ಕಾವೇರಿ ಸಂಕ್ರಮಣ
ಆಚ್ಛಸ್ವಚ್ಛಲಸದ್ದುಕೂಲ ವಸನಾಂ ಪದ್ಮಾಸನಾಧ್ಯಾಸಿತಾಂ
ಹಸ್ತನ್ಯಸ್ತವರಾಭಯಾಬ್ಜಕಲಶಾಂ ರಾಕೇಂದು ಕೋಟಿ ಪ್ರಭಾಮ್ |
ಭಾಸ್ವದ್ಭೂಷಣ ಗಂಧಮಾಲ್ಯ ರುಚಿರಾಂ ಚಾರುಪ್ರಸನ್ನಾನನಾಂ
ಶ್ರೀ ಗಂಗಾದಿ ಸಮಸ್ತ ತೀರ್ಥ ನಿಲಯಾಂ ಧ್ಯಾಯಾಮಿ ಕಾವೇರಿಕಾಮ್ ||
ಭಾರತೀಯ ಸಂಸ್ಕೃತಿಯಲ್ಲಿ ಪುರಾಣಪ್ರಸಿದ್ದ ಏಳು ನದಿಗಳಾದ – ಗಂಗಾ, ಯಮುನಾ, ಗೋದಾವರಿ, ಸರಸ್ವತಿ, ನರ್ಮದಾ, ಸಿಂಧೂ, ಕಾವೇರಿ ನದಿಗಳು ಭಾರತೀಯರ ಪೂಜನೀಯ ಜಲಸಂಪತ್ತಾಗಿದೆ. ದಕ್ಷಿಣ ಭಾರತದ ಜೀವನದಿಯಾಗಿರುವ ಕಾವೇರಿ ನದಿಯ ಉಗಮ ಸ್ಥಾನ ಕರ್ನಾಟಕದ ಕೊಡಗು ಜಿಲ್ಲೆಯ ಬ್ರಹ್ಮಗಿರಿಯ ತಪ್ಪಲಲ್ಲಿ ತಲಕಾವೇರಿಯಲ್ಲಿದೆ. ತುಲಾಸಂಕ್ರಮಣವಾದ ಇಂದು ಕನ್ಯಾ ಲಗ್ನದಲ್ಲಿ ತಲಕಾವೇರಿಯ ಪವಿತ್ರ ತೀರ್ಥಕುಂಡಿಕೆಯಲ್ಲಿ ‘ತೀರ್ಥೋದ್ಭವ’.
ಅತೀ ಪ್ರಾಚೀನ ಕಾಲದಿಂದಲೂ ದಕ್ಷಿಣ ಭಾರತದ ಜೀವನಾಡಿ ಕಾವೇರಿಯನ್ನು ಪವಿತ್ರ ನದಿಯಾಗಿಯೂ, ಜಲರೂಪಿಯಾದ ಜಗದೀಶ್ವರಿ ಕಾವೇರಿ ಮಹಾತಾಯಿಯನ್ನು ಜನಕೋಟಿ ಆರಾಧಿಸುತ್ತಾ ಬಂದಿದ್ದಾರೆ.
ಸ್ಕಂದ ಪುರಾಣದಲ್ಲಿನ ಉಲ್ಲೇಖದಂತೆ, ಬ್ರಹ್ಮಗಿರಿಯಲ್ಲಿ ಕವೇರ ಮುನಿಯು ಏಕಾಗ್ರಚಿತ್ತದಿಂದ ಸಾವಿರ ವರ್ಷಗಳವರೆಗೆ ಪರಬ್ರಹ್ಮನನ್ನು ಧ್ಯಾನಿಸುತ್ತ ದಿವ್ಯ ತಪಸ್ಸನ್ನು ಆಚರಿಸುವಾಗ ಅವರ ದೇಹದಿಂದ ಅದ್ಭುತವಾದ ಅಗ್ನಿಯು ಉತ್ಪನ್ನವಾಯಿತು. ತಪೋಜ್ವಾಲೆಯು ದಶದಿಕ್ಕುಗಳನ್ನು ಬೆಳಗುತ್ತಾ ಮೂರು ಲೋಕವನ್ನು ಕಂಪನಗೊಳಿಸಿತ್ತು. ಭೂಮಿಯು ನಡುಗಿತು; ಮುನಿಗಳೂ, ಪಿತೃದೇವತೆಗಳೂ ಬ್ರಹ್ಮದೇವನಲ್ಲಿ ಜ್ವಾಲೆಯಿಂದ ಪಾರುಮಾಡುವಂತೆ ಬೇಡಿಕೊಂಡರು.
