ಬಸವರಾಜ ರಾಜಗುರು
ಪಂಡಿತ್ ಬಸವರಾಜ ರಾಜಗುರು
ಬಸವರಾಜ ಮಹಾಂತಸ್ವಾಮಿ ರಾಜಗುರು ಹಿಂದೂಸ್ಥಾನೀ ಸಂಗೀತದಲ್ಲಿ ‘ಸ್ವರ ಸಾಮ್ರಾಟ’ರೆಂದು ಖ್ಯಾತರಾದವರು.
ಬಸವರಾಜ ರಾಜಗುರು ಧಾರವಾಡ ಜಿಲ್ಲೆಯ ಎಲಿವಾಳ ಗ್ರಾಮದಲ್ಲಿ 1920ರ ಆಗಸ್ಟ್ 24ರಂದು ಜನಿಸಿದರು. ತಂದೆ ಮಹಾಂತಸ್ವಾಮಿಗಳು ತಂಜಾವೂರಿನಲ್ಲಿ ಕರ್ನಾಟಕ ಸಂಗೀತ ಕಲಿತವರು.
ಚಿಕ್ಕಂದಿನಂದಲೂ ಬಸವರಾಜರು ರಂಗಗೀತೆಗಳಲ್ಲಿ ಒಲವು ತೋರಿಸುತ್ತಿದ್ದರು. ನಾಟಕ ಕಂಪನಿಗಳಿಗೆ ಹೋಗಿ, ಅಲ್ಲಿ ರಂಗಗೀತೆಗಳನ್ನು ಹಾಡಲು ಅವಕಾಶ ಪಡೆಯಲು ಪ್ರಯತ್ನಪಡುತ್ತಿದ್ದರು. ಇದನ್ನು ಗಮನಿಸಿದ ಇವರ ತಂದೆ ಬಸವರಾಜರನ್ನು ಸವಣೂರ ವಾಮನರಾಯರ ಕಂಪನಿಯಲ್ಲಿ ಸೇರಿಸಿದರು. ಬಸವರಾಜರ ಅವರ 13ನೆಯ ವಯಸ್ಸಿನಲ್ಲಿ ತಂದೆ ತೀರಿಕೊಂಡರು. ಬಸವರಾಜರನ್ನು ಅವರ ಕಕ್ಕ ಹುಬ್ಬಳ್ಳಿಯ ಮೂರುಸಾವಿರ ಮಠದಲ್ಲಿರುವ ಸಂಸ್ಕೃತ ಪಾಠಶಾಲೆಗೆ ಸೇರಿಸಿದರು. ಗದಗಿನ ಗಾನಯೋಗಿ ಪಂಚಾಕ್ಷರಿ ಗವಾಯಿಗಳು ಅಲ್ಲಿ ಬಂದಾಗ ಇವರ ಹಾಡುಗಾರಿಕೆ ಕೇಳಿ, ಇವರನ್ನು ಗದುಗಿಗೆ ಕರೆದುಕೊಂಡು ಹೋದರು.
ಬಸವರಾಜರು ಗಾನಯೋಗಿಗಳ ಆಶ್ರಮದಲ್ಲಿ ಕಠಿಣವಾದ ಸಂಗೀತ ಸಾಧನೆ ಮಾಡಿದರು. 1936ರಲ್ಲಿ ವಿಜಯನಗರ ಸಾಮ್ರಾಜ್ಯದ 6ನೆಯ ಶತಮಾನೋತ್ಸವವನ್ನು ಹಂಪಿಯಲ್ಲಿ ಆಚರಿಸುತ್ತಿದ್ದ ಸಂದರ್ಭದಲ್ಲಿ ಬಸವರಾಜ ರಾಜಗುರು ತಮ್ಮ ಪ್ರಥಮ ಕಚೇರಿಯನ್ನು ನೀಡಿದರು. ಅವರಿಗೆ ಗುರು ಪಂಚಾಕ್ಷರಿಯವರೇ ಸ್ವತಃ ತಬಲಾ ಸಾಥ್ ನೀಡಿದ್ದರು!
