ಸಾಂಸ್ಕೃತಿಕ ಪ್ರೀತಿಯ ಕನ್ನಡದ ಕಿಂಡಿ

ದೇವರಾಜ್


 ದೇವರಾಜ್


ದೇವರಾಜ್ ಕನ್ನಡ ರಂಗಭೂಮಿ ಮತ್ತು ಚಿತ್ರರಂಗದ ಉತ್ತಮ ನಟರಲ್ಲೊಬ್ಬರೆಂದು ಹೆಸರಾಗಿರುವವರು.

ದೇವರಾಜ್ 1960ರ ಸೆಪ್ಟೆಂಬರ್ 20ರಂದು ಬೆಂಗಳೂರಿನಲ್ಲಿ ಜನಿಸಿದರು.  ಕನ್ನಡ, ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ನಾಯಕ ನಟರಾಗಿ, ಖಳನಟರಾಗಿ ಮತ್ತು ಪೋಷಕ ಪಾತ್ರಗಳಲ್ಲಿ ಅವರು ನಟಿಸಿರುವ ಚಿತ್ರಗಳ ಸಂಖ್ಯೆ ಇನ್ನೂರನ್ನು ಮೀರಿದ್ದು.  ಯಾವುದೇ ಪಾತ್ರದಲ್ಲೂ ಸಲೀಸಾಗಿ ಹೊಂದಿಕೊಳ್ಳುವವರಾದ ದೇವರಾಜ್, ತಮ್ಮ ಅಭಿಮಾನಿಗಳು ತಮ್ಮ ಆಂಗ್ಲಮೋಹಿತ ಕನ್ನಡದಲ್ಲಿ  ಕೊಟ್ಟಿರುವ ‘ಡೈನಮಿಕ್ ಹೀರೋ’ ಬಿರುದಿಗೆ ಅನ್ವರ್ಥವಾಗಿ ತಮ್ಮನ್ನು ಚಿತ್ರರಂಗದಲ್ಲಿ ಸಮರ್ಥವಾಗಿ ಬಿಂಬಿಸಿದವರಾಗಿದ್ದಾರೆ.

ದೇವರಾಜ್  ಎಚ್ ಎಮ್ ಟಿ ಕೈ ಗಡಿಯಾರ ಕಾರ್ಖಾನೆಯಲ್ಲಿ ಉದ್ಯೋಗಿಯಾಗಿದ್ದ ದಿನಗಳಲ್ಲಿ  ನಾಟಕಗಳಲ್ಲಿ ಅಭಿರುಚಿ ಬೆಳೆಸಿಕೊಂಡರು.    ಬಿ. ಜಯಶ್ರೀ ಅವರ ‘ಸ್ಪಂದನ’ ಮತ್ತು ಶಂಕರನಾಗರ ‘ಸಂಕೇತ್’ ರಂಗತಂಡದ ಮೂಸೆಗಳಲ್ಲಿ ಕಲಾವಿದರಾಗಿ ರೂಪುಗೊಂಡ ದೇವರಾಜ್, ಶಂಕರ ನಾಗರ ಪ್ರೇರಣೆಯಿಂದ ಚಿತ್ರರಂಗಕ್ಕೂ ಬಂದರು.  ಅವರು ಮೊದಲು ಅಭಿನಯಿಸಿದ ಚಿತ್ರ ಶಂಕರನಾಗ್ ನಿರ್ಮಿಸಿ ಸೀತಾರಾಂ ನಿರ್ದೇಶಿಸಿದ ‘ಕೂಗು’.  ಈ ಚಿತ್ರವೂ ಸೇರಿದಂತೆ ದೇವರಾಜ್ ಅವರು ಮೊದ ಮೊದಲು ಅಭಿನಯಿಸಿದ ತ್ರಿಶೂಲ, ಸಿಕ್ಕು ಮುಂತಾದವು ಬಿಡುಗಡೆ ಕಾಣದೆ ಡಬ್ಬದಲ್ಲೇ ಉಳಿದವು.

ದೇವರಾಜ್ ಅಭಿನಯಿಸಿದ ಮೊದಲು ತೆರೆಕಂಡ  ಚಿತ್ರ  ‘27 ಮಾವಳ್ಳಿ ಸರ್ಕಲ್’.   ಆ ಚಿತ್ರದಲ್ಲಿ ಅವರ ಅಭಿನಯ ಪ್ರಶಂಸೆ ಪಡೆಯಿತು.  ಹೀಗೆ ಹಲವಾರು ಚಿತ್ರಗಳಲ್ಲಿ ಅವರಿಗೆ ಖಳ ಪಾತ್ರಗಳು ಲಭ್ಯವಾದವು.  ಇದಲ್ಲದೆ ಆಗಂತುಕ, ನವಭಾರತ ಮುಂತಾದ ಚಿತ್ರಗಳಲ್ಲಿ ಅವರಿಗೆ ಪೋಷಕ ಪಾತ್ರಗಳು ದೊರೆತವು.  1989ರಲ್ಲಿ ಬಂದ ಅಂಬರೀಷ್  ನಾಯಕತ್ವದ ಕೆ. ವಿ. ರಾಜು ಅವರ ‘ಇಂದ್ರಜಿತ್’  ಚಿತ್ರದಲ್ಲಿನ ಖಳ ಪಾತ್ರ ದೇವರಾಜ್ ಅವರನ್ನು ಪ್ರಧಾನವಾಗಿ ಬಿಂಬಿಸುವಂತದ್ದಾಗಿತ್ತು.  