ಬ್ರಹ್ಮದೇವರು ಹೋಮಾಗ್ನಿಯಂತೆ ಪ್ರಜ್ವಲಿಸುವ ಕವೇರ ಮುನಿಯ ಬಳಿಗೆ ಬಂದು ತನ್ನ ಕೈನೀರಿನಿಂದ ಸಂಪ್ರೋಕ್ಷಣೆ ಮಾಡಿ ಶಮನಗೊಳಿಸಿದ ನಂತರ ಎಲೈ ಮುನಿಯೇ ಈ ತಪಸ್ಸಿನ ಉದ್ದೇಶವೇನು? ನಿನ್ನ ಮನದ ಬಯಕೆ ಏನು? ಎಂದು ಕೇಳಿ, ವರವನ್ನು ಬೇಡಿಕೊಳ್ಳುವಂತೆ ಹೇಳಿದಾಗ, ಮಹಾ ತೇಜೋವಂತರಾದ ಕವೇರ ಮುನಿಯು ಮೆಲ್ಲಗೆ ಕಣ್ಣುಗಳನ್ನು ತೆರೆದು ಆರ್ಘ್ಯಾಧಿಗಳನ್ನು ಕೊಟ್ಟು ಬ್ರಹ್ಮನನ್ನು ಉಪಚರಿಸಿ, ಜಗದೊಡೆಯನೇ ಮಕ್ಕಳಲಿಲ್ಲದ ನನಗೆ ಸಂತಾನ ಭಾಗ್ಯವನ್ನು ಕರುಣಿಸು ಎಂದು ಬೇಡಿಕೊಂಡರು. ಬ್ರಹ್ಮ ದೇವನು ಕವೇರನನ್ನು ಕುರಿತು, ಎಲೈ ಮುನಿಯೇ ಮಕ್ಕಳನ್ನು ಪಡೆಯಲು ಬೇಕಾದ ಧರ್ಮವನ್ನು ಹಿಂದಿನ ಜನ್ಮದಲ್ಲಿ ನೀನು ಮಾಡಿರುವುದಿಲ್ಲ, ಅದುದರಿಂದ ನಿನಗೆ ಮಕ್ಕಳ ಭಾಗ್ಯವಿಲ್ಲ ಎಂದು ಹೇಳಿ, ಚಿಂತಿಸಬೇಡ ನಿನಗೆ ಲೋಪಾಮುದ್ರೆಯೆಂಬ ಕುಲೋದ್ಧಾರಕಳಾಗುವ ಕನ್ನಿಕೆಯನ್ನು ದಯಪಾಲಿಸುವೆನು ಎಂದು ಅನುಗ್ರಹಿಸಿದರು. ಸಂತುಷ್ಟನಾದ ಕವೇರ ಮುನಿಯು ತನ್ನ ಪತ್ನಿಯಿಂದ ಒಡಗೂಡಿ ಅನನ್ಯ ಭಕ್ತಿಯಿಂದ ಭಕ್ತಪ್ರಿಯಳೂ, ಕಲ್ಯಾಣಿಯೂ, ಮಂಗಳಪ್ರಿಯಳೂ ಆದ ಲೋಪಾಮುದ್ರೆಯನ್ನು ಸ್ವೀಕರಿಸಿದರು.
ಜಗತ್ತಿಗೆ ಕ್ಷೇಮವಾಗುವಂತೆ, ಸರ್ವ ಪ್ರಾಣಿ ಪಕ್ಷಿಗಳು, ಮಾನವ ಕುಲಕ್ಕೆ ಕಲ್ಯಾಣ ಉಂಟುಮಾಡುವ ವಿಶೇಷ ತಪಃಶಕ್ತಿಯಿಂದ ನದಿಯಾಗುವಂತೆ ಬ್ರಹ್ಮದೇವನಿಂದ ಅನುಗ್ರಹಿತಳಾದ ಲೋಪಾಮುದ್ರೆ ಕವೇರ ಮುನಿಯ ಆಶ್ರಮದಲ್ಲಿ ’ಕಾವೇರಿ’ ಯಾಗಿ ಬೆಳೆಯುತ್ತಿದ್ದಳು. ಕವೇರ ಮುನಿಯ ಅಂತ್ಯಕಾಲ ಸಮೀಪಿಸಿ, ತನ್ನ ಪತ್ನಿ ಸಮೇತ ದೇಹತ್ಯಾಗ ಮಾಡಿ ಬ್ರಹ್ಮ ಲೋಕಕ್ಕೆ ತೆರಳಿದರು. ಲೋಪಾಮುದ್ರೆಯು ತನ್ನ ತಪಸ್ಸಿನಿಂದ ಪರಮೇಶ್ವರನನ್ನು ಮೆಚ್ಚಿಸಿ ನಿರ್ಮಲವಾದ ನದಿರೂಪವನ್ನು ಹೊಂದುವಂತಹ ವರವನ್ನು ಪಡೆದುಕೊಂಡಳು.
ಒಂದು ದಿನ… ಅಗಸ್ತ್ಯ ಮುನಿಯು ತನ್ನ ಶಿಷ್ಯರೊಂದಿಗೆ ಋಷಿ ಆಶ್ರಮಗಳಿಂದ ಕಂಗೊಳಿಸುತ್ತಿರುವ ಬ್ರಹ್ಮಗಿರಿಗೆ ಬಂದು ಆತಿಥ್ಯವನ್ನು ಸ್ವೀಕರಿಸಿದನು. ಆಶ್ರಮದಲ್ಲಿ ಸುಂದರಮುಖಿಯಾದ ಕಾವೇರಿಯನ್ನು ಕಂಡು ಸಂತತಿಗೋಸ್ಕರ ಕಾವೇರಿಯನ್ನು ವಿವಾಹವಾಗುವ ತನ್ನ ಮನದ ಇಚ್ಛೆಯನ್ನು ಕಾವೇರಿಯಲ್ಲಿ ಕೇಳಿಕೊಂಡಾಗ, ಋಷಿವಚನವನ್ನು ಉಲ್ಲಂಘಿಸಬಾರದೆಂದು ನಿರ್ಧರಿಸಿ, ಮುನಿಯ ಕೋರಿಕೆಯನ್ನು ಸಮ್ಮತಿಸಿದಳು. ಬ್ರಹ್ಮನ ಮಗಳಾದ ಲೋಪಾಮುದ್ರೆಯು ಕಾವೇರಿಯಾಗಿ ಅಗಸ್ತ್ಯ ಮುನಿಯನ್ನು ವಿವಾಹವಾಗಿ ಬ್ರಹ್ಮಗಿರಿಯಲ್ಲಿ ವಾಸವಾಗಿದ್ದಳು.