ಆ ಸಮಯದಲ್ಲಿ ಇವರು ಹಾಡಿದ ರಾಗ ಬಾಗೇಶ್ರೀ ಹಾಗೂ ನಿಜಗುಣಿ ಶಿವಯೋಗಿಗಳ ವಚನಗಳನ್ನು ಕೇಳಿದ ಜನಸ್ತೋಮ ಮಂತ್ರಮುಗ್ಧವಾಯಿತು. ಹಿಂದುಸ್ತಾನಿ ಸಂಗೀತದ ಹೊಸ ತಾರೆಯೊಂದು ಕರ್ನಾಟಕದ ಬಾನಿನಲ್ಲಿ ಉದಯಿಸಿತ್ತು.
1936ರಿಂದ 1943ರವರೆಗೆ ಮುಂಬಯಿ ಆಕಾಶವಾಣಿ ಹಾಗು ಎಚ್.ಎಮ್.ವಿ. ಕಂಪನಿಯವರಿಗಾಗಿ ಬಸವರಾಜ ರಾಜಗುರು ಅನೇಕ ರಾಗಗಳನ್ನು ಹಾಡಿದರು. 1944ರಲ್ಲಿ ಗುರು ಪಂಚಾಕ್ಷರಿ ಗವಾಯಿಗಳ ನಿಧನದ ಬಳಿಕ ಬಸವರಾಜರು ಮುಂಬಯಿಗೆ ಬಂದು ಸವಾಯಿ ಗಂಧರ್ವರ ಶಿಷ್ಯವೃತ್ತಿ ಸ್ವೀಕರಿಸಿದರು. ಸವಾಯಿ ಗಂಧರ್ವರು ಅನತಿಕಾಲದಲ್ಲಿ ಅರ್ಧಾಂಗವಾಯು ಪೀಡಿತರಾಗಿದ್ದರಿಂದ, ತಮ್ಮ ಶಿಷ್ಯ ಬಸವರಾಜರನ್ನು ಸುರೇಶಬಾಬು ಮಾನೆ ಎನ್ನುವ ಗವಾಯಿಗಳಿಗೆ ಒಪ್ಪಿಸಿದರು.
ಕೆಲ ಸಮಯದ ನಂತರ ಬಸವರಾಜ ರಾಜಗುರು ಆಗ ಸಂಯುಕ್ತ ಭಾರತದ ಭಾಗವಾಗಿದ್ದ ಕರಾಚಿಯಲ್ಲಿ, ಕಿರಾಣಾ ಘರಾಣಾದ ಪ್ರಸಿದ್ಧ ಗಾಯಕರೂ ಹಾಗು ತಮ್ಮ ಗುರು ಪಂಚಾಕ್ಷರಿ ಗವಾಯಿಗಳ ಗುರುಗಳೂ ಆದ ಉಸ್ತಾದ್ ವಹೀದ್ ಖಾನರಲ್ಲಿ ತೆರಳಿ ತಮ್ಮ ಶಿಕ್ಷಣ ಮುಂದುವರಿಸಿದರು. ಅಲ್ಲಿಂದ ಉಸ್ತಾದ ಲತೀಫ ಖಾನರಲ್ಲಿ 6 ತಿಂಗಳುವರೆಗೆ ಕಲಿತರು. ಇನಾಯತುಲ್ಲಾ ಖಾನ್, ರೋಶನ್ ಅಲಿ ಹಾಗು ಗೋವಿಂದರಾವ ಟೇಂಬೆಯವರಲ್ಲಿ ಸಹ ಸಂಗೀತಾಭ್ಯಾಸ ಮಾಡಿದ ಬಸವರಾಜ ರಾಜಗುರು ಹಿಂದುಸ್ತಾನಿ ಸಂಗೀತದ ಮೂರು ಪ್ರಸಿದ್ಧ ಘರಾಣಾಗಳಾದ ಕಿರಾಣಾ ಘರಾಣಾ, ಗ್ವಾಲಿಯರ ಘರಾಣಾ ಹಾಗು ಪಾಟಿಯಾಲ ಘರಾಣಾಗಳಲ್ಲಿ ಪ್ರಭುತ್ವ ಸ್ಥಾಪಿಸಿದರು.