ಖಳ ಪಾತ್ರಗಳಲ್ಲದೆ 90ರ ದಶಕದಲ್ಲಿ ದೇವರಾಜ್ ಮಿಂಚಿದ ಮತ್ತೊಂದು ಪಾತ್ರವೆಂದರೆ ಪೋಲೀಸ್ ಅಧಿಕಾರಿಯ ಪಾತ್ರ.  ಲಾಕ್ ಅಪ್ ಡೆತ್, ಗೋಲೀಬಾರ್, ಗ್ಯಾಂಗ್ ಲೀಡರ್, ಸರ್ಕಲ್ ಇನ್ಸ್ಪೆಕ್ಟರ್ ಹೀಗೆ ದೇವರಾಜ್ ಅವರು ಖಾಕಿ ಬಟ್ಟೆಯಲ್ಲಿ ಮಿಂಚಿದ ಚಿತ್ರಗಳೂ ಅನೇಕ.  ಎಸ್. ಪಿ. ಭಾರ್ಗವಿ  ಚಿತ್ರದಲ್ಲಿ   ‘ಈ ದೇಶದ್ ಕಥೆ ಇಷ್ಟೇ ಕಣಮ್ಮೋಯ್’ ಎಂದು ಅವರು ಅಭಿನಯಿಸಿದ ಗೀತೆ  ಜನಪ್ರಿಯವಾದದ್ದು.  

ಹಲವು ಚಿತ್ರಗಳಲ್ಲಿ ನಾಯಕ ನಟರಾಗಿಯೂ ಬಡ್ತಿ ಪಡೆದ ದೇವರಾಜ್ ಮೊದಲು ನಾಯಕ ನಟರಾಗಿ ಅಭಿನಯಿಸಿದ ಚಿತ್ರ ‘ಆವೇಶ’.  ತಾವು ಅಭಿನಯಿಸುತ್ತಿದ್ದ ಚಿತ್ರಗಳ ಪಾತ್ರಗಳಲ್ಲಿನ ಏಕಾತಾನತೆಯಿಂದ ಹೊರಬರಲು ದೇವರಾಜ್ ಕೆಲವೊಂದು ಕಲಾತ್ಮಕ ಚಿತ್ರಗಳಲ್ಲೂ ಅಭಿನಯಿಸಿ ಹೆಸರು ಪಡೆದರು.  ವೀರಪ್ಪನ್, ಹುಲಿಯಾ, ಬಂಗಾರದ ಮನೆ, ಛೂಬಾಣ, ಕಂಬಲಹಳ್ಳಿ, ಉತ್ಕರ್ಷ ಮುಂತಾದವು ಇವುಗಳಲ್ಲಿ ಸೇರಿವೆ.   ‘ವೀರಪ್ಪನ್‘ ಚಿತ್ರದ ಅಭಿನಯ ಅವರಿಗೆ ಶ್ರೇಷ್ಠ ನಟ ಪ್ರಶಸ್ತಿ ತಂದುಕೊಟ್ಟಿತು.  

ತಮಿಳು ಮತ್ತು ತೆಲುಗು ಚಿತ್ರರಂಗದಲ್ಲೂ ಪ್ರಖ್ಯಾತಿ ಪಡೆದ  ದೇವರಾಜ್ ಅಲ್ಲಿನ ಹಲವಾರು ಪ್ರಸಿದ್ಧ ಚಿತ್ರಗಳಲ್ಲಿ ನಟಿಸಿದ್ದಾರೆ.  ನಾನ್ ಕಡವುಳ್, ವಿಲ್ಲು  ಮುಂತಾದ ತಮಿಳು ಚಿತ್ರಗಳು ಹಾಗೂ ಯಜ್ಞಂ, ವಿಲ್ಲೂ ಮುಂತಾದ ಪ್ರಸಿದ್ಧ ತೆಲುಗು ಚಿತ್ರಗಳು ಇವುಗಳಲ್ಲಿ ಸೇರಿವೆ. 