ಕಾವೇರಿಯೂ ತಾನು ನದಿಯಾಗಿ ಹರಿದು ಲೋಕಕಲ್ಯಾಣ ಮಾಡಬೆಕೆಂಬ ತನ್ನ ಮನದ ಬಯಕೆಯನ್ನು ಅಗಸ್ತ್ಯ ಮುನಿಯ ಮುಂದೆ ಇಟ್ಟು ತನಗೆ ಜಲರೂಪಿಯಾಗಲು ವರವನ್ನು ನೀಡಿ ಅನುಗ್ರಹಿಸಲು ಕೇಳಿಕೊಂಡಳು. ಲೋಪಾಮುದ್ರೆಯ ಕೋರಿಕೆಯನ್ನು ಅಗಸ್ತ್ಯ ಮುನಿಯು ಪುರಸ್ಕರಿಸಲಿಲ್ಲ. ನಿನಗೆ ವರವನ್ನು ಈವಾಗ ನೀಡಲಾರೆ, ಮುಂದೊಂದು ದಿನ ನೀಡುತ್ತೇನೆ, ಎಂದು ಹೇಳಿದರು. ಇದರಿಂದ ಕೋಪಗೊಂಡ ಕಾವೇರಿಯು ಎಲೈ ಅಗಸ್ತ್ಯನೇ ನೀನು ನನ್ನನ್ನು ಉಪೇಕ್ಷೆ ಮಾಡಿದ ಕ್ಷಣವೇ ನಾನು ನದಿಯಾಗಿ ಹರಿಯುತ್ತೇನೆ ಎಂದು ಎಚ್ಚರಿಸಿದಳು. ಇದರಿಂದ ಬೆಚ್ಚಿದ ಅಗಸ್ತ್ಯಮುನಿಯು ತನ್ನ ತಪಸ್ಸಿನ ಶಕ್ತಿಯಿಂದ ಕಾವೇರಿಯನ್ನು ತನ್ನ ಕಮಂಡಲುವಿನ ಒಳಗೆ ಬಂಧಿಸಿಟ್ಟನು.
ಅಗಸ್ತ್ಯಮುನಿಯು ಕನಕಧಾರಕ್ಕೆ ಸಂಧ್ಯೋಪಾಸನೆಗೆ ತೆರಳುವ ಸಂದರ್ಭದಲ್ಲಿ ಕಮಂಡಲುವನ್ನು ತನ್ನ ಶಿಷ್ಯರ ಕೈಯಲ್ಲಿ ಕೊಟ್ಟು ಹೊರಟುಹೋದರು. ಇದೇ ಸಂದರ್ಭವನ್ನು ಉಪಯೋಗಿಸಿಕೊಂಡು ಕಾವೇರಿಯು ಕೋಪದಿಂದ ಕಣ್ಣನ್ನು ಕೆರಳಿಸುತ್ತಾ, ಪರ್ವಕಾಲದಲ್ಲಿ ಕಡಲು ವೃದ್ಧಿಯನ್ನು ಹೊಂದುವಂತೆ, ಜಲ ರೂಪಿಯಾಗಿ ಕಮಂಡಲುವಿನಿಂದ ಜಾರಿ ಬಿದ್ದು ಜಲರೂಪಿಯಾಗಿ ಹರಿಯತೊಡಗಿದಳು. ಇದನ್ನು ಕಂಡ ಶಿಷ್ಯರು ಬೆಚ್ಚಿಬಿದ್ದು ಆಕೆಯನ್ನು ತಡೆಯಲು ಯತ್ನಿಸಿದಾಗ, ಕಾವೇರಿಯೂ ಕಣ್ಮರೆಯಾಗಿ ಗುಪ್ತಗಾಮಿನಿಯಾಗಿ ಹರಿಯತೊಡಗಿದಳು. ಇದನ್ನು ಅರಿತ ಅಗಸ್ತ್ಯಮುನಿಯು ಆಗಮಿಸಿದಾಗ ತನ್ನ ಪತ್ನಿಯು ಜಲರೂಪಿಯಾಗಿ ಮೂರು ಯೋಜನ ದೂರ ಹರಿದು ದಾಟಿ ಹೋಗಿಯಾಗಿತ್ತು.