1947ರಲ್ಲಿ ದೇಶ ವಿಭಜನೆಯ ಸಮಯದಲ್ಲಿ ರಾಜಗುರು ಕರಾಚಿಯಲ್ಲಿದ್ದರು. ಪಾಕಿಸ್ತಾನದಲ್ಲಿ ನಡೆಯುತ್ತಿದ್ದ ನರಮೇಧದಿಂದ ತಪ್ಪಿಸಿಕೊಳ್ಳಲು, ಉಸ್ತಾದ ಲತೀಫ ಖಾನರ ಸಲಹೆಯಂತೆ, ರಾಜಗುರು ಭಾರತಕ್ಕೆ ತೆರಳುವ ರೈಲಿನಲ್ಲಿ ಅಡಗಿ ಕುಳಿತುಕೊಂಡು ಪಲಾಯನ ಮಾಡಬೇಕಾಯಿತು. ಆ ಪಯಣದಲ್ಲಿ ಜರುಗಿದ ನರಮೇಧದಲ್ಲಿ ಅವರು ಬದುಕುಳಿದದ್ದೇ ಅತೀ ದೊಡ್ಡ ಸಂಗತಿ. ದಿಲ್ಲಿಯಿಂದ ಪುಣೆಗೆ ಬಂದ ರಾಜಗುರು ತಮ್ಮ ಸಂಗೀತ ವೃತ್ತಿ ಮುಂದುವರಿಸುತ್ತಿದ್ದಂತೆಯೆ ಮತ್ತೊಂದು ಗಂಡಾಂತರ ಎದುರಾಯಿತು. 1948ರಲ್ಲಿ ಮಹಾತ್ಮ ಗಾಂಧಿಯವರ ಹತ್ಯೆಯಾಗುತ್ತಿದ್ದಂತೆ ಬಸವರಾಜ ರಾಜಗುರು ದೊಂಬಿಕಾರರ ಕೈಯಲ್ಲಿ ಸಿಕ್ಕಿಬಿದ್ದಿದ್ದರು. ಹಾಗೂ ಹೀಗೂ ಪಾರಾಗಿ ರಾಜಗುರು ಧಾರವಾಡಕ್ಕೆ ಮರಳಿದರು.
ಬಸವರಾಜ ರಾಜಗುರು ತಮ್ಮ ಗುರು ಪಂಚಾಕ್ಷರಿ ಗವಾಯಿಗಳಿಗೆ ಕೊಟ್ಟ ಮಾತಿನಂತೆ, ತಮ್ಮ ಸಂಗೀತ ವಿದ್ಯೆಯನ್ನು ನಿರ್ವಂಚನೆಯಿಂದ ಅನೇಕ ವಿದ್ಯಾರ್ಥಿಗಳಿಗೆ ಧಾರೆಯೆರೆದರು.
ಸಂಗೀತ ಕ್ಷೇತ್ರದಲ್ಲಿ ಮುಂದೆ ಪ್ರಸಿದ್ಧರಾದ ಗಣಪತಿ ಭಟ್ಟ, ಪರಮೇಶ್ವರ ಹೆಗಡೆ, ಶಾಂತಾರಾಮ ಹೆಗಡೆ ಹಾಗು ನಚಿಕೇತ ಶರ್ಮಾ ಮೊದಲಾದ ಸುಮಾರು ಅರವತ್ತಕ್ಕೂ ಹೆಚ್ಚು ಪ್ರಮುಖ ಗಾಯಕರು ರಾಜಗುರುಗಳ ಶಿಷ್ಯಂದಿರು. ನಮ್ಮ ಸಂಗೀತ ಕಟ್ಟಿ ಕುಲಕರ್ಣಿ Sangeeta Katti Surbahar ಅವರೂ ಬಾಲ್ಯದಲ್ಲಿ ರಾಜಗುರುಗಳ ಶಿಷ್ಯೆಯಾಗಿದ್ದರು.
