ಜನಸೇವಕ
ಜನಸೇವಕ ಪತ್ರಿಕೆ
'ಜನಸೇವಕ' ಸಮಾಜದ ಏಳ್ಗೆ ಮತ್ತು ಕಲ್ಯಾಣ ಸಾಧನೆಯ ಉದ್ದೇಶದಿಂದ ಉತ್ತರ ಕನ್ನಡ ಜಿಲ್ಲೆಯ ಅಂಕೋಲೆಯಿಂದ ಪ್ರಕಟವಾಗುತ್ತಿದ್ದ ವಾರಪತ್ರಿಕೆ. ಇದು 1955ರಲ್ಲಿ ಪ್ರಾರಂಭವಾಗಿ 1972ರ ಆಗಸ್ಟ್ 2ರವರೆಗೆ ನಡೆಯಿತು.
ದಿನಕರ ದೇಸಾಯಿ 'ಜನಸೇವಕ'ದ ಸಂಸ್ಥಾಪಕರು. ಅಮ್ಮೆಂಬಳ ಆನಂದ ಸಂಪಾದಕರು. ಇದು ಸಾರ್ವತ್ರಿಕ ಶಿಕ್ಷಣ ಚಳವಳಿಯ ಅಂಗವಾಗಿ ಕೆನರ ವೆಲ್‍ಫೇರ್ ಟ್ರಸ್ಟ್ ಆರಂಭಿಸಿದ ಪತ್ರಿಕೆ. ಈ ಪತ್ರಿಕೆಯ ಪ್ರಸಾರ ಸುಮಾರು 2,000 ಆಗಿತ್ತು. ಡೆಮಿ ಅರ್ಧ ಆಕಾರದ ಎಂಟು ಪುಟಗಳ ಈ ಪತ್ರಿಕೆಯ ಬಿಡಿ ಸಂಚಿಕೆಯ ಬೆಲೆ 12 ಪೈಸೆ. ಆರ್ಥಿಕ ಕಾರಣಗಳಿಂದಾಗಿ ಪತ್ರಿಕೆ ನಿಂತುಹೋಯಿತು.
'ಜನಸೇವಕ' ಪತ್ರಿಕೆಯು 1955ರ ಜನವರಿ 26ರ ಮೊದಲ ಸಂಚಿಕೆಯಲ್ಲಿ ತನ್ನ ಧ್ಯೇಯ ಧೋರಣೆ ಕುರಿತು ಹೀಗೆ ಹೇಳಿದೆ:. "ಪತ್ರಿಕೆ ತನ್ನ ಹೆಸರಿನಂತೆ ಜನರ ಸೇವೆ ಮಾಡುವ ಉದ್ದೇಶದಿಂದ ಕಾರ್ಯ ಎಸಗುವುದು. ಉತ್ತರ ಕನ್ನಡ ಜಿಲ್ಲೆಯ ಜನರ ದೈನಂದಿನ ತೊಡಕುಗಳನ್ನು ನಿವಾರಿಸಲು ಹೆಣಗುವುದು ಪತ್ರಿಕೆಯ ಧ್ಯೇಯ. ಜನ ಜಾಗೃತಿಗೆ ಉಪಯುಕ್ತವಿರುವ ಜ್ಞಾನ ಪ್ರಸಾರ ಮಾಡಿ ಕರಾವಳಿ ಕರ್ನಾಟಕ ಮಾತ್ರವಲ್ಲದೆ, ವಿಶಾಲ ಕರ್ನಾಟಕದ ಸರ್ವಾಂಗೀಣ ಏಳ್ಗೆಗಾಗಿ ದುಡಿಯುವುದು ಪತ್ರಿಕೆಯ ಉದ್ದೇಶವಾಗಿದೆ".