ಅಗಸ್ತ್ಯ ಮುನಿಗೆ ತನ್ನ ತಪ್ಪಿನ ಅರಿವಾದಾಗ, ಪತ್ನಿಯನ್ನು ಕುರಿತು, ಎಲೈ ಸುಂದರಿಯೇ, ಪಾವನಳೇ, ಪಾಪನಾಶಿನಿಯೇ, ಕವೇರ ಕುವರಿಯೇ ನಾನು ನಿನ್ನನ್ನು ಉಪೇಕ್ಷೆ ಮಾಡಿದ ಪರಿಣಾಮವಾಗಿ ನೀನು ನಿರ್ಧರಿಸಿದಂತೆ ನದಿರೂಪ ತಾಳಿ ಲೋಕ ಕಲ್ಯಾಣ ಮಾಡುವಂತವಳಾಗು. ಆದರೆ, ಇನ್ನೊಂದು ರೂಪದಲ್ಲಿ ನನಗೆ ಮಡದಿಯಾಗಿರುವಂತೆ ಕೇಳಿಕೊಂಡಾಗ, ಕಾವೇರಿಯು ಸಮ್ಮತಿಸಿ ತನ್ನ ತನುವನ್ನು ಎರಡಾಗಿ ಪರಿವರ್ತಿಸಿ, ಮೊದಲಿನ ಭಾಗ ಲೋಪಾಮುದ್ರೆಯಾಗಿ ಅಗಸ್ತ್ಯನ ಪತ್ನಿಯಾದಳು. ಇನ್ನೊಂದು ಭಾಗ ಕಾವೇರಿ ಎಂಬ ಹೆಸರಿನಿಂದ ನದೀರೂಪವನ್ನು ತಳೆದು ಸಕಲ ತೀರ್ಥಗಳಿಗಿಂತಲೂ ಶ್ರೇಷ್ಟವೆನಿಸಿ ತನ್ನ ಸಖಿಯಾದ ಮಣಿಕರ್ಣಿಕೆಯೊಡನೆ ಸಮುದ್ರವನ್ನು ಸೇರಿದಳು.
ಇತ್ತ… ಸುಯಜ್ಞನೆಂಬ ಮಕ್ಕಳಿಲ್ಲದ ವಿಷ್ಣು ಭಕ್ತನು ತಪಸ್ಸನ್ನು ಆಚರಿಸಿ, ವಿಷ್ಣುವನ್ನು ಒಲಿಸಿಕೊಂಡು ತನ್ನ ಕೋರಿಕೆಯಂತೆ ವರವಾಗಿ ಸುಜ್ಯೋತಿ ಎಂಬ ಕನ್ನಿಕೆಯನ್ನು ಮಗಳಾಗಿ ಪಡೆದು ನೆಲೆಸಿದ್ದನು. ಇಂದ್ರನು ಆಶ್ರಮಕ್ಕೆ ಬಂದು ಸುಜ್ಯೋತಿಯನ್ನು ಕಂಡು ಮೋಹಿತನಾಗಿ ತನ್ನನ್ನು ವರಿಸುವಂತೆ ಕೇಳಿ ಕೊಂಡನು. ಇದನ್ನು ಒಪ್ಪದ ಸುಜ್ಯೋತಿಯು ತನಗೆ ನದಿ ರೂಪ ತಾಳುವ ಶಕ್ತಿಯನ್ನು ಪಡೆದಿದ್ದರೂ, ಇಂದ್ರನ ಶಾಪಕ್ಕೆ ಗುರಿಯಾಗಿ ಜಲಶೂನ್ಯಳಾಗಿದ್ದಳು. ಶಾಪಕ್ಕೆ ಪರಿಹಾರವಾಗಿ ಕಾವೇರಿಯನ್ನು ದರ್ಶನ ಮಾಡಿದರೆ ಶಾಪ ವಿಮೋಚನೆಯಾಗುವುದೆಂದು ಅರಿತ ಸುಜ್ಯೋತಿಯು, ತನ್ನ ಸಖಿಯಾದ ಕನ್ನಿಕೆಯೊಡನೆ ಬ್ರಹ್ಮಗಿರಿಯಿಂದ ಕಾವೇರಿ ನದಿರೂಪವಾಗಿ ಬರುತ್ತಿರುವಾಗ ಆಕೆಯನ್ನು ದರ್ಶನ ಮಾಡಿ, ತನ್ನ ಮನದ ಬಯಕೆಯನ್ನು ಹೇಳಿಕೊಂಡು ಬಳಿಕ ಕಾವೇರಿಯ ಜೊತೆಗೆ ಹರಿದು ಸಮುದ್ರವನ್ನು ಸೇರಿದಳು.
ಕಾವೇರಿ ನದಿಯ ಉಗಮಸ್ಥಾನ ಕರ್ನಾಟಕದ ಕಾಶ್ಮೀರ ಎಂದೇ ಪ್ರಸಿದ್ದಿಯನ್ನು ಪಡೆದ ಸುಂದರ ಪ್ರಕೃತಿಯ ಮಡಿಲಿನಲ್ಲಿರುವ ಕೊಡಗು ಜಿಲ್ಲೆಯ ಬ್ರಹ್ಮಗಿರಿ ಬೆಟ್ಟದ ಮೇಲಿದೆ. ಸಮುದ್ರ ಮಟ್ಟದಿಂದ 5000 ಅಡಿ ಎತ್ತರದ ಮೇಲಿರುವ ತಲಕಾವೇರಿ ಕೊಡಗಿನ ಮುಖ್ಯ ಪಟ್ಟಣವಾದ ಮಡಿಕೇರಿಯಿಂದ 48 ಕಿ. ಮಿ. ದೂರದಲ್ಲಿದೆ. ತ್ರಿವೇಣಿ ಸಂಗಮವಿರುವ ಭಾಗಮಂಡಲ ಮಾರ್ಗವಾಗಿ ತಲಕಾವೇರಿಗೆ ತಲುಪಬಹುದು.