ಬಸವರಾಜ ರಾಜಗುರುಗಳು ಆ ಸಮಯದ ಖ್ಯಾತ ಗಾಯಕರಾದ ಉಸ್ತಾದ ನಿಶಾದ ಖಾನ್, ಉಸ್ತಾದ ಛೋಟೆ ಗುಲಾಮರಂತಹವರಿಂದ ಪ್ರಶಂಸೆ ಪಡೆದರು. ಆದರೆ ಇಂತಹ ಯಶಸ್ಸಿನಿಂದ ತಲೆ ತಿರುಗದ ರಾಜಗುರುಗಳು ಬದುಕಿನಲ್ಲಿ ನಿರಂತರವಾಗಿ ಸಜ್ಜನಿಕೆಯನ್ನು ಮೆರೆದರು.
ರಾಜಗುರು ತಮ್ಮ ಕಲಿಕೆಯ ಪ್ರಾರಂಭದ ದಿನಗಳಲ್ಲಿ ಕರ್ನಾಟಕ ಸಂಗೀತದ ಶಿಕ್ಷಣವನ್ನು ಪಡೆದರು ಎಂಬುದು ಹೆಚ್ಚಾಗಿ ಜನಕ್ಕೆ ತಿಳಿಯದ ವಿಷಯ. ಅವರು ತಮ್ಮ ಕಚೇರಿಗಳಲ್ಲಿ ಒಮ್ಮೊಮ್ಮೆ ಪ್ರಮಾಣ ಭೂತ ವಿಶ್ವಾಸನೀಯ ಕರ್ನಾಟಕ ಶೈಲಿಯಲ್ಲಿ ಸ್ವರ ಪ್ರಸ್ತಾರವನ್ನು ಮಾಡುತ್ತಿದ್ದರು. ಒಮ್ಮೆ ಅವರು ಅಹಿರ್ ಬೈರವಿಯನ್ನು ಹಾಡಿ ನಂತರ ಅದಕ್ಕೆ ದಕ್ಷಿಣದಲ್ಲಿ ಸಂವಾದಿಯಾದ “ಚಕ್ರವಾಕ”ದಲ್ಲಿ ತ್ಯಾಗರಾಜ ಕೀರ್ತನೆಯನ್ನು ಹಾಡಿದ್ದರು.
ರಾಜಗುರು ಅವರ ಸಂಗೀತ ಕಾರ್ಯಕ್ರಮಗಳು ಸಾಮಾನ್ಯವಾಗಿ ‘ಯಮನ್’ನಿಂದ ಪ್ರಾರಂಭವಾಗುತ್ತಿದ್ದವು. ಅಪರೂಪದ ಭಾವಗೀತೆಯ ಸುಗಂಧದಿಂದ ಕೂಡಿದ ಅವರ ‘ಯಮನ್’ ಕೇಳುಗರಿಗೆ ಭಾವಾತೀತವಾದ ಆನಂದ ಮೂಡುತ್ತಿತ್ತು. ‘ಹಂಸ ಧ್ವನಿ' ಯ ಸುಲಲಿತ ಚಲನೆಗೆ 'ಕಲ್ಯಾಣಿ'ಯ ಗಾಢತೆಯನ್ನು ಅವರು ಮಿಲನಗೊಳಿಸಿದ್ದರು. ರಾಜಗುರು ಅವರ ಧ್ವನಿಮುದ್ರಿತ ಗೀತೆಗಳಲ್ಲಿ ಇವುಗಳ ಜೊತೆಗೆ 'ಕೌಶಿಖಾನಡ', 'ಶಂಕರಖಾನಡ' ಸೊಗಸಾದ ಕೊಡುಗೆಗಳು. ಈ ರಾಗಗಳ ಮೇಲೆ ಅವರು ಹೊಂದಿದ್ದ ಪ್ರಭುತ್ವ ರಾಜಗುರು ಅವರು ಪ್ರಾರಂಭದ ದಿನಗಳಲ್ಲಿ ಕಲಿತ ಕಿರಾಣಾ ಘರಾಣೆಯ ಗಾಢ ಪ್ರಭಾವವನ್ನು ಬೀರಿ, ಅಚ್ಚೊತ್ತಿ ನಿಂತಿದೆ ಎಂಬುದಕ್ಕೆ ಸಾಕ್ಷಿಯಾಗಿವೆ. ಸುಸ್ವರ ಕಂಠದ ರಸಿಕ ಗಾಯಕರಾಗಿದ್ದು, ಖ್ಯಾಲ್, ಠುಮರಿ, ವಚನ ಹಾಗೂ ಸುಗಮ ಸಂಗೀತವನ್ನು ಹಾಡುವುದರಲ್ಲಿ ನಾವೀನ್ಯತೆಯನ್ನು ತೋರಿದ ರಾಜಗುರು ಹಿಂದೂಸ್ಥಾನಿ ಸಂಗೀತದ ಶ್ರೇಷ್ಠ ಗಾಯಕರೆನಿಸಿದ್ದಾರೆ.