ಮುಂದೆ ಬೇಡಿಕೆ  ಇದ್ದಾಗಿಯೂ ತಮ್ಮ ಚಿತ್ರಗಳ ಸಂಖ್ಯೆಯನ್ನು ಕಡಿಮೆಗೊಳಿಸಿಕೊಂಡ ದೇವರಾಜ್ ಡೆಡ್ಲಿ ಸೋಮ, ನಮ್ಮ ಬಸವ, ಮೌರ್ಯ, ಹಬ್ಬ, ಪಾಂಡವರು ಮುಂತಾದ ಚಿತ್ರಗಳಲ್ಲಿನ ವಿವಿಧ ಪೋಷಕ ಪಾತ್ರಗಳಲ್ಲಿ ಕಂಡರು.  2012ರ ವರ್ಷದಲ್ಲಿ ತೆರೆಕಂಡ ‘ದಶಮುಖ’ದಲ್ಲಿ ಅವರು ಪ್ರಧಾನ ಪಾತ್ರ ನಿರ್ವಹಿಸಿದ್ದರು.  

ದೇವರಾಜ್ 1988ರ ವರ್ಷದಲ್ಲಿ ಅಂದಿನ ದಿನದಲ್ಲಿ ಹಲವಾರು ಚಿತ್ರಗಳಲ್ಲಿ ಅಭಿನಯಿಸಿ ಹೆಸರಾಗಿದ್ದ ಚಂದ್ರಲೇಖ ಅವರನ್ನು ವಿವಾಹವಾದರು.  ಪ್ರಜ್ವಲ್ ಮತ್ತು ಪ್ರಣಾಮ್ ಅವರ ಪುತ್ರರು.  ಪ್ರಜ್ವಲ್ ದೇವರಾಜ್ ಕನ್ನಡ ಯುವ ಪೀಳಿಗೆಯ ನಟರಲ್ಲಿ ಒಬ್ಬರಾಗಿ ಹೆಸರು ಮಾಡುತ್ತಿದ್ದಾರೆ.  ದೇವರಾಜ್ ತಮ್ಮ ಪುತ್ರರು ನಟಿಸಿರುವ ಕೆಲವು ಚಿತ್ರಗಳನ್ನು ನಿರ್ಮಿಸಿ ನಿರ್ದೇಶನವನ್ನೂ ಮಾಡಿದ್ದಾರೆ.

ಇಷ್ಟೊಂದು ಚಲನಚಿತ್ರ ರಂಗದ ಪ್ರಖ್ಯಾತಿ ಇದ್ದರೂ ದೇವರಾಜ್ ಸರಳ ಸ್ನೇಹಜೀವಿ.  ಕೆಲವು ವರ್ಷದ ಹಿಂದೆ ವೈನಾಡಿನಲ್ಲಿ ನಾವಿಳಿದಿದ್ದ ರೆಸಾರ್ಟಿನಲ್ಲಿದ್ದ ಅವರನ್ನು ಮಾತನಾಡಿಸಿದಾಗ ಅವರ ಇಡೀ ಕುಟುಂಬ ನಮ್ಮೊಡನೆ ಆತ್ಮೀಯವಾಗಿ ಬೆರೆತು ಒಂದಾಗಿದ್ದರು.

ನಮ್ಮ ರಂಗಭೂಮಿ ಮತ್ತು ಚಿತ್ರರಂಗದ ಮಹತ್ವದ ಕಲಾವಿದರಲ್ಲಿ ಒಬ್ಬರೆನಿಸಿರುವ ದೇವರಾಜ್ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭ ಹಾರೈಕೆಗಳು.

On the birth day of our good actor Devaraj 

ಕಾಮೆಂಟ್‌ಗಳು

  1. ದೇವರಾಜ್ ಅವರ ಪತ್ನಿ ಸಹ ಚಿತ್ರನಟಿ ಯಾಗಿ ಕನ್ನಡ ಚಿತ್ರ ರಸಿಕರ ಮನ ಸೆಳೆದವರು. ಅವರ ತಂದೆ ಸಹ ಪ್ರಸಿದ್ಧ ನಟರು ಅಂತ ನೆನಪು. ಬಹಳ ಹುಡುಕಿದರೂ ಶ್ರೀಮತಿ ಚಂದ್ರಕಲಾ ದೇವರಾಜ್ ಅವರ ಕುರಿತು ಹೆಚ್ಚಿನ ಮಾಹಿತಿ ಇಲ್ಲ!
    ದಯವಿಟ್ಟು ತಾವು ಒದಗಿಸಲು ಸಾಧ್ಯವೇ!? ರಾಘವೇಂದ್ರ ರಾಯಲಪಾಡು.

    ಪ್ರತ್ಯುತ್ತರಅಳಿಸಿ
ತಮ್ಮ ಸಲಹೆಗಳಿಗೆ ಸುಸ್ವಾಗತ!

ಚಿತ್ರ ಕೃಪೆ: ಎಂ.ಪಿ.ಎಂ. ನಟರಾಜಯ್ಯ