ತಲಕಾವೇರಿಯನ್ನು ತಲುಪಲು ಪ್ರಯಾಣ ಮಾಡುವಾಗ ಗಿರಿ ಕಾನನಗಳ ವಿಹಂಗಮ ದೃಶ್ಯ, ಬೆಟ್ಟಗಳ ಸಾಲು ಸಾಲು, ಕಾಫಿ, ಯಾಲಕ್ಕಿ ತೋಟಗಳು, ಮರದ ಮೇಲಿರುವ ಜೇನುಗೂಡುಗಳು ನಮ್ಮನ್ನು ಸ್ವಾಗತಿಸುತ್ತದೆ. ಬೆಟ್ಟದ ಮೇಲೇರಿಕೊಂಡು ಹೋಗುತಿದ್ದಂತೆ ಬ್ರಹ್ಮಗಿರಿ ಬೆಟ್ಟದ ತಪ್ಪಲಿನಲ್ಲಿ ದೃಷ್ಟಿ ಹಾಯಿಸುವಷ್ಟು ದೂರದಲ್ಲಿ ತಲಕಾವೇರಿ ಗೋಚರಿಸುತ್ತದೆ. ನೋಡು ನೋಡುತಿದ್ದಂತೆ ಶುಭ್ರವಾಗಿ ಇದ್ದ ವಾತಾವರಣ ಮಂಜುಮುಸುಕಿ ತಲಕಾವೇರಿ ದೃಶ್ಯ ಕಾಣದಾಗುತ್ತದೆ. ಮತ್ತೊಮ್ಮೆ ಮಂಜುಕರಗಿ ಅಸ್ಪಷ್ಟತೆಯಿಂದ ಸ್ಪಷ್ಟವಾಗುತ್ತಾ ಗೋಚರಿಸುವ ಪ್ರಕೃತಿಯ ಕಣ್ಣು ಮುಚ್ಚಾಲೆಯಾಟ ನೋಟ ಆವಿಸ್ಮರಣೀಯ ಅನುಭವವಾಗಿರುತ್ತದೆ.
ತಲಕಾವೇರಿಯ ಮಹಾದ್ವಾರವನ್ನು ಪ್ರವೇಶಿಸಿ ಮೆಟ್ಟಲುಗಳನ್ನು ಏರಿ ಮುಂದೆ ಹೋಗುತ್ತಿದ್ದಂತೆ ವಿಶಾಲವಾದ ಪುಷ್ಕರಿಣಿ, ಪವಿತ್ರ ತೀರ್ಥ ಕುಂಡಿಕೆಯ ದರ್ಶನವಾಗುತ್ತದೆ. ಕಾವೇರಿಯ ಉಗಮಸ್ಥಾನವೇ ತೀರ್ಥಕುಂಡಿಕೆ. 2/2 ಅಡಿ ಅಗಲದ ಕುಂಡಿಕೆಯಲ್ಲಿ ಜಲದರ್ಶನ. ಮೊದಲ ನೋಟದಲ್ಲೇ, ಮನಸ್ಸು ಪ್ರಫುಲ್ಲತೆಯಾಗಿ, ತಲೆ ಬಾಗಿ ನಮಸ್ಕರಿಸಿದಾಗ ದೇವಿಯ ದರ್ಶನ ಜಲರೂಪದಲ್ಲಿ ಕಂಡು ಧನ್ಯತಾ ಭಾವನೆ ಮೂಡಿಬರುತ್ತದೆ. ತೀರ್ಥ ಸ್ನಾನ ಮಾಡಬೇಕಾದರೆ ಮೊದಲು ನಮ್ಮ ಎತ್ತರದ ಅರ್ಧದಷ್ಟು ಎತ್ತರವಿರುವ ಪುಷ್ಕರಿಣಿಯಲ್ಲಿರುವ ನೀರಿನಲ್ಲಿ ನಡೆದುಕೊಂಡು ಮುಂದೆ ಹೋಗಿ ಮುಳುಗು ಹಾಕಿ ಎದ್ದು ಕುಂಡಿಕೆಯ ಪಕ್ಕದಲ್ಲಿ ನಿಂತರೆ ಪುರೋಹಿತರು ಕುಂಡಿಕೆಯಿಂದ ಪವಿತ್ರ ಕಾವೇರಿ ತೀರ್ಥವನ್ನು ತಂಬಿಗೆಯಿಂದ ತೆಗೆದು ತಲೆಯ ಮೇಲೆ ಸುರಿದು ತೀರ್ಥ ಸ್ನಾನ ಮಾಡಿಸುತ್ತಾರೆ.
ತೀರ್ಥ ಕುಂಡಿಕೆಯ ಪಕ್ಕದಲ್ಲಿ ಜ್ಯೋತಿ ಮಂಟಪ, ಅದರ ಒಳಬದಿಯಲ್ಲಿ ಜ್ಯೋತಿ ನಿರಂತರವಾಗಿ ಉರಿಯುತ್ತಿರುತ್ತದೆ. ಜ್ಯೊತಿ ಆರದಂತೆ ಬಾಗಿಲನ್ನು ಅಳವಡಿಸಲಾಗಿದೆ. ಇಲ್ಲಿ ಯಾವ ರೀತಿಯ ವಿಗ್ರಹಗಳೂ ಇಲ್ಲ. ಪುರೋಹಿತರು ಜಲಕ್ಕೆ ಪೂಜೆ ಸಲ್ಲಿಸುತ್ತಾರೆ; ಭಕ್ತಾದಿಗಳು ಕುಂಕುಮಾರ್ಚನೆ, ಮಂಗಳಾರತಿ ಮಾಡಿಸುವುದರ ಮೂಲಕ ಕಾವೇರಿ ಮಾತೆಗೆ ಪೂಜೆ ಸಲ್ಲಿಸುತ್ತಾರೆ.