ಬಸವರಾಜ ರಾಜಗುರುಗಳಿಗೆ 1975ರಲ್ಲಿ ಪದ್ಮಶ್ರೀ ಪ್ರಶಸ್ತಿ ಹಾಗು 1991ರಲ್ಲಿ ಪದ್ಮಭೂಷಣ ಪ್ರಶಸ್ತಿ ಲಭಿಸಿದವು. ಅಲ್ಲದೆ ಕರ್ನಾಟಕ ರಾಜ್ಯ ಹಾಗು ಕೇಂದ್ರದ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ ಸಹ ಲಭಿಸಿದ್ದವು.
ಅಮೆರಿಕದಲ್ಲಿ ಕಚೇರಿ ನಡೆಯಿಸಿಕೊಡುವ ಉದ್ದೇಶದಿಂದ, ವೀಸಾ ಪಡೆಯಲು ಚೆನ್ನೈಗೆ ತೆರಳಿದ ರಾಜಗುರು ಧಾರವಾಡಕ್ಕೆ ಮರಳಿ ಬರುತ್ತಿದ್ದರು. ಬೆಂಗಳೂರಿಗೆ ಬಂದಾಗ ಅವರಿಗೆ ಲಘು ಹೃದಯಾಘಾತವಾಯಿತು.
1991 ಜುಲೈ 21 ಆಸ್ಪತ್ರೆಯಲ್ಲಿದ್ದ ಬಸವರಾಜ ರಾಜಗುರು ಅರೆಪ್ರಜ್ಞಾವಸ್ಥೆಯಲ್ಲಿ ಕನವರಿಸಿದರು. “ಮೂಲೆಯಲ್ಲಿರುವ ತಂಬೂರಿ ತೆಗೆದುಕೊ, ಸಾ ಆಲಾಪ ಮಾಡು. ಇದು ರಾಗ ಬಿಹಾಗದ ಸಮಯ.” ಹೌದು, ಆವಾಗ ರಾತ್ರಿ 11 ಗಂಟೆ. ಅದು ರಾಗ ಬಿಹಾಗದ ಸಮಯ!
ಬಸವರಾಜ ರಾಜಗುರುಗಳ ಪಾರ್ಥಿವ ಶರೀರ ಧಾರವಾಡವನ್ನು ತಲುಪಿದಾಗ ಅವರ ಕೊನೆಯ ದರ್ಶನಕ್ಕಾಗಿ ಧಾರವಾಡ ಪಟ್ಟಣವೇ ಅಲ್ಲಿ ಕಾಯುತ್ತ ನಿಂತಿತ್ತು. ಇವರ ಜೊತೆಯ ಮತ್ತೊಬ್ಬ ಖ್ಯಾತ ಸಂಗೀತ ಸಾಧಕರಾದ ಪದ್ಮವಿಭೂಷಣ ಮಲ್ಲಿಕಾರ್ಜುನ ಮನಸೂರರು ಉಸುರಿದರು: “ವಾಹ್! ಸಾವಿನಲ್ಲೂ ಇವರೊಬ್ಬ ಬಾದಶಹರು!”. ಈ ಮಹಾನ್ ಚೇತನಕ್ಕೆ ನಮ್ಮ ನಮನ.
On the birth anniversary of Pandit Basavaraja Rajaguru
ಕಾಮೆಂಟ್‌ಗಳು