ರಮ್ಯಾ ಕೃಷ್ಣ
ರಮ್ಯಾ ಕೃಷ್ಣ
ರಮ್ಯಾ ಕೃಷ್ಣ ಚಲನಚಿತ್ರರಂಗದ ಪ್ರತಿಭಾನ್ವಿತ ಅಭಿನೇತ್ರಿಯರಲ್ಲೊಬ್ಬರು. ಕಳೆದ ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಅವರು ನಿರಂತರವಾಗಿ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದೀ ಭಾಷೆಗಳಲ್ಲಿ 200ಕ್ಕೂ ಹೆಚ್ಚು ಭಾಷೆಗಳಲ್ಲಿ ಅವರು ನಟಿಸಿದ್ದಾರಲ್ಲದೆ ದೂರದರ್ಶನದ ಅನೇಕ ಜನಪ್ರಿಯ ಕಾರ್ಯಕ್ರಮಗಳ ನಿರ್ವಾಹಕಿಯಾಗಿಯೂ ಪ್ರಸಿದ್ಧಿ ಪಡೆದಿದ್ದಾರೆ.
ರಮ್ಯಾ ಕೃಷ್ಣ 1970ರ ಸೆಪ್ಟೆಂಬರ್ 15ರಂದು ಚೆನ್ನೈನಲ್ಲಿ ಜನಿಸಿದರು. ಹಾಸ್ಯ ಬರಹ ಮತ್ತು ನಟನೆಗಳಿಗೆ ಹೆಸರಾದ ಚೋ ರಾಮಸ್ವಾಮಿ ಅವರ ಸಂಬಂಧಿಕರು. ರಮ್ಯಾ ಅವರು ಭರತನಾಟ್ಯ, ಕುಚ್ಚುಪುಡಿ ಹಾಗೂ ಪಾಶ್ಚಾತ್ಯ ನೃತ್ಯಗಳ ಸಾಧಕರಾಗಿದ್ದು ಅನೇಕ ನೃತ್ಯ ಕಾರ್ಯಕ್ರಮಗಳನ್ನು ನೀಡಿದ್ದಾರೆ.
ತಮ್ಮ ಚಿತ್ರ ಜೀವನದಲ್ಲಿ ರಮ್ಯಾ ಕೃಷ್ಣನ್ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿನ ಅನೇಕ ದೇವತೆಗಳ ಪಾತ್ರಕ್ಕೆ ಪ್ರಸಿದ್ಧಿ ಪಡೆದವರಾದರೂ, ನಾಯಕಿ ಪಾತ್ರಗಳಲ್ಲೂ, ಖಳ ಪಾತ್ರಗಳಲ್ಲೂ ಅಷ್ಟೇ ಪ್ರಸಿದ್ಧಿ ಪಡೆದವರು. ರಜನೀಕಾಂತ್ ಅವರ ಪ್ರಸಿದ್ಧ ಚಿತ್ರವಾದ ‘ಪಡಿಯಪ್ಪಾ’ದಲ್ಲಂತೂ ಅವರು ನಿರ್ವಹಿಸಿದ ಖಳ ಪಾತ್ರ ಅತ್ಯಂತ ಜನಪ್ರಿಯವಾದದ್ದು. ‘ಬಾಹುಬಲಿ’ ಚಿತ್ರದಲ್ಲೂ ಅವರ ಅಭಿನಯ ಎಲ್ಲೆಡೆ ಮೆಚ್ಚುಗೆಗಳಿಸಿತು.
ತಮ್ಮ ಪ್ರಾರಂಭಿಕ ಚಿತ್ರಜೀವನದ ದಿನಗಳಲ್ಲೇ ರಮ್ಯಾ ಕೃಷ್ಣ ಅವರು ಕನ್ನಡದಲ್ಲಿ ವಿಷ್ಣುವರ್ಧನ್ ಅವರೊಂದಿಗೆ ‘ಕೃಷ್ಣ ರುಕ್ಮಿಣಿ’ ಚಿತ್ರದಲ್ಲಿ ಅಭಿನಯಿಸಿದ್ದರು. ಮುಂದೆ ಗಡಿಬಿಡಿ ಗಂಡ, ಮಾಂಗಲ್ಯಂ ತಂತುನಾನೇನ, ಏಕಾಂಗಿ, ನೀಲಾಂಬರಿ, ಚಾಮುಂಡಿ, ರಕ್ತ ಕಣ್ಣೀರು, ಜಾಗ್ವಾರ್ ಮುಂತಾದ ಅನೇಕ ಕನ್ನಡ ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಹಿಂದಿಯ ಚಾಹತ್, ಖಳನಾಯಕ್, ಪರಂಪರಾ, ದಯವಾನ್ ಮುಂತಾದ ಚಲನಚಿತ್ರಗಳಲ್ಲೂ ನಟಿಸಿರುವ ಅವರು ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರರಂಗಗಳಲ್ಲಿ ಎಲ್ಲಾ ಪ್ರಸಿದ್ಧರೊಂದಿಗೆ ನಟಿಸಿ ಜನಪ್ರಿಯತೆ, ಪ್ರಶಸ್ತಿ ಕೀರ್ತಿಗಳಿಗೆ ಭಾಜನರಾಗಿದ್ದಾರೆ.
ಹಲವಾರು ಪ್ರಸಿದ್ಧ ಕಿರುತೆರೆಯ ಕಾರ್ಯಕ್ರಮಗಳ ತೀರ್ಪುಗಾರ್ತಿಯಾಗಿ, ನಿರ್ವಾಹಕಿಯಾಗಿ ಕಾರ್ಯನಿರ್ವಹಿಸಿರುವ ರಮ್ಯಾ ಕೃಷ್ಣ ತಮ್ಮ ಪುತ್ರ ರಿತ್ವಿಕ್ ಹೆಸರಿನಲ್ಲಿ ನಿರ್ಮಾಣ ಸಂಸ್ಥೆಯನ್ನೂ ಸ್ಥಾಪಿಸಿದ್ದಾರೆ. ತೆಲುಗು ಚಿತ್ರ ನಿರ್ದೇಶಕರಾದ ಕೃಷ್ಣ ವಂಶಿ ಅವರ ಪತಿ.
On the birthday of popular actress Ramya Krishna



ಕಾಮೆಂಟ್‌ಗಳು