ಪವಿತ್ರ ಕುಂಡಿಕೆಯ ಪಕ್ಕದಲ್ಲಿ ಮೆಟ್ಟಲುಗಳನ್ನು ಏರಿ ಮೇಲೆ ಹೋದರೆ ಗಣಪತಿ, ಅಗಸ್ತೇಶ್ವರ ದೇವಸ್ಥಾನ. ಅದರ ಪಕ್ಕದಲ್ಲಿಯೇ “ಬ್ರಹ್ಮಗಿರಿ” ಬೆಟ್ಟ ಏರಿ ಹೋಗಲು ಮೆಟ್ಟಲುಗಳಿವೆ. 300 ಅಡಿ ಎತ್ತರದ ಬೆಟ್ಟ ಹತ್ತಿ ಮೇಲೆ ತಲುಪಿದರೆ, ತುದಿಯಲ್ಲಿ ಸುತ್ತಲೂ ಗಿರಿ ಕಾನನಗಳು ಬೆಟ್ಟಗಳ ಸಾಲು ಸಾಲುಗಳು ಬೆಳ್ಳಿ ಮೋಡಗಳನ್ನು ಮುತ್ತಿಕ್ಕುವಂತೆ ಕಾಣುತ್ತದೆ. ವಾತಾವರಣ ಶುಭ್ರವಾಗಿದ್ದರೆ ನೂರಾರು ಕಿ. ಮಿ. ದೂರದಲ್ಲಿರುವ ಕೇರಳದ ಅರಬ್ಬಿ ಸಮುದ್ರವನ್ನು ಕಾಣಬಹುದು. ಬ್ರಹ್ಮಗಿರಿ ಬೆಟ್ಟದ ಮೇಲೆ ಪುರಾಣದಲ್ಲಿ ಉಲ್ಲೇಖವಿದ್ದಂತೆ, ಸಪ್ತ ಮಹರ್ಷಿಗಳು ಬ್ರಹ್ಮಗಿರಿ ಬೆಟ್ಟದ ತುದಿಯಲ್ಲಿ ಏಳು ಯಜ್ಞ ಕುಂಡಗಳನ್ನು ನಿರ್ಮಿಸಿ ಪಕ್ಕದಲ್ಲಿ ಸಣ್ಣ ಸಣ್ಣ ನೀರಿನ ಹೊಂಡಗಳನ್ನೂ ನಿರ್ಮಿಸಿಕೊಂಡು ಯಜ್ಞಗಳನ್ನು ಮಾಡುತಿದ್ದರು. ಆ ಸಣ್ಣ ನೀರಿನ ಹೊಂಡಗಳು ಇಂದಿಗೂ ಅಲ್ಲಿ ಇದೆ. ವರ್ಷ ಪೂರ್ತಿ ಅದರಲ್ಲಿ ನೀರು ಇರುತ್ತದೆ. ಬ್ರಹ್ಮಗಿರಿ ಬೆಟ್ಟದ ಮೇಲಿನಿಂದ ಕೆಳಗೆ ಕಾಣುವ ಕಾವೇರಿಯ ಉಗಮ ಸ್ಥಾನ ಕಾವೇರಿ ನದಿಯಾಗಿ ಹರಿದು ಹೋಗುವಾಗ ತನ್ನ ದಿಕ್ಕನ್ನು ಕೇವಲ ಎರಡು ಅಡಿಯಷ್ಟು ಬದಲಿಸಿದ್ದರೆ ಕಾವೇರಿ ನದಿ ಪೂರ್ತಿಯಾಗಿ ಕೇರಳ ಭಾಗಕ್ಕೆ ಹೋಗುತಿತ್ತು. ಒಂದು ಸಮಯ ಆ ರೀತಿಯಾಗಿದಿದ್ದರೆ ಮೈಸೂರು, ಬೆಂಗಳೂರು, ತಮಿಳುನಾಡನ್ನು ಊಹಿಸಲು ಅಸಾಧ್ಯವಾಗುತಿತ್ತು.
ತಲಕಾವೇರಿಗೆ ವರ್ಷ ಪೂರ್ತಿ ಬೇರೆ ಬೇರೆ ಕಡೆಗಳಿಂದ ಯಾತ್ರಿಕರು ಬಂದು ಹೋಗುತ್ತಾರೆ. ಪ್ರತಿವರ್ಷ ಅಕ್ಟೋಬರ್ 17 ನೇ ತಾರೀಕು (ಒಮ್ಮೊಮ್ಮೆ 18 ನೇ ತಾರೀಕು) ನಿಶ್ಚಿತ ಗಳಿಗೆಯಲ್ಲಿ ತಲಕಾವೇರಿಯ ಪವಿತ್ರ ತೀರ್ಥ ಕುಂಡಿಕೆಯಲ್ಲಿ ಕಾವೇರಿ ತೀರ್ಥ ಉಕ್ಕಿ ಮೇಲೆ ಬರುತ್ತದೆ. ಈ ಕ್ಷಣಕ್ಕಾಗಿ ದೂರ ದೂರದ ಊರುಗಳಿಂದ ಭಕ್ತಿ ಭಾವದಿಂದ ಲಕ್ಷಾಂತರ ಜನರು ಬಂದು ಕಾದು ಕುಳಿತ್ತಿರುತ್ತಾರೆ. ಪುರೋಹಿತರಿಂದ ಮಂತ್ರ ಘೋಷಣೆ, ಕುಂಕುಮಾರ್ಚನೆ ನಡೆಯುತ್ತಿರುತ್ತದೆ. ಕೆಲವು ಕ್ಷಣಗಳು ಮಾತ್ರ ತೀರ್ಥ ಮೇಲೆ ಬರುವುದು. ಆ ಕ್ಷಣವೇ ಜಯ ಘೋಷದೊಂದಿಗೆ ತಂಬಿಗೆಯಲ್ಲಿ ಕಾವೇರಿ ತೀರ್ಥವನ್ನು ಕುಂಡಿಕೆಯಿಂದ ತೆಗೆದು ತೆಗೆದು ಜನಸ್ಥೋಮದ ಮೇಲೆ ಪ್ರೋಕ್ಷಿಸುತ್ತಾರೆ.