ವ್ಯಾವಹಾರಿಕ ಕನಸುಗಾರರಾದ ದಿನಕರ ದೇಸಾಯಿಯವರು ಜನಸೇವಕ ಆದರ್ಶ ಪತ್ರಿಕೆಯಾಗಿ ಮುನ್ನಡೆಯುವ ಕಾರ್ಯ ಯೋಜನೆ ರೂಪಿಸಿದ್ದರು. ಆರಂಭದಲ್ಲಿ ನಿರೀಕ್ಷಕ ಹೆಸರಿನಲ್ಲಿ ಮುಖಪುಟ ಲೇಖನ ಬರೆಯುತ್ತಿದ್ದವರು ಜನಸೇವಕರಾದರು. ಸಾರ್ವತ್ರಿಕ ಸಾಕ್ಷರತೆ, ಭಾರತದಲ್ಲಿ ಬಡತನ ಭ್ರಷ್ಟಾಚಾರದ ವಿಶ್ವರೂಪ, ಗ್ರಾಮೀಣ ಅಭಿವೃದ್ಧಿ ಪಂಚವಾರ್ಷಿಕ ಯೋಜನೆಗಳ ಕಾರ್ಯಾಚರಣೆ, ಪಕ್ಷಾಂತರ ಪಿಡುಗು ಹೀಗೆ ವೈವಿಧ್ಯ ವಿಷಯಗಳ ಹರವು ಇತ್ತು. ತಿಳಿಯಾದ ಭಾಷೆ, ಸಣ್ಣ ಸಣ್ಣ ವಾಕ್ಯಗಳು ಅಂಕಿ ಅಂಶಗಳಿಂದ ಕೂಡಿದ ಸಮರ್ಥ ವಾದ ಮಂಡನೆ, ಸಮಸ್ಯೆಯ ವಿಶ್ಲೇಷಣೆ ಪತ್ರಿಕೆಯಲ್ಲಿತ್ತು. 'ಪ್ರಜಾವಾಣಿ', 'ಕಸ್ತೂರಿ' ಮತ್ತಿತರ ಪತ್ರಿಕೆಗಳೂ ಆ ಲೇಖನಗಳನ್ನೂ ಪುನರ್ಮುದ್ರಿಸುವುದು ಸಾಮಾನ್ಯವಾಗಿತ್ತು. ಪ್ರತಿ ಪುಟಗಳಲ್ಲೂ ರಾರಾಜಿಸುತ್ತಿದ್ದ ನಾಲ್ಕು ಸಾಲಿನ ಚುಟಕಗಳು, ಹದವಾದ ಭಾಷೆ ಮಾತಿನ ಮೊನಚು, ಕೊಂಕು, ಪ್ರಾಸಬದ್ಧ ರಚನೆ ಸಂಪಾದಕೀಯ ಬರಹಕ್ಕಿಂತ ಪ್ರಬಲ ಅಸ್ತ್ರವಾಗಿತ್ತು. ಗೌರೀಶ ಕಾಯ್ಕಿಣಿ ಅಡಿಗೆ ಭಟ್ಟರಾಗಿ ಬಡಿಸುತ್ತಿದ್ದ 'ಉಪ್ಪಿನಕಾಯಿ' ಪ್ರತಿವಾರದ ವಿಶೇಷ. ಯಶವಂತ ಚಿತ್ತಾಲ, ವಿ.ಕೃ. ಗೋಕಾಕ್, ಆನಂದ ವರ್ಟ, ಶಿವರಾಮ ಕಾರಂತ, ಸಿದ್ಧವನಹಳ್ಳಿ ಕೃಷ್ಣ ಶರ್ಮ, ಶಾಂತಿನಾಥ ದೇಸಾಯಿ, ಬಿ.ಎಚ್. ಶ್ರೀಧರ, ಸೇವನಮೀ ರಾಜಮಲ್ಲ ಮುಂತಾದವರ ವೈಚಾರಿಕ ಲೇಖನಗಳ ಜೊತೆಗೆ ಶ್ರೀನಿವಾಸ ಹಾವನೂರ, ದಯಾನಂದ ತೋರ್ಕೆ, ಶ್ಯಾಮ ಹುದ್ದಾರ ಮೊದಲಾದ ಉದಯೋನ್ಮುಖ ಬರಹಗಾರರಿಗೂ ಪ್ರೋತ್ಸಾಹ ನೀಡಿದ ಪತ್ರಿಕೆಯಾಯಿತು. ಸಮಾಜವಾದಿ ಪಕ್ಷದ ಧ್ಯೇಯ ಧೋರಣೆ, ಸರ್ವೋದಯ ಧುರೀಣ ಜಯಪ್ರಕಾಶ ನಾರಾಯಣರ ವಿಚಾರ ಧಾರೆಯನ್ನು ಕನ್ನಡಿಗರಿಗೆ ಮೊದಲು ಪರಿಚಯಿಸಿದ್ದು ಜನಸೇವಕ.
ಪತ್ರಿಕೆ ಸಿದ್ಧ ಪಡಿಸಲು ಆಗುತ್ತಿದ್ದ ವೆಚ್ಚ 27 ಪೈಸೆ. ಆದರೆ ಜನಸಾಮಾನ್ಯರಿಗೆಲ್ಲ ತಲುಪಲೆಂದು 12 ಪೈಸೆಗೆ ಮಾರಾಟ ಮಾಡುತ್ತಿತ್ತು. ಮುದ್ರಣ ವೆಚ್ಚ ಏರುತ್ತಿತ್ತು. ಸಾರ್ವಜನಿಕರ ನಿರಾಶಾದಾಯಕ ಪ್ರೋತ್ಸಾಹ, ಪ್ರತಿವರ್ಷವೂ ಸಹಸ್ರಾರು ರೂಪಾಯಿ ನಷ್ಟ ಭರಿಸಲಾಗದೆ `ಜನಸೇವಕ 1972 ಆಗಸ್ಟ್ 2ರಂದು 18ನೇ ವರ್ಷದ 31ನೇ ಸಂಚಿಕೆಯನ್ನು ಬಿಡುಗಡೆ ಮಾಡಿ ಪ್ರಕಟಣೆ ನಿಲ್ಲಿಸಿತು.
Janasevaka
ಕಾಮೆಂಟ್‌ಗಳು