  ಸಂಘದ  ಮಾತೋಶ್ರೀ  ರತ್ನಮ್ಮ  ಹೆಗ್ಗಡೆ  ಪ್ರಶಸ್ತಿ, ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರು  ಪ್ರತಿಷ್ಠಾನದ  ‘ಅಮ್ಮ ಪ್ರಶಸ್ತಿ’  ಮುಂತಾದ  ಅನೇಕ  ಗೌರವಗಳು  ಸಂದಿವೆ.

ಇಷ್ಟೆಲ್ಲಾ  ಸಾಧಿಸಿದ್ದರೂ  ಅತ್ಯಂತ  ಸಾಧಾರಣರಂತೆ  ನಮ್ಮೆಲ್ಲರೊಂದಿಗೆ  ಬೆರೆತು,  ಪ್ರೀತಿ ವಿಶ್ವಾಸಗಳನ್ನು ಸದಾ ನಗೆಮೊಗದೊಡನೆ  ಎಲ್ಲೆಡೆ  ಹಂಚುವ  ಜಯಶ್ರೀ  ಕಾಸರವಳ್ಳಿ  ಅವರಿಗೆ  ಹುಟ್ಟುಹಬ್ಬದ  ಆತ್ಮೀಯ  ಶುಭಹಾರೈಕೆಗಳನ್ನು  ಸಲ್ಲಿಸುತ್ತಾ  ಅವರ ಸಾಹಿತ್ಯ ಸಾಧನೆ    ನಿರಂತರವಾಗಿ  ನಮ್ಮೆಲ್ಲರನ್ನೂ  ತಣಿಸುತ್ತಿರಲಿ  ಎಂದು  ಆಶಿಸೋಣ.

On the birth day of our writer and affectionate Jayashree Kasaravalli

ಕಾಮೆಂಟ್‌ಗಳು

ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