ತಲಕಾವೇರಿ ಜಾತ್ರೆ ಅಕ್ಟೋಬರ್ 17 ನೇ ತಾರಿಕಿನಿಂದ ನವೆಂಬರ್ 17 ನೇ ತಾರೀಕು ಕಿರುಸಂಕ್ರಮಣದ ವರೆಗೆ ನಡೆಯುತ್ತದೆ. ಲಕ್ಷಾಂತರ ಜನರು ಬಂದು ತೀರ್ಥ ಸ್ನಾನ ಮಾಡಿಕೊಂಡು ಹೋಗುತ್ತಾರೆ.
ಬ್ರಹ್ಮಗಿರಿಯ ತಲಕಾವೇರಿಯಿಂದ ಕಾವೇರಿ ಹುಟ್ಟಿ ಗುಪ್ತಗಾಮಿನಿಯಾಗಿ ಹರಿದು ಬಂದು ಸುಜ್ಯೋತಿ, ಕನ್ನಿಕೆ ನದಿಗಳೊಡನೆ ಸೇರುವ ಸ್ಥಳವೇ ತ್ರಿವೇಣಿ ಸಂಗಮವಾಗಿದೆ. ಭಗಂಡ ಮುನಿಯು ನಿರ್ಮಿಸಿದ ಭಗಂಡೇಶ್ವರ ದೇವಾಲಯದ ಸಮೀಪದಲ್ಲೇ ತ್ರಿವೇಣಿ ಸಂಗಮ ಇರುವ ಪವಿತ್ರವಾದ ಸ್ಥಳವೇ ಭಾಗಮಂಡಲ.
ಕೊಡಗಿನ ಕೊಡವರು ತಮ್ಮ ಕುಲದೇವತೆಯಾಗಿ ಕಾವೇರಿ ಮಾತೆಯನ್ನು, ಕುಲದೈವವಾಗಿ ಇಗ್ಗುತಪ್ಪ(ಸುಬ್ರಮಣ್ಯ)ನನ್ನು ಆರಾಧಿಸುತ್ತಾರೆ. ಅಕ್ಟೋಬರ್ ತಿಂಗಳಿನಲ್ಲಿ ಹೊಲ ಗದ್ದೆಗಳು ಭತ್ತದ ಪೈರು ಬೆಳೆದು ತೆನೆಯಾಗಲು ಹೂವು ಬಿಡುವ ಸಮಯ, ಆ ಸಮಯದಲ್ಲಿ ಕ್ರಿಮಿ ಕೀಟಗಳು ಹೂವುಗಳನ್ನು ನಾಶಮಾಡುತ್ತವೆ. ರೈತನ ಗೆಳೆಯ ಪಕ್ಷಿಗಳು ಬಂದು ಪೈರಿನ ಮೇಲೆ ಎರಗುವ ಕೀಟಗಳನ್ನು ತಿಂದುಹಾಕಿ ಬೆಳೆಯನ್ನು ರಕ್ಷಿಸುತ್ತದೆ. ಆದುದರಿಂದ ಪಕ್ಷಿಗಳಿಗೆ ಗದ್ದೆಗಳ ಮಧ್ಯದಲ್ಲಿ ಕುಳಿತುಕೊಳ್ಳಲು ಒಂದು ಉದ್ದನೆಯ ತೆಳುವಾದ ಕಂಬದ ಮೇಲೆ ಪೀಠವನ್ನು (ಕೊಡವ ಭಾಷೆಯಲ್ಲಿ ಬೆತ್) ರಚಿಸಿ ನಿಲ್ಲಿಸುತ್ತಾರೆ. ಇದನ್ನು ಕಾವೇರಿ ಸಂಕ್ರಮಣದ ದಿನ ಪೂಜೆ ಮಾಡಿ ಇಡಲಾಗುತ್ತದೆ.
ಕಾವೇರಿ ಸಂಕ್ರಮಣದ ದಿನದಂದು ಮನೆಯ ಒಳಗೆ ದೇವರ ಕೋಣೆಯಲ್ಲಿ ಮನೆ ಮಂದಿಯೆಲ್ಲಾ ಒಟ್ಟು ಸೇರಿ ಹಿರಿಯ ಮುತ್ತೈದೆಯ ಮುಂದಾಳತ್ವದಲ್ಲಿ, ಸೌತೆಕಾಯಿ (ಬೆಳ್ಳೆರಿ ಕಾಯಿ) ಅಥವಾ ತೆಂಗಿನಕಾಯಿಗೆ ಕೆಂಪು ರೇಶ್ಮೆ ವಸ್ತ್ರ ಸುತ್ತಿ, ಹೂವು, ಅಭರಣ, ಪತ್ತಾಕ (ಕೊಡವರ ಮಾಂಗಲ್ಯ) ದಿಂದ ಅಲಂಕರಿಸಿ ಮೂರು ವಿಳ್ಯದೆಲೆ ಅಡಿಕೆ, ಹಣ್ಣು ಹಂಪಲು ಇಟ್ಟು, ಅಕ್ಕಿಯಿಂದ ಮಾಡಿದ ದೋಸೆ, ಕುಂಬಳಕಾಯಿಯಿಂದ ಮಾಡಿದ ಸಾರು/ಗೊಜ್ಜು, ಪಾಯಸವನ್ನು ನೈವೇದ್ಯ ಮಾಡಿ ಹಬ್ಬವನ್ನು ಆಚರಿಸುತ್ತಾರೆ.
ಕಾವೇರಿ ನದಿ ತನ್ನ ಉಗಮ ಸ್ಥಾನದಿಂದ 765 ಕಿ. ಮಿ. ಹರಿದು ಬಂಗಾಳಕೊಲ್ಲಿಯ ಬಳಿ ಇರುವ ಕಾವೇರಿಪಟ್ಟಣದಲ್ಲಿ ಸಮುದ್ರವನ್ನು ಸೇರುತ್ತದೆ..
ಕೊಡಗಿನಲ್ಲಿ ಕಾವೇರಿ ನದಿ ಹರಿಯುವಾಗ ಗಂಧದ ಮರಗಳಿರುವ ವನಶ್ರೇಣಿ, ಕಾಫಿ, ಯಾಲಕ್ಕಿ, ಕಿತ್ತಳೆ ತೋಟಗಳು, ಭತ್ತದ ಗದ್ದೆಗಳಿಗೆ ತನ್ನ ಒಡಲಿನ ಜಲವನ್ನು ನೀಡಿ ಮುಂದೆ ಸಾಗುವಾಗ ಕುಶಾಲನಗರದ ಕಾವೇರಿ ನಿಸರ್ಗಧಾಮ, ಮೈಸೂರಿನ ಬಳಿ ಕೃಷ್ಣರಾಜ ಸಾಗರ, ಬೃಂದಾವನ, ಸಂಗೀತ ಕಾರಂಜಿಗಳಲ್ಲಿ ನಲಿದಾಡಿ, ಶ್ರೀರಂಗಪಟ್ಟಣದ ಪಕ್ಷಿದಾಮದ ಪಕ್ಷಿಗಳ ದಾಹ ತೀರಿಸಿ, 1902ರಲ್ಲಿ ಆರಂಭವಾದ ಜಲವಿದ್ಯುತ್ ಉತ್ಪಾದನೆಗೆ (ಬೆಂಗಳೂರಿಗೆ ವಿದ್ಯುತ್ ಒದಗಿಸಿದ ಪ್ರಥಮ ವಿದ್ಯುತ್ ಕೇಂದ್ರ) ಜಲವನ್ನು ನೀಡಿ ಶಿವನ ಸಮುದ್ರದಲ್ಲಿ 320 ಅಡಿ ನೊರೆ ಹಾಲಿನಂತೆ ಧುಮ್ಮಿಕ್ಕಿ ಹರಿದು ಗಗನ ಚುಕ್ಕಿ ಭರಚುಕ್ಕಿಯಾಗಿ ಮತ್ತೊಮ್ಮೆ ಶಿಂಷಾದಲ್ಲಿ ಧುಮ್ಮಿಕ್ಕಿ, ಹೊಗೇನಕಲ್ಲ್ ನ ಬಳಿ ತಮಿಳುನಾಡನ್ನು ಪ್ರವೇಶಿಸಿ ತಂಜಾವೂರು, ತಿರುಚಿರಾಪಳ್ಳಿ, ಶ್ರೀರಂಗಂ ಬಳಿಯಲ್ಲಿ ಕಾವೇರಿಪಟ್ಟಣದ ಮೂಲಕ ಸಮುದ್ರಕ್ಕೆ ಸೇರ್ಪಡೆಯಾಗುತ್ತದೆ.
ಕಾವೇರಿ ನದಿಯೊಂದಿಗೆ ಸೇರಿ ಕೊಂಡು ಹರಿಯುವ ಉಪ ನದಿಗಳು ಹಾರಂಗಿ, ಹೇಮಾವತಿ, ಲಕ್ಷ್ಮಣ ತೀರ್ಥ, ಕಬಿನಿ, ಶಿಂಷಾ, ಅರ್ಕಾವತಿ, ಸುವರ್ಣಾವತಿ, ಲೋಕಪಾವನಿ, ಭವಾನಿ, ನೊಯಲ್ ನದಿಗಳನ್ನು ತನ್ನೊಡನೆ ಸೇರಿಸಿಕೊಂಡು ಶೇಕಡಾ 95 ರಷ್ಟು ನೀರನ್ನು ವ್ಯವಸಾಯಕ್ಕೆ ನೀಡಿ ದಕ್ಷಿಣ ಭಾರತದ ಜೀವ ನದಿಯಾಗಿ ಕಾವೇರಿ ಜನಕೋಟಿಯ ಆರಾಧ್ಯ ಮಾತೆಯಾಗಿ, ಜಲರೂಪಿಣಿಯಾಗಿ ಪೂಜನೀಯಳಾಗಿದ್ದಾಳೆ.
ಕಾಮೆಂಟ್‌ಗಳು